`ರ್ಯಾಂಬೋ 2’ ಚಿತ್ರ ತೆರೆಕಂಡು ಎರಡು ವರ್ಷವಾಗಿದೆ. ಆದರೆ ಸಿನಿಮಾದ ಹಾಡು ಸೃಷ್ಟಿಸಿರುವ ಹವಾ ಇನ್ನೂ ಉಳಿದುಕೊಂಡಿದೆ. ಅದಕ್ಕೆ ಸಾಕ್ಷಿಯಾಗಿರುವ ಸಾಮಾಜಿಕ ಜಾಲತಾಣವು ಹಾಡಿಗೆ ಯೂಟ್ಯೂಬ್ ನಲ್ಲಿ ನೂರು ಮಿಲಿಯನ್ (10 ಕೋಟಿ ) ವ್ಯೂವ್ಸ್ ಬಂದಿರುವುದನ್ನು ಸಾಬೀತು ಮಾಡಿದೆ. ಇಂಥದೊಂದು ದಾಖಲೆ ಕನ್ನಡದ ಹಾಡುಗಳ ಮಟ್ಟಿಗೆ ತೀರ ಹೊಸದು. ಹಾಗಾಗಿಯೇ ಈ ಖುಷಿಯನ್ನು ಹಂಚಿಕೊಳ್ಳಲು ಆನಂದ್ ಆಡಿಯೋದವರು ಸ್ಮರಣಿಕೆ ವಿತರಣೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
“ಚುಟು ಚುಟು ಹಾಡಿನ ಆಕರ್ಷಣೆ ಸಂಗೀತ ಮಾತ್ರವಲ್ಲ, ಅದರ ಪ್ರತಿಬೀಟ್ ಗೂ ತಕ್ಕಂತೆ ಅದ್ಭುತವಾಗಿ ಸ್ಟೆಪ್ ಹಾಕಿದಂಥ ಶರಣ್ ಸರ್ ಕೂಡ ಹೌದು. ನನಗಂತೂ ಅವರಂತೆ ಕುಣಿಯೋದು ಕಷ್ಟ. ಅದಕ್ಕೇನೇ ನಾನು ನಮ್ಮ ಕೊರಿಯೋಗ್ರಾಫರ್ ಗೆ ಅಣ್ಣಮ್ಮನ ಡ್ಯಾನ್ಸ್ ಸಾಕು ಅಂತ ಮೊದಲೇ ಹೇಳಿಬಿಡುತ್ತೇನೆ’’ ಎಂದು ನಕ್ಕರು ಶ್ರೀ ಮುರಳಿ. ಅವರು ಹಾಡಿನ ಯಶಸ್ಸಿನಲ್ಲಿ ಪಾಲುದಾರರಾದ ಪ್ರತಿಯೊಬ್ಬರಿಗೆ ನೆನಪಿನ ಕಾಣಿಕೆ ನೀಡಿದ ಬಳಿಕ ಮಾತನಾಡುತ್ತಿದ್ದರು.
