ವಿ ಮನೋಹರ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿ 4 ದಶಕಗಳಾಗಿವೆ. ಎಸ್ಪಿ ಬಾಲಸುಬ್ರಹ್ಮಣ್ಯಂಗೆ ಮೊದಲ ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ ಗಳಿಸಿಕೊಟ್ಟ ಹಾಡಿಗೆ ಸಂಗೀತ ನಿರ್ದೇಶಕ ಇವರೇ. ಓ ಮಲ್ಲಿಗೆ ಚಿತ್ರದಲ್ಲಿನ ಮುದ್ದಾದ ಬಲೆ ಹೆಣೆದ ಹಾಡಿನ ಮೂಲಕ ಮನೋಹರ್ ಈ ಸಾಧನೆ ಮಾಡಿದ್ದರು. ಶಿವರಾಜ್ ಕುಮಾರ್ ನಟನೆಯ ಜನುಮದ ಜೋಡಿ ಚಿತ್ರದಲ್ಲಿನ ‘ಕೋಲು ಮಂಡೆ ಜಂಗಮ ದೇವ..’ ಹಾಡು ಇಂದಿಗೂ ಜನಪ್ರಿಯ ಗೀತೆಗಳ ಪಟ್ಟಿಯಲ್ಲೇ ಇದೆ. ಇಂಥ ದಾಖಲೆಗಳ ಸರದಾರನ 150ನೇ ಚಿತ್ರದ ಹಾಡು ವರ್ಷಾಂತ್ಯದಲ್ಲಿ ಬಿಡುಗಡೆಯಾಗಿದೆ.
‘ಜಾಲಿಡೇಸ್’ ಚಿತ್ರದ ಖ್ಯಾತಿಯ ನಿರಂಜನ್ ಶೆಟ್ಟಿ ನಾಯಕನಾಗಿರುವ ‘31 DAYS’ ಚಿತ್ರದ ಗೀತೆ ಇದು. ಈ ಹಾಡನ್ನು ಬರೆದು, ಹಾಡಿ, ಸಂಗೀತ ಸಂಯೋಜಿಸಿ, ನಿರಂಜನ್ ಶೆಟ್ಟಿ ಜತೆ ಖುದ್ದು ಮನೋಹರ್ ಕಾಣಿಸಿರುವುದು ವಿಶೇಷ. ಈ ಒಪೇರ ಶೈಲಿಯ ಗೀತೆ 2024ರ ಡಿಸೆಂಬರ್ 31 ರಂದು ಬಿಡುಗಡೆಯಾಯಿತು.
ಒಪೇರ ಶೈಲಿಯ ಹಾಡು ಕನ್ನಡ ಮಟ್ಟಿಗೆ ಇದೇ ಪ್ರಥಮ. ಈ ಬಗ್ಗೆ ಚಿತ್ರದ ಸುದ್ದಿಗೋಷ್ಠಿಯಲ್ಲಿ ವಿ ಮನೋಹರ್ ವಿವರಿಸಿದ್ದು ಹೀಗೆ. ಕಥನಾ ಗೀತೆ ಎನ್ನಬಹುದಾದ ಒಪೆರಾ ಶೈಲಿಯ ಹಾಡು ಕನ್ನಡದಲ್ಲಿ ಇದೇ ಮೊದಲು ಎನ್ನುವುದು ನನ್ನ ಅಭಿಪ್ರಾಯ. ನಿರಂಜನ್ ಅವರ ಒತ್ತಾಯಕ್ಕೆ ಮಣಿದು ಈ ಹಾಡಿನಲ್ಲಿ ಅಭಿನಯ ಕೂಡ ಮಾಡಿದ್ದೇನೆ. ಒಟ್ಟಾರೆ ಈ ಚಿತ್ರದಲ್ಲಿ ಹತ್ತು ಹಾಡುಗಳಿದೆ. ಎಂ.ಡಿ.ಪಲ್ಲವಿ, ರವೀಂದ್ರ ಸೊರಗಾವಿ ಸೇರಿದಂತೆ ನಾಡಿನ ಅನೇಕ ಜನಪ್ರಿಯ ಗಾಯಕರು ಹಾಡುಗಳನ್ನು ಹಾಡಿದ್ದಾರೆ ಎಂದಿದ್ದಾರೆ.
