“ಡಾ.ವಿಷ್ಣುವರ್ಧನ್ ಅವರ ಒಂದು ಮೂಗನ್ನು ಮಾತ್ರ ತೋರಿಸಿ ಇದು ಯಾರು ಎಂದರೆ ಕನ್ನಡದ ಪ್ರೇಕ್ಷಕರು ಅದು ವಿಷ್ಣುವರ್ಧನ್ ಎಂದು ಕಂಡುಹಿಡಿಯುತ್ತಾರೆ. ಗುಳಿಕೆನ್ನೆ ತೋರಿಸಿ ಯಾರೆಂದು ಕೇಳಿದರೆ ‘ರಚಿತಾ ರಾಮ್’ ಅಂತಾರೆ. ಇಂಥ ಬುದ್ಧಿವಂತ ಪ್ರೇಕ್ಷಕರ ನಡುವೆ ನಾನು ಹೊಸ ಇಮೇಜ್ ನಲ್ಲಿ ಬರಬೇಕು ಎಂದರೆ ಅದಕ್ಕೆ ಧೈರ್ಯ ಬೇಕು. ಅಂಥ ಧೈರ್ಯ ನನಗೆ ಬಂದಿದ್ದು ಚಿತ್ರದ ಕಂಟೆಂಟ್ ಕೇಳಿದಾಗ. ಇದೀಗ ಜನಗಳಿಗೂ ಇಷ್ಟವಾಗಿರುವುದು ಖುಷಿಯಾಗಿದೆ” ಎಂದರು ರಮೇಶ್ ಅರವಿಂದ್. ಅವರು ‘ಶಿವಾಜಿ ಸುರತ್ಕಲ್’ ಚಿತ್ರದ ಸಕ್ಸಸ್ ಮೀಟ್ ನಲ್ಲಿ ಮಾತನಾಡುತ್ತಿದ್ದರು.
ನಿರ್ದೇಶಕ ಆಕಾಶ್ ಶ್ರೀವತ್ಸ ಅವರು ಮಾತನಾಡಿ, “ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದ ಚಿತ್ರ ಮಂದಿರಗಳ ಸಂಖ್ಯೆ 60ರಿಂದ 120ರ ತನಕ ಹೆಚ್ಚಾಗಿವೆ. ಚಿತ್ರ ಆಸ್ಟ್ರೇಲಿಯಾದಲ್ಲಿ ಈಗಾಗಲೇ ತೆರೆಕಂಡಿದೆ. ಯು ಎಸ್ ನಲ್ಲಿ ತಿಂಗಳಾಂತ್ಯಕ್ಕೆ 25ರಿಂದ 30ರಷ್ಟು ಶೋಗಳು ಪ್ರದರ್ಶನ ಕಾಣಲಿವೆ. ಹಿಂದಿ ಸೇರಿದಂತೆ ತಮಿಳು, ತೆಲುಗು ಭಾಷೆಗಳಿಂದ ರಿಮೇಕ್ ಗಾಗಿ ಆಫರ್ ಬಂದಿದೆ. ವಿಶೇಷ ಏನೆಂದರೆ ನಾನೇ ನಿರ್ದೇಶಿಸಬೇಕು ಎಂದು ಕೂಡ ಕೇಳಿಕೊಂಡಿದ್ದಾರೆ” ಎಂದರು. “ದಶಕದ ಹಿಂದೆ ಬೆಂಗಳೂರಿನ ಊರ್ವಶಿ ಥಿಯೇಟರ್ ನಲ್ಲಿ ಕನ್ನಡ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣೋದನ್ನು ನೋಡಬೇಕು” ಅಂತ ಕನಸು ಕಂಡಿದ್ದೆ. ಇದೀಗ ನಮ್ಮ ಚಿತ್ರವೇ ಅಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವುದು ಖುಷಿಯಾಗಿದೆ ಎಂದು ಹೆಮ್ಮೆ ಪಟ್ಟುಕೊಂಡರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಿರ್ಮಾಪಕ ಅನೂಪ್ ಗೌಡ ಅವರು ಮೊದಲ ನಿರ್ಮಾಣದಲ್ಲೇ ಇಂಥ ಒಳ್ಳೆಯ ಸಿನಿಮಾ ಸಿಕ್ಕಿ ಯಶಸ್ಸು ಕಾಣುತ್ತಿರುವುದಕ್ಕೆ ಖುಷಿ ಇದೆ ಎಂದರು.