ಜಗದ್ ಜ್ಯೋತಿ ಮೂವಿ ಮೇಕರ್ಸ್ ಲಾಂಛನದಲ್ಲಿ ಬರುತ್ತಿರುವ ಚಿತ್ರ ‘ದ ಚೆಕ್ ಮೇಟ್’ ಸಿನಿಮಾದ ಟೀಸರ್ ಲಾಂಚ್ ಕಾರ್ಯಕ್ರಮ ನಗರದ ಸಿಟಡಲ್ ಹೋಟೆಲ್ ನಲ್ಲಿ ನೆರವೇರಿತು.
ಚಿತ್ರದ ನಿರ್ಮಾಪಕ ಮತ್ತು ನಾಯಕರಾಗಿರುವ ರಂಜನ್ ಹಾಸನ್ ಮಾತನಾಡಿ, ‘ಈ ಹಿಂದೆ ನಾನು ‘ಪಾರು ಐ ಲವ್ ಯು’ ಚಿತ್ರ ಮಾಡಿದ್ದೆ. ಅದು ನನ್ನ ನಿರೀಕ್ಷೆಯ ಗೆಲುವು ಕಾಣಲಿಲ್ಲ. ಅದರಿಂದ ಗಾಂಧಿನಗರದಲ್ಲಿ ಕಲಿತ ಪಾಠ ದೊಡ್ಡದು. ಆಗ ಕಂಟೆಂಟ್ ಓರಿಯಂಟ್ ಸಿನಿಮಾ ಮಾಡಲು ಹುಡುಕಿದ ಹಲವಾರು ಕತೆಗಳಲ್ಲಿ ಭಾರತೀಶ್ ವಸಿಷ್ಠ ಅವರ ಕತೆ ನನ್ನ ಬಜೆಟ್ ಗೆ ಹೊಂದಿಕೊಂಡಿತು. ಕತೆ ಕೇಳಿ ಮೊದಲು ವಿಜಯ್ ಚೆಂಡೂರ್ ಅವರೊಂದಿಗೆ ಮಾತನಾಡಿ ನಮ್ಮ ತಂಡಕ್ಕೆ ಸೇರಿಸಿದೆ. ಬಳಿಕ ಒಬ್ಬೊಬ್ಬರನ್ನೇ ಸೇರಿಸಿ ಈಗ ಟೀಮ್ ಇಷ್ಟು ದೊಡ್ಡದಾಗಿದೆ” ಎಂದರು. ಚಿತ್ರತಂಡದಲ್ಲಿ ಸರ್ದಾರ್ ಸತ್ಯ, ಪ್ರದೀಪ್ ಪೂಜಾರಿ, ಅಮೃತಾ ನಾಯರ್, ಕಾಕ್ರೋಚ್ ಸುಧಿ, ವಿಶ್ವ ವಿಜೇತ್, ಕೆ ಎಲ್ ರಾಜ ಶೇಖರ್ ಹೀಗೆ ಕಲಾವಿದರ ಪಟ್ಟಿ ದೊಡ್ಡದಾಗಿದೆ.
“ಈ ಚಿತ್ರದಲ್ಲಿ ಎಲ್ಲ ಜಾನರ್ ಇದೆ. ಲವ್, ಕಾಮಿಡಿ, ಎಂಟರ್ಟೈನ್ಮೆಂಟ್ ಎಲಿಮೆಂಟ್ ಗಳೆಲ್ಲವೂ ಇದೆ. ನನಗೆ ಚಿತ್ರ ನೋಡುವಾಗ ಸಂತೃಪ್ತಿ ಸಿಕ್ಕಿದೆ. ಸಿನಿಮಾ ಸೆನ್ಸಾರ್ ಹಂತದಲ್ಲಿದೆ. ಬ್ರೇಕಪ್ ಪಾರ್ಟಿ ಮಾಡಲು ಹೋದ ನಾಲ್ಕು ಜನ ಸ್ನೇಹಿತರು ಒಂದು ಚದುರಂಗದಾಟದ ಬಲೆಯಲ್ಲಿ ಸಿಕ್ಕಿಕೊಳ್ಳುತ್ತಾರೆ. ಮುಂದೇನಾಗುತ್ತದೆ ಎನ್ನುವುದೇ ಚಿತ್ರ” ಎಂದರು ನಿರ್ದೇಶಕ ಭಾರತೀಶ್ ವಸಿಷ್ಠ. ಅಂದಹಾಗೆ ಚಿತ್ರದ ಕತೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಇಬ್ಬರು ಹಂಚಿಕೊಂಡಿದ್ದು, ಇನ್ನೊಬ್ಬರ ಹೆಸರು ಸಂತೋಷ್ ಚಿಪ್ಪಾಡಿ. ಚಿತ್ರ ಪೂರ್ತಿ ಬೆಂಗಳೂರಲ್ಲಿ ಚಿತ್ರೀಕರಿಸಲಾಗಿದೆ.
