‘ಚಿ.ತು ಸಂಘ’ ಧ್ವನಿಸಾಂದ್ರಿಕೆ ಲೋಕಾರ್ಪಣೆ

ಇಂದು ಯಶಸ್ಸು ಕಾಣುವ ಸಿನಿಮಾಗಳು ಕಡಿಮೆ. ಆದರೂ ಸಿನಿಮಾ ನಿರ್ಮಾಣ ಮಾಡುವವರಿಗೆ ಕೊರತೆಯಿಲ್ಲ. ಇಂಥ ಸಂದರ್ಭದಲ್ಲಿ ನಮ್ಮ ಶಿವಣ್ಣ ಇರೋ ದುಡ್ಡನ್ನೆಲ್ಲ ತಂದು ಬೆಂಗಳೂರಿಗೆ ಸುರಿದಿದ್ದಾರೆ. ಅದ್ಯಾವ ನಂಬಿಕೆಯೋ‌ ಗೊತ್ತಿಲ್ಲ. ಒಂದು ಸಿನಿಮಾ ಮಾಡಿದ್ದಾನೆ. ಹಾಗಂತ ಈ ಸಿನಿಮಾ ಗೆಲ್ಲ ಬಾರದು ಅಂತ ಏನಿಲ್ಲ. ಗೆಲುವು ಕಾಣಲಿ ಎಂದೇ ನನ್ನ ಹಾರೈಕೆ” ಎಂದರು ಜೆ.ಸಿ‌ ಮಾಧು ಸ್ವಾಮಿ. ಕಾನೂನು ‌ಮತ್ತು ಸಣ್ಣ ನೀರಾವರಿ ಸಚಿವರಾದ ಮಾಧುಸ್ವಾಮಿಯವರು ‘ಚಿ.ತು. ಸಂಘ’ ಚಿತ್ರದ ನಿರ್ಮಾಪಕ ಎನ್.ಜಿ ಶಿವಣ್ಣನ ಬಗ್ಗೆ ಈ‌ ಮಾತುಗಳನ್ನು ಹೇಳಿದರು. ಅವರು ಚಿತ್ರದ ಅಡಿಯೋ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

“ನಿರ್ದೇಶಕ ಲಿಂಗದೇವರು ನನ್ನ ಸಂಬಂಧಿ. ಆತ ನಾನು ಅವನಲ್ಲ ಅವಳು ಚಿತ್ರ ಮಾಡಿದಾಗ ಅದನ್ನು ಮೊದಲು ನೋಡಿ ಖಂಡಿತವಾಗಿ ಪ್ರಶಸ್ತಿ ಬರುವುದೆಂದು ಹೇಳಿದ್ದೆ. ಸಿನಿಮಾ ಪ್ರಶಸ್ತಿ ಪಡೆಯಿತು. ಆದರೆ ಜನ ನೋಡಲಿಲ್ಲ. ಪ್ರಶಸ್ತಿ ವಿಜೇತ ಚಿತ್ರಗಳ ಬೆ ವಿಶೇಷ ಕಾಳಜಿ ವಹಿಸಿ ನಾನೇ ‌ನಮ್ಮ ಚಿಕ್ಕನಾಯಕನಹಳ್ಳಿಯಲ್ಲಿ ಪ್ರದರ್ಶನಕ್ಕೆ ಅವಕಾಶ ಮಾಡಿದ್ದೆ. ಆದರೆ ನಮ್ಮ ಜನ ಧಾರಾವಾಹಿ ಬಿಟ್ಟು ಕದಲುವುದಿಲ್ಲ. ಇಂಥ ಸಂದರ್ಭದಲ್ಲಿ ಡಬ್ಬಿಂಗ್ ಚಿತ್ರಗಳ ಹಾವಳಿ ಬೇರೆ ಇದೆ. ಆದಷ್ಟು ಬೇಗ ಇವುಗಳಿಗೆಲ್ಲ ಕಡಿವಾಣ ಹಾಕಬೇಕಿದೆ. ಆ ನಿಟ್ಟಿನಲ್ಲಿ ಕೈ ಜೋಡಿಸಲು ನಾನು ಸಿದ್ಧನಿದ್ದೇನೆ” ಎಂದು ಮಾಧುಸ್ವಾಮಿ ಹೇಳಿದಾಗ ಚಿತ್ರ ತಂಡದ ಕರಘೋಷ ಮುಗಿಲು ಮುಟ್ಟಿತು.

ನಿರ್ಮಾಪಕ ಎನ್.ಜಿ ಶಿವಣ್ಣ ಈ ಹಿಂದೆ ‘ಜೈ ತುಳುನಾಡ್’ ಎನ್ನುವ ಚಿತ್ರವನ್ನು ನಿರ್ಮಿಸಿದ್ದರು. ಇದೀಗ ತಮ್ಮದೇ ಊರಿನ ಚಿಕ್ಕನಾಯಕನಹಳ್ಳಿಯ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ಚೇತನ್ ಕುಮಾರ್ ಎನ್ನುವ ಯುವ ಪ್ರತಿಭೆ ನಿರ್ದೇಶಕನಾಗಿ ಮತ್ತು ನಾಯಕನಾಗಿ ಕಾಣಿಸಿಕೊಂಡಿರುವ ಈ ಚಿತ್ರದ ಹೆಸರು ಈಗಾಗಲೇ ಜನಪ್ರಿಯವಾಗಿರುವಂಥದ್ದು! ಅದಕ್ಕೆ ಕಾರಣ, ಶರಣ್ ನಟನೆಯ ‘ಅಧ್ಯಕ್ಷ’ ಚಿತ್ರದಲ್ಲಿ ‘ಚಿ.ತು ಸಂಘ’ ಎನ್ನುವ ಸಂಘಟನೆಯ ಬಗ್ಗೆ, ಅದರ ಪೂರ್ಣ ರೂಪ ‘ಚಿಂತೆ ಇಲ್ಲದ ತುಂಡ್ ಹೈಕ್ಳ ಸಂಘ’ ಎನ್ನುವ ವಿವರಣೆಯ ಬಗ್ಗೆ ಚಿತ್ರ ನೋಡಿದವರೆಲ್ಲ ನೆನಪಿಸಿರಿಸಿರುತ್ತಾರೆ. ಹಾಗಾಗಿ ಅದೇ ವಿವರಣೆಯೊಂದಿಗೆ ಶೀರ್ಷಿಕೆ ಇರಿಸಿಕೊಂಡಿದ್ದಾರೆ ನಿರ್ದೇಶಕ ಚೇತನ್ ಕುಮಾರ್. ಚಿತ್ರಕ್ಕೆ ರವೀಶ್ ಸಂಗೀತ ನಿರ್ದೇಶಕರಾಗಿದ್ದು, 4 ಹಾಡುಗಳು ಇವೆ. ಸಾಹಿತ್ಯವನ್ನು ಸಹಾಯಕ ನಿರ್ದೇಶಕರಾದ ಅಪ್ಪುವರ್ಧನ್ ಮೊದಲಾದವರು ಹಾಡುಗಳನ್ನು ಬರೆದಿದ್ದಾರೆ ಎಂದು ಚೇತನ್ ತಿಳಿಸಿದರು. ಚಿತ್ರ ಇದೀಗ ಸೆನ್ಸಾರ್ ಗೆ ಹೋಗಿದೆ ಎಂದು ಅವರು ಮಾಹಿತಿ ನೀಡಿದರು.

ನಾಯಕ ಸ್ನೇಹಿತನ ಪಾತ್ರ ನಿರ್ವಹಿಸಿರುವ ಪೃಥ್ವಿ ಮಾತನಾಡಿ, ಇದೊಂದು ಹಳ್ಳಿ ಸಬ್ಜೆಕ್ಟ್. ಹಳ್ಳಿ ಹುಡುಗರು ಹೇಗೆ ತರಲೆಗಳಿರುತ್ತಾರೆ ಎನ್ನುವುದನ್ನು ಪರದೆಯ ಮೇಲೆ ತೋರಿಸಿದ್ದೇವೆ ಎಂದರು. ಮತ್ತೋರ್ವ ಯುವನಟ ಗೌತಮ್ ನಾಯಕಿಯ ಮಾವನ ಪಾತ್ರವನ್ನು ಕುಂಟನಾಗಿ, ಹೀರೋಗೆ ವಿರೋಧಿಯಾಗಿ ನಿರ್ವಹಿಸಿದ್ದೇನೆ ಎಂದರು.

ನಾಯಕಿ ರೂಪಾ ತಮ್ಮ ಪಾತ್ರದ ಬಗ್ಗೆ ಹೆಚ್ಚೇನೂ‌ ವಿವರಣೆ ನೀಡಲಿಲ್ಲ. ಈ ಸಂದರ್ಭದಲ್ಲಿ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದ ತಾರೆ ರೂಪಿಕಾ ಅವರು ರೂಪಾ ಅವರೊಂದಿಗೆ ಪ್ರಶ್ನೋತ್ತರ ನಡೆಸಿ ಅವರನ್ನು ಕಂಫರ್ಟೇಬಲ್ ಮಾಡಿ, ಅವರಿಂದ ಉತ್ತರ ಪಡೆಯಲು ಪ್ರಯತ್ನಿಸಿದ್ದು ಪ್ರಶಂಸಾರ್ಹವಾಗಿತ್ತು. ಆಗ ತಮ್ಮದು ರಫ್ ಆ್ಯಂಡ್ ಟಫ್ ಕ್ಯಾರೆಕ್ಟರ್ ಆಗಿದ್ದು, ಯಾವಾಗಲೂ ನಾಯಕನನ್ನು ಬೈಯ್ಯುತ್ತಿರುತ್ತೇನೆ ಎಂದು ಬಾಯಿಬಿಟ್ಟರು ರೂಪಾ! ಬಳಿಕ ಅತಿಥಿ ಸ್ಥಾನದಿಂದ ಮಾತನಾಡಿದ ರೂಪಿಕಾ, “ಕಲಾವಿದರು ನಗಿಸಲು ಮತ್ತು ಅಳಿಸಲು ಕಷ್ಟ ಪಡಬೇಕು‌. ಇವರು ಚಿತ್ರದ ಹೆಸರಿನಿಂದಲೇ ನಗಿಸಿದ್ದಾರೆ. ಇಂಥದೊಂದು ಚಿತ್ರಕ್ಕೆ ಮಹಿಳಾ ನಿರ್ಮಾಪಕಿಯಾಗಿ ಪಾರ್ವತಿಯವರು ಕೈ ಜೋಡಿಸಿರುವುದು ಹೆಮ್ಮೆಯ ವಿಷಯ. ಸಿನಿಮಾ ಒಂದು ವಾರ ಓಡುವುದೇ ಕಷ್ಟ ಎನ್ನುವಂಥ ಈ ದಿನಗಳಲ್ಲಿ ಚಿತ್ರ ಯಶಸ್ವಿಯಾಗಿ 25 ದಿನಗಳ ಪ್ರದರ್ಶನದೊಂದಿಗೆ ಮುಂದುವರಿಯುವಂತಾಗಲಿ” ಎಂದು ಮನಸಾರೆ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಸಹ ನಿರ್ಮಾಪಕಿ ಪಾರ್ವತಿ, ಸತೀಶ್ ಗೌಡರು, ಪೋಷಕ ನಟಿಯರಾದ ರತ್ನ ಚಂದನಾ, ಬಬಿತಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಿತ್ರದ ಎರಡು ಹಾಡುಗಳು ಜತೆ ಟೀಸರ್ ಪ್ರದರ್ಶಿಸಲಾಯಿತು. ಆಡಿಯೋ ಬಿಡುಗಡೆ ಕಾರ್ಯಕ್ರಮದ ನಾಯಕನಾಗಿ ಉಪಸ್ಥಿತರಿರಬೇಕಾಗಿದ್ದ ಸಂಗೀತ ನಿರ್ದೇಶಕ ರವೀಶ್ ಬಂದಿರಲಿಲ್ಲ.

Recommended For You

Leave a Reply

error: Content is protected !!
%d bloggers like this: