“ಮುಂಗಾರು ಮಳೆ ಎನ್ನುವ ಶೀರ್ಷಿಕೆಗೂ ಕೂಡ ವ್ಯಂಗ್ಯ ಮಾಡಿದವರು ಇದ್ದರು. ಅದೇ ರೀತಿ ಈಗ ‘ಆನೆಬಲ’ ಎನ್ನುವ ಹೆಸರನ್ನು ಕೂಡ ಏನಿದು ಇಂಥ ಹೆಸರು ಎಂದು ತಾತ್ಸಾರ ಮಾಡಿದವರನ್ನು ಕೂಡ ಅಚ್ಚರಿ ಮೂಡಿಸುವಂಥ ಗೆಲುವು ಈ ಚಿತ್ರಕ್ಕೆ ಸಿಗಲಿ” ಎಂದು ಮುಂಗಾರು ಮಳೆ ಖ್ಯಾತಿಯ ನಿರ್ಮಾಪಕ ಇ.ಕೃಷ್ಣಪ್ಪ ಅವರು ಹೇಳಿದರು. ಅವರು ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಸಿನಿಮಾದ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನದ ಹೊಣೆ ಹೊತ್ತಿರುವ ಸೂನಗಹಳ್ಳಿ ರಾಜು ಅವರು “ಹಳ್ಳಿ ಸೊಗಡು, ಪ್ರಾಕೃತಿಕ ಸೊಬಗನ್ನು ಉಳಿಸಿಕೊಳ್ಳಬೇಕಾದ ಅಗತ್ಯ ಇದೆ ಎನ್ನುವ ಕಾರಣಕ್ಕೆ ಅಂಥದೇ ಸಬ್ಜೆಕ್ಟ್ ಇರಿಸಿಕೊಂಡು ಆನೆಬಲ ಚಿತ್ರವನ್ನು ಮಾಡಿದ್ದೇವೆ” ಎಂದರು.
“ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿಯರು ಮಾತನಾಡಿ, “ಇದು ನಿಜವಾದ ಮಂಡ್ಯ ಸೊಗಡಿನ ಸಿನಿಮಾ. ಭಾಷೆ, ಸೇರಿದಂತೆ ಮಂಡ್ಯದ ಆಚರಣೆಗಳನ್ನು ನೈಜವಾಗಿ ತೋರಿಸಿರುವ ಅಪರೂಪದ ಚಿತ್ರ ಇದು” ಎಂದರು.
ಗ್ರಾಮೀಣ ಸೊಬಗನ್ನು ಕಣ್ಣೆದುರು ಬಂದ ಹಾಗೆ ಚಿತ್ರಿಸಿರುವ ಛಾಯಾಗ್ರಾಹಕ ಬೆಟ್ಟೇಗೌಡ, ಚಿತ್ರದ ನಿರ್ಮಾಪಕ ವೇಣುಗೋಪಾಲ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಚಿತ್ರ ಪ್ರೇಕ್ಷಕರಿಗೆ ಖಂಡಿತವಾಗಿ ಮನರಂಜನೆ ನೀಡಲಿದೆ ಎಂದು ಭರವಸೆ ನೀಡಿದರು. ಚಿತ್ರದ ಟ್ರೇಲರ್ ಮತ್ತು ಹಾಡುಗಳ ಪ್ರದರ್ಶನದ ಬಳಿಕ ಆನೆಬಲ ಪೋಸ್ಟರ್ ಹಿಡಿದು ಮಾಧ್ಯಮದ ಮುಂದೆ ಪ್ರದರ್ಶಿಸಿದರು.