ಚಲನಚಿತ್ರೋತ್ಸವದ ತಯಾರಿಯ ಬಗ್ಗೆ ಸುನೀಲ್ ಪುರಾಣಿಕ್ ಮಾತು

12ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಬಗ್ಗೆ ವಿಶೇಷ ಪತ್ರಿಕಾಗೋಷ್ಠಿಯನ್ನು ಆಯೋಜಿಸಿ ಮಾಧ್ಯಮಗಳ ಜತೆಗೆ ರೂಪುರೇಷೆಗಳ ಬಗ್ಗೆ ಹಂಚಿಕೊಂಡರು.

ಫೆಬ್ರವರಿ 26ರಿಂದ ಮಾರ್ಚ್ 4ರ ವರೆಗೆ ಚಲನಚಿತ್ರೋತ್ಸವ ನಡೆಯಲಿದ್ದು ಈ ಬಾರಿ ಒರಿಯನ್ ಮಾಲ್, ಕಲಾವಿದರ ಭವನ ಮಾತ್ರವಲ್ಲದೆ ನವರಂಗ ಥಿಯೇಟರ್ ಮತ್ತು ಬನಶಂಕರಿಯ ಸೊಸೈಟಿಯಲ್ಲಿ ಚಿತ್ರಗಳ ಪ್ರದರ್ಶನ ನಡೆಯಲಿದೆ.

ಚಿತ್ರೋತ್ಸವದಲ್ಲಿ ಗೋ ಗ್ರೀನ್

ಪ್ರಧಾನ ಮಂತ್ರಿಯವರ ಕನಸಾಗಿರುವ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಜಾರಿಗೆ ತರುವ ಬಗ್ಗೆ ಸುನೀಲ್ ಪುರಾಣಿಕ್ ಅವರು ಕೂಡ ಕಾಳಜಿ ತೋರಿದ್ದು ಹಿಂದಿನ ಚಿತ್ರೋತ್ಸವದ ಹಾಗೆ ಈ ಬಾರಿಯ ಫೆಸ್ಟಿವಲ್ ಗುರುತಿನ ಚೀಟಿಗಳಿಗೆ ಪ್ಲಾಸ್ಟಿಕ್ ಕವರ್ ಗಳು ಇರುವುದಿಲ್ಲ. ಅದೇ ರೀತಿ ಎಲ್ಲೆಲ್ಲ ಪ್ಲಾಸ್ಟಿಕ್ ನಿವಾರಣೆ ಸಾಧ್ಯವೋ ಅಲ್ಲೆಲ್ಲ ಪ್ಲಾಸ್ಟಿಕ್ ಬಳಕೆ ಮಾಡದಿರಲು ನಿರ್ಧರಿಸಿರುವುದಾಗಿ ಸುನೀಲ್ ಪುರಾಣಿಕ್ ಹೇಳಿದರು.

ಫಿಲ್ಮ್ ಬಜಾರ್ ಯೋಜನೆ

‘ಫಿಲ್ಮ್ ಬಜಾರ್ ‘ ಎನ್ನುವ ಹೊಸ ಯೋಜನೆಯ ಮೂಲಕ ವಿದೇಶಿ ಚಿತ್ರ ನಿರ್ಮಾಪಕ, ನಿರ್ದೇಶಕರಿಗೆ ಕನ್ನಡ ಚಿತ್ರಗಳನ್ನು ಕೊಳ್ಳುವ ಮಾರುಕಟ್ಟೆ ನಿರ್ಮಿಸಲಾಗುವುದು ಎಂದು ಪುರಾಣಿಕ್ ತಿಳಿಸಿದರು. ಇದನ್ನು ನಮ್ಮ ಚಲನಚಿತ್ರ ನಿರ್ದೇಶಕರ ಸಂಘದ ಸಹಯೋಗದೊಂದಿಗೆ ಮಾಡಲಾಗುತ್ತಿದ್ದು, ಯಾವ ರೀತಿಯಲ್ಲಿ ಕಾರ್ಯರೂಪಕ್ಕೆ ಬರಲಿದೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಅವರು ಹೇಳಿದರು.

ಸಂಗೀತಕ್ಕೆ ಹೆಚ್ಚು ಒತ್ತು

ಭಾರತೀಯ ಸಿನಿಮಾಗಳು ಎಂದರೆ ಸಂಗೀತ ಪ್ರಾಧಾನ್ಯತೆ ಪಡೆದಿರುವಂಥವು. ಅದರಲ್ಲಿ ಕೂಡ ಸಂಗೀತಕ್ಕೆಂದೇ ಮೀಸಲಾಗಿರುವ ಒಂದಷ್ಟು ಚಿತ್ರಗಳು ನಮ್ಮಲ್ಲಿವೆ. ಪುರಂದರ ದಾಸರು, ತಾನ್ ಸೇನ್, ಬೈಜು ಬಾವ್ರ ಮೊದಲಾದ ಸಂಗೀತ ದಿಗ್ಗಜರಿಗೆ ಸಂಬಂಧಿಸಿದ ಸಿನಿಮಾಗಳನ್ನು ಆಯೋಜಿಸಲಾಗುವುದು.

ಅನಂತನಾಗ್ ಗೆ ವಿಶೇಷ ಗೌರವ

ಕನ್ನಡ ಸೇರಿದಂತೆ ಬೇರೆ ಭಾಷೆಗಳಲ್ಲಿ ನಟಿಸಿ ಗುರುತಿಸಿಕೊಂಡಿರುವ ಹಿರಿಯ ನಟ ಅನಂತನಾಗ್ ಅವರ ಗೌರವಾರ್ಥ ಅವರ ಜನಪ್ರಿಯ, ಪ್ರಶಸ್ತಿ ಪುರಸ್ಕೃತ ಸಿನಿಮಾಗಳ ಪ್ರದರ್ಶನ ಇರುತ್ತದೆ. ವಿವಿಧ ಭಾಷೆಗಳ ಪ್ರಮುಖ ಏಳೆಂಟು ಚಿತ್ರಗಳನ್ನು ವೀಕ್ಷಿಸುವ ಅವಕಾಶ ಸಿಗಲಿದೆ.

ಇವೆಲ್ಲದರ ಜತೆಗೆ ನಡೆಯಲಿರುವ ವಿವಿಧ ಸಿನಿಮಾ ಸಂಬಂಧಿತ ವಿಚಾರಗೋಷ್ಠಿಗಳಲ್ಲಿ ಪೈರಸಿಯ ವಿರುದ್ಧದ ಹೋರಾಟಕ್ಕೆ ಕಾನೂನು ನೆರವು ನೀಡುವಗೋಷ್ಠಿಯನ್ನು ಕೂಡ ಆಯೋಜಿಸಲಿರುವುದಾಗಿ ಪುರಾಣಿಕ್ ಹೇಳಿದರು.

ತಮ್ಮ ನೇತೃತ್ವದಲ್ಲಿ ಪ್ರಥಮ ಬಾರಿ ಚಿತ್ರೋತ್ಸವ ನಡೆಯುತ್ತಿರುವ ಕಾರಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು, ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಪದಾಧಿಕಾರಿಗಳು, ಹಿರಿಯ, ಪ್ರಶಸ್ತಿ ವಿಜೇತ ನಿರ್ದೇಶಕರು, ಚಲನಚಿತ್ರೋದ್ಯಮದ ಮತ್ತಿತರ ಗಣ್ಯರನ್ನು ಕರೆದು, ಅವರ ಸಲಹೆ, ಸೂಚನೆಗಳನ್ನು ಪಡೆದಿರುವುದಾಗಿ ಅಕಾಡೆಮಿ ಅಧ್ಯಕ್ಷರು ತಿಳಿಸಿದ್ದಾರೆ.

ಹಾಗೆ ಬಂದು ಸಲಹೆ ನೀಡಿದವರಲ್ಲಿ , ನಿರ್ದೇಶಕ ವಿ. ರವಿಚಂದ್ರನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟಿ ಹೇಮಾಚೌದರಿ ಮೊದಲಾದವರು ಸೇರಿದ್ದರೆಂದು ಸುನೀಲ್ ಪುರಾಣಿಕ್ ಸ್ಮರಿಸಿಕೊಂಡರು. ಅಕಾಡೆಮಿಯ ರಿಜಿಸ್ಟ್ರಾರ್ ಹಿಮಂತರಾಜು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Recommended For You

Leave a Reply

error: Content is protected !!
%d bloggers like this: