ಅನಿರುದ್ಧನ ಖುಷಿ ವರ್ಧನ..!

ಅನಿರುದ್ಧ್  ಅವರ ಬಾಳಲ್ಲಿ ಖುಷಿ ಹೆಚ್ಚಿದೆ. ಅದಕ್ಕೆ ಅವರು ನಾಯಕರಾಗಿರುವ ಧಾರಾವಾಹಿ ‘ಜೊತೆ ಜೊತೆಯಲಿ’ ಪಡೆದಿರುವ   ಯಶಸ್ಸು ಮಾತ್ರವಲ್ಲ, ಇಂದು ಅವರ ಜನ್ಮದಿನ ಎನ್ನುವುದು ಕೂಡ ಕಾರಣ.

ಚಿಟ್ಟೆ ಚಿತ್ರದ ಮೂಲಕ ಕನ್ನಡಿಗರ ಹೃದಯದ ಕೋಟೆ ಬಾಗಿಲು ತಟ್ಟಿದ ಯುವಕ ಅನಿರುದ್ಧ್. ಇಂದು ಕೋಟಿ ಹೃದಯಗಳ ಪ್ರೇಮದೊಡೆಯ. ಆದರೆ ಅವರ ಕಂಗಳಲ್ಲಿ ಇಂದಿಗೂ ಅದೇ ವಿನಯ. ಸಾಧಕರು ಎಲ್ಲ ಕ್ಷೇತ್ರಗಳಲ್ಲಿ ಯೂ ಇರುತ್ತಾರೆ. ಆದರೆ ಎಲ್ಲ ಸಂದರ್ಭದಲ್ಲಿಯೂ ಒಂದು ಸ್ಥಿಮಿತ ಕಾಯ್ದುಕೊಳ್ಳುವ ಗುಣ ಇದೆಯಲ್ಲ? ಅದು ತೀರ ಅಪರೂಪ. ಅನಿರುದ್ಧ್ ಅವರು ಅದಕ್ಕೊಂದು ಸಾಕ್ಷಾತ್ ರೂಪ.

ಇಂದು ಡಾ. ವಿಷ್ಣುವರ್ಧನ್ ಅವರ ಮನೆ ಮುಂದಿನ ಪಾರ್ಕ್ ನಲ್ಲಿ 46 ಗಿಡಗಳನ್ನು ನೆಡಲಾಯಿತು. ಅದು ಅನಿರುದ್ಧ್ ಅವರು 46ನೇ ವರ್ಷಕ್ಕೆ ಕಾಲಿಟ್ಟಿರುವುದರ ಸೂಚನೆ. ಬಹುಶಃ ಯುವತಾರೆಯೊಬ್ಬರು ಇಷ್ಟು ಸುಂದರವಾಗಿ ಜನ್ಮದಿನ ಆಚರಿಸುವುದು  ಕೂಡ ಅಪರೂಪವೇ.

