‘ಆರ್ ಡಿ ಎಕ್ಸ್’ ಎಂದರೆ ಅದು ನಾಯಕ ಹೆಸರು. ಆರ್. ಡಿ ಕ್ಸೇವಿಯರ್ ಎನ್ನುವ ಆತ ಒಬ್ಬ ಪೊಲೀಸ್ ಅಧಿಕಾರಿಯಾಗಿರುತ್ತಾನೆ. ಆತ ಎಷ್ಟು ಪವರ್ ಫುಲ್ ಎನ್ನುವುದರ ಸೂಚನೆಯಾಗಿ ಆರ್ ಡಿ ಎಕ್ಸ್ ಎಂದೇ ಕರೆಯಲಾಗುತ್ತದೆ ಎಂದರು ಶಿವರಾಜ್ ಕುಮಾರ್. ಅವರು ಇಂದು ಬೆಳಿಗ್ಗೆ ಕಂಠೀರವ ಸ್ಟುಡಿಯೋದಲ್ಲಿ ನಡೆದ ‘ಆರ್ ಡಿ ಎಕ್ಸ್’ ಚಿತ್ರದ ಮುಹೂರ್ತ ಸಮಾರಂಭದ ಬಳಿಕ ಮಾಧ್ಯಮ ಜತೆಗೆ ಮಾತನಾಡುತ್ತಿದ್ದರು.
“ಚಿಕ್ಕ ವಯಸ್ಸಿನಲ್ಲಿ ಕಳ್ಳ ಪೊಲೀಸ್ ಆಟದಲ್ಲಿ ಯಾವಾಗಲೂ ಪೊಲೀಸ್ ಪಾತ್ರ ಬಯಸುವವರೇ ಹೆಚ್ಚು. ಯಾಕೆಂದರೆ ಆ ಖದರ್ರೇ ಹಾಗೆ. ನನಗೆ ಸಿನಿಮಾದಲ್ಲಿ ಕೂಡ ಅದು ಕೂಡಿ ಬಂದಿದೆ! ಇನ್ಸ್ಪೆಕ್ಟರ್ ವಿಕ್ರಂನಲ್ಲಿ ಹಾಸ್ಯ, ಟಗರುನಲ್ಲಿ ಧೈರ್ಯ.. ಈಗ ಇದರಲ್ಲಿ ಸಬ್ಜೆಕ್ಟೇ ಬಾಂಬ್ ನಂತೆ ಎಂದರು. ಹಾಗಂತ ಇಲ್ಲಿ ಭಾವನಾತ್ಮಕ ದೃಶ್ಯಗಳಿಗೆ ಕೊರತೆ ಇಲ್ಲ. ಸ್ನೇಹಿತನ ಜತೆಗಿನ ಆತ್ಮೀಯ ಸಂಬಂಧದ ದೃಶ್ಯಗಳು ಸಾಂಸಾರಿಕ ಪ್ರೇಕ್ಷಕರಿಗೆ ಪ್ರಿಯವಾಗುತ್ತವೆ. ನಿರ್ದೇಶಕರು ಕತೆ ಹೇಳುವ ರೀತಿ ಕೇಳುವಾಗಲೇ ನನಗೆ ಪಾತ್ರದೊಳಗೆ ಪ್ರವೇಶಿಸಿದಂಥ ಅನುಭವವಾಗುತ್ತದೆ” ಎಂದು ಶಿವಣ್ಣ ವಿವರಿಸಿದರು.
ನಿರ್ದೇಶಕ ರವಿ ಅರಸು ಅವರ ‘ಈಟಿ’ ಸಿನಿಮಾ ನೋಡಿರುವುದಾಗಿ ಹೇಳಿದ ಶಿವಣ್ಣ ನಿರ್ಮಾಪಕರ ಬಗ್ಗೆ ಕೂಡ ಮಾತನಾಡಿದರು. “ಇವರು ಕಮಲಹಾಸನ್ ಚಿತ್ರ ನಿರ್ಮಾಣದ ಮೂಲಕ ಇಂಡಸ್ಟ್ರಿಗೆ ಕಾಲಿಟ್ಟವರು. ನಾನು ಮೊದಲೇ ಕಮಲಹಾಸನ್ ಫ್ಯಾನ್. ಅವರ ಚಿತ್ರಗಳನ್ನು ಹತ್ತಾರು ಬಾರಿ ನೋಡುತ್ತಿದ್ದೆ. ಅದರಲ್ಲೂ ಇವರ ನಿರ್ಮಾಣದ ‘ಮೂನ್ರಾಂ ಪಿರೈ’ ಚಿತ್ರವನ್ನು ಸುಮಾರು 25ಬಾರಿ ನೋಡಿದ್ದೆ. ಇದೀಗ ಅದೇ ಸಂಸ್ಥೆ ನಿರ್ಮಿಸುತ್ತಿರುವ ಚಿತ್ರದಲ್ಲಿ ನಾಯಕನಾಗಿದ್ದೇನೆ. ವರ್ಷದ ಹಿಂದೆ ಇವರು ತಾವೇ ನಿರ್ಮಿಸಿದ್ದ ಅಜಿತ್ ನಟನೆಯ ‘ವಿಸ್ವಾಸಂ’ ಚಿತ್ರದ ರಿಮೇಕ್ ನಲ್ಲಿ ನಟಿಸುವಂತೆ ನನಗೆ ಆಫರ್ ನೀಡಿದ್ದರು. ಆದರೆ ನಾನು ಒರಿಜಿನಲ್ ಸಬ್ಜೆಕ್ಟ್ ಮಾಡಿದರೆ ಚೆನ್ನಾಗಿತ್ತು ಎಂದು ಸೂಚಿಸಿದ್ದೆ. ಅದರಂತೆ ಈ ‘ಆರ್ ಡಿ ಎಕ್ಸ್’ ಕತೆಯೊಂದಿಗೆ ಬಂದಿದ್ದಾರೆ. ಚಿತ್ರದಲ್ಲಿ ಒಂದೊಳ್ಳೆಯ ಮೆಸೇಜ್ ಇದೆ. ಅದು ರಾಷ್ಟ್ರ ಮಟ್ಟದ ತನಕ ಹರಡಬಹುದು. ಆದರೆ ಜನರನ್ನು ತಲುಪುವುದು ಬಿಡುವುದು ಎಲ್ಲವೂ ಮೇಕಿಂಗ್ ನಲ್ಲಿದೆ” ಎಂದರು.
