ಮಂತ್ರಮಾಂಗಲ್ಯ ಬಂಧನ ಗೋರವಿ ಮತ್ತು ಸ್ವಾತಿ ಕೆ ಎಚ್

ರಾಷ್ಟ್ರಕವಿ ಕು.ವೆಂ.ಪು ಅವರ ವಿಚಾರಧಾರೆಗಳು ಎಷ್ಟೊಂದು ದೂರದೃಷ್ಟಿಯಿಂದ ಕೂಡಿತ್ತು ಎನ್ನುವುದಕ್ಕೆ ಇಂದಿಗೂ ಯುವಸಮೂಹದ ಆಕರ್ಷಣೆಯಾಗಿರುವ ‘ಮಂತ್ರಮಾಂಗಲ್ಯ’ ಎನ್ನುವ ವಿವಾಹ ವಿಧಾನವೇ ಸಾಕ್ಷಿ. ಇಂದು ಅದಕ್ಕೆ ಜೀವಂತ ಉದಾಹರಣೆಯಾಗಿ ಸತಿಪತಿಗಳಾಗಿ ದಾಂಪತ್ಯ ಬದುಕಿಗೆ ಪ್ರವೇಶಿಸಿದವರು ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿರುವ ಯುವ ಪ್ರತಿಭೆ ಗೋರವಿ ಆಲ್ದೂರು ಕವಿಯೂ ಹೌದು. ವಧು ಸ್ವಾತಿ ಕೆ ಎಚ್ ಕೂಡ ಸಾಹಿತ್ಯ ಕ್ಷೇತ್ರಾಸಕ್ತೆ.

ರಾಮನಗರದ ‘ಜನಪದ ಲೋಕ’ದ ಬಯಲು ರಂಗಮಂದಿರದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪನವರು ಮಂತ್ರಮಾಂಗಲ್ಯ ಬೋಧನೆ ಮಾಡಿದರು. ಮತ್ತೋರ್ವ ಜನಪ್ರಿಯ ಸಾಹಿತಿ ಎಲ್ ಎನ್ ಮುಕುಂದರಾಜ್ ಬಂದವರನ್ನು ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿ ನವಜೋಡಿಗೆ ಶುಭಕೋರಿದರು.

ಗೋರವಿಯವರು ಕಡಂಬನ್, ಮಂಜ ಪೈ ಮೊದಲಾದ ತಮಿಳು ಚಿತ್ರಗಳು ಮಾತ್ರವಲ್ಲದೆ, ಪ್ರಿಯಾಮಣಿಯವರು ನಾಯಕಿಯಾಗಿರುವ ‘ಡಾ.56’ ಎನ್ನುವ ಚಿತ್ರಕ್ಕೂ ಅಸೋಸಿಯೇಟಾಗಿ ಕೆಲಸ ಮಾಡಿದ್ದಾರೆ. ಸಾಹಿತ್ಯಾಸಕ್ತಿ, ಸಿನಿಮಾ, ಚಾರಣ ಮೊದಲಾದ ಸಮಾನ ಹವ್ಯಾಸಗಳು ತಮ್ಮಲ್ಲಿ ಪ್ರೀತಿ ಮೂಡುವಂತೆ ಮಾಡಿದ್ದಾಗಿ ಗೋರವಿಯವರು ಹೇಳಿದ್ದಾರೆ. ಖಾಸಗಿ ಸಂಸ್ಥೆಯಲ್ಲಿ ವೃತ್ತಿಯಲ್ಲಿರುವ ಸ್ವಾತಿ ಕೆ.ಎಚ್ ಬರಹಗಾರ್ತಿಯೂ ಹೌದು.

ಸಮಾರಂಭದಲ್ಲಿ ಆದಿ ಚುಂಚನಗಿರಿ ಶಾಖಾ ಮಠದ ಸ್ವಾಮಿಗಳು, ಹಿರಿಯ ಸಾಹಿತಿಗಳಾದ ಯತಿರಾಜ ವೀರಾಂಬುಧಿ, ಪತ್ರಕರ್ತರು ಸ್ವತಃ ಮಂತ್ರಮಾಂಗಲ್ಯದ ಮೂಲಕ‌ ವಿವಾಹಿತರಾಗಿರುವ ಪ್ರಶಾಂತ್ ಹುಲ್ಕೋಡ್ ದಂಪತಿ, ಪತ್ರಕರ್ತರಾದ ಮಹೇಶ್ ಮಲ್ನಾಡ್, ಖ್ಯಾತ ರಂಗಭೂಮಿ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರು ಮೊದಲಾದ ಗಣ್ಯರು ಸಮಾರಂಭದಲ್ಲಿ ‌ಉಪಸ್ಥಿತರಿದ್ದರು.ಹಾಸನದ ಖ್ಯಾತ ಗಾಯಕ ರೋಹನ್ನಯ್ಯರ್ ಅವರು ಕು.ವೆಂ.ಪು ವಿರಚಿತ ಗೀತೆಗಳನ್ನು ಹಾಡಿ ಮನರಂಜಿಸಿದರು.

ಮಂತ್ರಮಾಂಗಲ್ಯದ ವಿವಾಹ ಸಂಹಿತೆ

ಕುವೆಂಪು ಅವರು ಜನ ದುಂದುವೆಚ್ಚ, ಪುರೋಹಿತ ಶಾಹಿ, ಸಾಲ ಬಾಧೆ, ಕಂದಾಚಾರ ಮುಂತಾದ ಎಲ್ಲಾ ಮೌಢ್ಯಗಳನ್ನು , ಒಣಪ್ರತಿಷ್ಠೆಗಳನ್ನು ಬದಿಗಿಟ್ಟು ಸರಳವಾಗಿ ಮದುವೆ ಮಾಡಿಕೊಂಡು ಬದುಕಬೇಕೆಂದು, ಹಲವಾರು ಶಾಸ್ತ್ರ ಗ್ರಂಥಗಳನ್ನು ಅಧ್ಯಯನ ಮಾಡಿ ‘ ಮಂತ್ರ ಮಾಂಗಲ್ಯ’ ಎಂಬ ಹೊಸ ಪರಿಕಲ್ಪನೆ ಯನ್ನು ಹುಟ್ಟು ಹಾಕಿದರು. ಅವರ ಈ ಪರಿಕಲ್ಪನೆ ಯ ಹಿನ್ನಲೆಯಲ್ಲಿಯೇ ಅವರ ಮಗ ಪೂರ್ಣಚಂದ್ರ ತೇಜಸ್ವಿ‌ಹಾಗೂ ಸಹೋದರಿಯರೂ ‘ ಮಂತ್ರಮಾಂಗಲ್ಯ’ ಮದುವೆಯನ್ನು ಮಾಡಿಕೊಂಡರು. ತೇಜಸ್ವಿಯವರ ಸಹೋದರ ಕೋಕಿಲೋದಯ ಚೈತ್ರನಂತು ಆಸ್ಟ್ರೇಲಿಯಾದಲ್ಲಿ ಅಂತರ್ಧಮೀಯ ಮದುವೆಯನ್ನೇ ಮಾಡಿಕೊಂಡರು.

