ಮರಿ ಟೈಗರ್ ಚಿತ್ರಕ್ಕೆ ನಾಯಕಿಯಾದ ಪ್ರಿಯಾ ಆನಂದ್

ಟೈಗರ್ ವಿನೋದ್ ಪ್ರಭಾಕರ್ ನಾಯಕರಾಗಿರುವ ಹೊಸ ಚಿತ್ರ ‘ಬಲರಾಮನ ದಿನಗಳು’. ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಅದ್ದೂರಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕೆ‌.ಎಂ.ಚೈತನ್ಯ ನಿರ್ದೇಶಕರು. ವಿನೋದ್ ಪ್ರಭಾಕರ್ ಅಭಿನಯದ 25 ನೇ ಚಿತ್ರಕ್ಕೆ ಪ್ರಿಯಾ ಆನಂದ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ರಾಜಕುಮಾರ, ಜೇಮ್ಸ್, ಆರೆಂಜ್, ಕರಟಕ ದಮನಕದಂಥ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಪ್ರಿಯಾ ಆನಂದ್ ಮೊದಲ ಬಾರಿಗೆ ವಿನೋದ್ ಪ್ರಭಾಕರ್​ಗೆ ಜೋಡಿಯಾಗುತ್ತಿದ್ದಾರೆ. ಹೊಸವರ್ಷದ ಆರಂಭದ ದಿನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಾಯಕಿ ಪ್ರಿಯಾ ಆನಂದ್ ಅವರಿಗೆ ಚಿತ್ರತಂಡ ಸ್ವಾಗತ ಹೇಳಿದೆ. ‘ಬಲರಾಮನ ದಿನಗಳು’ 1980ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದು, ವಿನೋದ್ ಪ್ರಭಾಕರ್ ಹುಟ್ಟುಹಬ್ಬದಂದು ಫಸ್ಟ್ ಲುಕ್ ಬಿಡುಗಡೆಗೊಳಿಸಲಾಗಿತ್ತು.

ಕಾಲ, ಕಬಾಲಿ,ಕಲ್ಕಿ ಮೊದಲಾದ ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ನೀಡಿರುವ ಸಂತೋಷ್ ನಾರಾಯಣನ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಇದು ಅವರು ಸಂಗೀತ ಸಂಯೋಜಿಸುತ್ತಿರುವ 51ನೇ ಚಿತ್ರ ಹಾಗೂ ಕನ್ನಡದ ಮೊದಲ ಚಿತ್ರ. ಈಗಾಗಲೇ ಚಿತ್ರಕ್ಕೆ ಎರಡು ಹಂತಗಳ ಚಿತ್ರೀಕರಣ ಮುಕ್ತಾಯವಾಗಿದ್ದು, ಜನವರಿ 15 ರಿಂದ ಮೂರನೇ ಹಂತದ ಚಿತ್ರೀಕರಣ ಆರಂಭವಾಗಲಿದೆ‌.‌ ಚಿತ್ರದ ಕುರಿತು ಮತ್ತಷ್ಟು ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುವುದಾಗಿ ನಿರ್ಮಾಪಕ ಶ್ರೇಯಸ್ ತಿಳಿಸಿದ್ದಾರೆ.

Recommended For You

Leave a Reply

error: Content is protected !!