ಅದಕ್ಕೂ ಮೊದಲು ಮಾತನಾಡಿದ್ದ ನಾಯಕ ಶರಣ್ ಅವರು “ಈ ಕಾರ್ಯಕ್ರಮಕ್ಕೆ ಶ್ರೀ ಮುರಳಿ ಸರ್ ಅವರೇ ಅತಿಥಿಯಾಗಿ ಆಗಮಿಸಬೇಕು ಎನ್ನುವುದು ನನ್ನ ಒತ್ತಾಯವಾಗಿತ್ತು. ಯಾಕೆಂದರೆ ಅವರು ನನ್ನ ಪ್ರಥಮ ಚಿತ್ರದ ಮುಹೂರ್ತಕ್ಕೆ ಅತಿಥಿಯಾಗಿ ಬಂದು ಹಾರೈಸಿದವರು” ಎಂದರು. “ನನ್ನ ಮತ್ತು ಆನಂದ್ ಆಡಿಯೋ ಸಂಬಂಧ ಫ್ರೆಂಡ್ಸ್ ಚಿತ್ರದಿಂದಲೇ ಶುರುವಾದಂಥದ್ದು. ಹಿಡಿದು ಇಲ್ಲಿಯ ತನಕ ನಾನು ನಾಯಕನಾಗಿರುವ ಹತ್ತು ಚಿತ್ರಗಳಲ್ಲಿ ಏಳು ಚಿತ್ರಗಳ ಆಡಿಯೋ ಆನಂದ್ ಅವರದ್ದಾಗಿದೆ. ಮಾತ್ರವಲ್ಲ, ವಿಕ್ಟ್ರಿ ಚಿತ್ರವನ್ನು ನಿರ್ಮಿಸಿದ್ದೂ ಅವರೇ” ಎಂದು ತಮ್ಮ ಮತ್ತು ಆಡಿಯೋ ಸಂಸ್ಥೆಯ ನಡುವಿನ ಸಂಬಂಧವನ್ನು ತೆರದಿಟ್ಟರು. ನನ್ನ ಚಿತ್ರಗಳ ನಿಜವಾದ ಬೆನ್ನೆಲುಬು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ. ಹಾಗಾಗಿ ಅವರನ್ನು ಕೂಡ ಈ ಸಂದರ್ಭದಲ್ಲಿ ಸ್ಮರಿಸುವುದಾಗಿ ಶರಣ್ ಹೇಳಿದರು. ಹಾಗೆಯೇ ಹಾಡು ನೋಡಿ ದಾಖಲೆಗೆ ಕಾರಣರಾದ ಎಲ್ಲರಿಗೂ ಕೋಟಿ ನಮನ ಎಂದರು.
ಚಿತ್ರದ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಸಹಕಾರವಾಗಿದ್ದರು ಎಂದು ಹೇಳಲಾದ ನಿರ್ದೇಶಕ ತರುಣ್ ಸುಧೀರ್, ಈ ಕಾರ್ಯಕ್ರಮದಲ್ಲಿಯೂ ಉಸ್ತುವಾರಿ ವಹಿಸಿಕೊಂಡವರಂತೆ ಓಡಾಡಿಕೊಂಡಿದ್ದರು. ಮಾತ್ರವಲ್ಲ, ಶ್ರೀ ಮುರಳಿಯೇ ಅತಿಥಿಯಾಗಿ ಬರಬೇಕೆನ್ನುವುದು ತಮ್ಮ ಆಗ್ರಹವೂ ಆಗಿದ್ದು, ಅವರು ಓರ್ವ ತಂತ್ರಜ್ಞರ ನಟ. ಹಾಗಾಗಿ ತಂತ್ರಜ್ಞರೇ ನಿರ್ಮಿಸಿದ ಈ ಚಿತ್ರಕ್ಕೆ ಅವರೇ ಸ್ಮರಣಿಕೆ ನೀಡುವುದು ಸರಿ ಎನಿಸಿತ್ತು ಎಂದರು. ಅದೇ ವೇಳೆ ಶರಣ್ ಅವರು ಖರ್ಚು ಕಡಿಮೆ ಮಾಡಲು ಬಹಳ ವೇಗದಲ್ಲಿ ಹಾಡಿನ ಚಿತ್ರೀಕರಣ ಮುಗಿಸಬೇಕಾಗಿದ್ದ ಕಾರಣ, ಮಂಡಿಚರ್ಮ ಕಿತ್ತುಹೋದರೂ ಬ್ರೇಕ್ ತೆಗೆದುಕೊಳ್ಳದೇ ಕುಣಿದಿದ್ದರು ಎನ್ನುವುದನ್ನು ತರುಣ್ ನೆನಪಿಸಿಕೊಂಡರು.