ಕುವೆಂಪು ಅವರ ‘ಮಂತ್ರ ಮಾಂಗಲ್ಯ ‘ಒಂದು ತತ್ವ ರೂಪಿ ಸಂಹಿತೆ. ಅದು ‘ ಮಂತ್ರಗಳ‌ ಮತ್ತು ಹಲವಾರು ಸನ್ನಡತೆಗಳ ಸಂಹಿತೆ’. “ಮಂತ್ರ” ಎಂಬ ಪದ ತನ್ನ ಧ್ವನಿ ಶಕ್ತಿಯ ವಿಶಾಲಾರ್ಥದಲ್ಲಿ ಸ್ತ್ರೊತ್ರ, ಪ್ರಾರ್ಥನೆ, ಹಾರೈಕೆ ಮೊದಲಾದ ಮಾನವೀತ ಆಶಯಗಳನ್ನೆಲ್ಲ ಒಳಗೊಂಡಿದೆ. ಪ್ರಾಚೀನ ಕಾಲದ ಋಷಿಗಳೂ, ದಾರ್ಶನಿಕರೂ, ಸಂತರೂ ರಚಿಸಿದ ಮಂತ್ರಗಳು ಸ್ತ್ರೋತ್ರಗಳು, ಪ್ರಾರ್ಥನೆಗಳ, ಉಪನಿಷತ್ತು ಗಳು, ಮುಖ್ಯವಾದವು ಆಲೋಚನ ಪ್ರಧಾನವಾದವು. ಅವುಗಳಲ್ಲಿ ತತ್ವಾನ್ವೇಷಣೆ ಅಡಗಿದೆ. “ಮಂತ್ರ ಮಾಂಗಲ್ಯ” ಎನ್ನುವುದು ವಿವಾಹ ವಿಧಾನ. ಇದೊಂದು ಸರಳ ವಿವಾಹ ವಿಧಿ. ಸಹಸ್ರಾರು ವರ್ಷಗಳ ಕಾಲ‌ಯಾವ ಮೌಲ್ಯಗಳನ್ನು ಭಾರತೀಯ ರು ದೊಡ್ಡದು ಎಂದು ಭಾವಿಸಿ ಆರಾಧಿಸಿ ಬಂದಿದ್ದಾರೋ ಆ ಎಲ್ಲಕ್ಕೂ ಸಂಕೇತಗಳಾಗಿರುವ ಶಕ್ತಿಯನ್ನು ವಧೂವರರು ತಮ್ಮ ಮುಂದಿನ ಅಮೃತ ಮುಹೂರ್ತದಲ್ಲಿ ಈ ಮಂತ್ರಗಳ ಮೂಲಕ ವಿವಾಹ ಸಂಹಿತೆಯ ಪ್ರತಿಜ್ಞಾ ವಿಧಿಗಳನ್ನು ತಮ್ಮ ಚೇತನಕ್ಕೆ ಆಹ್ವಾನಿಸಿಕೊಳ್ಳುತ್ತಾರೆ.

ಗಂಡು ಹೆಣ್ಣು ವಿದ್ಯಾವಂತರಾದರೆ ಇಬ್ಬರೂ ಒಟ್ಟೊಟ್ಟಾಗಿ ಇದನ್ನು ಓದಬಹುದು. ಓದಲು ಬಾರದಿದ್ದರೆ ಓದುವವರ ಕಡೆಯಿಂದ ಓದಿಸಿ ನಂತರ ಗಂಡು ಹೆಣ್ಣಿನ ಬಾಯಿಂದ ಅದನ್ನು ಹೇಳಿಸಬಹುದು. ವೇದಿಕೆಯಲ್ಲಿ ಹೆಣ್ಣು ಗಂಡು ಮತ್ತು ಅವತ ತಾಯಿ ತಂದೆಯರು, ಹಿರಿಯರು ಉಪಸ್ಥಿತಿ ರಬಹುದು. ವೇದಿಕೆಯ ಮುಂದೆ ಮದುವೆಗೆ ಆಶೀರ್ವದಿಸಲು ಬಂದವರು ಕುಳಿತಿರಬಹುದು. ಸಭೆಗೆ ನಿರೂಪಕರೊಬ್ಬರು ಪರಿಚಯಿಸಿ, ‘ ಮಂತ್ರ ಮಾಂಗಲ್ಯೆ’ ಮದುವೆಯ ಪರಿಕಲ್ಪನೆಯ ಬಗ್ಗೆ ನಾಲ್ಕೈದು ನಿಮಿಷದಲ್ಲಿ ಸರಳವಾಗಿ ವಿವರಿಸಬಹುದು. ನಂತರ ಗಂಡು ಹೆಣ್ಣು ಪರಸ್ಪರ ಹೂವಿನ ಹಾರಗಳನ್ನು ಬದಲಾಯಿಸಿಕೊಂಡು ಮಾಂಗಲ್ಯಧಾರಣೆಯ ಪವಿತ್ರ ಕಾರ್ಯವನ್ನು ನೆರವೇರಿಸುವರು. ತಂದೆ ತಾಯಿಯರು ಅವರಿಗೆ ಆಶೀರ್ವದಿಸುವರು. ಹಾಗೆಯೇ ಹಿರಿಯರು , ಮದುವೆಗೆ ಬಂದಂತಹ ಬಾಂಧವರು, ನೆಂಟರಿಷ್ಟರು , ಗೆಳೆಯರೆಲ್ಲ ಬಂದು ಹೆಣ್ಣು ಗಂಡಿಗೆ ಆಶೀರ್ವಾದ ಶುಭಾಶಯ ಕೋರುವರು. ಮಡಿ, ಮೈಲಿಗೆ, ಮುಯ್ಯಿ, ಇರದೆ ಮದುವೆಗೆ ಬಂದವರಿಗೆಲ್ಲಾ ಸರಳವಾಗಿ ಊಟದ ವ್ಯವಸ್ಥೆ ಮಾಡಬಹುದು.

