
ಆರ್ ವಿ ಕೆ ಕ್ರಿಯೇಶನ್ಸ್ ಮೂಲಕ ‘ಶಿವ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ‘ಶಿವ’ತಂಡ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಚಿತ್ರದ ವಿವರಗಳನ್ನು ಹಂಚಿಕೊಳ್ಳಲಾಯಿತು.

ಚಿತ್ರಕ್ಕೆ ಕತೆ, ಚಿತ್ರಕತೆ ಬರೆದು ನಿರ್ದೇಶಿಸುವ ಜತೆಗೆ ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ ರಘು ವಿಜಯ ಕಸ್ತೂರಿ. ಶಿವನಾಗಿ ಹಳ್ಳಿಯ ಲೋಕಲ್ ರೌಡಿಯ ಪಾತ್ರವನ್ನು ನಿರ್ವಹಿಸಿರುವುದಾಗಿ ಅವರು ಹೇಳಿದರು. “ಇಂದಿಗೂ ಹಳ್ಳಿಯತನ ಕಾಯ್ದುಕೊಂಡಿರುವ ಊರೊಂದಲ್ಲಿ ನಡೆಯುವ ನವಿರಾದ ಪ್ರೇಮ ಕತೆ ಚಿತ್ರದಲ್ಲಿದೆ. ಸ್ಥಳೀಯ ಹೊಡೆದಾಟಗಳು, ರಾಜಕೀಯ ದ ಸುತ್ತ ಸಾಗುವ ಈ ಕತೆಯನ್ನು ಮಂಡ್ಯದ ಸೊಗಡಿನಲ್ಲಿ ತೋರಿಸಲಾಗಿದೆ” ಎನ್ನುವುದು ರಘು ವಿಜಯ ಕಸ್ತೂರಿಯ ಮಾತು.

ಈ ಹಿಂದೆ ಕನ್ನಡದ ‘ಕಾದಲ್’ ಸೇರಿದಂತೆ ಒಂದೆರಡು ಸಿನಿಮಾಗಳಲ್ಲಿ ನಾಯಕಿಯಾಗಿರುವ ಧರಣಿ ಈ ಚಿತ್ರಕ್ಕೆ ನಾಯಕಿ. ಚಿತ್ರದಲ್ಲಿ ತಮ್ಮದು ಶಿಕ್ಷಕಿಯ ಪಾತ್ರ ಎಂದು ಅವರು ತಿಳಿಸಿದರು. ಚಿತ್ರದಲ್ಲಿ ನಿಶಾಂತ್, ಬೇಬಿ ಸಾನ್ವಿ, ಪಾಲಳ್ಳಿ ಉಮೇಶ್, ರಂಜನ್ ಶೆಟ್ಟಿ ಮೊದಲಾದವರು ನಟಿಸಿದ್ದು ರಮೇಶ್ ರಾಜ್ ಛಾಯಾಗ್ರಹಣ, ಕುಮಾರ್ ಕೋಟೆಕೊಪ್ಪ ಸಂಕಲನ, ಸತೀಶ್ ಬಾಬು ಸಂಗೀತ ಮತ್ತು ರಾಮ್ ದೇವ್ ಸಾಹಸ ಚಿತ್ರಕ್ಕಿದೆ.
ಬಹುಮುಖ ಪ್ರತಿಭೆ ರಘು ವಿಜಯ ಕಸ್ತೂರಿಯವರು ರಚಿಸಿದ ಎರಡು ಪುಸ್ತಕಗಳ ಬಿಡುಗಡೆಯನ್ನು ಕೂಡ ಈ ಸಂದರ್ಭದಲ್ಲಿ ನೆರವೇರಿಸಲಾಯಿತು.
