‘ಬಿಲ್ ಗೇಟ್ಸ್’ ಸಕ್ಸಸ್..!

ಬಿಲ್ ಗೇಟ್ಸ್ ಎಂದು ಹೆಸರು ಇರಿಸಿದ ಮೇಲೆ ಸಕ್ಸಸ್ ಕೂಡ ಜತೆಯಲ್ಲೇ ಬರುತ್ತದೇನೋ! ಯಾಕೆಂದರೆ ಒಂದರ ಹಿಂದೆ ಒಂದರಂತೆ ಒಳ್ಳೆಯ ಸಿನಿಮಾಗಳು ಪ್ರೇಕ್ಷಕರನ್ನು ಕಳೆದುಕೊಳ್ಳುತ್ತಿರುವಾಗ ‘ಬಿಲ್ ಗೇಟ್ಸ್’ ಚಿತ್ರ ಮಾತ್ರ ಯಶಸ್ವಿಯಾಗಿ ಮುಂದುವರಿದಿದೆ ಎಂದು ಚಿತ್ರ ತಂಡ ಖಚಿತ ಪಡಿಸಿದೆ. ಈ ವಿಚಾರವನ್ನು ಅವರು ಮಾಧ್ಯಮದ ಮುಂದೆ ಗೆಲವಿನ ಸಂಭ್ರಮ ನಡೆಸಿ ಹಂಚಿಕೊಂಡರು.

“ಚಿತ್ರಕ್ಕೆ ಸೆಟ್ ತುಂಬ ನಿರ್ಮಾಪಕರಿದ್ದರು. ವಿವಿಧ ಕ್ಷೇತ್ರಗಳಿಂದ ಬಂದಂಥ 15 ಮಂದಿ ನಿರ್ಮಾಪಕರು ಪ್ರೊಡ್ಯೂಸ್ ಮಾಡಿದ ಚಿತ್ರ ಗುಣಮಟ್ಟದಲ್ಲಿ ಚೆನ್ನಾಗಿಯೇ ಇತ್ತು. ಇದೀಗ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿರುವುದಾಗಿ ನಿರ್ದೇಶಕರ ಬಾಯಿಯಿಂದ ಕೇಳಿದಾಗ ಖುಷಿಯಾಗಿದೆ ” ಚಿಕ್ಕಣ್ಣ ಹೇಳಿದರು.

ನಿರ್ದೇಶಕ ಶ್ರೀನಿವಾಸ ಸಿ ಮಂಡ್ಯ ಅವರು ಹೇಳುವಂತೆ ಚಿತ್ರದ ಥಿಯೇಟರ್ ಡಿಮಾಂಡ್ ಹೆಚ್ಚುತ್ತಿದೆಯಂತೆ. ಆದರೆ ಛಾಯಾಗ್ರಾಹಕ ರಾಕೇಶ್ ಸಿ‌ ತಿಲಕ್ ಅವರು ನಮ್ಮ ಹೆಚ್ಚಿನ ಥಿಯೇಟರ್ ಗಳಲ್ಲಿ ಉತ್ತಮ ಪ್ರದರ್ಶನ ನೀಡುವಷ್ಟು ಗುಣಮಟ್ಟವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜತೆಗೆ ಆಪರೇಟರ್ ಗಳ ನಿರ್ಲಕ್ಷ್ಯವನ್ನು ಕೂಡ ಕಣ್ಣಾರೆ ನೋಡುವ ಅವಕಾಶ ತಮಗೆ ಲಭಿಸಿದ್ದಾಗಿ ಅವರು ಹೇಳಿದರು.