ಮೂರು ದಶಕಗಳ ಹಿಂದೆ ವಿಷ್ಣುವರ್ಧನ್ ಅವರಿಗೆ ‘ಸತ್ಯಜ್ಯೋತಿ’ ಎನ್ನುವ ಚಿತ್ರ ನಿರ್ಮಿಸಿದ್ದಂಥ ತಮಿಳಿನ ಖ್ಯಾತ ‘ಸತ್ಯಜ್ಯೋತಿ’ ನಿರ್ಮಾಣ ಸಂಸ್ಥೆ ಈ ಚಿತ್ರವನ್ನು ನಿರ್ಮಿಸುತ್ತಿದೆ. ನಿರ್ಮಾಪಕ ಸೆಂದಿಲ್ ತ್ಯಾಗರಾಜನ್ ಮಾತನಾಡಿ, “ಬಹಳ ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಬಂದಿದ್ದೇವೆ. ಅದಕ್ಕೆ ನಾವು ತಮಿಳು ಚಿತ್ರಗಳ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದೇ ಕಾರಣ. ತಮಿಳಲ್ಲಿ ನಮಗೆ ಆರಂಭದಿಂದಲೇ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳು ಸಿಕ್ಕವು. ನಿರ್ದೇಶಕ ಮಣಿರತ್ನಂ ಅವರನ್ನು ತಮಿಳು ಚಿತ್ರರಂಗಕ್ಕೆ ಇಂಟ್ರಡ್ಯೂಸ್ ಮಾಡಿದ್ದು ನಾವೇ” ಎಂದರು. ಈ ಚಿತ್ರವನ್ನು ಅವರು ಪುತ್ರ ಅರ್ಜುನ್ ತ್ಯಾಗರಾಜನ್ ಜತೆ ಸೇರಿ ಮಾಡುತ್ತಿದ್ದಾರೆ. ಚಿತ್ರದಲ್ಲಿ ಶಿವಣ್ಣನಿಗೆ ನಾಯಕಿಯಾಗಿ ‘ರಾಜ ಕುಮಾರ’ ಫೇಮ್ ಪ್ರಿಯಾಆನಂದ್ ನಟಿಸಲಿದ್ದಾರೆ.
“ನಮಗೂ ಶಿವರಾಜ್ ಕುಮಾರ್ ಅವರಿಗೂ ಒಂದು ಸಂಬಂಧವಿದೆ. ಅವರು ಬಾಲ್ಯ ಕಳೆದಿದ್ದು ಚೆನ್ನೈನಲ್ಲಿ ಎಂದು ನಿಮಗೆಲ್ಲರಿಗೂ ಗೊತ್ತು. ಆಗ ನನ್ನ ಬ್ರದರ್ ಇನ್ ಲಾ ಮಗ ಮತ್ತು ಅವರು ಸ್ಕೂಲ್ ಮೇಟ್ ಆಗಿದ್ದರು. ಈಗ ನನ್ನ ಮಗ ಅರ್ಜುನ್ ಮೂಲಕ ಅವರನ್ನು ಮತ್ತೆ ಸಂಪರ್ಕಿಸಿದ್ದೇವೆ” ಎಂದರು.
ಏಪ್ರಿಲ್ 6ರಿಂದ ಶೂಟಿಂಗ್ ಶುರು
ಚಿತ್ರವನ್ನು ಬೆಂಗಳೂರು, ನೆಲಮಂಗಲ, ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ ಕರ್ನಾಟಕದ ಹೊರಭಾಗದಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಭೋಪಾಲ್ ಮೊದಲಾದೆಡೆ ಚಿತ್ರೀಕರಿಸಲು ಯೋಜನೆ ಹಾಕಲಾಗಿದೆ. ಏಪ್ರಿಲ್ 6ರಿಂದ ಚಿತ್ರೀಕರಣ ಶುರುವಾಗಲಿದೆ ಎಂದು ನಿರ್ದೇಶಕ ರವಿ ಅರಸು ತಿಳಿಸಿದರು.
ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಲಿರುವ ತಮಿಳು ನಟ ಪವನ್, ಛಾಯಾಗ್ರಾಹಕ ಸರವಣನ್ ಅಭಿಮನ್ಯು, ಸಂಗೀತ ನಿರ್ದೇಶಕ ಚರಣ್ ರಾಜ್, ನಿರ್ದೇಶಕ ಉಲ್ಲಾಸ್ ಮೊದಲಾದವರು ಮಾಧ್ಯಮಗೋಷ್ಠಿಯಲ್ಲಿ ಹಾಜರಿದ್ದರು.
ಮುಹೂರ್ತ ಸಮಾರಂಭವು ಪೊಲೀಸ್ ಕಮಿಷನರ್ ಭಾಸ್ಕರ ರಾವ್ ಮತ್ತು ಪುನೀತ್ ರಾಜ್ ಕುಮಾರ್ ಉಪಸ್ಥಿತಿಯೊಂದಿಗೆ ಸಾಂಗವಾಗಿ ನೆರವೇರಿತ್ತು.