“ಅನೂಹ್ಯ ಮತ್ತು ಆನಂದ್ ಎನ್ನುವ ಕಾಲೇಜು ವಿದ್ಯಾರ್ಥಿಗಳಿಬ್ಬರ ನಡುವಿನ ಸಂಗೀತದ ಮೇಲಿನ ಆಸಕ್ತಿ ಪರಸ್ಪರ ಪ್ರೇಮಿಗಳಾಗುವಂತೆ ಮಾಡುತ್ತದೆ. ಆದರೆ ಇಂಟರ್ ಕಾಲೇಜ್ ಮ್ಯೂಸಿಕ್ ಸ್ಪರ್ಧೆಗೆ ತೀರ್ಪುಗಾರರಾಗಿ ಚಕ್ರಧರ್ ಕಾಲಿಡುವುದರೊಂದಿಗೆ ಅನೂಹ್ಯಳಲ್ಲಿ ಅನೂಹ್ಯವಾದ ಬದಲಾವಣೆಗಳು ನಡೆಯುತ್ತವೆ. ಆ ಬದಲಾವಣೆ ಆನಂದ್ ಮೇಲೆ ಬೀರುವ ಪರಿಣಾಮ ಏನು? ಆತ ಏನು ಮಾಡುತ್ತಾನೆ? ಅನೂಹ್ಯ ಮತ್ತು ಚಕ್ರಧರ್ ಅವರ ಪ್ರತಿಕ್ರಿಯೆಗಳೇನು ಎನ್ನುವುದನ್ನು ಹೇಳುವ ಚಿತ್ರವಾಗಿ ಮೂಡಿ ‘ರಾಗ ಶೃಂಗ’ ಮೂಡಿ ಬಂದಿದೆ” ಎಂದು ಚಿತ್ರದ ನಿರ್ಮಾಪಕ ಬಿ.ಆರ್ ನಟರಾಜ್ ತಿಳಿಸಿದರು. ಅವರು ಚಿತ್ರದಲ್ಲಿ ಒಂದು ಪ್ರಧಾನ ಪಾತ್ರವನ್ನು ಕೂಡ ನಿರ್ವಹಿಸಿದ್ದು, ಸಿನಿಮಾ ತೆರೆಗೆ ಸಿದ್ಧವಾಗಿದೆ.
ವೃತ್ತಿಯಲ್ಲಿ ನ್ಯಾಯವಾದಿಗಳಾದ ತಮಗೆ ಸಿನಿಮಾ ನಿರ್ಮಾಣ ಎರಡೆರಡು ದೋಣಿಯಲ್ಲಿ ಕಾಲಿಟ್ಟ ಹಾಗಾಯಿತು. ಹಾಗಾಗಿ ಚಿತ್ರ ಪೂರ್ತಿ ಮಾಡಲು ಸಾಕಷ್ಟು ಸಮಯ ತೆಗೆದುಕೊಂಡೆ. ಈಗ ಚಿತ್ರ ಪೂರ್ತಿಯಾಗಿ ಬಳ್ಳಾರಿಯಲ್ಲಿ ಯಶಸ್ವಿ ಪ್ರದರ್ಶನ ಕೂಡ ಕಂಡಿದೆ. ಮುಂದಿನ ವಾರದಿಂದ ಬೆಂಗಳೂರಿನ ಸಪ್ನ ಚಿತ್ರ ಮಂದಿರದಲ್ಲಿ ಪ್ರದರ್ಶನ ನೆರವೇರಲಿದೆ. ಪ್ರೇಕ್ಷಕರಿಗೆ ಖಂಡಿತವಾಗಿ ಇಷ್ಟವಾಗುವುದೆಂಬ ಭರವಸೆ ಇದೆ ಎಂದು ನಿರ್ಮಾಪಕರು ಹೇಳಿದರು. ಈ ಹಿಂದೆ ಅವರು ಮೂರು ಚಿತ್ರಗಳನ್ನು ನಿರ್ಮಿಸಿದ್ದು, ಮೊದಲ ಚಿತ್ರ ಸೂರ್ಯ ರಾಜ್ಯ ಪ್ರಶಸ್ತಿಗೆ ಭಾಜನವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಚಿತ್ರಕತೆ ಬರೆದು ನಿರ್ದೇಶಿಸಿರುವ ತುಳಸೀ ಗಣೇಶ್, ನಿಶ್ಚಲ ಛಾಯಾಗ್ರಾಹಕರಾಗಿ ಬಂದ ತಾವು ಸಿನಿಮಾ ಛಾಯಾಗ್ರಾಹಕರಾಗಿ ಬಳಿಕ ನಿರ್ದೇಶಕರಾಗಿ ಬದಲಾಗಿದ್ದನ್ನು ಸ್ಮರಿಸಿಕೊಂಡರು.
ಚಿತ್ರದ ತಾರಾಗಣದಲ್ಲಿ ರಾಮಕೃಷ್ಣ ಸೇರಿದಂತೆ ರಾಘವೇಂದ್ರ ಪ್ರಸಾದ್, ಸುಕುಮಾರ್, ತಿರುಮಲೇಶ್, ಪುಷ್ಪಲತಾ ಮೊದಲಾದವರು ನಟಿಸಿದ್ದಾರೆ. ವಾಸುದೇವ ಬ್ರಹ್ಮಅವರ ಸಂಗೀತದಲ್ಲಿ ಚಿತ್ರದಲ್ಲಿ ಒಂಬತ್ತು ಹಾಡುಗಳು ಇವೆ. ಸಂಗೀತ ನಿರ್ದೇಶಕರ ಜತೆಗೆ ನೃತ್ಯ ನಿರ್ದೇಶಕ ಜೈ ಹರಿ ಪ್ರಸಾದ್ ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.