“ಯಶಸ್ಸಿನ ಪ್ರಕ್ರಿಯೆಯಲ್ಲಿ ಹಲವಾರು ಸೋಲುಗಳಿರುತ್ತವೆ. ಅದೇ ವೇಳೆ ಕಲಿಯುವಿಕೆಯ ಪ್ರಕ್ರಿಯೆಯಲ್ಲಿಯೂ ಹಲವಾರು ಪ್ರಶ್ನೆಗಳಿರುತ್ತವೆ”
ಇದು ಯಾವುದೋ ಮಹಾತ್ಮರ ಮಾತುಗಳಲ್ಲ. ಆದರೆ ಇನ್ನೂ ಟೀನೇಜ್ ದಾಟಿರದ ಉಪೇಂದ್ರರ ಮಗಳು ಐಶ್ವರ್ಯಾ ನೀಡಿರುವ ಹೇಳಿಕೆ ಇದು! ಬುದ್ಧಿವಂತ ನಟ ಎನ್ನುವ ಬಿರುದಾಂಕಿತ ಉಪೇಂದ್ರ ಅವರ ಮಗಳು ಕೂಡ ಬುದ್ಧಿವಂತೆ ಎಂದು ಈಗಾಗಲೇ ಸಾಬೀತು ಮಾಡುತ್ತಿರುವಂತಿದೆ! ಅಂದಹಾಗೆ ಅದರ ಜತೆಗೆ ಇನ್ನೊಂದು ವಾಕ್ಯವೂ ಇತ್ತು. ಅದು ಹೀಗಿದೆ.
“ಪ್ರಶ್ನೆಗಳು ಇರದೆ ಇನ್ನೊಬ್ಬರ ಮಾತುಗಳನ್ನು ಒಪ್ಪುವುದು ಎಂದರೆ ಜಗತ್ತನ್ನು ಇನ್ನು ಯಾರದೋ ಕಣ್ಣುಗಳ ಮೂಲಕ ನೋಡಿ ಒಪ್ಪಿಕೊಂಡ ಹಾಗೆ”
ವಿಚಿತ್ರ ಎಂದರೆ ಇವೆಲ್ಲವೂ ಅಪ್ಪಟ ಸತ್ಯ ಎನಿಸುವಂಥ ವಿಚಾರಗಳೇ. ಆದರೆ ಅವುಗಳನ್ನು ಹೋಲಿಕೆಯ ಜತೆಗೆ ಹೇಳಿರುವ ರೀತಿ ಮಾತ್ರ ಅಮೋಘವಾಗಿರುವಂಥದ್ದು.
ಉಪೇಂದ್ರ ಅವರು ಸಹಾಯಕ ನಿರ್ದೇಶಕರಾಗಿ, ಬರಹಗಾರರಾಗಿ ಚಿತ್ರರಂಗಕ್ಕೆ ಬಂದವರು. ಇಂದು ಅವರು ಚಿತ್ರರಂಗದಲ್ಲಿ ಎಲ್ಲವೂ ಆದರೂ ಅವರೊಳಗಿನ ಬರಹಗಾರರನ್ನು ನಾವು ಯಾರೂ ಮರೆಯುವಂತಿಲ್ಲ. ಬಹುಶಃ ಆ ಅಕ್ಷರಗಳೇ ಇಂದು ಮಗಳು ಐಶ್ವರ್ಯಾ ಮೂಲಕವೂ ಹೊರಗೆ ಬಂದಿದೆ ಎನ್ನಬಹುದು!
ಪುತ್ರ ಆಯುಷ್ ಈಗಾಗಲೇ ಹಲವಾರು ಕತೆಗಳನ್ನು ಬರೆಯುತ್ತಿರುವುದಾಗಿ ಹೇಳಿದ್ದರು ಉಪೇಂದ್ರ. ಆದರೆ ಮಗಳು ಐಶ್ವರ್ಯಾ ಗುರುತಿಸಿಕೊಂಡಿದ್ದೇ ಬಾಲನಟಿಯಾಗಿ. ನಟಿಸಿದ ‘ದೇವಕಿ’ ಎನ್ನುವ ಚಿತ್ರದಲ್ಲಿನ ಪಾತ್ರಕ್ಕಾಗಿ ಇತ್ತೀಚೆಗಷ್ಟೇ ‘ಚಂದನವನ ಕ್ರಿಟಿಕ್ಸ್ ಅಕಾಡೆಮಿಯ’ ಶ್ರೇಷ್ಠ ಬಾಲನಟಿ ಪ್ರಶಸ್ತಿ ಪಡೆದುಕೊಂಡ ಐಶ್ವರ್ಯಾ ವೇದಿಕೆಯ ಮೇಲೆ ತೊದಲು ಮಾತುಗಳಲ್ಲಿ ಕೃತಜ್ಞತೆ ಹೇಳಿದ್ದು ಇನ್ನೂ ಕಣ್ಣಿಗೆ ಕಟ್ಟುವಂತೆಯೇ ಇದೆ. ಬಹುಶಃ ಆ ಕನ್ನಡದ ತೊದಲುವಿಕೆಗೆ ಆರಂಭದಲ್ಲೇ ಆಂಗ್ಲಕ್ಕಾಗಿ ಆಳವಾದ ಅಡಿಪಾಯ ಹಾಕಿತ್ತಿರುವುದು ಕಾರಣವಾಗಿರಲೂಬಹುದು. ಆದರೆ ಅಂದು ಆಕೆಗೆ ವೇದಿಕೆಯ ಮೇಲೆ ಮಾತುಗಳನ್ನು ತಿದ್ದಿಕೊಟ್ಟವರು ಸ್ವತಃ ಪ್ರಿಯಾಂಕ ಉಪೇಂದ್ರ ಅವರು! ಅವರು ‘ಮಿಸ್ ಕೋಲ್ಕತ್ತ’ ಆದರೂ ‘ಮಿಸ್ಸೆಸ್ ಆಫ್ ಕನ್ನಡಿಗ’ ಆದ ಮೇಲೆ ಕನ್ನಡ ಕಲಿತು ಮಗಳಿಗೂ ಕಲಿಸುವಂತಾಗಿದ್ದಾರೆ.
ಉಪೇಂದ್ರ ಅವರು ಪ್ರಜಾಕೀಯ ಶುರುಮಾಡಿದ ಬಳಿಕ ಅವರ ಕಡೆಯಿಂದ ದಿನಕ್ಕೊಂದರಂತೆ ಹೊಸ ತನದ ಸಂದೇಶಗಳು ಬರುತ್ತಲೇ ಇರುತ್ತವೆ. ಆದರೆ ನಿನ್ನೆ ಬಂದ ಈ ವಾಟ್ಸ್ಯಾಪ್ ಮೆಸೇಜ್ ನಲ್ಲಿ ಅವರ ಮಗಳೇ ಬರೆದ ವಾಕ್ಯಗಳು ಗಮನ ಸೆಳೆಯವಂತಿತ್ತು. ಈ ವಾಕ್ಯದ ಅರ್ಥ ಸಾರುವ ಅನುಭವ ಅವರಿಗೆ ದೊರಕಿಸಿರುವ ಪುಸ್ತಕದ ಬಗ್ಗೆ ಗೌರವವಿದೆ. ಯಾಕೆಂದರೆ ಅಂಥ ಅನುಭವವನ್ನು ಪ್ರಾಯೋಗಿಕವಾಗಿ ಪಡೆದುಕೊಳ್ಳುವ ವಯಸ್ಸಾಗಲೀ, ಅವಕಾಶಗಳಾಗಲೀ ಐಶ್ವರ್ಯಾ ಅವರಿಗೆ ಇಲ್ಲ. ಸ್ಟಾರ್ ಮಗಳಾಗಿ ಜನಿಸಿರುವುದು ಮಾತ್ರವಲ್ಲ, ಬಾಲನಟಿಯಾಗಿ ಅಭಿನಯಿಸಿದರೂ ಟೈಟಲ್ ರೋಲ್ ಸಿಕ್ಕಿರುವುದು, ನಟಿಸಿದ ಮೊದಲ ಚಿತ್ರದಲ್ಲೇ ವಿಮರ್ಶಕರ ಗಮನ ಸೆಳೆಯುವುದು ಇವೆಲ್ಲವೂ ಯಶಸ್ಸಿನ ಉತ್ತುಂಗಗಳೇ. ಇಂಥ ಸಂದರ್ಭದಲ್ಲಿ ಸೋಲಿನ ಬಗ್ಗೆ ಗಾಢವಾದ ಅನಭವದ ಮಾತುಗಳನ್ನು ಬರೆದಿದ್ದಾಳೆಂದರೆ ಅದಕ್ಕೆ ಆಕೆಯನ್ನು ಕಾಡಿದ ಸಿನಿಮಾಗಳೋ, ಬರಹಗಳೋ ಕಾರಣವಾಗಿರಬಹುದು. ಆದರೆ ಈ ಅನುಭವದ ಮಾತು ಉಪೇಂದ್ರ ಅವರೇ ಹೇಳುವಂತೆ ಪುಸ್ತಕದ ಬದನೆಕಾಯಿ ಆಗಿ ಮಾತ್ರ ಉಳಿಯದಿರಲಿ. ಸ್ಟಾರ್ ಮಗಳು ಸಾಹಿತಿಯಾಗಿ, ಸಮಾಜ ಸುಧಾರಕಿಯಾಗಿಯೂ ಗುರುತಿಸುವಂತಾಗಲಿ ಎಂದು ಹಾರೈಸೋಣ.