ನಾನು ನಿರ್ದೇಶಕರ ಜೊತೆಗೆ ಜಗಳ ಮಾಡಿಕೊಂಡು ಕನ್ನಡತಿ ಧಾರಾವಾಹಿಯನ್ನು ಬಿಡುತ್ತಿದ್ದೇನೆ ಎನ್ನುವ ಸುದ್ದಿ ಹರಡಲಾಗುತ್ತಿದೆ. ಇಷ್ಟಕ್ಕೆಲ್ಲ ಯೂಟ್ಯೂಬ್ ವಾಹಿನಿಯೊಂದು ಕಾರಣವಾಗಿದೆ. ಅವರು ನಾನು ಬೇರೊಂದು ಸುದ್ದಿ ವಾಹಿನಿಗೆ ನೀಡಿದ ಸಂದರ್ಶನವನ್ನು ತಿರುಚಿ ನಾನು ಕನ್ನಡತಿ ತೊರೆಯುತ್ತಿದ್ದೇನೆ ಎನ್ನುವ ಅರ್ಥದಲ್ಲಿ ಓದಿ ತಮ್ಮ ವ್ಯೂವ್ಸ್ ಹೆಚ್ಚಿಸಿಕೊಂಡಿದ್ದಾರೆ. ಆದರೆ ನಾನು ಕನ್ನಡತಿಯನ್ನು ಎಷ್ಟು ಇಷ್ಟಪಡುತ್ತೇನೆ ಎನ್ನುವುದನ್ನು ಮೂಲ ಸಂದರ್ಶನ ನೋಡಿದವರಿಗೆ ಚೆನ್ನಾಗಿ ತಿಳಿದಿರುತ್ತದೆ ಎಂದು ಸಿನಿಕನ್ನಡದ ಜೊತೆಗೆ ಮಾತನಾಡಿದ ವರುಧಿನಿ ಖ್ಯಾತಿಯ ನಟಿ ಸಾರಾ ಅಣ್ಣಯ್ಯ ಎಲ್ಲ ವಿಚಾರಗಳನ್ನು ವಿಸ್ತೃತವಾಗಿ ಹಂಚಿಕೊಂಡಿದ್ದಾರೆ.
“ಕನ್ನಡತಿ ಧಾರಾವಾಹಿ ತಂಡಕ್ಕೆ ನಾನು ಸೇರಿಕೊಂಡಾಗ ಕನ್ನಡ ಇಂಡಸ್ಟ್ರಿಯೇ ನನಗೆ ಹೊಸದಾಗಿತ್ತು. ಕೆಲಸದ ರೀತಿಯೂ ಹೊಸದಾಗಿತ್ತು. ಟೇಕ್‌ನಲ್ಲೇ ಸರಿಯಾಗಿ, ಸ್ಪಷ್ಟವಾಗಿ ಮಾತನಾಡಬೇಕಿತ್ತು. ಯಾಕೆಂದರೆ ತಮಿಳಿನಂತೆ ಇಲ್ಲಿ ಡಬ್ಬಿಂಗ್ ಮಾಡುತ್ತಿರಲಿಲ್ಲ. ಆದರೆ ಎರಡು ವರ್ಷಗಳ ಕಾಲ ಚೆನ್ನೈನಲ್ಲಿದ್ದು ಬಂದಿದ್ದ ನನಗೆ ಧಾರಾವಾಹಿಯ ಭಾಷೆಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತಿತ್ತು. ನಿರ್ದೇಶಕರಿಗೆ ಟೇಕ್ ಸರಿಯಾಗದೇ ಹೋದಾಗ ಗದರುತ್ತಿದ್ದರು. ನಾನು ಅಪ್ಸೆಟ್ ಆಗಿ ಮತ್ತೆ ತಪ್ಪು ಮಾಡುತ್ತಿದ್ದೆ. ಆಗ ನಾನೇ ಅವರಲ್ಲಿ ರಿಕ್ವೆಸ್ಟ್ ಮಾಡಿಕೊಂಡೆ,” ಸರ್ ದಯವಿಟ್ಟು ಗದರಬೇಡಿ, ನೀವು ಗದರಿದರೆ ನನಗೆ ಧ್ವನಿಯೇ ಹೊರಡಲ್ಲ, ದಯವಿಟ್ಟು