ಒಂದೆರಡು ಕಿರುಚಿತ್ರಗಳನ್ನು ಮಾಡಿದ್ದು ಬಿಟ್ಟರೆ ಸಿನಿಮಾ ನಿರ್ದೇಶಿಸಿ ಗೊತ್ತಿರಲಿಲ್ಲ. ಯೂ ಟ್ಯೂಬ್, ಗೂಗಲ್ ಮೂಲಕ ಚಿತ್ರ ಮಾಡುವುದನ್ನು ಕಲಿತು ಕಿರುಚಿತ್ರ ಮಾಡಿದ್ದೆವು. ಈ ಸಿನಿಮಾದಲ್ಲಿ ನಾನ್ ಲೀನಿಯರ್ ನರೇಶನ್ ಇರುತ್ತದೆ. ಹಾಗಾಗಿ ಫ್ಲ್ಯಾಶ್ ಬ್ಯಾಕ್ ಬರುತ್ತಿರುತ್ತದೆ ಎಂದು ಸಂತೋಷ್ ಚಿಪ್ಪಾಡಿ ತಿಳಿಸಿದರು.
ಛಾಯಾಗ್ರಾಹಕ ಸತೀಶ್ ರಾಜೇಂದ್ರನ್ ಈ ಹಿಂದೆ ‘ಇದೀಗ ಬಂದ ಸುದ್ದಿ’ ಚಿತ್ರದಲ್ಲಿ ಕೆಲಸ ಮಾಡಿದ್ದೆ ಎಂದರು. ಇದರಲ್ಲಿ 15ನಿಮಿಷಗಳ ಒಂದು ಶಾಟ್ ಇರುವುದು ವಿಶೇಷ. ಪ್ರದೀಪ್ ತಾವು ಸಾತ್ವಿಕ್ ಎನ್ನುವ ಕುಡುಕನಾಗಿ ನಟಿಸಿದ್ದೇನೆ ಎಂದರೆ, ತಮ್ಮದು ನಾಯಕ ರಂಜನ್ ನ ಸ್ನೇಹಿತನ ಪಾತ್ರ ಎಂದು ಕೆ ಎಲ್ ರಾಜಶೇಖರ್ ಹೇಳಿದರು. ಅಂದಹಾಗೆ ವಿಜಯ್ ಚೆಂಡೂರ್ ಆದಿ ಮಾನವ ಎಂದು ಕರೆಸಿಕೊಳ್ಳುವ ‘ಆದಿ’ಯ ಪಾತ್ರ ಮಾಡಿದ್ದಾರಂತೆ. ಚಿತ್ರದ ನಾಲ್ಕು ಜನ ಪ್ರಮುಖ ಪಾತ್ರಗಳಲ್ಲಿ ನಾನೂ ಒಬ್ಬ ಎಂದು ಅವರು ತಿಳಿಸಿದರು.
ಚಿತ್ರದ ನಾಯಕಿ ಪ್ರೀತು ಪೂಜಾ ಮೂಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ತಮಗೆ ಇಟ್ಟಿರುವ ಮೌನ ಎನ್ನುವ ಹೆಸರು ಅರ್ಥಪೂರ್ಣವಾಗಿದೆ ಎಂದರು.