
ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆಗೆ ಒಳಗಾದ ಕೆಲವರು ದೃಷ್ಟಿ ಕಳೆದುಕೊಂಡಿದ್ದರು. ಇದನ್ನು ಪ್ರಶ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಅಶ್ವಿನಿ ಗೌಡ ಕಾರ್ಯಕರ್ತರೊಂದಿಗೆ ಆಸ್ಪತ್ರೆಗೆ ತೆರಳಿ ಪ್ರತಿಭಟಿಸಿದ್ದರು. ಕೊನೆಗೆ ವೈದ್ಯರೇ ಕರವೇ ಕಾರ್ಯಕರ್ತರ ವಿರುದ್ಧ ಪ್ರತಿಭಟಿಸುವ ಹಂತಕ್ಕೆ ಘಟನೆ ಹೋಗಿತ್ತು. ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಅಶ್ವಿನಿಯವರ ವಿರುದ್ಧ ಪ್ರಕರಣ ದಾಖಲಾಗಿ ಅವರು ಶರಣಾಗಿದ್ದು ಆಯಿತು. ಆದರೆ ಇದೀಗ ತಮ್ಮ ಹೋರಾಟ ಮುಂದುವರಿದೆ ಎಂದು ಅಶ್ವಿನಿಯವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅವರು ಮಾಧ್ಯಮಗಳಿಗೆ ನೀಡಿರುವ ವಿಡಿಯೋ ತುಣುಕಿನಲ್ಲಿ ಈ ವಿಚಾರ ಸ್ಪಷ್ಟಪಡಿಸಿದ್ದು, “ಮಿಂಟೋ ಆಸ್ಪತ್ರೆಯ ಹೋರಾಟದ ಮುಂದುವರೆದ ಭಾಗವಾಗಿ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಕರ್ನಾಟಕ ರಕ್ಷಣಾ ವೇದಿಕೆಯು ಹೈಕೋರ್ಟ್ ಮೊರೆ ಹೋಗಲಿರುವುದಾಗಿ ತಿಳಿಸಿದ್ದಾರೆ.
ಅಶ್ವಿನಿ ಗೌಡ ಅವರು ಹೋರಾಟಗಾರ್ತಿಯಷ್ಟೇ ಅಲ್ಲದೆ ನಟಿಯಾಗಿ ಬೆಳ್ಳಿತೆರೆ, ಕಿರುತೆರೆಗಳ ಮೂಲಕವೂ ಗಮನ ಸೆಳೆದವರು. ಅವರ ಸಾಮಾಜಿಕ ಕಾಳಜಿಯ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದ್ದು, ಹೋರಾಟಕ್ಕೆ ವ್ಯಾಪಕವಾದ ಬೆಂಬಲ ದೊರಕಿದೆ.