ಆರಾಮಾಗಿ ಹೇಳಿ” ಎಂದು. ಆಗ ಅವರು ನನ್ನ ಸಮಸ್ಯೆ ಅರ್ಥಮಾಡಿಕೊಂಡರು. ಇಷ್ಟೇ ನಾನು ಹೇಳಿರೋದು. ಅಂದಹಾಗೆ ಈ ಘಟನೆ ಆಗಿ ಈಗ ವರ್ಷವಾಗಿದೆ. ಹಂಚಿಕೊಂಡ ಹಳೆಯ ಘಟನೆಗೆ ಬಣ್ಣ ಹಚ್ಚಿ ಯೂಟ್ಯೂಬ್ ವಾಹಿನಿಗಳಲ್ಲಿ ಹರಡಲಾಗ್ತಿದೆ. ಅವರಿಗೆ ವ್ಯೂವ್ಸ್ ಸಿಗಬಹುದು. ಆದರೆ ಚೆನ್ನಾಗಿರುವ ಧಾರಾವಾಹಿ ತಂಡದಲ್ಲಿ ಹುಳಿ ಹಿಂಡುವ ಕೆಲಸ ಅಗತ್ಯ ಇರಲಿಲ್ಲ” ಎಂದು ನಟಿ ಸಾರಾ ಅಣ್ಣಯ್ಯ ತಮ್ಮ ನೋವು ತೋಡಿಕೊಂಡಿದ್ದಾರೆ.
“ನಿಜ ಹೇಳಬೇಕೆಂದರೆ ನಾನು `ಕನ್ನಡತಿ’ಗೆ ಬಂದ ಬಳಿಕ ಬಹಳಷ್ಟು ಕಲಿತಿದ್ದೇನೆ. ನಮ್ಮ ನಿರ್ದೇಶಕ ಯಶವಂತ ಸರ್ ಎಲ್ಲವನ್ನೂ ಹೇಳಿಕೊಟ್ಟು ನನ್ನನ್ನು ಒಂದು ಹಂತಕ್ಕೆ ತಂದಿದ್ದಾರೆ. ನನ್ನ ನಟನೆಯನ್ನು ಇಂಪ್ರೂವ್ ಮಾಡಿಸುವುದು ಸೇರಿದಂತೆ ನನ್ನ ಜನಪ್ರಿಯತೆಯಲ್ಲಿ ಅವರ ಪಾಲು ದೊಡ್ಡದಾಗಿದೆ. ಇದನ್ನು ನಾನು ಅಲ್ಲಿಯೂ ಹೇಳಿದ್ದೇನೆ. ಆದರೆ ಅವರು ಈಗ ನಾನು ಜಗಳ ಮಾಡಿಕೊಂಡು ಹೊರ ನಡೆಯುತ್ತಿದ್ದೇನೆ ಎನ್ನುವಂತೆ ಹಬ್ಬಿಸಿದ್ದಾರೆ. ಈ ಬಗ್ಗೆ ನನಗೆ ಬೇಸರವಿದೆ” ಎಂದಿದ್ದಾರೆ ಸಾರಾ ಅಣ್ಣಯ್ಯ. ಅಂದ ಹಾಗೆ ‘ಕನ್ನಡತಿ’ ಧಾರಾವಾಹಿಯಲ್ಲಿ ಅವರ ಪಾತ್ರ ಜನಪ್ರಿಯವಾಗುತ್ತಿರುವಂತೆ ಅವರಿಗೆ ಒಂದಷ್ಟು ಸಿನಿಮಾ ಅವಕಾಶಗಳು ಬಂದಿವೆ. ಆದರೆ ಧಾರಾವಾಹಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಒಪ್ಪಿಕೊಂಡಿಲ್ಲ. ಅಷ್ಟೊಂದು ಡೆಡಿಕೇಶನ್ ಹೊಂದಿರುವ ತಮ್ಮ ಬಗ್ಗೆ ಅಪಪ್ರಚಾರ ನಡೆಸಿರುವವರ ವಿರುದ್ಧ ಸಾರಾ ಅಣ್ಣಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

