`ಜಂಟ್ಲ್ ಮನ್’ ಚಿತ್ರ ಯಶಸ್ವೀ ಪ್ರದರ್ಶನ

ಇತ್ತೀಚೆಗೆ ಸಿನಿಮಾಗಳ ಯಶಸ್ವೀ ಪ್ರದರ್ಶನ ಎಂದರೆ ಅದನ್ನು ನಂಬುವುದು ಕಷ್ಟ. ಆದರೆ ಈ ಭಾನುವಾರ ಕೂಡ ತುಂಬಿದ ಗೃಹಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಇದು ಚಿತ್ರದ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಗುರುದೇಶಪಾಂಡೆಯವರು ಹೇಳಿದಂಥ ಮಾತಿಗೆ ಪೂರಕವಾದ ಘಟನೆಯೂ ಹೌದು. “ದೊಡ್ಡ ಸ್ಟಾರ್ ಗಳಿರದ ಬಿಗ್ ಬಜೆಟ್ ಚಿತ್ರಗಳು ಕಲೆಕ್ಷನ್ ಮಾಡಬೇಕಾದರೆ ಮಿನಿಮಮ್ ಎರಡು ವಾರಗಳಾದರೂ ಸಿನಿಮಾ ಥಿಯೇಟರ್ ನಲ್ಲಿ ಇರಬೇಕು” ಎನ್ನುವುದು ಅವರ ಅಭಿಪ್ರಾಯವಾಗಿತ್ತು.

ಇಂದು ಜನ ಸಿನಿಮಾಗಳ ಬಗ್ಗೆ ಅರಿತು ಥಿಯೇಟರ್ ಕಡೆಗೆ ಮುಖ ಮಾಡುವಷ್ಟರಲ್ಲಿ ಚಿತ್ರ ಥಿಯೇಟರ್ ನಲ್ಲೇ ಇರುವುದಿಲ್ಲ. ಹಾಗಾಗಿ ಸಿನಿಮಾಗಳು ತೋಪಾಗುತ್ತಿವೆ ಎನ್ನುವುದು ಜಂಟಲ್ ಮನ್ ನಿರ್ಮಾಪಕ ಗುರುದೇಶಪಾಂಡೆಯವರ ಕಳಕಳಿಯಾಗಿತ್ತು. ಮೊದಲೆಲ್ಲ ಒಂದು ಸಿನಿಮಾ ಸುಪರ್ ಹಿಟ್ ಆಗಬೇಕಾದರೆ 25 ವಾರ ಓಡಬೇಕಿತ್ತು. ಆಗ ಹಾಗೆ ಪ್ರದರ್ಶಿಸಲ್ಪಡುವ ಚಿತ್ರ ಮಂದಿರಗಳ ಸಂಖ್ಯೆ ಕೂಡ 25ರಷ್ಟೇ ಇತ್ತು. ಆದರೆ ಇಂದು 250 ಚಿತ್ರಮಂದಿರಗಳಲ್ಲಿ ಸಿನಿಮಾ ಏಕಕಾಲದಲ್ಲಿ ತೆರೆಕಾಣುತ್ತಿದೆ. ಸರಿಯಾಗಿ ಎರಡು ವಾರಗಳ ಪ್ರದರ್ಶನ ಕಂಡರೆ ಕೂಡ ಸಿನಿಮಾ ಗೆದ್ದಂತೆ ಎನ್ನುವುದು ಗುರುದೇಶ್ ಅನಿಸಿಕೆ.

ನಿರ್ದೇಶಕ ಜಡೇಶ್ ಕುಮಾರ್ ಹಂಪಿಯವರು ಮಾತನಾಡಿ ನನ್ನ ಪ್ರಯತ್ನಕ್ಕೆ ಇಲ್ಲಿ ಒಳ್ಳೆಯ ಪ್ರೋತ್ಸಾಹ ದೊರಕಿದೆ. ಅದಕ್ಕಾಗಿ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ಹೇಳುತ್ತಾ ಭಾವುಕರಾದರು. ಪಾತ್ರಕ್ಕಾಗಿ ನಡೆಸಿದ ತಯಾರಿಗೆ ದೀಗ ಪ್ರತಿಫಲ ಸಿಕ್ಕಂತಾಗಿದೆ ಎಂದು ಪ್ರಜ್ವಲ್ ಸಂತೃಪ್ತಿ ವ್ಯಕ್ತಪಡಿಸಿದರು. ಚಿತ್ರದಲ್ಲಿ ಖಳನಟನಾಗಿ ಕಾಣಿಸಿಕೊಂಡಿರುವ ಪ್ರಶಾಂತ್ ಸಿದ್ದಿ ಮಾತನಾಡಿ, “ಇಂಥದೊಂದು ವಿಭಿನ್ನ ಪಾತ್ರಕ್ಕಾಗಿ ದಶಕಗಳಿಂದ ಕಾಯುತ್ತಿದ್ದೆ. ಇದೀಗ ವಿಭಿನ್ನವಾಗಿ ಗುರುತಿಸುವಂಥ ಪಾತ್ರ ದೊರಕಿದೆ” ಎಂದರು. ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು, ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿ ಗಮನ ಸೆಳೆದ ಸಂಚಾರಿ ವಿಜಯ್, ವೈದ್ಯರಾಗಿ ನಟಿಸಿದ ಅರವಿಂದರಾವ್, ಗೋವಿಂದೇಗೌಡ, ಮುದ್ದು ಮಗುವಾಗಿ ಮನಸು ಗೆದ್ದ ಬೇಬಿ ಆರಾಧ್ಯ ಮೊದಲಾದವರು ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಒರಿಜಿನಲ್ ಜಂಟ್ಲ್ ಮನ್ ರಾಜೀವ್ 

ಇದು ನೈಜ ಘಟನೆಯನ್ನು ಆಧಾರಿಸಿ ಮಾಡಿದ ಚಿತ್ರ ಎಂದು ನಿರ್ದೇಶಕರು ಆರಂಭದಿಂದಲೇ ಹೇಳಿದ್ದರು. ಚಿತ್ರಕ್ಕೆ ಸ್ಫೂರ್ತಿಯಾದ ಮುಂಬೈನ ರಾಜೀವ್ ನಿಜಕ್ಕೂ 18ರಿಂದ 20 ಗಂಟೆಗಳ ನಿದ್ರಿಸುವ ವ್ಯಕ್ತಿಯಾಗಿದ್ದು, ಅವರನ್ನು ಮಾಧ್ಯಮಗೋಷ್ಠಿಗೆ ಆಹ್ವಾನಿಸಲಾಗಿತ್ತು. ಅವರು ತಮ್ಮ ತಾಯಿ ಮತ್ತು ಕುಟುಂಬದ ಜತೆಗೆ ಆಗಮಿಸಿ ಚಿತ್ರ ನೋಡಿ ಮೆಚ್ಚಿದ್ದಾಗಿ ತಿಳಿಸಿದರು.

ತಮ್ಮ 16ನೇ ವರ್ಷದಿಂದ ಇಂಥದೊಂದು ಕಾಯಿಲೆಗೆ ತುತ್ತಾಗಿರುವ ತಮಗೆ ಬದುಕಲ್ಲಿ ಏನನ್ನೂ ಸಾಧಿಸಿಲ್ಲ ಎನ್ನುವ ನೋವಿದೆ. ಆದರೂ ಮನೆ ಮಗನಾಗಿ ಮನೆಯವರ ಸಹಕಾರದೊಂದಿಗೆ ಉದ್ಯಮವೊಂದನ್ನು ನೋಡಿಕೊಳ್ಳುತ್ತಿದ್ದೇನೆ. ನಿದ್ದೆ ಒಂದು ಅಟ್ಯಾಕ್ ನಂತೆ ಆಗಮಿಸುತ್ತದೆ. ಕೆಲವೊಮ್ಮೆ ತಿಂಗಳಾನುಗಟ್ಟಲೆ 20 ಗಂಟೆಗಳ ನಿದ್ದೆ ಮುಂದುವರಿಯುತ್ತದೆ. ಮತ್ತೆ ಒಂದಷ್ಟುಕಾಲ ನಾರ್ಮಲ್ ಆಗಿರುತ್ತೇನೆ ಎನ್ನುವ ವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ.  ನನ್ನ ಬದುಕಿನ ಪ್ರಮುಖ ಘಟನೆಗಳ ಮೇಲೆ ಚಿತ್ರ ಹಾದುಹೋಗುವುದನ್ನು ಕಂಡಾಗ ನಾನು ಭಾವುಕನಾದೆ ಎಂದು ರಾಜೀವ್ ಹೇಳಿದರು.

Recommended For You

Leave a Reply

error: Content is protected !!
%d bloggers like this: