‘ಒಂದು ಶಿಕಾರಿಯ ಕಥೆ’ ಟ್ರೇಲರ್ ಲಾಂಚ್

ಈ ಬಾರಿಯ ಬೆಂಗಳೂರು ‌ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶಿಸಲ್ಪಡುತ್ತಿರುವ ಸಿನಿಮಾ ‘ಒಂದು ಶಿಕಾರಿಯ ಕಥೆ’. ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ಮಲ್ಲೇಶ್ವರದ ಎಸ್ ಆರ್ ವಿ ಥಿಯೇಟರ್ ನಲ್ಲಿ‌ ನೆರವೇರಿತು.

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲ್ಪಡುವ ಕನ್ನಡ ಸಿನಿಮಾ ಮತ್ತು ಭಾರತೀಯ ಸಿನಿಮಾಗಳ ಸ್ಪರ್ಧಾ ವಿಭಾಗಗಳಲ್ಲಿ ಪ್ರದರ್ಶನದ ಸ್ಪೆಷಲ್ ಜ್ಯೂರಿ ಪ್ರೊಜೆಕ್ಷನ್ ಇದೆ. ಈ ಎಲ್ಲ ವಿಭಾಗಗಳಿಗೆ ನಮ್ಮ ಚಿತ್ರ ಆಯ್ಕೆಯಾಗಿರುವುದು ಖುಷಿಯಾಗಿದೆ ಎಂದರು ಕಾರ್ಯಕ್ರಮದ ನಿರೂಪಕಿ. ಕ್ಷಮಿಸಿ; ಈ ಕಾರ್ಯಕ್ರಮದ ನಿರೂಪಕಿ ಸಿರಿ ಪ್ರಹ್ಲಾದ್ ‘ಒಂದು ಶಿಕಾರಿಯ ಕಥೆ’ ಚಿತ್ರದ ನಾಯಕಿಯೂ ಹೌದು.

ಚಿತ್ರದಲ್ಲಿ ಉಮಾ ಪಾತ್ರವನ್ನು ನಿರ್ವಹಿಸುತ್ತಿರುವ ಸಿರಿ ಪ್ರಹ್ಲಾದ್ ಮಾತನಾಡಿ ನನ್ನದು ಯಕ್ಷಗಾನ ಪ್ರೇಮಿಯ ಪಾತ್ರ.‌ ಬೇರೆ ಊರಲ್ಲಿ ಪಿಯು ಮುಗಿಸಿಕೊಂಡು ತವರಿಗೆ ಮರಳುವ ಹುಡುಗಿಯ ಪಾತ್ರ ಎಂದರು.

ಚೊಚ್ಚಲ ನಿರ್ದೇಶನದ ಚಿತ್ರದಿಂದಲೇ ಗಮನ ಸೆಳೆದಿರುವ ಸಚಿನ್ ಶೆಟ್ಟಿ, ತಾವು ಪಿ. ಶೇಷಾದ್ರಿಯವರ ಬಳಿ ಮೂರು ವರ್ಷಗಳ ಕಾಲ ಕೆಲಸ ಮಾಡಿ ಅನುಭವ ಪಡೆದಿರುವುದಾಗಿ ತಿಳಿಸಿದರು. ನಮ್ಮದು ಕಡಿಮೆ ಬಜೆಟ್ ಚಿತ್ರ. ಚಿತ್ರದಲ್ಲಿ ಕಾಡಿನಲ್ಲಿ ನಡೆಯುವ ಶಿಕಾರಿ ಮತ್ತು ಬದುಕಿನಲ್ಲಿ ಮನಸಿನೊಳಗೆ ನಡೆಯುವ ಶಿಕಾರಿಗಳ ಬಗ್ಗೆ ತೋರಿಸಲಾಗಿದೆ ಎಂದರು.

ಚಿತ್ರದಲ್ಲಿ ಪ್ರಧಾನ ಪಾತ್ರವನ್ನು ನಿರ್ವಹಿಸುತ್ತಿರುವ ಪ್ರಮೋದ್ ಶೆಟ್ಟಿ ತಾವು ಓರ್ವ ಸಾಹಿತಿಯಾಗಿ ಕಾಣಿಸಿಕೊಂಡಿದ್ದಾಗಿ ಹೇಳಿದರು. ಅವರ ಜತೆಗೆ ಚಿತ್ರದಲ್ಲಿ ಮತ್ತೊಂದು ಪ್ರಧಾನ ಪಾತ್ರ ನಿರ್ವಹಿಸಿರುವ ಪ್ರಸಾದ್ ಚೇರ್ಕಾಡಿ ಅವರು ತಾವು ಯಕ್ಷಗಾನ ಕಲಾವಿದನಾಗಿ ನಟಿಸಿರುವುದಾಗಿ ಹೇಳಿದರು. ಹೆಣ್ಣು, ಗಂಡು ಪಾತ್ರಗಳನ್ನು ನಿಭಾಯಿಸುವ ಕಲಾವಿದನನ್ನು ಕಂಡು ನಾಯಕಿ ಮರುಳಾಗುತ್ತಾಳೆ ಎಂದರು. “ಸುಮಾರು 15 ದಿನಗಳ ಕಾಲ ರಿಹರ್ಸಲ್ ಮಾಡಿ ಮಾಡಿದಂಥ ಪಾತ್ರ ಇದು. ವೃತ್ತಿಪರ ಯಕ್ಷಗಾನ ಮೇಳದಲ್ಲಿ ಪಾತ್ರವಹಿಸುವ ಒಬ್ಬ ಕಲಾವಿದನಾಗಿ‌ ಕಾಣಿಸಿಕೊಂಡಿದ್ದೇನೆ ಎಂದರು‌.

ಛಾಯಾಗ್ರಾಹಕ ಯೋಗೇಶ್ ಚಿತ್ರತಂಡದ ಪ್ರಾಮಾಣಿಕ ಪ್ರಯತ್ನಕ್ಕೆ ಖಂಡಿತವಾಗಿ ಒಳಿತಾಗುವುದೆಂಬ ಭರವಸೆ ಇದೆ ಎಂದರು. ಸಂಗೀತ ನಿರ್ದೇಶಕ ಸನತ್ ಬಳ್ಕೂರು ಅವರು
ತಮ್ಮ ಸಹ ಸಂಗೀತ ನಿರ್ದೇಶಕ ಶ್ಯಾಮ್ ಅವರೊಂದಿಗೆ ಸೇರಿಕೊಂಡು ಸಂಗೀತ ನೀಡಿರುವುದಾಗಿ ಹೇಳಿದರು. ಮ್ಯೂಸಿಕ್ ಪರಿಕರಗಳ ಶಬ್ದವನ್ನು ನೇರವಾಗಿ ತೆಗೆದುಕೊಂಡು ಅದರಿಂದಲೇ ಹಿನ್ನೆಲೆ ಸಂಗೀತ ಮಾಡಿದ್ದೇವೆ. ಕೆಲವೊಂದೆಡೆ ಸಿಂಕ್ ಸೌಂಡ್ ಪ್ರಯೋಗವೂ ನಡೆದಿರುವುದಾಗಿ ಸ್ಪಷ್ಟಪಡಿಸಿದರು.

ಕಲಾವಿದೆ ಮೀರಾ ಅವರು ಮಾತನಾಡಿ, ಪಿ ಶೇಷಾದ್ರಿಯವರ ‘ಬೇಟಿ’ ಚಿತ್ರದ ಮೂಲಕ ಸಚಿನ್ ಶೆಟ್ಟಿಯವರು ಪರಿಚಯವಾದರು. ಕತೆ ಕೇಳಿದಾಗ ನನಗೆ ಯಶವಂತ ಚಿತ್ತಾಲರ ಶಿಕಾರಿ ಕಾದಂಬರಿ ನೆನಪಾಯಿತು. ಪ್ರಮೋದ್ ಶೆಟ್ಟಿಯವರ ಬಾಲ್ಯದ ದೃಶ್ಯಗಳಲ್ಲಿ ನಾನು ಅವರ ತಾಯಿ‌ ಪಾತ್ರ ನಿರ್ವಹಿಸಿದ್ದೇನೆ ಎಂದರು. ಯುವನಟ ಅಭಿಮನ್ಯು, ತಾವು ಮೂಲತಃ ಚಿಕ್ಕಮಗಳೂರಿನವರಾಗಿದ್ದು ಐಟಿ ಉದ್ಯೋಗಿ. ಆದರೆ ಸಿನಿಮಾದ ಮೇಲಿನ‌ ಆಸಕ್ತಿಯಿಂದ ಈ ಚಿತ್ರ ಒಪ್ಪಿಕೊಂಡೆ. ಒಬ್ಬ ದೊಡ್ಡ ಬೇಟೆಗಾರನ ಮಗ ಅಹಿಂಸಾವಾದಿ ಆಗಿರುತ್ತಾನೆ. ಆತ ಪೆನ್ ಕೆಳಗಿಟ್ಟು ಗನ್ ಹಿಡಿಯುವಂಥ ಪರಿಸ್ಥಿತಿ ಯಾಕೆ ಬರುತ್ತದೆ ಎನ್ನುವುದೇ ಚಿತ್ರದ ಕಥಾ ಹಂದರ ಎಂದರು.

ಸಿನಿಮಾದಲ್ಲಿ ಯಕ್ಷಗಾನದ ಭಾಗವಿರುವ ಕಾರಣ, ಆ ಕಲೆಗೆ ಗೌರವ ನೀಡಿ ಕುಂದಾಪುರದ ಜನಪ್ರಿಯ ಯಕ್ಷಗಾನ ಕಲಾವಿದ ಸಿದ್ಧಾಪುರದ ಐರ್ ಬೈಲ್ ಆನಂದ ಶೆಟ್ಟಿಯವರನ್ನು ವಿಶೇಷ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಅವರು ಸುಮಾರು ನಾಲ್ಕು ದಶಕಗಳಿಂದ ರಂಗ ಕಲಾವಿದರಾಗಿ ಹೆಸರು ಮಾಡಿರುವವರು. ಮೂಕಾಸುರ, ಕರ್ಣ, ಇಂದ್ರ ಹೀಗೆ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ ‘ರಂಗಸ್ಥಳದ ರಾಜ’ ಎನ್ನುವ ಬಿರುದಾಂಕಿತರಾದ ಆನಂದ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Recommended For You

Leave a Reply

error: Content is protected !!
%d bloggers like this: