ಕನ್ನಡ ಚಿತ್ರರಂಗದಲ್ಲಿ ಕವಿರಾಜ್ ಹೆಸರು ರಾರಾಜಿಸತೊಡಗಿ ಎರಡು ದಶಕ ದಾಟಿದೆ. ಅದಕ್ಕೆ ಕಾರಣ ಚಿತ್ರಗೀತೆಗಳಲ್ಲಿನ ಅವರ ಕಾವ್ಯಮಯವಾದ ಸಾಲುಗಳು. ಇತ್ತೀಚೆಗೆ ಸಿನಿಮಾ ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ಅವರು ಸಮಾಜ ಸೇವೆಯಿಂದ, ಕನ್ನಡದ ಹೋರಾಟದಿಂದಲೂ ಗುರುತಿಸಿಕೊಂಡವರು. ಕನ್ನಡಕ್ಕಾಗಿ ಕಂಕಣಬದ್ಧರಾಗಿರುವ ಕವಿರಾಜ್, ಕನ್ನಡದಲ್ಲಿ ಬರುತ್ತಿರುವ ಒಳ್ಳೆಯ ಸಿನಿಮಾಗಳು ಕೂಡ ಜನರು ಗಣನೆಗೆ ತೆಗೆದುಕೊಳ್ಳದ ಹಾಗಾಗಿರುವುದಕ್ಕೆ ಆತಂಕಗೊಂಡಿದ್ದಾರೆ. ಅದಕ್ಕೆ ಕಾರಣವೇನು ಎನ್ನುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಅವರು ಪರ್ಯಾಯ ಯೋಜನೆಯ ಬಗ್ಗೆ ಕೂಡ ಚಿಂತನೆ ನಡೆಸಿದ್ದು, ಸದ್ಯದಲ್ಲೇ ಅದನ್ನು ರಿವೀಲ್ ಮಾಡುವ ಸಾಧ್ಯತೆಗಳಿವೆ. ಇಲ್ಲಿ ಅವರ ಫೇಸ್ಬುಕ್ ಬರಹವನ್ನು ನಾವು ಯಥಾವತ್ತಾಗಿ ನೀಡಿದ್ದೇವೆ.

“ನಿನ್ನೆ ‘ಕಾಣದಂತೆ ಮಾಯವಾದನು’ ಸಿನಿಮಾ ನೋಡಿದೆ. ನಿಜವಾಗಿಯೂ ಸಿನಿಮಾ ವಿಭಿನ್ನವಾಗಿ ಚೆನ್ನಾಗಿದೆ. ದೆವ್ವ, ಭೂತ, ಆತ್ಮಗಳನ್ನು ನಂಬದ ನನ್ನಂಥವನಿಗೂ ಒಂದು ಕಾಲ್ಪನಿಕ, ಫ್ಯಾಂಟಸಿ ಕತೆಯಾಗಿ ಸಿನಿಮಾ ಖುಷಿ ಕೊಟ್ಟಿತು. ಸ್ಕ್ರಿಪ್ಟ್ ಬಿಗಿಯಾಗಿದ್ದು ಎಲ್ಲೂ ಬೋರ್ ಹೊಡೆಸದೇ ನೋಡಿಸಿಕೊಳ್ಳುತ್ತೆ. ನಿರ್ದೇಶಕ ಸೇರಿದಂತೆ ತಾಂತ್ರಿಕ ವರ್ಗ ಉತ್ತಮ ಕೆಲಸ ಮಾಡಿದೆ.
ಬಿಡುಗಡೆಯ ನಡುವೆಯೇ ಸ್ಪರ್ಧೆ!
ಅದೇ ರೀತಿ ಇತ್ತೀಚೆಗೆ ಬಿಡುಗಡೆಯಾದ ಪ್ರಾಣಿ ಮತ್ತು ಮನುಷ್ಯನ ಮನೋಜ್ಞ ಸಂಬಂಧದ ‘ನಾನು ಮತ್ತು ಗುಂಡ’; ಸುಂದರ ಪ್ರೇಮಕಥೆಯ ‘ಲವ್ ಮಾಕ್ಟೇಲ್’, ನಾಗತಿಹಳ್ಳಿ ಮೇಷ್ಟ್ರ ಬ್ರಾಂಡಿನ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಸಿನಿಮಾಗಳು ಚೆನ್ನಾಗಿವೆ ಎಂದು ಕೇಳಿದ್ದೇನೆ. ಆದರೂ ಇವ್ಯಾವ ಸಿನಿಮಾಗಳಿಗೂ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಬರದೇ ಇರುವುದು ವಿಪರ್ಯಾಸ. ಅಬ್ಬರದ ಪ್ರಚಾರ, ಸ್ಟಾರ್ ಗಳ ಸಿನಿಮಾಗಳಿಗೆ ಮಾತ್ರ ಜನ ಬರುತ್ತಾರೆ ಎನ್ನುವ ಪರಿಸ್ಥಿತಿ ಇದೆ. ವಾಸ್ತವದಲ್ಲಿ ಹೊಸಬರು ಸಿನಿಮಾ ಮಾಡಿ ಹಾಕಿದ ದುಡ್ಡು ಹಿಂಪಡೆಯುವುದು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾದಂತಿದೆ. ವಾರಕ್ಕೇ ಹತ್ತು ಸಿನಿಮಾ ಬಿಡುಗಡೆ ಸಾಮಾನ್ಯವಾಗಿ, ಅನಾವಶ್ಯಕ ಸ್ಪರ್ಧೆ ಯಾರನ್ನು ಕೂಡ ಗೆಲ್ಲಲು ಬಿಡುತ್ತಿಲ್ಲ.
ಮಾಧ್ಯಮಗಳಿಂದ ಪ್ರಚಾರವೇ ಕಷ್ಟ!
ಸಣ್ಣ ಬಜೆಟ್ ಸಿನಿಮಾಗಳಿಗೆ ಸರಿಯಾದ ರೀತಿಯಲ್ಲಿ ಪ್ರಚಾರ ಮಾಡಬೇಕೆಂದರೆ ಸಿನಿಮಾ ಬಜೆಟನ್ನೇ ಮೀರಿಸೋ ಮೊತ್ತ ಎತ್ತಿಡಬೇಕು. ಟಿವಿ ,ಪತ್ರಿಕೆಗಳ ಪ್ರಚಾರದ ಪ್ಯಾಕೇಜ್ ಕೇಳಿದರೆ ಭಯಪಡುವಂತಿದೆ. ಪೋಸ್ಟಿಗೆ ಹತ್ತು ಲೈಕ್ ಬರದ ಫೇಸ್ ಬುಕ್ ಪೇಜ್ ಗಳು ಕೂಡಾ ಸಾವಿರಾರು ರೂಪಾಯಿಗಳ ಪ್ಯಾಕೇಜ್ ಗೆ ಒತ್ತಾಯಪೂರ್ವಕ ಬೇಡಿಕೆ ಇಡುತ್ತವೆ.
ಚಿತ್ರಮಂದಿರಗಳಿಂದಲೂ ತೊಂದರೆ
ಇವೆಲ್ಲದರ ನಡುವೆ ಥಿಯೇಟರ್ ಗಳ ಶೋ ಪಡೆಯೋದೊಂದು ಹರಸಾಹಸ. ಕೊಟ್ಟರೂ ಸೂಕ್ತವಲ್ಲದ ಸಮಯದ ಶೋಗಳು. ಇದ್ದಕ್ಕಿದ್ದಂತೆ ಶೋ ಕ್ಯಾನ್ಸಲ್,ಅವರ ಅನುಕೂಲಕ್ಕೆ ಸಮಯ ಬದಲಾವಣೆ ಹೀಗೆ ಸಿನಿಮಾದ ಜೀವ ಹಿಂಡಿ ಬಿಡುತ್ತವೆ. ಬರುವ ಅಷ್ಟಿಷ್ಟು ಗಳಿಕೆಯು ಥಿಯೇಟರ್ ಗಳ ಬಾಡಿಗೆ,ಶೇರ್ ಗಳೇ ತಿಂದು ಹಾಕುತ್ತವೆ. ಬಹುತೇಕ ಸಿನಿಮಾಗಳಿಗೆ ಕೊನೆಗೆ ಚಿಕ್ಕಾಸು ಉಳಿಯುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಹೊಸ ಪ್ರತಿಭೆಗಳು,ಹೊಸ ಕನಸುಗಳು ಇಲ್ಲಿ ಕುಡಿಯೊಡೆಯಲು ಸಾಧ್ಯವೇ ಇಲ್ಲ. ಒಳ್ಳೆಯ ಸಿನಿಮಾಗಳಿಗೆ ಒಂದು ಮಟ್ಟದ ಸುರಕ್ಷೆ ಒದಗಿಸುವ ಪೂರಕ ವಾತಾವರಣ ನಿರ್ಮಿಸಬೇಕಿರುವುದು ಚಿತ್ರರಂಗ ಮಾತ್ರವಲ್ಲ ಸಹೃದಯಿ ಪ್ರೇಕ್ಷಕರ ಜವಾಬ್ದಾರಿ ಕೂಡಾ ಆಗಿದೆ. ಮೊದಲ ವಾರದಲ್ಲೇ ಒಂದು ಮಟ್ಟದ ಗಳಿಕೆ ಆಗದಿದ್ದರೆ ಸಿನಿಮಾವನ್ನು ಎರಡನೇ ವಾರಕ್ಕೆ ಮುಂದುವರಿಸುವುದೇ ಕಷ್ಟ.ಹಾಗಾಗಿ ಉತ್ತಮ ಪ್ರತಿಕ್ರಿಯೆ ಪಡೆದ ಸಿನಿಮಾಗಳನ್ನು ಸಿನಿಮಾ ಪ್ರೇಮಿಗಳು ಮೊದಲ ವಾರದಲ್ಲೇ ನೋಡಿದರೆ ಆ ಮಟ್ಟಿಗೆ ಕೈ ಹಿಡಿದಂತೆ.
ಪರಿಹಾರ ಯೋಜನೆಗೆ ಚಿಂತನೆ
ಚಿತ್ರರಂಗವಂತೂ ಕೂಡಲೇ ಎಚ್ಚೆತ್ತು ಈ ದಿಸೆಯಲ್ಲಿ ಗಂಭೀರವಾಗಿ ಚಿಂತನೆ ನಡೆಸಿ, ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಒಂದು ಸಮರ್ಥ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರಬೇಕಿದೆ. ಈ ನಿಟ್ಟಿನಲ್ಲಿ ವೈಯಕ್ತಿಕವಾಗಿ ನಾನು ಸಮಾನ ಮನಸ್ಕರೊಂದಿಗೆ ಕೂಡಿ ಒಂದು ಯೋಜನೆ ರೂಪಿಸುತ್ತಿದ್ದೇನೆ. ಅಂದುಕೊಂಡಂತೆ ಅದು ಜಾರಿಗೆ ಬಂದರೆ ಚಿತ್ರರಂಗಕ್ಕೆ ಬರಲಿಚ್ಛಿಸುವ ಹೊಸ ಪ್ರತಿಭೆಗಳ ಪಾಲಿಗೆ ಒಂದು ಆಶಾಕಿರಣ ಆಗುವುದು ಖಂಡಿತಾ.