ಅನಿರುದ್ಧ್ ಅವರ ಬೆಳವಣಿಗೆ ಕಾಣಲು ಡಾ. ವಿಷ್ಣುವರ್ಧನ್ ಅವರಲ್ಲಿ ಸಹಜವಾದ ಆಕಾಂಕ್ಷೆ ಇತ್ತು. ಅದಕ್ಕಾಗಿ ಅವರ ಪ್ರಯತ್ನವೂ ಇತ್ತು. ಅನಿರುದ್ಧ್ ಅವರ ಮೇಲೆ ಆರಂಭದಲ್ಲೇ ಕನ್ನಡಿಗರಿಗೆ ವಿಶೇಷ ನಿರೀಕ್ಷೆ ಮೂಡಲು ವಿಷ್ಣುವರ್ಧನ್ ಅವರು ಕೂಡ ಕಾರಣ! ಇಂದು ಆ ಎಲ್ಲ ಪರೀಕ್ಷೆಗಳನ್ನು ದಾಟಿ ಅವರು ತಮ್ಮದೇ ಸ್ಥಾನ ಪಡೆದುಕೊಂಡಿದ್ದಾರೆ. ಅವರದೇ ಆದ ಅಭಿಮಾನಿಗಳನ್ನು ‌ಸಂಪಾದಿಸಿದ್ದಾರೆ. ಆದರೆ ಈ ಬಗ್ಗೆ ಅವರಲ್ಲಿ ವಿಚಾರಿಸಿದರೆ ಅದೇ ಮುಗ್ದ ನಗು ನಗುತ್ತಾರೆ.‌ “ನಾನು ಯಾವತ್ತಿದ್ದರೂ ಅಪ್ಪಾವ್ರ (ವಿಷ್ಣುವರ್ಧನ್ ಅವರ) ಅಭಿಮಾನಿ. ಅವರ ಅಭಿಮಾನಿಗಳ ಅಭಿಮಾನದಿಂದಲೇ ಬೆಳೆದವನು. ಹಾಗಾಗಿ ಇಂದು ನನಗೇನಾದರೂ ಅಭಿಮಾನಿಗಳಿದ್ದರೆ ಅದಕ್ಕೂ ಅಪ್ಪಾವರೇ ಕಾರಣ” ಎನ್ನುವ ಅವರ ಮಾತುಗಳಲ್ಲಿ ಅವರದು ಎಷ್ಟೊಂದು ಪಾರದರ್ಶಕ ವ್ಯಕ್ತಿತ್ವ ಎನ್ನುವುದರ ಅರಿವಾಗುತ್ತದೆ.

ಅನಿರುದ್ಧರನ್ನು ನೇರವಾಗಿ ಬಲ್ಲವರು ಅವರು ಕೋಪಗೊಂಡಿದ್ದನ್ನು ನೋಡಿರಲಿಕ್ಕಿಲ್ಲ. ಅದೇನಿದ್ದರೂ ಪರದೆಯ ಮೇಲೆಯೇ ಅಧಿಕ! ಯಾಕೆಂದರೆ ಸಾರ್ವಜನಿಕವಾಗಿ ಅವರೆಂದರೆ ಅಷ್ಟು ಆಕರ್ಷಕ. ಅವರ ಕಣ್ಣಲ್ಲಿ ಒಂದು ನಿಷ್ಕಲ್ಮಷತೆ ಮಾತ್ರ ಸದಾ ಎದ್ದು ಕಾಣುತ್ತಿರುತ್ತದೆ. ಈಗ ಅದರಲ್ಲಿನ ಪ್ರೇಮ, ಗಾಂಭೀರ್ಯತೆ, ಚಾಕಚಕ್ಯತೆ ಎಲ್ಲವೂ ಕೂಡ ಪ್ರತಿ ಮನೆಗಳಿಗೂ ಗೊತ್ತು. ಇಂದು ಅವರು ಅಕ್ಷರಾರ್ಥದಲ್ಲಿ ಕರ್ನಾಟಕದ ಸ್ವತ್ತು.

ಈ ಎಲ್ಲ ಭಾವಗಳನ್ನು ಎರಡು ದಶಕಗಳ ಮೊದಲೇ ಅರ್ಥ ಮಾಡಿಕೊಂಡವರೊಬ್ಬರು ಇದ್ದರು. ಅವರೇ ಕೀರ್ತಿ ವಿಷ್ಣುವರ್ಧನ್. ‌ನಾಳೆ ಅಂದರೆ ಫೆಬ್ರವರಿ 17ರಂದು ಇವರಿಬ್ಬರ ವಿವಾಹದ ವಾರ್ಷಿಕೋತ್ಸವ ಕೂಡ ಹೌದು. 18 ವರ್ಷಗಳು  ಜೊತೆಜೊತೆಯಲಿ ಸಾಗಿದಂಥ ಖುಷಿ. ಈ ಎರಡು ಸಂಭ್ರಮಗಳಿಗೂ  ಸಿನಿಕನ್ನಡದ ಪರವಾಗಿ ಹಾರ್ದಿಕ ಶುಭಾಶಯಗಳು.

Recommended For You

Leave a Reply

error: Content is protected !!
%d bloggers like this: