ಇಂದು ‘ನಮ್ ಟಾಕೀಸ್’ ಭರತ್ ಮದುವೆ

ಭರತ್ ಇಂದು ಮದುವೆಯಾಗುತ್ತಿದ್ದಾರೆ. ಭರತ್ ಎಂದು ಹೇಳಿದಾಕ್ಷಣ ಗೊತ್ತಾಗದಿದ್ದರೆ ‘ನಮ್ ಟಾಕೀಸ್ ಭರತ್’ ಎಂದೊಡನೆ ಸಿನಿ ಪ್ರೇಮಿಗಳಿಗೆ ತಿಳಿದು ಬಿಡುತ್ತದೆ. ಅದಕ್ಕೆ ಕಾರಣ ಆ ಹೆಸರಿನ ಮೂಲಕ ಅವರು ಕನ್ನಡ ಸಿನಿಮಾಗಳಿಗೆ ನೀಡುತ್ತಿರುವ ಪ್ರಮೋಷನ್.

ಭರತ್ ಅವರದು ಪ್ರೇಮ ವಿವಾಹವೇನಲ್ಲ. ಆದರೆ ಅವರೊಳಗೊಬ್ಬ ಅಪ್ಪಟ ಪ್ರೇಮಿ ಇದ್ದಾನೆ. ಅದು ಕನ್ನಡ ಸಿನಿಮಾಗಳ ಮೇಲಿನ ಪ್ರೇಮ! ಆದರೆ ಅದು ಹೆಚ್ಚಾಗಲು ಕಾರಣವಾಗಿದ್ದು, ನಟಿ ರಮ್ಯಾ ಅವರು ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ! ನಿಜ ಹೇಳಬೇಕೆಂದರೆ ಸಾಮಾಜಿಕ ಜಾಲತಾಣದ ಬಗ್ಗೆ ಅರಿವಾಗಿದ್ದೇ ಆಕೆಯ ಅಭಿಮಾನಿಯಾದ ಮೇಲೆ ಎನ್ನುತ್ತಾರೆ ಭರತ್. ಹಾಗಾಗಿ ‘ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಫ್ಯಾನ್ಸ್ ಅಸೋಸಿಯೇಷನ್’ ಆರಂಭಿಸಿದರು. ರಮ್ಯಾ ಅವರ ಜನ್ಮದಿನವನ್ನು ಅನಾಥಾಶ್ರಮಗಳಲ್ಲಿ ಆಚರಿಸಲು ಶುರು ಮಾಡಿದ್ದೇ ಈ ಫ್ಯಾನ್ಸ್ ಕ್ಲಬ್ ಮೂಲಕ. ಅಂದು ಅಭಿಮಾನಿ ಬಳಗ ಶುರು ಮಾಡುವಾಗ ತಮಗೆ ಬೆಂಬಲವಾಗಿ ನಿಂತ ನವೀನ್ ಮಹಾದೇವ್ ಮತ್ತು ಪ್ರೇಮ್ ಸಾಗರ್ ಮತ್ತು ಅವರ ತಂಡವನ್ನು ಭರತ್ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಆದರೆ ಇವರು ರಮ್ಯಾ ಮತ್ತು ಕನ್ನಡ ಸಿನಿಮಾವನ್ನು ಎಂದಿಗೂ ಬೇರೆಯಾಗಿ ನೋಡಿದವರಲ್ಲ. ಹಾಗಾಗಿಯೇ ಕನ್ನಡ ಸಿನಿಮಾರಂಗದ ಜತೆಯಲ್ಲೇ ಸಾಗುವಂಥ ವೃತ್ತಿಯೊಂದನ್ನು ಆಯ್ಕೆ‌ಮಾಡಿಕೊಂಡರು.

ನಾಗೇಂದ್ರ ಪ್ರಸಾದರಿಂದ ನಾಮಕರಣ

ಕನ್ನಡ ಚಿತ್ರರಂಗದಲ್ಲಿ ಹಂಸಲೇಖರ ಬಳಿಕ ತಮ್ಮ ಪದದಾಟಗಳ ಮೂಲಕ‌ಗಮನ ಸೆಳೆದಂಥ ಒಬ್ಬ ಗೀತ ಸಾಹಿತಿ ಇದ್ದರೆ ಅದು ಡಾ. ವಿ ನಾಗೇಂದ್ರ ಪ್ರಸಾದ್ ಎಂದು ಧೈರ್ಯದಿಂದ ಹೇಳಬಹುದು. ಅಂದಹಾಗೆ ಭರತ್ ಅವರ ಸಿನಿಮಾ ಪ್ರಚಾರ ಕಾರ್ಯದ ಸಾಮಾಜಿಕ ಜಾಲತಾಣದ ಪುಟಗಳಿಗೆ ಅವರು ನೀಡಿರುವ ಹೆಸರು ‘ನಮ್ ಟಾಕೀಸ್’ ಎಂದು. ಅದು ನೀಡಿದ ಜನಪ್ರಿಯತೆಯಿಂದಾಗಿ ಪ್ರಸ್ತುತ ಭರತ್ ‘ನಮ್ ಟಾಕೀಸ್ ಭರತ್’ ಎಂದೇ ಗುರುತಿಸಿಕೊಳ್ಳುತ್ತಿದ್ದಾರೆ. ಅದರ ಆರಂಭಕ್ಕೂ‌ ನೆರವಾದ ಸ್ನೇಹಿತ ಜಾಗೃತ್ ಭಾರದ್ವಾಜ್ ಬಗ್ಗೆ ಕೂಡ ಭರತ್ ಸ್ಮರಿಸುತ್ತಾರೆ. ಸ್ವತಃ ರಮ್ಯಾ ಫ್ಯಾನ್ಸ್ ಅಸೋಸಿಯೇಶನ್ ಅಧ್ಯಕ್ಷನಾದರೂ ಅವರು ಬೇರೆ ಕಲಾವಿದರ ಫ್ಯಾನ್ಸ್ ಬಗ್ಗೆ ಎಂದಿಗೂ ಅಸೂಯೆ ತೋರಿದವರಲ್ಲ. ಬೇರೆ ಬೇರೆ ಸ್ಟಾರ್ ಗಳೇ ಜತೆಯಾಗಿ ಕ್ರಿಕೆಟ್ ಆಡಬಹುದಾದರೆ ಅಭಿಮಾನಿಗಳು ಯಾಕೆ ಸೌಹಾರ್ದವಾಗಿ ಆಡಬಾರದು ಎಂದು ಹೊಸ ಕಾನ್ಸೆಪ್ಟ್ ಒಂದನ್ನು ಶುರು ಮಾಡಿದ ಭರತ್, ‘ಫ್ಯಾನ್ಸ್ ಕ್ರಿಕೆಟ್ ಲೀಗ್’ ಆರಂಭಿಸಿದರು. ಅದಕ್ಕೆ ಈಗಾಗಲೇ ಐದು ವರ್ಷ ತುಂಬಿದೆ. ಅದರ ಜತೆಯಲ್ಲೇ ಸಿನಿಮಾ ಪ್ರಮೋಶನ್ ಕೂಡ ಮಾಡುತ್ತಿದ್ದಾರೆ.

ಭರತ್ ಜನಪ್ರಿಯತೆ

ಭರತ್ ಅವರು ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಸಿನಿಮಾಗಳಿಗೆ ನೀಡುತ್ತಿರುವ ಪ್ರಮೋಶನ್ ಅವರನ್ನು ಇಂದು ವಿದೇಶಕ್ಕೂ ತಲುಪುವಂತೆ ಮಾಡಿದೆ! ಹೌದು; ಹಲೊ ಆ್ಯಪ್ ಮೂಲಕ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ‌ ಕೂಡ ಭಾಗಿಯಾಗಿ ಬಂದಿದ್ದಾರೆ. 2011ರಲ್ಲಿ ರಮ್ಯಾ ಅವರನ್ನು ಚಿತ್ರೀಕರಣದ ಸ್ಥಳದಲ್ಲಿ ಭೇಟಿಯಾಗಿ, ಅಭಿಮಾನಿ ಬಳಗ ಶುರು ಮಾಡುವ ಬಗ್ಗೆ ಒತ್ತಾಯದಿಂದ ಒಪ್ಪಿಸಿದ ಪಾಡು ಹೇಗಿತ್ತು ಎನ್ನುವುದು ಭರತ್ ಅವರನ್ನು ಆರಂಭದಿಂದ ಬಲ್ಲವರಿಗಷ್ಟೇ ಗೊತ್ತು. ಆದರೆ ಇಂದು ದಶಕ ತಲುಪುವುದರೊಳಗೆ ಭರತ್ ಅವರ ಮದುವೆಗೆ ಚಿತ್ರರಂಗದ ಗಣ್ಯರನ್ನೇ ನಿರೀಕ್ಷಿಸಲಾಗುತ್ತಿದೆ! ಹೌದು ಇದು ಭರತ್ ಅವರ ಬೆಳವಣಿಗೆಯ ಸಂಕೇತ ಕೂಡ ಹೌದು.

ವಧು ಕೂಡ ಸಿನಿಮಾ ಪ್ರೇಮಿಯೇ!

ಸಾಮಾನ್ಯವಾಗಿ ಮನೆಯವರು ಸೇರಿ ನಡೆಸುವ ವಿವಾಹಗಳಲ್ಲಿ ವಧು ವರರ ಆಸಕ್ತಿಗಳು ಕೂಡಿ ಬರಬೇಕಾದರೆ ಅದೃಷ್ಟ ಮಾಡಿರಬೇಕು. ಆದರೆ ಅಂಥದೊಂದು ಅದೃಷ್ಟ ಭರತ್ ಅವರ ಪಾಲಿಗೆ ಬಂದಿದೆ. ಇಂದು ಅವರು ಅವರೊಂದಿಗೆ ಹಸೆಮಣೆಯೇರುತ್ತಿರುವ ಹುಡುಗಿ ಅಂಜಲಿ ಕೂಡ ಕನ್ನಡ ಸಿನಿಮಾಗಳ ಅಭಿಮಾನಿ. ಮುಖ್ಯವಾಗಿ ದರ್ಶನ್ ಫ್ಯಾನ್. ಭರತ್ ಕೂಡ ದರ್ಶನ್ ಅವರಿಗೆ ಅಭಿಮಾನಿ ಸಂಘ ಕಟ್ಟಿಲ್ಲ ಎನ್ನುವುದನ್ನು ಬಿಟ್ಟರೆ ‘ನಮ್ ಡಿ ಬಾಸ್’ ಎಂದು ದಿನಕ್ಕೆರಡು ಬಾರಿ ಅಭಿಮಾನದಿಂದ ಹೇಳಿಕೊಂಡವರೇನೇ. ಹಾಗಾಗಿ ಈ ಜೋಡಿ ಒಂದಾಗುತ್ತಿರುವುದರಲ್ಲಿ ಹೀಗೊಂದು ಸಾರ್ಥಕತೆಯೂ ಇದೆ. ಬಿ.ಕಾಮ್ ವಿದ್ಯಾರ್ಥಿನಿಯಾದ ಅಂಜಲಿ ಮತ್ತು ನಮ್ ಟಾಕೀಸ್ ಭರತ್ ಅವರ ವಿವಾಹ ಬೆಂಗಳೂರಿನ ನಾಗರಬಾವಿಯಲ್ಲಿ ಇಂದು ಅದ್ದೂರಿಯಾಗಿ ನೆರವೇರಲಿದೆ. ಇವರದು ಆದರ್ಶ ದಾಂಪತ್ಯವಾಗಿರಲಿ ಎಂದು ಸಿನಿಕನ್ನಡದ ಹಾರೈಕೆ.

Recommended For You

Leave a Reply

error: Content is protected !!