ರಥದಲ್ಲಿ ಪ್ರಯಾಣಕ್ಕೆ ಬಂದಾತ ತಾನೇ ಸಾರಥಿಯೂ ಆಗಿಬಿಟ್ಟರೆ ಹೇಗೆ? ಅಂಥದೊಂದು ಅವಕಾಶ ಯುವನಟ ಸೂರಜ್ ಗೌಡನ ಪಾಲಿಗೆ ದೊರಕಿದೆ. `ನಿನ್ನ ಸನಿಹಕೆ’ ಚಿತ್ರವನ್ನು ನಿರ್ದೇಶಕ ಸುಮನ್ ಜಾದೂಗಾರ್ ನಿರ್ದೇಶಿಸಬೇಕಿತ್ತು. ಆದರೆ ಆ ಜಾಗಕ್ಕೆ ನಾಯಕ ಸೂರಜ್ ಬಂದಿರುವ ಬಗ್ಗೆ ಚಿತ್ರತಂಡ ಮಾಧ್ಯಮಗೋಷ್ಠಿಯಲ್ಲಿ ನೀಡಿದ ಮಾಹಿತಿ ಇಲ್ಲಿದೆ.
ಇನ್ನೇನು ಚಿತ್ರೀಕರಣ ಶುರುವಾಗಬೇಕು ಎನ್ನುವಷ್ಟರಲ್ಲಿ ಬೈಕ್ ಅಪಘಾತದಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದರು ನಿರ್ದೇಶಕ ಸುಮನ್ ಜಾದೂಗಾರ್. ಐದು ವಾರ ಬೆಡ್ ರೆಸ್ಟ್ ಮುಗಿಯುವಷ್ಟರಲ್ಲಿ ಚಿತ್ರೀಕರಣಕ್ಕಾಗಿ ಹಾಕಿದ್ದ ಯೋಜನೆಗಳೆಲ್ಲವೂ ಹಾಳಾಗುವುದನ್ನು ಮನಗಂಡ ಸುಮನ್ ತನ್ನಿಂದಾಗಿ ಹಾಗೆ ಆಗದಿರಲಿ ಎಂದುಕೊಂಡರು. ಅದಕ್ಕಾಗಿ ಚಿತ್ರದ ಕತೆ ಬರೆದಿದ್ದ ಸೂರಜ್ ಅವರಿಗೇನೇ ನಿರ್ದೇಶನದ ಹೊಣೆ ನೀಡಲು ಸನ್ನದ್ಧರಾದರು. ಇವೆಲ್ಲದರ ಪರಿಣಾಮವಾಗಿ ಚಿತ್ರ ನಿರೀಕ್ಷಿತ ರೀತಿಯಲ್ಲಿ ಕೊನೆಗೊಂಡಿದೆ ಎಂದರು ಸುಮನ್ ಜಾದೂಗಾರ್.
ನಿಜ ಹೇಳಬೇಕೆಂದರೆ ಸೂರಜ್ ಅವರಿಗೆ ಇದು ದೊಡ್ಡ ಅವಕಾಶ. ಡಾ.ರಾಜ್ ಕುಮಾರ್ ಅವರ ಕುಟುಂಬದ ಮೂರನೇ ತಲೆಮಾರು, ಅದರಲ್ಲಿಯೂ ನಾಯಕಿಯಾಗಿ ಕಾಲಿಡುತ್ತಿರುವ ಅಪರೂಪದ ನಟಿ ಧನ್ಯಾ ರಾಮ್ ಕುಮಾರ್. ಅವರ ಪ್ರಥಮ ಚಿತ್ರದ ನಾಯಕ ಎನ್ನುವುದು ಇತಿಹಾಸದಲ್ಲಿ ದಾಖಲಾಗುತ್ತಿರಬೇಕಾದರೆ, ಅದರಾಚೆ ನಿರ್ದೇಶನದ ಜವಾಬ್ದಾರಿಯೂ ವಹಿಸಿಕೊಂಡು ದೊಡ್ಡ ಸ್ಥಾನವನ್ನೇ ಸಂಪಾದಿಸಿದ್ದಾರೆ. ಆದರೆ ಅವರಿಗೆ ಚೊಚ್ಚಲ ನಿರ್ದೇಶನ ಎನ್ನುವುದು ಕಷ್ಟಕರವೇನೂ ಆಗಿರಲಿಲ್ಲವಂತೆ. ಯಾಕೆಂದರೆ ಈ ಹಿಂದೆ ಐದು ಚಿತ್ರಗಳನ್ನು ಮಾಡುವಾಗಲೂ ಸಿನಿಮಾ ತಂತ್ರಜ್ಞಾನದ ಬಗ್ಗೆ ಆಸಕ್ತಿಯಿಂದ ಅರಿವು ಮೂಡಿಸಿಕೊಂಡಿದ್ದು ಈಗ ಉಪಯೋಗಕ್ಕೆ ಬಂತು ಎಂದರು.
ದೊಡ್ಡದೊಂದು ತ್ಯಾಂಕ್ಸ್ ಹೇಳುವ ಮೂಲಕ ಮಾತು ಶುರುಮಾಡಿದರು ನವನಟಿ ಧನ್ಯಾ. ಮೊದಲ ದಿನ ಸೆಟ್ ಗೆ ಬಂದಾಗ ಇದ್ದಂಥ ಭಯವನ್ನು ಹೋಗಲಾಡಿಸಿದ್ದಕ್ಕೆ ನಿರ್ಮಾಪಕರಿಬ್ಬರಿಗೂ ತ್ಯಾಂಕ್ಸ್ ಹೇಳಲೇಬೇಕು. ಸುಮನ್ ಅವರ ಸಲಹೆ, ಛಾಯಾಗ್ರಾಹಕ ಅಭಿಲಾಷ್ ಕಳತ್ತಿಲ್ ನೀಡಿದ ಚಾಲೆಂಜ್, ನನ್ನೊಂದಿಗೆ ಖುದ್ದಾಗಿ ನಿಂತು ಸೂರಜ್ ನೀಡಿದ ಸಹಾಯಕ್ಕಾಗಿ ಸೇರಿದಂತೆ ಒಟ್ಟು ತಂಡಕ್ಕೆ ನಾನು ತ್ಯಾಂಕ್ಸ್ ಹೇಳಲೇಬೇಕು ಎಂದರು. ಇದು ಇಲ್ಲಿಯತನಕ ಸಿನಿಮಾದಲ್ಲಿ ನೋಡಿರದಂಥ, ಆದರೆ ನಿಜವಾಗಿ ನಡೆಯಬಹುದಾದಂಥ ಲವ್ ಸ್ಟೋರಿ ಎಂದರು ಧನ್ಯಾ ರಾಮ್ ಕುಮಾರ್. ಅವರ ತಾಯಿ ಮಾತನಾಡಿ, `ನನ್ನ ಮಗಳಿಗೆ ಇಂಥದೊಂದು ಪ್ರಾಜೆಕ್ಟ್ ದೊರಕಿರುವುದಕ್ಕೆ ಖುಷಿಯಿದೆ. ಯಾಕೆಂದರೆ ಎಲ್ಲರೂ ಅವರವರ ಕೆಲಸ ಮಾತ್ರವಲ್ಲದೆ ಮತ್ತೊಬ್ಬರ ಕೆಲಸ ಮಾಡುವುದಕ್ಕೂ ಸಿದ್ದವಿದ್ದಂಥ ತಂಡ ಇದು’ ಎಂದರು.
ಸೂರಜ್ ಅವರ ಪ್ರಕಾರ, ಧನ್ಯಾ ಅವರು ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆಯಾಗಲಿದ್ದಾರೆ. ಅವರಿಗೆ ಮುಂದಿನ ದೃಶ್ಯದ ಭಾವ ಏನು ಎನ್ನುವುದನ್ನು ಹೇಳಿದ ಒಂದೆರಡು ನಿಮಿಷಗಳಲ್ಲೇ ಅದನ್ನು ಮುಖದಲ್ಲಿ ತುಂಬಿಕೊಂಡು ತಯಾರಾಗಿರುತ್ತಾರೆ. ಅದೇ ವೇಳೆ ಅವರು ಶಾಟ್ ಏನು ಎಂದು ಕೇಳಿ ತಯಾರಾಗುವವರಲ್ಲ. ಅದರ ಹಿಂದೆ ಮುಂದಿನ ದೃಶ್ಯಗಳ ಬಗ್ಗೆಯೂ ಅರಿತು ನಟಿಸುತ್ತಾರೆ. ಇದು ಅವರ ಒಳಗೊಳ್ಳುವಿಕೆಗೆ ಉದಾಹರಣೆ ಎಂದರು. ಇದೇ ವೇಳೆ ಇದೊಂದು ಲವ್ ಸ್ಟೋರಿ ಎಂದ ಕೂಡಲೇ ಸಂಗೀತ ನಿರ್ದೇಶಕರಾಗಿ ರಘು ದೀಕ್ಷಿತ್ ಅವರೇ ಬೇಕೆಂದು ತೀರ್ಮಾನಿಸಿದ್ದನ್ನು ಸೂರಜ್ ನೆನಪಿಸಿಕೊಂಡರು.
ಬಳಿಕ ಮಾತನಾಡಿದ ರಘು ದೀಕ್ಷಿತ್, “ನನಗೆ ಹಾಡುಗಳನ್ನು ಮಾಡುವುದು ಒಂದು ರೀತಿ ಸುಲಭವೇ. ಆದರೆ ಹಿನ್ನೆಲೆ ಸಂಗೀತ ನೀಡುವುದು ತುಂಬ ಚಾಲೆಂಜ್ ಆಗಿರುತ್ತದೆ. ನಿರ್ಮಾಪಕರು ತುಂಬ ಒಳ್ಳೆಯವರು ಸಿಕ್ಕಿರುವ ಕಾರಣ, ಕೆಟ್ಟ ಮ್ಯೂಸಿಕ್ ನೀಡಬೇಕಾದಂಥ ಒತ್ತಡ ಇರಲಿಲ್ಲ” ಎಂದರು. ನಿರ್ಮಾಪಕರಾದ ಅಕ್ಷಯ್, ರಂಗನಾಥ್ ಮಾತನಾಡಿ “ನಾಯಕಿಗೆ ಇದು ಮೊದಲ ಚಿತ್ರದ ಹಾಗೆ ಇರಲಿಲ್ಲ. ಅನುಭವಿಯಂತೆ ನಟಿಸಿದ್ದಾರೆ” ಎಂದರು.