ನಿಖಿಲ್ ಕುಮಾರ ಸ್ವಾಮಿ ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿ ನಟಿಸುತ್ತಿರುವ ಚಿತ್ರದ ಮುಹೂರ್ತ ಸಮಾರಂಭ ಇಂದು ಮುಂಜಾನೆ ಅದ್ದೂರಿಯಾಗಿ ನೆರವೇರಿತು. ಬಸವನಗುಡಿಯ ಕಾರಂಜಿ ಆಂಜನೇಯ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದ ಬಳಿಕ ನಿಖಿಲ್ ಮತ್ತು ಚಿತ್ರತಂಡದವರು ಮಾಧ್ಯಮದ ಜತೆಗೆ ಮಾತನಾಡಿದರು.
“ನನ್ನ ಪ್ರಕಾರ ಪ್ರತಿ ಪಾತ್ರ ಕೂಡ ಚಾಲೆಂಜಿಂಗ್ ಆಗಿರುತ್ತದೆ. ಚಿತ್ರದಲ್ಲಿ ಬಾಸ್ಕೆಟ್ ಬಾಲ್ ಪ್ಲೇಯರ್ ಪಾತ್ರವಾದರೂ, ಇದರಲ್ಲಿ ಕೂಡ ನನ್ನ ಆ್ಯಕ್ಷನ್ ದೃಶ್ಯಗಳಿವೆ. ಆದರೆ ಆ್ಯಕ್ಷನ್ ದೃಶ್ಯಗಳನ್ನು ಆದಷ್ಟು ರಿಯಲಿಸ್ಟಿಕ್ ಆಗಿ ಮಾಡಬೇಕು ಎಂದುಕೊಂಡಿದ್ದೇವೆ” ಎಂದು ನಿಖಿಲ್ ಹೇಳಿದರು.
ತೆಲುಗಿನ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಅವರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದು, ” ನಾಳೆಯಿಂದ ಚಿತ್ರೀಕರಣ ಶುರುವಾಗಲಿದೆ. ಇದು ಟ್ರೂ ಲವ್ ಕುರಿತಾದ ಸಿನಿಮಾ. ಫ್ಯಾಮಿಲಿ ಡ್ರಾಮ ಇದ್ದರೂ, ಚಿತ್ರಕತೆಯಲ್ಲಿ ಟ್ವಿಸ್ಟ್ ಇರಲಿದೆ” ಎಂದಿದ್ದಾರೆ.
“ಎರಡು ತೆಲುಗು ಚಿತ್ರಗಳ ಬಳಿಕ ನಿರ್ದೇಶಕರು ಹ್ಯಾಟ್ರಿಕ್ ಯಶಸ್ಸನ್ನು ಕನ್ನಡದಲ್ಲಿ ಪಡೆಯಲಿ ಎನ್ನುವ ಕಾರಣಕ್ಕಾಗಿ ವಿಜಯ ಕುಮಾರ್ ಕೊಂಡ ಅವರನ್ನು ಕರ್ನಾಟಕಕ್ಕೆ ಕರೆದುಕೊಂಡು ಬಂದಿದ್ದೇವೆ. ಆದರೆ ಚಿತ್ರ ಕನ್ನಡದ ಜತೆಗೆ ತೆಲುಗು ಭಾಷೆಯಲ್ಲಿ ಕೂಡ ತೆರೆಕಾಣಲಿದೆ ಎಂದರು ಲಹರಿ ಸಂಸ್ಥೆಯ ಮಾಲೀಕ ವೇಲು. ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ‘ಗಣೇಶನ ಗಲಾಟೆ’ಯಂಥ ಸಿನಿಮಾ ನಿರ್ಮಿಸಿದ ಬಳಿಕ ದೊಡ್ಡ ಗ್ಯಾಪ್ ನಲ್ಲಿ ನಿರ್ಮಾಪಕರಾಗಿ ಅವರ ಆಗಮನವಾಗಿದೆ. ಅಣ್ಣನ ಮಗ ಚಂದ್ರು ಮತ್ತು ಸುನೀಲ್ ಸೇರಿ ನಿರ್ಮಾಣದಲ್ಲಿ ಭಾಗಿಯಾಗುತ್ತಿರುವುದಾಗಿ ವೇಲು ಅವರು ತಿಳಿಸಿದ್ದಾರೆ.
ಚಿತ್ರಕ್ಕೆ ನಾಯಕಿಯ ಆಯ್ಕೆ ಆಗಿಲ್ಲ. ಆದರೆ ಸಹನಾಯಕಿ ಸಂಪದ, ಪೋಷಕ ಕಲಾವಿದರಾದ ದತ್ತಣ್ಣ, ನಟರಂಗ ರಾಜೇಶ್, ಶಿವರಾಜ್ ಕೆ ಆರ್ ಪೇಟೆ ಮೊದಲಾದವರು ಅಲ್ಲಿ ಉಪಸ್ಥಿತರಿದ್ದರು.