ಚಿತ್ರದ ನಾಯಕ ನಿರಂಜನ್ ಮಾತನಾಡುತ್ತಾ,‘ಜಾಲಿಡೇಸ್’ನಿಂದ ಶುರುವಾದ ನನ್ನ ಸಿನಿಜರ್ನಿಗೆ ಈಗ ಹದಿನೈದು ವರ್ಷಗಳಾಗಿವೆ. ಪ್ರಸ್ತುತ N STAR ಎಂಬ ಸಂಸ್ಥೆ ಮೂಲಕ ನಾವೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇವೆ. ನನ್ನ ಪತ್ನಿ ನಾಗವೇಣಿ ಇದರ ನಿರ್ಮಾಪಕರು. ಇದು 31 ದಿನಗಳಲ್ಲಿ ನಡೆಯುವ ಈಗಿನ ಕಾಲಘಟ್ಟದ ಪ್ರೇಮಕಥೆ. ಹಾಗಾಗಿ 31 DAYS ಎಂದು ಹೆಸರಿಟ್ಟಿದ್ದೇವೆ. ಮಧ್ಯಂತರಕ್ಕೂ ಮುನ್ನ ಹದಿನೈದು ದಿನಗಳು ಹಾಗೂ ನಂತರ ಹದಿನೈದು ದಿನಗಳ ಕಥೆ ಸಾಗುತ್ತದೆ. ಕೊನೆಯ ದಿನವನ್ನು ಕ್ಲೈಮ್ಯಾಕ್ಸ್ ಗೆ ಮೀಸಲಿಡಲಾಗಿದೆ. ಯಾರು ಊಹಿಸದ ಕ್ಲೈಮ್ಯಾಕ್ಸ್ ಚಿತ್ರದಲ್ಲಿದೆ. ಇನ್ನೂ ಇಂದು ಬಿಡುಗಡೆಯಾಗಿರುವ ಹಾಡಿನ ಬಗ್ಗೆ ಹೇಳುವುದಾದರೆ, ಎರಡೂವರೆ ನಿಮಿಷಗಳ ಈ ಹಾಡನ್ನು ಚಿತ್ರದಲ್ಲಿ ಒಂದು ನಿಮಿಷ ಬಳಸಿಕೊಳ್ಳಲಾಗಿದೆ. ಇದೊಂದು ಹೈ ವೋಲ್ಟೇಜ್ ಲವ್ ಸ್ಟೋರಿಯಾಗಿದೆ ಎಂದರು ನವ ನಿರ್ದೇಶಕ ರಾಜ ರವಿಕುಮಾರ್.

ಚಿತ್ರದ ನಾಯಕಿ ಪ್ರಜ್ವಲಿ ಸುವರ್ಣ, ಕಲಾವಿದರಾದ ಅನೇಕಲ್ ಮುನಿಯಪ್ಪ, ಗೋವಿಂದಸ್ವಾಮಿ, ಸುರೇಶ್ ಚಿಕ್ಕಣ್ಣ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ವಿನುತ್. K ಛಾಯಾಗ್ರಹಣ,ತ್ರಿಭುವನ್, ಧನು ಕುಮಾರ್ ರವರ ನೃತ್ಯ ನಿರ್ದೇಶನ ಹಾಗೂ ರವಿತೇಜ್ ಸಿ. ಎಚ್. ನಿತೀಶ್ ಪೂಜಾರಿ, ಸನತ್ ರವರ ಸಂಕಲನ ಲಕ್ಕಿ ನಾಗೇಶ್ ರವರ ನಿರ್ವಹಣೆ ಸುಧೀಂದ್ರ ವೆಂಕಟೇಶ್ ರವರ ಪ್ರಚಾರ ಸೋಹಿಲ್ ವಿನ್ಯಾಸ ಇರುವ ಈ ಚಿತ್ರಕ್ಕೆ ಹೈ ವೋಲ್ಟೇಜ್ ಲವ್ ಸ್ಟೋರಿ ಎಂಬ ಅಡಿಬರಹವಿದೆ.

