ನಿನ್ನೆ ರಾತ್ರಿ ರೇಲಿನಲ್ಲಿ ಗುಲ್ಬರ್ಗಾ ಸಾಹಿತ್ಯ ಸಮ್ಮೇಳನಕ್ಕೆ ಹೋಗುತ್ತಿರುವಾಗ, ನಡುರಾತ್ರಿ ಎಚ್ಚರವಾಯಿತು. ನನ್ನ ಎದುರು ಕುಳಿತಿದ್ದ ನನ್ನ ಸಹೋದ್ಯೋಗಿಯೊಬ್ಬರು ಅಂಡು ಬಗ್ಗಿಸಿಕೊಂಡು ಮೊಬೈಲ್ ನೋಡುತ್ತಾ ಕೂತಿದ್ದರು. ಏನ್ರೀ ನೋಡ್ತಿದ್ದೀರಿ ಅಂತ ಗಾಬರಿಯಾಗಿ ಕೇಳಿದೆ. ಸಿನಿಮಾ ಅಂದರು. ಯಾವ ಸಿನಿಮಾ ಅಂತ ಕೇಳಿದೆ. `ಅವನೇ ಶ್ರೀಮನ್ನಾರಾಯಣ’ ಅಂತ ಹೇಳಿ ಮತ್ತೆ ಪರದೆಯಲ್ಲಿ ಲೀನವಾದರು.
ಅಂತೂ ಕನ್ನಡಿಗರು ಅಂಡು ಬಗ್ಗಿಸಿಕೊಂಡು ಕನ್ನಡ ಸಿನಿಮಾ ನೋಡುತ್ತಿದ್ದಾರಲ್ಲ ಅಂತ ಸಂತೋಷವಾಯಿತು. ಬೆಳಗ್ಗೆ ಎದ್ದು ಪೇಪರ್ ನೋಡಿದರೆ ದರ್ಶನ್ `ಅಂಡು ಮುಚ್ಕೊಂಡು ಕನ್ನಡ ಸಿನಿಮಾ ನೋಡ್ರಯ್ಯ’ ಹೇಳಿದರೆಂದು ವರದಿಯಾಗಿತ್ತು. ಸೋಷಲ್ ಮೀಡಿಯಾಗಳಲ್ಲಿ ಅನೇಕರು ದರ್ಶನ್ ಹಾಗೆ ಹೇಳಬಾರದಿತ್ತು ಅಂತ ಬೈದು ಬರೆದಿದ್ದೂ ಕಂಡಿತು.
ದರ್ಶನ್ ಹಾಗೆ ಮಾತಾಡಿದ್ದು ತಪ್ಪೆಂದು ನನಗೆ ಅನ್ನಿಸಲಿಲ್ಲ. ಅಷ್ಟಕ್ಕೂ ದರ್ಶನ್ ನೋಡಿ ಅಂದದ್ದು ಅವರ ಸಿನಿಮಾವನ್ನಲ್ಲ. “ಸಂಚಾರಿ ವಿಜಯ್ ರಾಷ್ಟ್ರಪ್ರಶಸ್ತಿ ಪಡೆದ ನಟ. ಅವರು ಮಾಡಿದ ಸಿನಿಮಾಗಳನ್ನು ನೋಡಿ. ಹೊಸಬರು ಒಳ್ಳೊಳ್ಳೆಯ ಸಿನಿಮಾ ಮಾಡುತ್ತಿದ್ದಾರೆ ನೋಡಿ” ಅನ್ನುವುದನ್ನು ದರ್ಶನ್ ಅಚ್ಚಕನ್ನಡದ ದೇಸಿ ನುಡಿಯಲ್ಲಿ ಹೇಳಿದರು.
ಕನ್ನಡ ಪುಸ್ತಕ ಓದಿ, ಕನ್ನಡದಲ್ಲಿ ಮಾತಾಡಿ, ಕನ್ನಡ ಬೆಳೆಸಿ ಅಂತ ಸಾಹಿತಿಗಳು ದಿನವೂ ಹೇಳುತ್ತಿರುತ್ತಾರೆ. ತಮ್ಮ ತಮ್ಮ ಕ್ಷೇತ್ರದ ಬಗ್ಗೆ ಹೇಳುವುದು ಅಪರೂಪವೂ ಅಲ್ಲ, ಅಪರಾಧವೂ ಅಲ್ಲ. ಅಷ್ಟಕ್ಕೂ ಕನ್ನಡಿಗರಿಗೆ ಅಂಡು ಹೊಸದೇನೂ ಅಲ್ಲ. ಅದನ್ನು ಇನ್ನೂ ಆತ್ಯಂತಿಕ ಸ್ಥಿತಿಯಲ್ಲಿ ಬಳಸುತ್ತಲೇ ಇರುವವರು ನಾವು. ಇದ್ದಕ್ಕಿದ್ದ ಹಾಗೆ ದರ್ಶನ್ ಅಂಡು ಬಗ್ಗಿಸಿಕೊಂಡು ಅಂದಾಕ್ಷಣ ನಾವೇನೂ ಅಂಡು ಬಡಿದುಕೊಂಡು ಅಳಬೇಕಾಗಿಲ್ಲ.
ಅಷ್ಟಕ್ಕೂ ದರ್ಶನ್ ಆ ಮಾತನ್ನು ಹೇಳಿರುವುದು ಅವರ ಅಭಿಮಾನಿಗಳಿಗೆ. ತನ್ನ ಅಭಿಮಾನಿಗಳ ಜೊತೆ ಒಬ್ಬ ನಟ ಅವರಿಗೆ ಅರ್ಥವಾಗುವ ಭಾಷೆಯಲ್ಲೇ ಮಾತಾಡಬೇಕು. ದರ್ಶನ್ ಹೇಳಿದ್ದು ಡಿಬಾಸ್ ಅಭಿಮಾನಿಗಳಿಗೆ ಅರ್ಥವಾಗಿದೆ. ಅವರು ಅದನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಹೇಗೆ ಹೇಳಿದರೇನಂತೆ, ಮಂದಿ ಕನ್ನಡ ಸಿನಿಮಾ ನೋಡಿದರೆ ಕನ್ನಡಕ್ಕಲ್ಲವೇ ಲಾಭ? ದರ್ಶನ್ ಹೇಳಿದ್ದು ಕೂಡ ಕನ್ನಡದ ಮೇಲಿನ ಪ್ರೀತಿಯಿಂದಲೇ, ಅಕ್ಕರೆಯಿಂದಲೇ ಅಲ್ಲವೇ?
ಈ ಹಿಂದೆಯೂ ಬೇರೆ ಬೇರೆ ನಟರು ಈ ಮಾತನ್ನು ಬೇರೆ ಬೇರೆ ಥರ ಹೇಳಿದ್ದಾರೆ. ಹೀಗಾಗಿ ದರ್ಶನ್ ಅಂಡ್ ಕಂಪೆನಿ ಹೇಳುವ ಮಾತನ್ನು ಅರ್ಥಮಾಡಿಕೊಂಡು, ಸಿನಿಮಾ ಜಗತ್ತಿಗೆ ಹೀಗೊಂದು ಕಿವಿ ಮಾತು ಹೇಳಬಹುದು: ನಾವು ಅಂಡು ಬಗ್ಗಿಸಿಕೊಂಡು ಕನ್ನಡ ಸಿನಿಮಾ ನೋಡುತ್ತೇವೆ, ನೀವು ಅಂಡುಮುಚ್ಚಿಕೊಂಡು ಒಳ್ಳೆಯ ಸಿನಿಮಾ ಮಾಡಿ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!
(ಇದು ಪತ್ರಕರ್ತ ಜೋಗಿಯವರು ಸಾಮಾಜಿಕ ಜಾಲತಾಣದಲ್ಲಿ ಬರೆದ ಬರಹ)