ಚಿತ್ರದ ನಾಯಕ ಶಿಶಿರ್ ಶಾಸ್ತ್ರಿಯವರಿಗೆ ಬುಕ್ ಮೈ ಶೋ ರೇಟಿಂಗ್ ತುಂಬ ವಿಚಿತ್ರ ಅನಿಸಿದೆ ಎಂದರು. ಮೊನ್ನೆ ಹಿಂದಿನ ದಿನ ರಾತ್ರಿ ಎಂಬತ್ತರಷ್ಟು ಇದ್ದ ರೇಟಿಂಗ್ ಮರುದಿನ ಬೆಳಿಗ್ಗೆ ಆಗುವ ಹೊತ್ತಿಗೆ ನಲವತ್ತಕ್ಕೆ ಇಳಿದಿದ್ದು ಅಚ್ಚರಿ ಎನಿಸಿದೆ. ಬುಕ್ ಮೈ ಶೋ ರೇಟಿಂಗ್ಸ್ ಎನ್ನುವುದು ಬೋಗಸ್. ಆದರೂ ಜನ ಅದನ್ನು ನಂಬುತ್ತಿರುವುದು ವಿಪರ್ಯಾಸ ಎಂದು ಶಿಶಿರ್ ಬೇಸರಗೊಂಡರು.

ಗಾಂಧಿನಗರದ ಪ್ರಮುಖ ಚಿತ್ರಮಂದಿರಗಳಲ್ಲಿ ಒಂದಾದ ನರ್ತಕಿಯಲ್ಲಿ ಚಿತ್ರ ಪ್ರದರ್ಶನ ಮುಂದುವರಿದಿದೆ. ಆದರೆ ಬೇರೆ ಚಿತ್ರತಂಡಗಳು ಮುಂದಿನ ವಾರದಿಂದ ಅವರ ಸಿನಿಮಾ ಅಲ್ಲಿ ಪ್ರದರ್ಶನಗೊಳ್ಳುವುದಾಗಿ ಹೇಳಿದ್ದಾರೆ. ಆದರೆ ಅದು ನಿಜವಲ್ಲ. ನಮ್ಮ ಚಿತ್ರಕ್ಕೆ ಕಲೆಕ್ಷನ್ ಚೆನ್ನಾಗಿರುವ ಕಾರಣ ತೆಗೆದುಹಾಕುವ ಮಾತೇ ಇಲ್ಲ ಎಂದು ನಿರ್ಮಾಪಕರಲ್ಲೋರ್ವರಾದ ವಸಂತ್ ಬಿಎಮ್ ತಿಳಿಸಿದರು.

ಚಿತ್ರಕ್ಕೆ ಸಂಭಾಷಣೆ ರಚಿಸಿ ಗಮನ ಸೆಳೆದಿರುವ ರಾಜಶೇಖರ್ ಕೆ ಎಲ್ ಮಾತನಾಡಿ, ” ಸಿನಿಮಾ ಬಿಡುಗಡೆಯಾದ ಮೇಲೆ ಸಮುದ್ರದ ಮಧ್ಯೆ ಹೋದ ದೋಣಿಯ ಹಾಗೆ. ದಾಟೋದು ಅಥವಾ ಮುಳುಗೋದು ಎರಡೇ ದಾರಿಗಳು ಮಾತ್ರ ಇರೋದು. ಅದರ ನಡುವೆ ರಕ್ಷಿಸಲು ಒಂದೋ ಹಡಗು ಬರಬೇಕು ಅಥವಾ ದೇವರು ಬರಬೇಕು. ಇಲ್ಲಿ ಸಿನಿಮಾ ರಕ್ಷಿಸಲು ಕೂಡ ಇಬ್ಬರಿಂದ ಮಾತ್ರ ಸಾಧ್ಯ. ಅದು ಪ್ರೇಕ್ಷಕರು ಮತ್ತು ಅವರನ್ನು ಥಿಯೇಟರ್ ಗೆ ಕಳಿಸಬಲ್ಲ ಮಾಧ್ಯಮಗಳಿಂದ ಮಾತ್ರ ಸಾಧ್ಯ” ಎಂದರು. ಚಿತ್ರದಲ್ಲೊಂದು ಪ್ರಮುಖ ಪಾತ್ರ ನಿರ್ವಹಿಸಿದ ಯತಿರಾಜ್ ಮತ್ತು ಚಿತ್ರದ ನಾಯಕಿ ರಶ್ಮಿತಾ ರೋಜ ಈ‌ ಸಂದರ್ಭದಲ್ಲಿ ವೇದಿಕೆಯಲ್ಲಿದ್ದರು. ಚಿತ್ರದ ಪಿ.ಆರ್.ಒ‌ ನಾಗೇಂದ್ರ ಅವರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Recommended For You

Leave a Reply

error: Content is protected !!
%d bloggers like this: