ಅರುಣ್ ಸಾಗರ್ ಯಾರಿಗೆ ಗೊತ್ತಿಲ್ಲ ಹೇಳಿ? ಸಿನಿಮಾ ಕಲಾವಿದನಾಗಿ, ಕಲಾ ನಿರ್ದೇಶಕನಾಗಿ, ಕಿರುತೆರೆ ನಿರೂಪಕನಾಗಿ, ಬಿಗ್ ಬಾಸ್ ಸ್ಪರ್ಧಿಯಾಗಿ ಗುರುತಿಸಿಕೊಂಡವರು. ಅವರ ಮಗ ಪುತ್ರ ಸೂರ್ಯ ಸಾಗರ್, ಮ್ಯಾಕ್ಸ್ ನಲ್ಲಿ ಪ್ರಸಾರವಾಗುವ ಮುಐ ಥಾಯ್ ಎನ್ನುವ ಪಾಶ್ಚಾತ್ಯರ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಳೆದ ವರ್ಷವೇ ಸದ್ದು ಮಾಡಿದ್ದರು. ಇದೀಗ ಈ ಬಾರಿ ಮತ್ತೆ ಮುಐ ಥಾಯ್ ಟೈಟಲ್ ಗೆದ್ದುಕೊಂಡು ಸುದ್ದಿಯಾಗಿದ್ದಾರೆ. ಅಂದಹಾಗೆ ಸೂರ್ಯ ಸಾಗರ್ ಪ್ರತಿಭೆಗೆ ಕನ್ನಡದ ಬಹಳಷ್ಟು ತಾರೆಗಳು ಪ್ರೋತ್ಸಾಹದ ಮಾತನಾಡಿದ್ದು, ರಾಕಿಂಗ್ ಸ್ಟಾರ್ ಯಶ್ ಅಂತೂ ಒಮ್ಮೆ ಸ್ವತಃ ಪ್ರಾಯೋಜಕತ್ವ ವಹಿಸಿಕೊಂಡಿದ್ದರು! ಈ ಎಲ್ಲ ವಿಚಾರಗಳ ಬಗ್ಗೆ ಸಿನಿಕನ್ನಡದ ಜತೆಗೆ ಅರುಣ್ ಸಾಗರ್ ಮಾತನಾಡಿದ್ದಾರೆ.
ಪ್ರಥಮ ದಾಖಲೆ
ಅರುಣ್ ಸಾಗರ್ ಅವರು ನೀಡಿರುವ ಮಾಹಿತಿಯ ಪ್ರಕಾರ ಮುಐಥಾಯ್ ಕ್ರೀಡೆಯು ಥಾಯ್ಲ್ಯಾಂಡ್ ನ ಕಿರುತೆರೆಗಳಲ್ಲಿ ದಾಖಲೆ ನಿರ್ಮಿಸುವಷ್ಟು ಬೃಹತ್ ಮಟ್ಟದ ಜನಪ್ರಿಯತೆ ಪಡೆದಿದೆ. ಥಾಯ್ಲ್ಯಾಂಡ್ ನ ಪಟ್ಟಾಯದಲ್ಲಿ ನೆರವೇರುವಂಥ ಈ ಸ್ಪರ್ಧೆಯಲ್ಲಿ ಜಗತ್ತಿನ ಎಲ್ಲೆಡೆಯ ವೃತ್ತಿಪರ ಮುಐ ಥಾಯ್ ಫೈಟರ್ಸ್ ಮತ್ತು ಥಾಯ್ಲ್ಯಾಂಡ್ ನ ಶ್ರೇಷ್ಠ ಥಾಯ್ ಫೈಟರ್ಸ್ಸ್ ಸೇರುತ್ತಾರೆ. ಇಂಥದೊಂದು ಶೋನಲ್ಲಿ ಪ್ರಥಮ ಬಾರಿಗೆ ಭಾರತೀಯನೊಬ್ಬ ಪಾಲ್ಗೊಂಡಿದ್ದು 2015ರಲ್ಲಿ. ಆತನ ಹೆಸರು ಅಭಿಮಾನ್ ಠಾಕೂರ್. ಆದರೆ ಗೆಲುವಿನೊಂದಿಗೆ ಮುಂದುವರಿದಂಥ ಪ್ರಥಮ ಭಾರತೀಯರ ಪಟ್ಟಿಯಲ್ಲಿ ಸೂರ್ಯ ಸಾಗರ್ ಹೆಸರು ಸೇರುತ್ತದೆ.
ಇದೀಗ ಫೆಬ್ರವರಿ 16ರಂದು ನಡೆದ ಸ್ಪರ್ಧೆಯಲ್ಲಿ ಎದುರಾಳಿ ರೋಬೋಕಾಪ್ ನನ್ನು ಸೋಲಿಸಿ ಮೊದಲ ಸುತ್ತಿನಲ್ಲಿ ವಿಜೇತನಾಗಿ ಮುಐಥಾಯ್ ಟೈಟಲ್ ವಿನ್ನರ್ ಎಂದು ದಾಖಲೆ ಮಾಡಿದ್ದಾರೆ. ಇದುವರೆಗೆ ಥಾಯ್ ಮತ್ತು ಲಾವೋಸ್ ದೇಶಗಳ ಸ್ಪರ್ಧಿಗಳೊಂದಿಗೆ ಸೆಣಸಾಡಿ ಗೆದ್ದಿರುವ ಸೂರ್ಯ ಸಾಗರ್, ಈ ಬಾರಿ ಸೋಲಿಸಿರುವ ರೋಬೊಕಾಪ್ ಕೂಡ ಥಾಯ್ ನಿವಾಸಿ ಎನ್ನುವುದು ಗಮನಾರ್ಹ.
ವಿಭಿನ್ನ ಆಸಕ್ತಿಯ ಹುಡುಗ
“ನನ್ನ ಮಗನ ಬಗ್ಗೆ ಹೇಳಬೇಕೆಂದರೆ ಚಿಕ್ಕಂದಿನಿಂದಲೇ ವಿಭಿನ್ನ ಆಸಕ್ತಿಗಳೊಂದಿಗೆ ಬೆಳೆದವನು. ಮೂರು ವರ್ಷ ಇದ್ದಾಗಲೇ ಪ್ರಾಣಿಗಳ ಮೇಲೆ ಆಸಕ್ತಿ ತೋರಿಸುತ್ತಿದ್ದವನು. ಸಾಮಾನ್ಯ ಮಕ್ಕಳು ಭಯಪಡುತ್ತಿದ್ದಂಥ ಹುಳ, ಹುಪ್ಪಟೆ, ಹಾವುಗಳೆಂದರೆ ಇಷ್ಟಪಡುತ್ತಿದ್ದ. ಆಗಲೇ ನಿಮ್ಮ ಮಗ ಯಾಕೆ ಹೀಗೆ ಎನ್ನುವ ಪ್ರಶ್ನೆ ಉಳಿದವರಿಂದ ಶುರುವಾಗಿತ್ತು. ಆದರೆ ಆತನದು ಕೂಡ ಮನುಷ್ಯ ಸಹಜ ಆಸಕ್ತಿ ಎನ್ನುವ ಅರಿವಿದ್ದ ನಾವು ಆತಂಕಗೊಂಡಿರಲಿಲ್ಲ. ಯಾಕೆಂದರೆ ನನ್ನ ಪತ್ನಿ ಮೀರಾ `ವೃಕ್ಷ ಸ್ಕೂಲ್ ಆಫ್ ಫೈನ್ ಆರ್ಟ್ಸ್’ ಸ್ಥಾಪಿಸಿ ಮನೆಯಲ್ಲೇ ಚಿಕ್ಕದಾಗಿ ತರಗತಿ ನಡೆಸುತ್ತಾಳೆ. ಆಕೆ ಲಂಡನ್ ನಲ್ಲಿ ಪ್ರಾಸ್ತೆಟಿಕ್ ಮೇಕಪ್ ಕಲಿತಿದ್ದಾರೆ. ನನ್ನ ಮಗಳು ಮ್ಯೂಸಿಕ್ ನಲ್ಲಿ ಗಮನ ಕೇಂದ್ರೀಕರಿಸಿದ್ದಾಳೆ. ನನ್ನ ಆಸಕ್ತಿಗಳು ನಿಮಗೆ ಗೊತ್ತೇ ಇದೆ. ಇವನ ಆಯ್ಕೆ ಮಾತ್ರ ಆತನದ್ದೇ ಆಗಿತ್ತು!”
ಬಾಲ್ಯದಿಂದಲೇ ಏಟಾದ ಕಾಗೆಗಳಿಗೆ ಉಪಚಾರ ಮಾಡುತ್ತಾ ಅನಿಮಲ್ ಸೇವರ್ ಆಗಿ ಬೆಳೆದವನು. ಎಸ್ ಎಸ್ ಎಲ್ ಸಿ ಮುಗಿಸುವಷ್ಟರ ಹೊತ್ತಿಗಂತೂ ಸಮರಕಲೆಗಳ ಬಗ್ಗೆ ಆಸಕ್ತಿ ಹೊಂದಿದ್ದ. ಪಿಯುಸಿ ತಲುಪಿದಾಗ ತಾನು `ಮುಐಥಾಯ್’ನಲ್ಲಿಯೇ ಮುಂದುವರಿಯುತ್ತೇನೆ ಎನ್ನುವ ತೀರ್ಮಾನಕ್ಕೆ ಬಂದಿದ್ದ. ಮೊದಲು ಬೆಂಗಳೂರಲ್ಲಿ ಶುರು ಮಾಡಿದ. ಬಳಿಕ ಮೈಸೂರಲ್ಲಿ ಕೋಚ್ ವಿಕ್ರಮ್ ಅವರ ಬಳಿ ಎರಡು ವರ್ಷ ಕಲಿತು ನೇರ ಥಾಯ್ಲ್ಯಾಂಡ್ ಗೇನೇ ಹೋಗುವ ಆಸಕ್ತಿ ತೋರಿಸಿದ. ವಿಶೇಷ ಏನೆಂದರೆ ನಮಗ್ಯಾರಿಗೂ ಅಂಥ ಆಸಕ್ತಿಯ ಕ್ಷೇತ್ರ ಅದಾಗಿರಲಿಲ್ಲ! ನಾನು ರಂಗಾಯಣದಲ್ಲಿದ್ದಾಗ ಫಿಟ್ನೆಸ್ ಗಾಗಿ ಸ್ವಲ್ಪ ಸಮರ ಕಲೆಗಳನ್ನು ಹೇಳಿಕೊಡುತ್ತಿದ್ದರು. ಅದು ಬಿಟ್ಟರೆ ಮಗ ಚಿಕ್ಕ ಹುಡುಗನಾಗಿದ್ದಾಗಲೇ ಆತನಿಗೆ ಜಾಕಿಚಾನ್, ಬ್ರೂಸ್ ಲೀ ಸಿನಿಮಾಗಳನ್ನು ತೋರಿಸಿದ್ದೆ. ಬಹುಶಃ ಇದರಿಂದಲೇ ಒಳಗೆ ಸ್ಫೂರ್ತಿ ಉಂಟಾಯಿತೇನೋ ಗೊತ್ತಿಲ್ಲ. ಒಟ್ಟಿನಲ್ಲಿ ಆತನ ಆಸಕ್ತಿಗೆ ಪ್ರೋತ್ಸಾಹ ನೀಡಲಿಕ್ಕಾಗಿ ಮುಐಥಾಯ್ ಕಲಿಕೆಗೆ ವಿದೇಶಕ್ಕೆ ಕಳಿಸಲು ತಯಾರಾದೆವು. ಆದರೆ ಇಂದು ತುಂಬ ಡೇಂಜರಸ್ ಸಮರ ಕಲೆ ಎಂದು ಗೊತ್ತಿದ್ದ ಕಾರಣ ಒಳಗೊಳಗೆ ಸ್ವಲ್ಪ ಆತಂಕವೂ ಇತ್ತು. ಅದಕ್ಕೆ ಸರಿಯಾಗಿ ಪರಿಚಿತರೆಲ್ಲ “ಯಾಕೆ ಈ ರೀತಿ ಅವನ ಇಷ್ಟದ ಹಾಗೆ ಬಿಡುತ್ತೀರಿ? ಡಾಕ್ಟರೋ ಇಂಜಿನಿಯರೋ ಮಾಡೋದು ಬಿಟ್ಟು..” ಎಂದು ಕೇಳು! ಆದರೆ, ಮಗನ ಒತ್ತಡವನ್ನು ಗಮನಿಸಿದ ನನ್ನ ಪತ್ನಿ, “ಹೋಗಲಿ; ಅವನಿಗೆ ಇಷ್ಟಅಂದರೆ ಪೆಟ್ಟು ತಿನ್ನಲಿ ಬಿಡಿ” ಎಂದಿದ್ದಳು!
ಈಗಂತೂ ತರಬೇತಿಗಾಗಿ ಎರಡು ತಿಂಗಳಿಗೊಮ್ಮೆ ಥಾಯ್ ಲ್ಯಾಂಡ್ ಗೆ ಹೋಗಿ ಬರುವುದು ಇದ್ದೇ ಇರುತ್ತದೆ. ಹಾಗಾಗಿ ನಮ್ಮ ಕೈಯಿಂದಲೇ ಖರ್ಚು ಮಾಡಬೇಕಾದ ಅನಿವಾರ್ಯತೆಯೂ ಇದೆ.
ಸ್ವತಃ ಬೆಂಬಲಿಸಿದ ಯಶ್
“ಯಶ್ ಅವನನ್ನು ಎನ್ಕರೇಜ್ ಮಾಡುತ್ತಿರುತ್ತಾರೆ. ಆಕ್ಚುವಲಿ ನಮಗೆ ಪ್ರತಿ ಬಾರಿ ಅಲ್ಲಿಗೆ ಹೋಗುವಾಗಲೂ ಒಂದಷ್ಟು ಖರ್ಚುಗಳು ಬರುತ್ತವೆ. ಈ ಸ್ಪರ್ಧೆಗಳಲ್ಲಿ ವಿಜೇತನಾದಾಗ ಒಂದು ಹೆಸರು ಮಾಡೋದು ಬಿಟ್ಟು ಬೇರೇನೂ ಲಾಭಗಳಿರುವುದಿಲ್ಲ. ಪ್ರತಿಬಾರಿಯೂ ನಾನೇ ಕಳಿಸಿಕೊಡುತ್ತೇನೆ. ಒಂದು ಬಾರಿ ಮಾತ್ರ ಯಶ್ ತಮ್ಮ `ಯಶೋಮಾರ್ಗ’ದ ಮೂಲಕ ಕಳಿಸಿಕೊಟ್ಟಿದ್ದರು. ಆಗಲೂ ವಿಜಯಿಯಾಗಿ ಗುರುತಿಸಿಕೊಂಡಿದ್ದ. ಬೆನಕ ಬಿಲ್ಡರ್ಸ್ ನ ನರಹರಿ ಮತ್ತು ಪಪ್ಪಿ ಎನ್ನುವವರು ಕೂಡ ಪ್ರಾಯೋಜಕತ್ವ ವಹಿಸಿ ಪ್ರೋತ್ಸಾಹಿಸಿದ್ದರು. ಕಿಚ್ಚ ಸುದೀಪ್, ಅರ್ಜುನ್ ಸರ್ಜಾ, ಧ್ರುವ ಸರ್ಜಾ ಸೇರಿದಂತೆ ಹಲವರು ಸೂರ್ಯ ಸಾಗರ್ ಪ್ರತಿಭೆಯ ಬಗ್ಗೆ ಅರಿತು ಶುಭ ಕೋರಿದ್ದರು” ಎಂದು ಈ ಹಿಂದೆ ಸಿಕ್ಕ ಬೆಂಬಲವನ್ನು ಸ್ಮರಿಸುತ್ತಾರೆ ಅರುಣ್ ಸಾಗರ್.
ನಿಜಕ್ಕೂ ಇದು ಅರುಣ್ ಸಾಗರ್ ರಂಥ ತಂದೆಯಂದಿರಿಗೆ ಮಾತ್ರವಲ್ಲ, ಪ್ರತಿಯೊಬ್ಬ ಭಾರತೀಯರಿಗೂ ಖುಷಿ ತರುವಂಥ ವಿಚಾರ. ಇಂಥ ಪ್ರತಿಭೆಗೆ ಸರ್ಕಾರದ ಕಡೆಯಿಂದ ಪೂರಕ ಸೌಲಭ್ಯ ದೊರಕಿದಾಗ ಸಾಧನೆಗೆ ಮತ್ತು ಸಾಧಕನ ಪ್ರಯತ್ನಕ್ಕೆ ಅರ್ಥ ದೊರಕಿದಂತಾಗುತ್ತದೆ.