ಕಾರ್ಯಕ್ರಮಕ್ಕೆ ಮತ್ತೋರ್ವ ಅತಿಥಿಯಾಗಿ ಆಗಮಿಸಿದವರು ಹೆಬ್ಬುಲಿ, ರಾಬರ್ಟ್, ಮದಗಜ ಚಿತ್ರಗಳ ನಿರ್ಮಾಪಕರಾದ ಉಮಾಪತಿ ಮಾತನಾಡಿ, “ಚಿಕ್ಕ ಬಜೆಟ್ ಸಿನಿಮಾಗಳು ಹಿಟ್ ಆಗಲು ಯೋಗ ಮತ್ತು ಯೋಗ್ಯತೆ ಕೂಡಿರಬೇಕು. ಹಾಗಾಗಿಯೇ ಇಂಥ ಚಿತ್ರಗಳು, ಅವುಗಳ ಹಾಡುಗಳು ಯಶಸ್ಸು ಕಾಣುತ್ತಿವೆ. ಇದರಲ್ಲಿ ಶರಣ್ ಸರ್ ಪಾತ್ರವೂ ಇದೆ. ಅವರ ನೃತ್ಯವೂ ಹಾಡಿನ ಆಕರ್ಷಣೆ. ನಾನು ಅವರ ಹಾಗೆಯೇ ಕುಡಿತದ ಅಭ್ಯಾಸ ಇರದಂಥವನು. ಆಹಾರ ಸೇವಿಸುವ ವಿಚಾರದಲ್ಲಿ ಅವರೂ ನನ್ನ ಹಾಗೆಯೇ. ಆದರೂ ಅವರು ನನ್ನಂತೆ ದಪ್ಪಗಾಗಿರದೆ ತೆಳ್ಳಗಿರುವ ಗುಟ್ಟು ಅರ್ಥವಾಗುತ್ತಿಲ್ಲ” ಎಂದು ನಕ್ಕರು.
ಚಿತ್ರದ ನಿರ್ದೇಶಕ ಅನಿಲ್ ಕುಮಾರ್, ನಾಯಕ ಶರಣ್, ನಾಯಕಿ ಆಶಿಕಾ ರಂಗನಾಥ್, ಚುಟು ಚುಟು ಗೀತೆಯ ರಚನೆಕಾರ ಶಿವು ಭೇರ್ಗಿ, ಗಾಯಕ ರವೀಂದ್ರ ಸೊರಗಾಂವಿ, ಹಾಡಿನ ಸೆಟ್ ಹಾಕಿದ ಕಲಾ ನಿರ್ದೇಶಕ ಮತ್ತು ನಿರ್ಮಾಪಕರಲ್ಲೋರ್ವರಾದ ಮೋಹನ್ ಬಿ ಕೆರೆ, ಕಾಸ್ಟ್ಯೂಮ್ ಡಿಸೈನರ್ ಶಚಿನಾ ಹೆಗ್ಗಾರ್, ನೃತ್ಯ ನಿರ್ದೇಶಕ ಭೂಷಣ್ ಮಾಸ್ಟರ್, ಛಾಯಾಗ್ರಾಹಕ ಸುಧಾಕರ್ ಎಸ್ ರಾಜ್, ಸಂಕಲನಕಾರ ಕೆ ಎಂ ಪ್ರಕಾಶ್, ಪ್ರೊಡಕ್ಷನ್ ಕಂಟ್ರೋಲರ್ ನರಸಿಂಹ ಜಾಲಹಳ್ಳಿ, ದೊಡ್ಡ ಮಟ್ಟದಲ್ಲಿ ಹಾಡುಗಳನ್ನು ಬಳಸಿದ `ವಿಂಕ್’ ತಂಡ, ನಿರ್ಮಾಪಕ ಅಟ್ಲಾಂಟ ನಾಗೇಂದ್ರ ಸೇರಿದಂತೆ ತಂಡದ ಪ್ರತಿಯೊಬ್ಬರನ್ನೂ ನೆನಪಿಸಿಕೊಂಡ ಆನಂದ್ ಆಡಿಯೋ ಸಂಸ್ಥೆ ಸ್ಮರಣಿಕೆ ನೀಡಿ ಗೌರವಿಸಿತು.
ಈ ಸಂದರ್ಭದಲ್ಲಿ ಆನಂದ್ ಆಡಿಯೋ ಸಾಗಿಬಂದ ದಾರಿಯ ಬಗ್ಗೆ ಚಲನದೃಶ್ಯ ಪ್ರದರ್ಶನ ನಡೆಯಿತು. ಮೋಹನ್ ಛಾಬ್ರಿಯಾ ಅವರು 1999ರಲ್ಲಿ ಸ್ಥಾಪಿಸಿದ ಆನಂದ್ ಆಡಿಯೋ ಸಂಸ್ಥೆ ಇಂದು ಎರಡು ದಶಕಗಳ ಪ್ರಯಾಣವನ್ನು ಯಶಸ್ವಿಯಾಗಿ ಮುಂದುವರಿಸಿದೆ. ಅದಕ್ಕೆ ಹಾಡುಗಳ ಗುಣಮಟ್ಟವನ್ನು ಆಲಿಸಿಯೇ ನಿರ್ಧರಿಸುತ್ತಿದ್ದ ಮೋಹನ್ ಛಾಬ್ರಿಯಾ ಅವರ ಗುಣವೇ ಕಾರಣ ಎನ್ನಲಾಗುತ್ತಿದೆ. ಇದುವರೆಗೆ ಸುಮಾರು 800 ಸಿನಿಮಾಗಳ 3,500 ಹಾಡುಗಳ ಟ್ರ್ಯಾಕ್ ಗಳನ್ನು ತಮ್ಮದಾಗಿಸಿರುವುದು ಸಂಸ್ಥೆಯ ದಾಖಲೆ.
ಜತೆಗೆ ಭಕ್ತಿಗೀತೆ, ಜಾನಪದ ಗೀತೆ, ಭಾವಗೀತೆ ಮೊದಲಾದ ಟ್ರ್ಯಾಕ್ಸ್ ಗಳನ್ನು ಸೇರಿಸಿದರೆ ಒಟ್ಟು 10,500ರ ಟ್ರ್ಯಾಕ್ ರೆಕಾರ್ಡ್ ಇವರದು! ನಾಲ್ಕು ಚಲನಚಿತ್ರಗಳ ನಿರ್ಮಾಣವನ್ನು ಕೂಡ ಮಾಡಿದ್ದು, ಅವುಗಳಲ್ಲಿ ಫ್ರೆಂಡ್ಸ್ ಮತ್ತು ವಿಕ್ಟ್ರಿ ಚಿತ್ರಗಳು ಅಮೋಘವಾದ ಯಶಸ್ಸು ಪಡೆದಿರುವುದನ್ನು ಸ್ಮರಿಸಬಹುದು. 2011ರಲ್ಲಿ ದಕ್ಷಿಣ ಭಾರತದಲ್ಲಿ ಕನ್ನಡದ ಪ್ರಥಮ ಯೂಟ್ಯೂಬ್ ವಾಹಿನಿ ಶುರುಮಾಡಿದ ಕೀರ್ತಿ ಇವರದ್ದು. ಪ್ರಸ್ತುತ ಐದು ಮಿಲಿಯನ್ ಚಂದಾದಾರರನ್ನು ಹೊಂದಿರುವ ಏಕೈಕ ಯೂಟ್ಯೂಬ್ ವಾಹಿನಿ ಎನ್ನುವ ಬಿರುದು ಆನಂದ್ ಆಡಿಯೋಗೆ ಸಲ್ಲುತ್ತದೆ. ಯಜಮಾನ, ಮುಂಗಾರು ಮಳೆ, ಸಾರಥಿ, ಜಾಕಿ ಮೊದಲಾದ ಹಿಟ್ ಹಾಡುಗಳ ಬಳಿಕ ಮುಂದೆ ಬಿಡುಗಡೆಯಾಗಲಿರುವ ರಾಬರ್ಟ್, ಮದಗಜ ಚಿತ್ರದ ಹಾಡುಗಳ ಹಕ್ಕು ಕೂಡ ಆನಂದ್ ಆಡಿಯೋ ಪಡೆದುಕೊಂಡಿದೆ ಎನ್ನುವುದು ಗಮನಾರ್ಹ ವಿಚಾರ.