ಕ್ಯಾನ್ಸರ್ ಗೆದ್ದ ಶಿವಣ್ಣನ ಭರವಸೆಯ ಸಂದೇಶ

ಅಮೆರಿಕಾದ ಫ್ಲೋರಿಡಾದಲ್ಲಿ ಚಿಕಿತ್ಸೆಯಲ್ಲಿರುವ ಶಿವರಾಜ್​ಕುಮಾರ್​ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಈ ವಿಚಾರವನ್ನು ಖುದ್ದು ಶಿವಣ್ಣ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಹೊಸ ವರ್ಷದಂದು ಶಿವಣ್ಣ ಕಳಿಸಿರುವ ವಿಡಿಯೋ ಸಂದೇಶದಲ್ಲಿ ಕ್ಯಾನ್ಸರ್​ನಿಂದ ಪೂರ್ತಿಯಾಗಿ ಗುಣಮುಖರಾಗಿದ್ದಾಗಿ ಹೇಳಿದ್ದಾರೆ. ಶಿವಣ್ಣ ಜತೆ ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡ ಜತೆಯಲ್ಲೇ ಕುಳಿತು ಎಲ್ಲರಿಗೂ ಕೃತಜ್ಞತೆ ಸೂಚಿಸಿದ್ದಾರೆ.

ಗೀತಾ ಶಿವರಾಜ್​ಕುಮಾರ್ ಹೇಳಿದ್ದೇನು?
ಶಿವಣ್ಣ ಹೊಸ ವರ್ಷದ ಮೊದಲ ದಿನವೇ ಶುಭಾಶಯ ಕೋರಿ ಎಂಟ್ರಿ ನೀಡಿದ್ದಾರೆ. ಮೂತ್ರಕೋಶ ಕ್ಯಾನ್ಸರ್ ಗೆ ತುತ್ತಾಗಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್, ಪತ್ನಿ ಗೀತಾ ಮತ್ತು ಪುತ್ರಿ ಹಾಗೂ ಕೆಲವು ಆಪ್ತ ಸ್ನೇಹಿತರ ಜತೆ ಡಿಸೆಂಬರ್ 19ನೇ ತಾರೀಖು ಅಮೆರಿಕಗೆ ತೆರಳಿದ್ದರು. ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್​ನಲ್ಲಿ ನಡೆದ ಸರ್ಜರಿಯಲ್ಲಿ ಶಿವಣ್ಣ ಕ್ಯಾನ್ಸರ್​ ಗೆದ್ದಿದ್ದಾರೆ. ಇದನ್ನು ಶಿವಣ್ಣನ ಜತೆಯಲ್ಲೇ ಕುಳಿತ ಗೀತಕ್ಕ ಕೂಡ, ಸ್ಪಷ್ಟಪಡಿಸಿದ್ದಾರೆ. ಅಭಿಮಾನಿಗಳನ್ನು ದೇವರು ಎಂದೇ ಹೇಳುವ ಅಣ್ಣಾವ್ರ ಕುಟುಂಬದ ಮಂದಿ, ಮತ್ತೊಮ್ಮೆ ಈ ಯಶಸ್ಸಿಗೂ ಅಭಿಮಾನಿಗಳೇ ಕಾರಣ ಎಂದಿದ್ದಾರೆ.

ಹೊಸ ವರ್ಷದ ಶುಭಾಶಯ. ನಿಮ್ಮ ಪ್ರಾರ್ಥನೆಯಿಂದ ರಿಪೋರ್ಟ್ಸ್​ ನೆಗೆಟಿವ್ ಬಂದಿದೆ. ಪೆತಾಲಜಿ ರಿಪೋರ್ಟ್ ಗೆ ಕಾಯ್ತಿದ್ವಿ. ಅದು ಕೂಡ ನೆಗೆಟಿವ್ ಬಂದಿದೆ. ಕ್ಯಾನ್ಸರ್ ಫ್ರೀ ಎಂದು ಅಫಿಶಿಯಲಿ ಹೇಳಿದ್ದಾರೆ. ನಿಮ್ಮ ಪ್ರಾರ್ಥನೆ, ದೊಡ್ಡವರ ಆಶೀರ್ವಾದಿಂದ ಇವತ್ತು ಶಿವಣ್ಣ ಇಷ್ಟು ಚೆನ್ನಾಗಿರೋಕೆ ಸಾಧ್ಯ ಆಯ್ತು. ನಾನಿದನ್ನ ನನ್ನ ಲೈಫಲ್ಲಿ ಯಾವತ್ತೂ ಮರೆಯೋದಿಲ್ಲ.- ಗೀತಾ ಶಿವರಾಜ್‌ಕುಮಾರ್‌

ಡಿಸೆಂಬರ್ 24ರಂದು, ಅಮೆರಿಕಾದ ಫ್ಲೋರಿಡಾದಲ್ಲಿ ಶಿವಣ್ಣನಿಗೆ ನಡೆದ ಆಪರೇಶನ್​ ನಡೆಸಲಾಗಿತ್ತು. ಇದನ್ನು ಈಗಾಗಲೇ ವೈದ್ಯರೇ ಖಚಿತ ಪಡಿಸಿದ್ದರು. ಆದರೆ ಕರುನಾಡಿನ ಕೋಟ್ಯಾನುಕೋಟಿ ಅಭಿಮಾನಿಗಳ ಆರಾಧ್ಯ ನಟ ಶಿವರಾಜ್ ಕುಮಾರ್, ಆಪರೇಶನ್ ಬಳಿಕ ಮೊದಲ ಬಾರಿಗೆ, ವೀಡಿಯೋ ಮೂಲಕ ಕಾಣಿಸಿಕೊಂಡು ಮಾತನಾಡಿದ್ದಾರೆ.

ಎಲ್ರಿಗೂ ಹೊಸ ವರ್ಷದ ಶುಭಾಶಯಗಳು. ಭಯ ಆಗುತ್ತೆ. ಎಮೋಶನ್ ಆಗ್ತೀನಿ ಅಂತ ಭಯ. ಯಾಕೆಂದರೆ ಹೊರಡಬೇಕಾದ್ರೆ ಸ್ವಲ್ಪ ಎಮೋಶನ್ ಆಗಿದ್ದೆ. ಭಯ ಅಂತ ಇದ್ದೇ ಇರುತ್ತೆ ಮನುಷ್ಯನಿಗೆ. ಭಯ ನೀಗಿಸುವುದಕ್ಕೆ ಅಂತ ಅಭಿಮಾನಿ ದೇವರುಗಳು ಇದ್ದಾರೆ. ಇನ್ನು ಜೀವನದಲ್ಲಿ ‘ಗೀತ ಇಲ್ದೇ ಶಿವಣ್ಣ, ಶಿವಣ್ಣ ಇಲ್ದೇ ಗೀತ’ ಇಲ್ವೇ ಇಲ್ಲ. ಅದಾದ್ಮೇಲೆ ನನ್ನ ಮಗಳು ನಿವಿ… ಎಲ್ಲರೂ ಚೆನ್ನಾಗಿ ನೋಡಿಕೊಂಡಿದ್ದಾರೆ.

ಫ್ಲೋರಿಡಾದ ಬ್ಯಾಪ್ಟಿಸ್ಟ್​ ಹಾಸ್ಪಿಟಲ್​ನಲ್ಲಿ ಮಿಯಾಮಿ ಕ್ಯಾನ್ಸರ್ ಇನಸ್ಟ್​ಟಿಟ್ಯೂಟ್​ನಲ್ಲಿ ಎಲ್ಲರು ನಮಗೆ ಇನ್ನೊಬ್ಬ ತಾಯಿಯಂತೆ ಕಾಣಿಸಿದ್ದಾರೆ. ತುಂಬ ಮಂದಿ ನನಗೆ ಕಿಡ್ನಿ ಟ್ರಾನ್ಸ್​ಪ್ಲ್ಯಾಂಟ್ ಮಾಡಲಾಗಿದೆ ಅಂದ್ಕೊಂಡಿದ್ದಾರೆ. ಅದೆಲ್ಲ ಏನಿಲ್ಲ. ಸಿಂಪಲ್ ಯೂರಿನಲ್ ಬ್ಲಾಡರ್ ತೆಗೆದಿದ್ದಾರೆ. ಹೊಸ ಬ್ಲಾಡರ್ ಹಾಕಿದ್ದಾರೆ. ಯಾರೂ ಕನ್ಫ್ಯೂಸ್ ಮಾಡ್ಕೋಬೇಡಿ. ಯಾಕೆಂದರೆ ನಾವು ಡಿಟೇಲಾಗಿ ಹೇಳೋಕೆ ಹೋದ್ರೆ ಎಲ್ರೂ ಗಾಬರಿಯಾಗ್ತಾರೆ ಅಂತ ಹೇಳೋಕೆ ಹೋಗಿರಲಿಲ್ಲ. ಗಾಬರಿ ನಮಗಿರ್ಲಿ. ನಿಮಗೆ ಅಷ್ಟು ಆಳವಾಗಿ ಹೇಳುವುದು ಬೇಡ ಅಂದುಕೊಂಡಿದ್ವಿ. ಆದರೆ ಈಗ ನಿಮಗೆ ಸಾಕಷ್ಟು ವಿಚಾರ ಗೊತ್ತಾಗಿದೆ. ನನಗಾಗಿ ಪ್ರಾರ್ಥಿಸಿದ್ದಕ್ಕೆ ವಂದನೆಗಳು.
-ಡಾ. ಶಿವರಾಜ್​ ಕುಮಾರ್,ನಟ

ಶಿವರಾಜ್​ಕುಮಾರ್ ಚಿಕಿತ್ಸೆಗೆಂದು ವಿದೇಶಕ್ಕೆ ತೆರಳುವ ಮೊದಲು ಪತ್ನಿ ಗೀತಾ ಮತ್ತು ಆತ್ಮೀಯರ ಜತೆಗೆ ತಿರುಪತಿಗೆ ಹೋಗಿ ಮುಡಿಕೊಟ್ಟಿದ್ದರು. ಆದರೆ ಶಿವಣ್ಣ ತಲೆ ಬೋಳಿಸಿದ್ದನ್ನು ನೋಡಿದ ಬಹಳ ಮಂದಿ ಇದು ಕಿಮೋಥೆರಪಿ ಚಿಕಿತ್ಸೆಗಾಗಿ ಶಿವಣ್ಣ ತಲೆ ಬೋಳಿಸಿದ್ದಾರೆ ಎಂದೇ ಅಂದುಕೊಂಡಿದ್ದರು. ಆದರೆ ವಾಸ್ತವದಲ್ಲಿ ಅದಾಗಲೇ ಶಿವಣ್ಣನ ಕಿಮೋಥೆರಪಿ ಸಂಪೂರ್ಣವಾಗಿ ಮುಗಿದಿತ್ತು. ಶಿವಣ್ಣನಿಗೆ ಬೆಂಗಳೂರಿನಲ್ಲೇ ಕಿಮೋಥೆರಪಿ ನಡೆದಿತ್ತು. ಅದರಲ್ಲೇ ಆರೋಗ್ಯ ಸುಧಾರಿಸಿದರೆ ಮತ್ತೆ ವಿದೇಶಕ್ಕೆ ಹೋಗುವ ಅಗತ್ಯವಿಲ್ಲ ಎಂದುಕೊಳ್ಳಲಾಗಿತ್ತು. ಆದರೆ ಕ್ಯಾನ್ಸರ್ ಆದ ಭಾಗವನ್ನು ಕಿಮೋಥೆರಪಿಯಿಂದ ಸುಟ್ಟರೂ ವರ್ಷಗಳ ಬಳಿಕ ಮತ್ತೆ ಕ್ಯಾನ್ಸರ್ ಮರಳಿದ ಉದಾಹರಣೆಗಳಿವೆ. ಹೀಗಾಗಿ ಆಪರೇಷನ್ ಮೂಲಕ ಮೂತ್ರಕೋಶವನ್ನೇ ಕತ್ತರಿಸಿ ತೆಗೆಯುವ ನಿರ್ಧಾರ ಮಾಡಲಾಯ್ತು. ಮತ್ತು ಇಂಥದೊಂದು ರಿಸ್ಕೀ ಚಿಕಿತ್ಸೆಗಾಗಿ ಫ್ಲೊರಿಡಾದ ಆಸ್ಪತ್ರೆಯನ್ನೇ ಆಶ್ರಯಿಸಲಾಗಿತ್ತು.

ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗುವ ರೋಗಿಯ ತಲೆ ಕೂದಲು ಸಾಮಾನ್ಯವಾಗಿ ಸಂಪೂರ್ಣವಾಗಿ ಉದುರುತ್ತದೆ. ಅಲ್ಲದೇ ವಾಕರಿಕೆ, ತಲೆಸುತ್ತು, ಸುಸ್ತು ಮುಂತಾದ ಅಡ್ಡಪರಿಣಾಮಗಳನ್ನು ಎದುರಿಸುವಂಥ ಉದಾಹರಣಗಳೂ ಇವೆ. ಆದರೆ 60 ವರ್ಷ ವಯಸ್ಸು ದಾಟಿದ ಶಿವಣ್ಣನಿಗೆ ಇಂಥ ಯಾವ ತೊಂದೆರೆಗಳೂ ಎದುರಾಗಿಲ್ಲ. ಹಾಗೆ ನೋಡಿದರೆ ಶಿವಣ್ಣನ ಕಾಲಘಟ್ಟದ ಯಾವ ಹೀರೋ ಕೂಡ ವಿಗ್ ಇಲ್ಲದೆ ನಟಿಸುತ್ತಿಲ್ಲ. ಇಂಥ ಗಟ್ಟಿ ಕೂದಲು ಹೊಂದಿರುವ ಶಿವಣ್ಣನ ಧೈರ್ಯವೂ ಗಟ್ಟಿಯಾಗಿದ್ದೇ ಆಗಿದೆ. ಬೆಂಗಳೂರಿನಲ್ಲಿ ಕಿಮೋ ಚಿಕಿತ್ಸೆ ನಡೆಯುವಾಗಲೂ ಸಿನಿಮಾ ಚಿತ್ರೀಕರಣದಲ್ಲಿ ಅದರಲ್ಲೂ ಹೊಡೆದಾಟದ ದೃಶ್ಯಗಳಲ್ಲಿ ಶಿವಣ್ಣ ಲವಲವಿಕೆಯಿಂದಲೇ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದರು. ಈ ವಿಚಾರವನ್ನು ಸ್ವತಃ ಶಿವರಾಜ್ ಕುಮಾರ್ ಹಂಚಿಕೊಂಡಿದ್ದಾರೆ.

ಡಬಲ್ ಪವರ್​ನೊಂದಿಗೆ ಮರಳುತ್ತೇನೆ. ನಾನು ಆರಾಮಾಗಿ ಶೂಟಿಂಗ್ ಮಾಡ್ಕೊಂಡಿರ್ತಿದ್ದೆ. ಅದು ಹೇಗೆ ಜೋಶ್ ಬಂತೋ ನನಗೂ ಗೊತ್ತಿಲ್ಲ. ಹಾಗೆ ನೋಡಿದ್ರೆ, 45 ಇಡೀ ಚಿತ್ರವನ್ನು ಕೀಮೋನಲ್ಲೇ ಶೂಟ್ ಮಾಡುತ್ತಾ ಕ್ಲೈಮ್ಯಾಕ್ಸ್ ಫೈಟ್​ನಲ್ಲೂ ಭಾಗಿಯಾಗಿದ್ದೇನೆ. ಅಂದಹಾಗೆ ಇದರ ಪೂರ್ತಿ ಕ್ರೆಡಿಟ್ ಸಾಹಸ ನಿರ್ದೇಶಕ ರವಿವರ್ಮ ಅವರಿಗೆ ಸಲ್ಲಬೇಕು. ಡಾಕ್ಟರ್ ಹೇಳಿದ್ದಾರೆ ಇನ್ನು ಒನ್ ಮಂತ್ ಸ್ಲೋ ಆಗಿ ಹೋಗಿ, ಮಾರ್ಚ್​ನಲ್ಲಿ ನೆಮ್ಮದಿಯಾಗಿ ನಿಮ್ಮ ಸ್ಟೈಲ್ ಶುರು ಮಾಡ್ಕೊಳ್ಳಿ ಅಂದಿದ್ದಾರೆ. ಖಂಡಿತಾ ತೋರಿಸ್ತೀನಿ, ಬಿಡಲ್ಲ ನಾನು. ಶಿವಣ್ಣ ಆಗ ಹೆಂಗಿದ್ನೋ ಅದರ ಡಬಲ್ ಪವರ್ ಇದ್ದೇ ಇರುತ್ತೆ. ಡಾನ್ಸಿಂಗ್, ಪೈಟಿಂಗ್, ಲುಕ್ ಎಲ್ಲದರಲ್ಲೂವೇ ಹೊಸ ಪವರ್​ನೊಂದಿಗೆ ಬರಲಿದ್ದೇನೆ.
-ಡಾ. ಶಿವರಾಜ್ ಕುಮಾರ್, ನಟ

ಶಿವಣ್ಣ ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೇ ಫೈಟ್ ಮಾಡಿಮಾಡಿ ಗೆದ್ದವರು. ಹೀಗಾಗಿಯೇ ಶಿವಣ್ಣನ ಡಬಲ್ ಪವರ್ ಬಗ್ಗೆ ಯಾರಿಗೂ ಅನುಮಾನವೇ ಇಲ್ಲ. ಆದಷ್ಟು ಬೇಗ ವಿದೇಶದಿಂದ ಮರಳಿ, ಮತ್ತೆ ಸಿನಿಮಾಗಳ ಮೂಲಕ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Recommended For You

Leave a Reply

error: Content is protected !!