
“ಅಶುಬೆದ್ರ ಅವರು ನನಗೆ ನಿರ್ಮಾಪಕರಾಗಿ ಪರಿಚಯವಾದವರು. ಸಾಮಾನ್ಯವಾಗಿ ಯಾರಾದರೂ ನಿರ್ಮಾಪಕರು ನಟನಾ ಕ್ಷೇತ್ರಕ್ಕೆ ಧುಮುಕಿದರೆ ಇವರಿಗೇಕೆ ಈ ನಟನೆಯ ಉಸಾಬರಿ ಬೇಕಿತ್ತು ಅಂತ ಅಂದುಕೊಳ್ಳುವುದು ಇದೆ. ಆದರೆ ಅಶು ಬೆದ್ರ ಅವರ ಬಗ್ಗೆ ಯಾವಾಗಲೂ ಇವರು ಯಾಕೆ ನಟನಾಗಲಿಲ್ಲ? ಯಾಕೆ ನಿರ್ಮಾಣ ಮಾತ್ರ ಮಾಡುತ್ತಾರೆ ಎಂದುಕೊಳ್ಳುತ್ತಿದ್ದೆ. ಕೊನೆಗೂ ನಟಿಸುವ ಮೂಲಕ ತಾವು ಒಬ್ಬ ನಟ ಎನ್ನುವುದನ್ನು ಅವರು ತೋರಿಸಿದ್ದಾರೆ. 50 ದಿನಗಳನ್ನು ದಾಟಿದ ಅವರ ಚಿತ್ರಕ್ಕೆ ಶುಭಾಶಯಗಳು” ಎಂದರು ಸಿಂಪಲ್ ಸ್ಟಾರ್ ಸುನಿ. ಅವರು ಅಶು ಬೆದ್ರ ನಿರ್ಮಿಸಿ, ನಾಯಕರಾಗಿ ತೆರೆಗೆ ಬಂದು ಯಶಸ್ವಿಯಾಗಿ ಪ್ರದರ್ಶನವಾಗಿರುವ ‘ಅಳಿದು ಉಳಿದವರು’ ಚಿತ್ರದ ಗೆಲುವಿನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಅಶು ಬೆದ್ರ ಅವರ ನಿರ್ಮಾಣದ “ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ” ಚಿತ್ರಕ್ಕೆ ಸುನಿ ನಿರ್ದೇಶಕರಾಗಿದ್ದರು. ಇದೀಗ ಅಶುಬೆದ್ರ ಅವರ ಯಶಸ್ಸಿನ ಸಂಭ್ರಮಕ್ಕೆ ಸುನಿಯವರೇ ಅತಿಥಿಯಾಗಿ ಬಂದು ಸ್ಮರಣಿಕೆ ನೀಡಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

“ಸಿನಿಮಾದ ಬಗ್ಗೆ ಮಾಧ್ಯಮವು ತುಂಬ ಒಳ್ಳೆಯ ಅಭಿಪ್ರಾಯಗಳನ್ನು ನೀಡಿದೆ. ಚಿತ್ರದ ಮೂಲಕ ಅಶು ಬೆದ್ರ ಅವರೊಂದಿಗೆ ಕೆಲಸ ಮಾಡಿ ಒಂದು ಕಮರ್ಷಿಯಲ್ ಚಿತ್ರ ಹೇಗೆ ಮಾಡಬಹುದು ಎಂದು ಕಲಿತುಕೊಳ್ಳಲು ಸಾಧ್ಯವಾಯಿತು” ಎಂದು ನಿರ್ದೇಶಕ ಅರವಿಂದ್ ಶಾಸ್ತ್ರಿ ಖುಷಿ ವ್ಯಕ್ತಪಡಿಸಿದರು. ಬಳಿಕ ಚಿತ್ರದ ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್ ಅವರು ಮಾತನಾಡಿ “ಸಿನಿಮಾದಲ್ಲಿ ಸಂಗೀತ ಚೆನ್ನಾಗಿ ಬರಬೇಕಾದರೆ, ಅದು ಪರದೆಯ ಮೇಲೆ ಚೆನ್ನಾಗಿ ಮೂಡಿ ಬಂದಿರಬೇಕು. ಹಾಗೆ ಮೂಡುವಂತೆ ಮಾಡುವಲ್ಲಿ ನಿರ್ದೇಶಕ ಮತ್ತು ಛಾಯಾಗ್ರಾಹಕರ ಪಾತ್ರ ಪ್ರಮುಖವಾಗಿದೆ” ಎಂದರು.
ಛಾಯಾಗ್ರಹಕ ಅಭಿಷೇಕ್ ಕಾಸರಗೋಡು ಮಾತನಾಡಿ, “ಅಶು ಬೆದ್ರ ಅವರಿಗೆ ಮೊದಲು ನಾನೇ ಛಾಯಾಗ್ರಾಹಕನಾಗಿರಬೇಕು ಎನ್ನುವ ಆಕಾಂಕ್ಷೆ ಇತ್ತು. ನಮ್ಮ ಮೇಲೆ ಅಷ್ಟೊಂದು ಭರವಸೆ ಇಟ್ಟು ಕೆಲಸ ಬಯಸುವವರನ್ನು ಕಂಡಾಗ ನಮಗೂ ಅವರ ನಿರೀಕ್ಷೆಗಿಂತ ಹೆಚ್ಚೇನೋ ನೀಡುವ ಉತ್ಸಾಹ ಇರುತ್ತದೆ. ಮುಖ್ಯವಾಗಿ ಅವರಿಗೆ ಒಂದು ಟೀಮ್ ವರ್ಕ್ ಬಗ್ಗೆ ನಂಬಿಕೆ ಇತ್ತು. ಇಂದು ಅದಕ್ಕೆ ಸಿಕ್ಕಂಥ ಗೆಲುವು ಇದು” ಎಂದರು. ಸಂಭಾಷಣೆ ರಚಿಸಿರುವ ಪ್ರವೀಣ್ ಅವರ ಪ್ರಕಾರ “ಇಂಥದೊಂದು ಸಬ್ಜೆಕ್ಟ್ ಮೇಲೆ ಜನರಿಗೆ ನಂಬಿಕೆ ಮೂಡಿಸುವಂತೆ ಬರೆಯುವುದು ಚಾಲೆಂಜಿಂಗ್ ಆಗಿತ್ತು. ಜತೆಗೆ ಪವನ್ ಭಟ್ ಅವರು ಕೂಡ ಸಂಭಾಷಣೆ ಬರೆದಿದ್ದಾರೆ” ಎಂದರು.

ಚಿತ್ರಕ್ಕೆ ಸಿಂಕ್ ಸೌಂಡ್ ಕೆಲಸ ಮಾಡಿದಂಥ ಅರವಿಂದ್ ಮೆನನ್, ಹಾಸ್ಯ ಪಾತ್ರಧಾರಿ ಧರ್ಮಣ್ಣ ಸೇರಿದಂತೆ ಚಿತ್ರತಂಡದ ಹಲವು ಮಂದಿ ಭಾಗಿಯಾಗಿ ಐವತ್ತರ ಸಂಭ್ರಮದ ಸ್ಮರಣಿಕೆಗಳನ್ನು ಪಡೆದುಕೊಂಡರು. ಖ್ಯಾತ ನಿರೂಪಕಿ ಅನುಪಮಾ ಭಟ್ ಕಾರ್ಯಕ್ರಮ ನಿರೂಪಿಸಿದ್ದು, ಚಿತ್ರದ ಈ ಹಿಂದಿನ ಮಾಧ್ಯಮಗೋಷ್ಠಿಗಳಲ್ಲಿಯೂ ಸಾಥ್ ನೀಡಿದ್ದ ಅವರಿಗೂ ಸ್ಮರಣಿಕೆ ನೀಡಲಾಯಿತು. ಸಿನಿಮಾದ ಯಶಸ್ಸಿನ ಕೇಕ್ ಕತ್ತರಿಸುವುದರ ಜತೆಯಲ್ಲೇ ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್ ಅವರ ಜನ್ಮದಿನಾಚರಣೆಯ ಕೇಕ್ ಕೂಡ ಕತ್ತರಿಸಿದ್ದು ಕಾರ್ಯಕ್ರಮದಲ್ಲಿ ಎರಡೆರಡು ಸಂಭ್ರಮಗಳಿಗೆ ಎಡೆಮಾಡಿಕೊಟ್ಟಿತ್ತು.






