ಶಿವಣ್ಣನ ಕೈಲಿ ‘ಗಾಂಧಿ ಮತ್ತು ನೋಟು’

ಈ ಹಿಂದೆ ಪ್ರಿಯಾಂಕ ಉಪೇಂದ್ರ ಅಭಿನಯದ ‘ಸೆಕೆಂಡ್ ಹಾಫ್’ ಚಿತ್ರ ನಿರ್ದೇಶಿಸಿದ್ದ ಯೋಗಿ ದೇವಗಂಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಹೊಸ ಚಿತ್ರ ‘ಗಾಂಧಿ ಮತ್ತು ನೋಟು’. ಚಿತ್ರದ ಟ್ರೇಲರ್ ಬಿಡುಗಡೆಯನ್ನು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನೆರವೇರಿಸಿದ್ದಾರೆ.

ಸಾಹಿತಿ ವಿ.ನಾಗೇಂದ್ರಪ್ರಸಾದ್ ಪುತ್ರಿ ದಿವಿಜಾ ನಾಗೇಂದ್ರಪ್ರಸಾದ್ ‘ಗಾಂಧಿ ಮತ್ತು ನೋಟು’ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಲೋಕೇಶ್‌ ಡಿ.ಕೆ, ಮುರುಧ್ಯ, ಪ್ರಜ್ಞಾ ಬ್ರಹ್ಮಾವರ್, ಕೆ.ಬಿ.ರವಿ, ರಂಗಸ್ವಾಮಿ, ನವೀನ್, ವಿಶಾಲ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಗಾಂಧಿ ತತ್ವಗಳನ್ನು ಹಾಗೂ ನೋಟನ್ನು ಈಗಿನ ಜನ ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂಬ ವಿಷಯವನ್ನು ಹಳ್ಳಿ ಹುಡುಗಿಯ ಪಾತ್ರದ ಮೂಲಕ ನಿರ್ದೇಶಕರು ಹೇಳಹೊರಟಿದ್ದಾರೆ. ಚಿಕ್ಕ ವಯಸ್ಸಿನ ಈ ಹುಡುಗಿ ಹೇಳುವ ಮಾತು ಎಲ್ಲಾವರ್ಗದ ಜನರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದೇ ಇದರ ಕಥಾಸಾರಾಂಶ.

ಸಿನಿಮಾದ ಚಿತ್ರೀಕರಣದ ಹೆಚ್ಚಿನ ಭಾಗವು ಸಾಗರದ ತುಂಬ್ರಿ ಎಂಬ ಸ್ಥಳದಲ್ಲೇ ನಡೆದಿದೆ. ಪ್ರಸ್ತುತ ಚಿತ್ರ ಡಿ ಐ ಕೆಲಸ ಶುರುವಾಗಿದೆ. ಮುಂದಿನ ತಿಂಗಳಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ. ವಿ.ನಾಗೇಂದ್ರಪ್ರಸಾದ್ ಅವರು ಬರೆದಿರುವ ಹಾಡುಗಳಿಗೆ ವಾಣಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಅಚ್ಚು ಸುರೇಶ್ ಛಾಯಾಗ್ರಹಣ, ವಸಂತಕುಮಾರ್ ಸಂಕಲನ ಹಾಗೂ ವಿ.ಎಲ್ ಸತೀಶ್ ಅವರ ಸಹನಿರ್ದೇಶನವಿರುವ ಈ ಚಿತ್ರಕ್ಕೆ ಗುರುಪ್ರಸಾದ್ ಚಂದ್ರಶೇಖರ್ ಸಂಭಾಷಣೆ ಬರೆದಿದ್ದಾರೆ.

ಭಾವನಾ ಕಂಬೈನ್ಸ್ ಲಾಂಛನದಲ್ಲಿ ಸುಧಾರಾಣಿ ಹೆಚ್.ಆರ್, ವೀಣಾ ಪದ್ಮನಾಭ, ಮಂಜುನಾಥ್ ಬಿ.ಎನ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

Recommended For You

Leave a Reply