
ಜಿಲ್ಕ ಚಿತ್ರ ನೋಡಿದವರು ಖುಷಿಯಾಗಿದ್ದಾರೆ. ಹಾಗಾಗಿ ಚಿತ್ರ ತಂಡವೂ ಖುಷಿಯಾಗಿದೆ. ಇದರಿಂದಾಗಿ ಚಿತ್ರದ ನಿರ್ಮಾಪಕರಾದ ಮನೇಶ್ ನಾಗ್ ದೇವ್ ಮತ್ತು ತೇಲ್ ಸಿಂಗ್ ಸಂಭ್ರಮ ಹಂಚಿಕೊಳ್ಳಲು ಒಂದು ಗೆಟ್ ಟುಗೆದರ್ ಪಾರ್ಟಿ ಇರಿಸಿಕೊಂಡಿದ್ದರು.
ಚಿತ್ರದ ನಾಯಕ ಮತ್ತು ನಿರ್ದೇಶಕರಾದ ಕವೀಶ್ ಶೆಟ್ಟಿ ಈ ಸಂದರ್ಭದಲ್ಲಿ ಖುಷಿ ಹಂಚಿಕೊಂಡು, “ನನ್ನ ಮೊದಲ ಪ್ರಯತ್ನಕ್ಕೆ ಇಂಥದೊಂದು ಪ್ರತಿಕ್ರಿಯೆ ಲಭಿಸಿರುವುದು ಖುಷಿ ತಂದಿದೆ. ಈ ಸಾಹಸಕ್ಕೆ ಸಹಾಯವಾದ ನಿರ್ಮಾಪಕರನ್ನು ನಾನು ಸ್ಮರಿಸಲೇಬೇಕು. ಚಿತ್ರದ ನಾಯಕಿ ಪ್ರಿಯಾ ಹೆಗ್ಡೆ ಕೂಡ ಸಂತೋಷ ಕೂಟದಲ್ಲಿ ಭಾಗಿಯಾಗಿದ್ದರು. ಇದು ಅವರಿಗೆ ಪ್ರಥಮ ಕನ್ನಡ ಚಿತ್ರವಾಗಿದ್ದು ಈಗಾಗಲೇ ತುಳು ಮತ್ತು ತೆಲುಗಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಮತ್ತೋರ್ವ ನಾಯಕಿ ಲಕ್ಷ್ಯಾ ಶೆಟ್ಟಿ ಹೊಸ ಚಿತ್ರವೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಕಾರಣ ಆಗಮಿಸಿರಲಿಲ್ಲ.
ಗೋಪಿಕಾ ದಿನೇಶ್, ಪ್ರತೀಕ್ ಶೆಟ್ಟಿ ಮತ್ತು ದಿನೇಶ್ ಶೆಟ್ಟಿ ಸೇರಿದಂತೆ ರಂಗಭೂಮಿ ಕಲಾವಿದ ಕೃಷ್ಣಮೂರ್ತಿ ಕವತ್ತಾರು ಮೊದಲಾದ ಅಪರೂಪದ ಪ್ರತಿಭೆಗಳ ಸಂಗಮವಾಗಿದ್ದ `ಜಿಲ್ಕ’ ಚಿತ್ರದಲ್ಲಿ ಕವೀಶ್ ಅವರು ಮೂರು ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ನಟ, ನಿರ್ದೇಶಕ ಸಂದೇಶ್ ಶೆಟ್ಟಿ ಅಜ್ರಿ ಚಿತ್ರದ ನಿರ್ಮಾಣ, ನಿರ್ವಹಣೆಯ ಹೊಣೆ ವಹಿಸಿದ್ದರು. ಏಕಕಾಲದಲ್ಲಿ ಕನ್ನಡ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾಗಿರುವ ಈ ಚಿತ್ರ ಸದ್ಯದಲ್ಲೇ ಉಳಿದ ಭಾಷೆಗಳಲ್ಲಿ ಕೂಡ ತೆರೆಕಾಣಲಿದೆಯಂತೆ.


