ಮತ್ತೆ ರವಿಚಂದ್ರನ್​ಗೆ ಜೋಡಿಯಾದ ಅಪೂರ್ವ

ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ ಹೊಸ ಚಿತ್ರ ಗೌರಿ. ಚಿತ್ರದ ಮುಹೂರ್ತದಲ್ಲಿ ನಾಯಕಿಯಾಗಿ ಬರ್ಕಾ ಬಿಸ್ಟ್ ಎನ್ನುವ ನಟಿಯನ್ನು ಪರಿಚಯಿಸಲಾಗಿತ್ತು. ಆದರೆ ಇದೀಗ ಬರ್ಕಾ ಬದಲಿಗೆ ಅಪೂರ್ವ ಎಂಟ್ರಿಯಾಗಿದ್ದಾರೆ.

ಮೈಸೂರಿನ ಚೆಲುವೆಗೆ ಎಂದು ಹೆಸರಿಟ್ಟು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಕ್ರೇಜಿಸ್ಟಾರ್ ಅವರಿಗೇನೇ ಸಲ್ಲುತ್ತದೆ. 2016ರಲ್ಲಿ ತೆರೆಕಂಡ ಅಪೂರ್ವ ಸಿನಿಮಾದಲ್ಲಿ 61ರ ಮುದುಕ 19ರ ಯುವತಿಯ ಪ್ರೀತಿಯಲ್ಲಿ ಬೀಳುವ ಕತೆ ತೋರಿಸಿದ್ದರು ಕ್ರೇಜಿಸ್ಟಾರ್. ಸ್ವತಃ ನಿರ್ಮಿಸಿ, ನಿರ್ದೇಶಿಸಿ, ನಾಯಕರಾಗುವ ಜೊತೆಗೆ ಸಂಗೀತವನ್ನೂ ನೀಡಿದ್ದರು. ಒಂದು ಲಿಫ್ಟ್​ನೊಳಗೆ ಪರಸ್ಪರ ಪ್ರೀತಿ ಮೂಡುವ ಕತೆಯ ಈ ಸಿನಿಮಾ, ಈ ಕಾರಣದಿಂದಲೇ ಒಂದಷ್ಟು ಸುದ್ದಿ ಮಾಡಿತ್ತು. ಆದರೆ ಸಿನಿಮಾ ನಿರೀಕ್ಷಿತ ಗೆಲುವು ಕಂಡಿರಲಿಲ್ಲ. ಇದೀಗ ಮತ್ತೊಮ್ಮೆ ರವಿಚಂದ್ರನ್ ಜೊತೆಗೆ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಈ ಬಾರಿ ಅಪೂರ್ವ ರವಿಚಂದ್ರನ್ ಪತ್ನಿಯಾಗಿ, ಮಗುವಿನ ತಾಯಿಯಾಗಿ ಕಾಣಿಸುತ್ತಿರುವುದು ವಿಶೇಷ.

ಅಪೂರ್ವ ಚಿತ್ರದಲ್ಲಿ ಎಂಟ್ರಿ ನೀಡಿದ ಬಳಿಕ ವಿಕ್ಟರಿ2ನಲ್ಲಿ ಶರಣ್ ಜೊತೆಗೆ, ಕೃಷ್ಣ ಟಾಕೀಸ್​ನಲ್ಲಿ ಅಜಯ್ ರಾವ್ ಜೊತೆಗೆ, ಪುರುಷೋತ್ತಮದಲ್ಲಿ ಜಿಮ್ ರವಿ ಜೊತೆಗೆ ಜೋಡಿಯಾಗಿ ನಟಿಸಿದ್ದಾರೆ. ಕಳೆದ ಡಿಸೆಂಬರ್​ನಲ್ಲಿ ಚಂದನ್ ಶೆಟ್ಟಿ ನಾಯಕರಾಗಿರುವ ಸೂತ್ರಧಾರಿಯಲ್ಲಿಯೂ ಪಾತ್ರಧಾರಿಯಾಗಿದ್ದರು. ಇದೀಗ ಈ ವರ್ಷಾರಂಭದಲ್ಲೇ ಮತ್ತೆ ಕ್ರೇಜಿಸ್ಟಾರ್ ರವಿಚಂದ್ರನ್ ಜೋಡಿಯಾಗಿ ನಟಿಸುತ್ತಿರುವುದಕ್ಕೆ ಖುಷಿಯಾಗಿದ್ದಾರೆ ಅಪೂರ್ವ.

ಇಂದು ಕೆಲವೇ ಪಾತ್ರಗಳಿರುವ ಚಿತ್ರ. ಗಂಡ ಹೆಂಡತಿ ನಡುವಿನ ಇಗೋ ಸಮಸ್ಯೆಯ ಬಗ್ಗೆ ತೋರಿಸುವ ಚಿತ್ರ. ಹೀಗಾಗಿ ಕಲಾವಿದರ ನಡುವೆ ಉತ್ತಮ ಬಾಂಧವ್ಯ ಇದ್ದರೆ ಚೆನ್ನಾಗಿರುತ್ತದೆ ಎಂದು ಈಗಾಗಲೇ ರವಿಚಂದ್ರನ್ ಜೊತೆಗೆ ನಟಿಸಿರುವ ಅಪೂರ್ವರನ್ನು ಆಯ್ಕೆ ಮಾಡಲಾಯಿತು ಎಂದು ನಿರ್ದೇಶಕ ಅನೀಸ್ ಹೇಳುತ್ತಾರೆ. ನಿರ್ಮಾಪಕ ಎನ್​ ಎಸ್ ರಾಜ್​ಕುಮಾರ್ ಪ್ರಕಾರ ‘ಕನ್ನಡದ ನಾಯಕಿಯಾದರೇನೇ ಉತ್ತಮ’ ಎನ್ನುವ ರವಿಚಂದ್ರನ್ ಅನಿಸಿಕೆಗೆ ತಕ್ಕಂತೆ ಅಪೂರ್ವ ಆಯ್ಕೆ ಮಾಡಲಾಗಿದೆ ಎಂದಿದ್ದಾರೆ

Recommended For You

Leave a Reply

error: Content is protected !!
%d bloggers like this: