
“ಇದು ನನಗೆ ನಿಜಕ್ಕೂ ಚಾಲೆಂಜಿಂಗ್ ಪಾತ್ರವೇ ಆಗಿತ್ತು. ಯಾಕೆಂದರೆ ಫೈಟ್, ಡ್ಯಾನ್ಸ್ ಎರಡೂ ಇರಲಿಲ್ಲ” ಎಂದರು ವಿಜಯ್ ರಾಘವೇಂದ್ರ. ಅವರು ತಾವು ಪ್ರಧಾನ ಪಾತ್ರ ನಿರ್ವಹಿಸಿ, ಬಿಡುಗಡೆಗೆ ತಯಾರಾದ ಚಿತ್ರದ ಬಗ್ಗೆ ಮಾತನಾಡುತ್ತಿದ್ದರು.
ಮಾಲ್ಗುಡಿ ಡೇಸ್ ಎಂದೊಡನೆ ಎಲ್ಲರಿಗೂ ನೆನಪಾಗುವ ಹೆಸರು ಶಂಕರ್ ನಾಗ್ ಅವರದ್ದು. ಆದರೆ ಶಂಕರ್ ನಾಗ್ ಅವರ ನಿರ್ದೇಶನದ ಆ ಧಾರಾವಾಹಿಯೊಂದಿಗೆ ಯಾವುದೇ ಸಂಬಂಧ ಇರದಂಥ ಚಿತ್ರ ಇದು. ಆದರೆ ಆ ಧಾರಾವಾಹಿ ಪ್ರಸಾರವಾಗುತ್ತಿದ್ದ ಕಾಲಘಟ್ಟಕ್ಕೆ ನಮ್ಮನ್ನು ಕರೆದೊಯ್ಯುವಂಥ ಚಿತ್ರ ಇದು ಎನ್ನುತ್ತಾರೆ ಚಿತ್ರದ ನಿರ್ದೇಶಕ ಕಿಶೋರ್ ಮೂಡಬಿದ್ರೆ.
“ಚಿತ್ರದ ಟ್ರೇಲರ್ ನೋಡಿ ರಮೇಶ್ ಅರವಿಂದ್ ಅವರು ಇದು ಒಂದು ಪೊಯೆಟಿಕ್ ಸಿನಿಮಾ ಎಂದಿದ್ದಾರೆ. ಇಲ್ಲಿಯವರೆಗೆ ನಮ್ಮ ಚಿತ್ರದ ಶೈಲಿ ಬಗ್ಗೆ ಹೇಳಲು ಸರಿಯಾದ ಪದ ಹುಡುಕುತ್ತಿದ್ದ ನಮಗೆ ಅವರ ಹೇಳಿಕೆಯೇ ಸರಿಯಾದ ಶೀರ್ಷಿಕೆ ಅನಿಸಿದೆ” ಎಂದು ಕಿಶೋರ್ ಹೇಳಿದರು. ಅವರು ‘ಮಾಲ್ಗುಡಿ ಡೇಸ್’ ಬಿಡುಗಡೆಯ ಪೂರ್ವಭಾವಿಯಾಗಿ ನಡೆಸಲಾದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
“ಇದು ಲಕ್ಷ್ಮೀನಾರಾಯಣ ಮಾಲ್ಗುಡಿ ಎನ್ನುವ ನಿವೃತ್ತ ಕವಿಯೊಬ್ಬರ ಜೀವನ, ಅವರ ನೆನಪುಗಳ ಕುರಿತಾದ ಚಿತ್ರ. 75 ವರ್ಷದ ಈ ಪಾತ್ರವನ್ನು ಮಾಡಿದ ವಿಜಯ ರಾಘವೇಂದ್ರ ಅವರು ನಿರ್ವಹಿಸಿರುವ ರೀತಿ ನಿಜಕ್ಕೂ ಅಮೋಘ. ಚಿತ್ರದಲ್ಲಿ ಎರಡು ಜನರೇಶನ್ ಪಾಯಿಂಟ್ ಆಫ್ ವ್ಯೂ ಇರುತ್ತದೆ. ಚಿತ್ರ ಸ್ವಯಂಪ್ರಭ ಎಂಟರ್ಟೈನ್ಮೆಂಟ್ ಮತ್ತು ಪ್ರೊಡಕ್ಷನ್ ಸಂಸ್ಥೆಯ ಮೂಲಕ ನಿರ್ಮಾಣವಾಗಿದೆ” ಎಂದು ಚಿತ್ರದ ನಿರ್ದೇಶಕ ಕಿಶೋರ್ ಮೂಡಬಿದ್ರೆ ಹೇಳಿದರು. ಕಳೆದ ಫೆಬ್ರವರಿ 24ರಂದು ಸಿನಿಮಾ ತನ್ನ ಮೂಹೂರ್ತ ವನ್ನು ನೆರವೇರಿಸಿ ಚಿತ್ರೀಕರಣ ಶುರುಮಾಡಲಾಗಿತ್ತು. ಫೆಬ್ರವರಿಯಿಂದ ಆಗಸ್ಟ್ ತನಕ 3 ಹಂತಗಳಲ್ಲಿ ಚಿತ್ರೀಕರಿಸಿ ಎಡಿಟಿಂಗ್, ಡಬ್ಬಿಂಗ್ ಮುಗಿಸಿ ಇದೀಗ ಚಿತ್ರ ಬಿಡುಗಡೆಗೆ ತಯಾರಾಗಿ ನಿಂತಿದೆ.
ವಿಜಯ ರಾಘವೇಂದ್ರ ಅವರ ವೃತ್ತಿ ಜೀವನದಲ್ಲಿ ಇದೊಂದು ವಿಶೇಷ ಸಿನಿಮಾ ಅಂತಾನೇ ಹೇಳಬಹುದು ಏಕೆಂದರೆ ಇಲ್ಲಿ ಅವರು ಹಿಂದೆಂದೂ ನಿರ್ವಹಿಸದ ಪಾತ್ರ ದಲ್ಲಿ ಅಭಿನಯಿಸುತ್ತಿದ್ದಾರೆ. ಇದೊಂದು ಚಿತ್ರಕ್ಕಾಗಿ ಅವರು ಕಳೆದ ಒಂದು ವರ್ಷಗಳಿಂದ ಬೇರೆ ಯಾವ ಸಿನಿಮಾದಲ್ಲೂ ತೊಡಗಿಸದೆ ತಮ್ಮನ್ನು ಪೂರ್ತಿಯಾಗಿ ಅರ್ಪಿಸಿದ್ದಾರೆ. ಕಥಾ ನಾಯಕಿಯಾಗಿ ಗ್ರೀಷ್ಮಾ ಶ್ರೀಧರ್ ಅವರು ಮೊದಲ ಬಾರಿಗೆ ಅಭಿನಯಿಸುತ್ತಿದ್ದಾರೆ. ಅವರ ಜತೆ ಬಿಗ್ ಬಾಸ್ 6ರ ಖ್ಯಾತಿಯ ಧನರಾಜ್, ಗೋಪಿನಾಥ್ ಭಟ್ , ರೂಪೇಶ್, ತೇಜಸ್ವಿನಿ, ಸಂದೇಶ್ ಜೈನ ಮತ್ತಿತರರು ಕೂಡ ಇದ್ದಾರೆ.
ಒಟ್ಟು 60 ದಿನಗಳ ಚಿತ್ರೀಕರಣವನ್ನು ಬೆಂಗಳೂರು , ಮಂಗಳೂರು, ಮೈಸೂರು, ಶಿವಮೊಗ್ಗ ತೀರ್ಥಹಳ್ಳಿ, ಪಾಂಡಿಚೇರಿ, ಬಾಳೆಹೊನ್ನೂರು, ಕಳಸ, ಶೃಂಗೇರಿಯ, ಆಗುಂಬೆ, ಸುತ್ತಮುತ್ತ ಮಾಡಲಾಗಿದೆ. ಗಗನ್ ಬಡೇರಿಯಾ ಸಂಗೀತ ನೀಡುತ್ತಿದ್ದು ಒಟ್ಟು 6 ಹಾಡುಗಳು ಇರಲಿದೆ. ಪ್ರದೀಪ್ ನಾಯಕ್ ಸಂಕಲನ, ಉದಯ್ ಲೀಲಾ ಕ್ಯಾಮೆರಾ ಹಿಡಿದಿದ್ದಾರೆ.
ಚಿತ್ರದ ನಿರ್ಮಾಪಕ ಕೆ ರತ್ನಾಕರ ಕಾಮತ್ ಈ ಹಿಂದೆ ಅಪ್ಪ ಟೀಚರ್ ಸಿನಿಮಾ ನಿರ್ಮಿಸಿದ್ದರು, ಇದು ಅವರಿಗೆ ಎರಡನೇ ಸಿನಮಾ ಹಾಗೂ ಮೊದಲ ಕನ್ನಡ ಸಿನಿಮಾ. ಕಾರ್ಯಕಾರಿ ನಿರ್ಮಾಪಕರಾಗಿ ರವಿಶಂಕರ್ ಪೈ, ಕಾಸ್ಟ್ಯೂಮ್ ಡಿಸೈನರ್ ಆಗಿ ಶಿಲ್ಪ ಮೊದಲಾದವರು ನಿರ್ವಹಿಸಿದ್ದಾರೆ. ವಿಜಯ ರಾಘವೇಂದ್ರ ಅವರ ವಿಶೇಷ ಪಾತ್ರಕ್ಕೆ ಮೇಕಪ್ ಅನ್ನು ಕೇರಳ ಮೂಲದ ರೋಷನ್ ಎನ್ ಜಿ ಯವರು ಮಾಡಿದ್ದಾರೆ. ಚಿತ್ರ ಫೆಬ್ರವರಿ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.