ತಂದೆ ಮಗಳ ನಡುವಿನ ಸಂಬಂಧದ ನೋವು ನಲಿವುಗಳನ್ನು ಹೇಳುವ ಧಾರಾವಾಹಿ ‘ಮನಸಾರೆ’.
‘ಅವಳು’ ಧಾರಾವಾಹಿಯನ್ನು ನಿರ್ಮಿಸಿ ಜನಪ್ರಿಯರಾದ ಗುರುರಾಜ್ ಕುಲಕರ್ಣಿಯವರ ನಿರ್ಮಾಣದ ಹೊಸ ಧಾರಾವಾಹಿ ಇದು. ಇದರಲ್ಲಿ ಕೇಂದ್ರ ಭೂಮಿಕೆಯಾದ ತಂದೆಯ ಪಾತ್ರವನ್ನು ಜನಪ್ರಿಯ ನಟ ಸುನೀಲ್ ಪುರಾಣಿಕ್ ಅವರು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಅವರು ಎರಡೂ ಕಡೆಗಳಲ್ಲಿ ಕೂಡ ಜವಾಬ್ದಾರಿಯ ಸ್ಥಾನ ಪಡೆದುಕೊಂಡಿದ್ದಾರೆ. “ಒಂದೂವರೆ ವರ್ಷಗಳಿಂದ ಧಾರಾವಾಹಿ ಬಿಟ್ಟು ಸಿನಿಮಾಗಳತ್ತ ಗಮನ ಹರಿಸಿದ್ದೆ.
ಇದು ನಾನು ನಟಿಸುತ್ತಿರುವ ಗುರುರಾಜ್ ಅವರ ನಿರ್ಮಾಣದ ಮೂರನೇ ಧಾರಾವಾಹಿ. ಎರಡು ವರ್ಷದ ಹಿಂದೆ ಉದಯ ವಾಹಿನಿಗೆ ನಾನೇ ಧಾರಾವಾಹಿ ನಿರ್ಮಿಸಿದ್ದೆ. ಇಲ್ಲಿ ತಂದೆ ಮಗಳ ಸಂಬಂಧದ ಸೂಕ್ಷ್ಮತೆ ತುಂಬ ಚೆನ್ನಾಗಿ ಮೂಡಿಬಂದಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಪಾತ್ರ ನನ್ನದು” ಎಂದು ಪುರಾಣಿಕ್ ಸಂತೃಪ್ತಿ ವ್ಯಕ್ತಪಡಿಸಿದರು. “ಭಾರತೀಯ ಸಂಸ್ಕೃತಿಯಲ್ಲಿ ತಾಯಿಯೇ ಸರ್ವಸ್ವ ಎಂದುಕೊಂಡಿದ್ದೇವೆ. ಇಲ್ಲಿ ನಾಯಕಿಗೆ ಇಬ್ಬಿಬ್ಬರು ಅಮ್ಮಂದಿರ ಪ್ರೀತಿ ದೊರಕುತ್ತದೆ. ಸಾಮಾನ್ಯವಾಗಿ ಕಡೆಗಣಿಸಲ್ಪಡುವ ತಂದೆಯ ಪ್ರೀತಿ ಕೂಡ ಇಲ್ಲಿನ ವಿಶೇಷತೆ” ಎನ್ನುವುದು ಸುನೀಲ್ ಪುರಾಣಿಕ್ ಅವರ ಅನಿಸಿಕೆ.
“ಸಾಮಾನ್ಯವಾಗಿ ಮಲತಾಯಿ ಎಂದರೆ ಕೆಟ್ಟವಳು ಎಂದುಕೊಂಡಿರುತ್ತಾರೆ. ಆದರೆ ಇಲ್ಲಿ ಈ ಮಗು ನನಗೆ ಲೈಫ್ ಕೊಟ್ಟ ಮಗು ಎನ್ನುವ ಋಣ ಅವಳ ಮೇಲಿರುತ್ತದೆ. ಅಂಥ ಮಮತೆ ತುಂಬಿದ ಮಲತಾಯಿಯ ಪಾತ್ರ ನನ್ನದು” ಎಂದು ಹಿರಿಯ ನಟಿ ಸ್ವಾತಿ ತಿಳಿಸಿದರು. ತಂದೆಯ ಪ್ರೀತಿಗೆ ಹಂಬಲಿಸುವ ಮಗಳಾಗಿ, ಧಾರಾವಾಹಿಯ ನಾಯಕಿ ಪಾತ್ರದಲ್ಲಿ ಪ್ರಿಯಾಂಕ ಚಿಂಚೋಳಿ ನಟಿಸಿದ್ದಾರೆ. ಅವರು ಈ ಹಿಂದೆ ‘ಜೈ ಹನುಮಾನ್’ ಧಾರಾವಾಹಿಯಲ್ಲಿ ಅಭಿನಯಿಸಿದ್ದರು.
ಯಶಸ್ವಿ ಧಾರಾವಾಹಿಗಳ ಅದ್ಭುತ ಛಾಯಾಗ್ರಾಹಕರಾಗಿ ಬಳಿಕ ನಿರ್ದೇಶಕರಾಗಿ ಕೂಡ ಹೆಸರಾದವರು ರವಿ ಕಿಶೋರ್. ಮನಸಾರೆ ಧಾರಾವಾಹಿಯ ನಿರ್ದೇಶನವನ್ನು ಕೂಡ ರವಿ ಕಿಶೋರ್ ಅವರೇ ನಿರ್ವಹಿಸಲಿದ್ದಾರೆ. ನಾಯಕಿಗೆ ಜೋಡಿಯಾಗಿ ಕಾಣಿಸಲಿರುವ ಸಾಗರ್, ಜನಪ್ರಿಯ ನಟಿ ಸುನೇತ್ರಾ ಪಂಡಿತ್, ಸಂಗೀತ ನಿರ್ದೇಶಕ ಗಿರಿಧರ ದಿವಾನ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹಿರಿಯ ರಂಗನಟಿ ಜಯಲಕ್ಷ್ಮಿ, ಯಮುನಾ ಶ್ರೀನಿಧಿ, ರಮೇಶ್ ಪಂಡಿತ್ ಮೊದಲಾದವರ ತಾರಾಗಣದಲ್ಲಿರುವ ಮನಸಾರೆ ಸೋಮವಾರದಿಂದ ಶುಕ್ರವಾರದ ತನಕ ರಾತ್ರಿ 9ಗಂಟೆಗೆ ಪ್ರಸಾರಗೊಳ್ಳಲಿದೆ.