ಒಲುಮೆ ಒಂದು ದಿವ್ಯ ರಕ್ಷೆ ಇಹ ಸಮಸ್ಯೆಗೆ
ಮದುವೆ ಅದಕೆ ಮಧುರದೀಕ್ಷೆ ಗೃಹತಪಸ್ಯೆಗೆ

ಶ್ರೀಯುತ ……..ಎಂಬ ವರನಾದ ನಾನು

ಶ್ರೀಮತಿ ……..ಎಂಬ ವಧುವಾದ ನಾನು

  • ಇಲ್ಲಿ ಈ ದಿನ ನಿಮ್ಮೆಲ್ಲರ ಸಮ್ಮುಖದಲ್ಲಿ ಮದುವೆಯಾಗುವುದತ ಮೂಲಕ ನಾವಿಬ್ಬರೂ ಮಾನಸಿಕ, ಅಧ್ಯಾತ್ಮಿಕ, ದಾಸ್ಯಗಳ ಸಂಕೋಲೆಗಳಿಂದ ಮುಕ್ತರಾಗುತ್ತಿದ್ದೇವೆ.
  • ನಾವು ಈ ಭೂಮಿಯಲ್ಲಿ ಯಾವುದೇ ಜಾತಿ ಜನಾಂಗಗಳಿಗಿಂತ ಕೀಳಾದವರೂ ಅಲ್ಲ. ನಾವಿಬ್ಬರೂ ಮನುಷ್ಯ ಸಮಾಜದ ಎಲ್ಲ ಕೃತಕ ಜಾತಿಗಳಿಂದ ಮುಕ್ತರಾಗಿದ್ದೇವೆ.
  • ನಾವು ಇಂದು ಎಲ್ಲ ಸಂಕುಚಿತ ಮತಧರ್ಮಗಳಿಂದ ದೂರವಾಗಿದ್ದೇವೆ. ಎಲ್ಲಾ ಆಚಾರ ಸಂಪ್ರದಾಯಗಳಿಂದ ಮುಕ್ತರಾಗಿದ್ದೇವೆ. ಅಸತ್ಯ ಮತ್ತು ಮೂಢನಂಬಿಕೆಗಳಿಂದ ದೂರವಾಗಿದ್ದೇವೆ.
  • ಮನುಷ್ಯ ಜೀವಿತ ಕಾಲವೇ ಒಂದು ಸುಮುಹೂರ್ತ. ಕಾಲವು ನಿರ್ಗುಣವಾದದ್ದು. ರಾಹುಕಾಲ, ಗುಳಿಕಕಾಲವನ್ನು ನೋಡುವ ಅಗತ್ಯವಿಲ್ಲ.
    ಜೀವಿತ ಕಾಲದ ಪ್ರತಿ ಕ್ಷಣವೂ ಅತ್ಯಮೂಲ್ಯ. ನಮ್ಮ‌ಕರ್ತವ್ಯ ಮತ್ತು ನಡಾವಳಿಕೆಯಿಂದ ಸತ್ಯವನ್ನು ಅರಿತು ಒಳ್ಳೆಯ ಕಾಲವನ್ನಾಗಿ ಮಾಡಿಕೊಳ್ಳುತ್ತೇವೆ.
  • ಮನುಷ್ಯ ಸಮಾಜದಿಂದ ಮಾನವೀಯ ಮೌಲ್ಯಗಳೇ ಮೊದಲನೆಯ ಹಾಗೂ ಕೊನೆಯ ದೇವರು. ಗಂಡನಾಗಲೀ, ಹೆಂಡತಿಯಾಗಲಿ ಯಾರಿಗೂ ಯಾರೂ ಅಧೀನರಲ್ಲ. ಇಬ್ಬರೂ ಸರ್ವ ಸ್ವತಂತ್ರರು. ಸಮಾನತೆಯುಳ್ಳವರು ಹಾಗೂ ಪರಸ್ಪರ ಪ್ರೀತಿ ನಂಬಿಕೆ ವಿಶ್ವಾಸವುಳ್ಳವರು.
  • ಗಂಡ ಹೆಂಡತಿಯರನ್ನು ಒಟ್ಟಿಗೆ ಬದುಕುವಂತೆ ಮಾಡುವ ಸಾಧನ ಒಂದೇ ಪ್ರೀತಿ. ನಿರ್ಭೀತಿಯಿಂದ ವಾಸ್ತವವನ್ನು ಒಪ್ಪಿಕೊಳ್ಳುವುದು ಸತ್ಯಾನ್ವೇಷಣೆಯ ಮೊದಲ ಹಂತ. ಯೋಗದ ಮೊದಲ ಪಾಠ. ಪರವಂಚನೆ ಮತ್ತು ಆತ್ಮವಂಚನೆ ಮಾಡಿಕೊಳ್ಳುವವರಿಗೆ ಅಜ್ಞಾನದಿಂದ, ತಮಸ್ಸಿನಿಂದ ಮುಕ್ತಿ ಇರುವುದಿಲ್ಲ. ದೇವರ ಹೆಸರಿನಲ್ಲಿ ಸುಳ್ಳು ಹೇಳುವವರನ್ನು ವಂಚನೆ ಮಾಡುವವರನ್ನು ನಾವು ನಂಬುವುದಿಲ್ಲ.

*ವರದಕ್ಷಿಣೆ ಅಥವಾ ವದುದಕ್ಷಿಣೆ ವ್ಯವಹಾರಗಳಿಗೆ ಒಳಗಾಗದೆ ನಾವು ನಮ್ಮ ಮದುವೆ ಮಾಡಿಕೊಳ್ಳುತ್ತಿದ್ದೇವೆ. ಈಗ ನಾವು ಹೇಳಿದ ಈ ಮಾತುಗಳೆಲ್ಲ ನಮಗೆ ಜೀವನದ ದಾರಿದೀಪವಾಗಲಿ. ಅಸಮಾನತೆ, ಮೌಢ್ಯ, ಅಜ್ಞಾನ ಅಂಧಕಾರಗಳ ವಿರುದ್ಧ ನೀವೂ ನಮ್ಮೊಂದಿಗೆ ಭಾಗಿಗಳಾಗಬೇಕೆಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ನಾವು ಈ ದಿನದಂದು ದಂಪತಿಗಳೆಂದು ಘೋಷಿಸುತ್ತೇವೆ.

ವರನ ಸಹಿ

ವಧುವಿನ‌ ಸಹಿ

ವರನ ತಂದೆ ತಾಯಿ

ವಧುವಿನ ತಂದೆ ತಾಯಿ

ಬಂಧು ಬಳಗ ಸ್ನೇಹಿತರು

(ವಿವಾಹ ಸಂಹಿತೆಯ ಆಕರ: ಕು.ವೆಂ.ಪು ಫೇಸ್ಬುಕ್ ಪುಟ)

Recommended For You

Leave a Reply

error: Content is protected !!