ಇಂದು ಪ್ರಥಮ್ ಜನ್ಮದಿನ. ಅವರು ಖುಷಿಯಲ್ಲಿದ್ದರು. ತಮ್ಮ ಖುಷಿ ಹೆಚ್ಚಿಸಿಕೊಳ್ಳಲು ಹೊಸ ಚಿತ್ರದ ಹೆಸರು ಘೋಷಣೆ ಮಾಡಿದರು. ಅವರ ಖುಷಿ ದುಪ್ಪಟ್ಟಾಗುವ ಹಾಗೆ ಅಭಿಷೇಕ್ ಗೌಡ ಬಂದು ಶುಭಕೋರಿದರು. ಅಪರೂಪದ ಅತಿಥಿಯಾಗಿ ಬಂದ ಅಭಿಷೇಕ್ ಅವರನ್ನು ಪ್ರಥಮ್ ಅಷ್ಟೇ ಆದರದಿಂದ ಸನ್ಮಾನಿಸಿ ಗೌರವಿಸಿದರು.
ಚರ್ಚೆ ಶುರುಮಾಡಿದರೆ ಎದುರಾಳಿಯ ಪಾರ್ಟ್ಸ್ ಶೇಕಾಗುವ ತನಕ ವಾದಿಸಬಲ್ಲ ಪ್ರಥಮ್ ಮತ್ತು ತಂದೆಯಂತೆ ಒಂದೇ ಹೂಂಕಾರದಲ್ಲಿ ಇತರರ ಮಾತಿಗೆ ಬ್ರೇಕ್ ಹಾಕಬಲ್ಲ ಅಭಿಷೇಕ್! ಇವರಿಬ್ಬರು ಜತೆ ಸೇರಿದರೆ ಆ ಸಮಾರಂಭ ಹೇಗಾಗಬಹುದು? ನಿಮ್ಮ ಕಲ್ಪನೆಗೆ ಸ್ವಲ್ಪವೂ ಕುಂದುಂಟಾಗದ ಹಾಗೆ ರಂಜನೀಯವಾದ ಪ್ರೆಸ್ಮೀಟ್ ಗೆ ಸಾಕ್ಷಿಯಾಯಿತು ಎಸ್ .ಆರ್.ವಿ ಸಭಾಭವನ. ಸುಮ್ಸುಮ್ಮನೇ ಯಾರ ಆಹ್ವಾನವನ್ನು ಮನ್ನಿಸದ ನಟ ಅಭಿಷೇಕ್ ಗೌಡ ಪ್ರಥಮ್ ಗೆ ಪ್ರಥಮ ಆದ್ಯತೆ ನೀಡಿ ಆಗಮಿಸಿದ್ದರು. ಆ ಮೂಲಕ ತಂದೆ ಅಂಬರೀಷ್ ಅವರಂತೆ ತಮಗೂ ಸ್ನೇಹದ ಭಾಷೆ ಹೃದಯಕ್ಕೆ ಹತ್ತಿರ ಎಂದು ಅಭಿ ತೋರಿಸಿಕೊಟ್ಟರು. ಪ್ರಥಮ್ ಅವರ ಹೊಸ ಚಿತ್ರದ ಫಸ್ಟ್ ಲುಕ್ ಲಾಂಚ್ ಮಾಡಿ ಶುಭಕೋರಿದರು.
ಪ್ರಥಮ್ ಈಗ ’99ಲಕ್ಷಕ್ಕೊಬ್ಬ’
ಹೌದು; ಪ್ರಥಮ್ ಅವರು ತಮ್ಮ ಹೊಸ ಸಿನಿಮಾಗೆ ಇಟ್ಟಂಥ ಹೆಸರು ಇದು! ಸಂಪೂರ್ಣವಾಗಿ ಕ್ರಿಕೆಟ್ ಬೆಟ್ಟಿಂಗ್ ಕುರಿತಾದ ಕತೆ. ಬೆಟ್ಟಿಂಗ್ ಎನ್ನುವುದು ಇಂದು ವಿದ್ಯಾರ್ಥಿಗಳಿಗೂ ಹಬ್ಬಿಕೊಂಡಿದೆ. ಅದರ ಕುರಿತಾದ ಕತೆ ಇದು. ಅಂದಹಾಗೆ ಈ ಚಿತ್ರದಲ್ಲಿ ಬಾಲಿವುಡ್ ನ ಸುಪರ್ ಸ್ಟಾರ್ ಒಬ್ಬರು ನಟಿಸಲಿದ್ದಾರೆ. ಅವರು ದಕ್ಷಿಣದ ಸಿನಿಮಾಗಳಲ್ಲಿ ಪ್ರಥಮ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ಪೊಲೀಸ್ ಕಮಿಷನರ್ ಪಾತ್ರಕ್ಕಾಗಿ ಅವರ ಜತೆಗೆ ಮಾತುಕತೆ ನಡೆಯುತ್ತಿದೆ. ಪೂರ್ತಿಯಾಗಿ ಕನ್ಫರ್ಮ್ ಆದಮೇಲೆ ಅವರ ಹೆಸರನ್ನು ಪ್ರಕಟಿಸಲಿದ್ದೇನೆ ಎಂದರು.
ನಿರ್ಮಾಪಕ ನೀಲೇಶ್ ಮಾತನಾಡಿ, ಈ ಹಿಂದೆ ನಾನು ‘ಪಾದರಸ’ ಚಿತ್ರಕ್ಕೆ ಕೊ ಪ್ರೊಡ್ಯೂಸರ್ ಆಗಿದ್ದೆ. ಪ್ರಥಮ್ ಜತೆಗೆ ಒಂದು ಒಳ್ಳೆಯ ಕ್ವಾಲಿಟಿ ಸಿನಿಮಾ ಮಾಡಬೇಕು ಎನ್ನುವ ಕಾರಣಕ್ಕಾಗಿ ಒಂದೂವರೆ ವರ್ಷಗಳಿಂದ ಪ್ಲ್ಯಾನ್ ಮಾಡಿರುವ ಚಿತ್ರ ಇದು ಎಂದರು.
ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಮಾಧ್ಯಮಗೋಷ್ಠಿಯಲ್ಲಿ ಒಬ್ಬರಷ್ಟೇ ಲಭ್ಯರಿದ್ದರು. ತಮ್ಮನ್ನು ನೀಹಾರಿಕಾ ಶೆಣೈ ಎಂದು ಪರಿಚಯಿಸಿಕೊಂಡ ಅವರು ‘ತಮಗೆ ಈ ಹಿಂದೆ ರಿಯಾಲಿಟಿ ಶೋ ಮೂಲಕ ಪ್ರಥಮ್ ಅವರು ಪರಿಚಯವಾಗಿದ್ದು, ‘ನಟ ಭಯಂಕರ’ ಚಿತ್ರದ ಬಳಿಕ ಇದು ಅವರೊಂದಿಗೆ ನಟಿಸುತ್ತಿರುವ ಎರಡನೇ ಚಿತ್ರ’ ಎಂದರು. ಸಂಗೀತ ನಿರ್ದೇಶಕ ಪ್ರದ್ಯೋತನ್ ಇದು ಕನ್ನಡದಲ್ಲಿ ತಮಗೆ ಐದನೇ ಸಿನಿಮಾ ಎಂದರು. ತೆಲುಗುವಿನಲ್ಲಿ ರಾಮ್ ಗೋಪಾಲ್ ವರ್ಮ ಅವರ ‘ಐಸ್ಕ್ರೀಂ’ ಚಿತ್ರಕ್ಕೆ ಸಂಗೀತ ನೀಡಿದ ಅನುಭವ ಇರುವುದನ್ನು ಸ್ಮರಿಸಿಕೊಂಡರು. ಚಿತ್ರದಲ್ಲಿ ಪಾತ್ರ ಮಾಡುತ್ತಿರುವ ಹಿರಿಯ ನಟ ಉಮೇಶ್ ಅವರಿಗೆ ಈ ಸಂದರ್ಭದಲ್ಲಿ ಅಭಿಷೇಕ್ ಅವರು ಸನ್ಮಾನಿಸಿದರು. ’99 ಲಕ್ಷಕ್ಕೊಬ್ಬ’ ಚಿತ್ರದ ಟೀಸರ್ ಬಿಡುಗಡೆಗೊಳಿಸುವುದರ ಜತೆಗೆ ಪ್ರಥಮ್ ಅವರ ಬರ್ತ್ ಡೇ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.