ಕನ್ನಡದಲ್ಲಿ ಚಾಲ್ತಿಯಲ್ಲಿರುವ ತಾರೆಗಳಲ್ಲಿ ಅತಿಹೆಚ್ಚು ಜನಪ್ರಿಯತೆ ಹೊಂದಿದ ನಟ ಯಾರು ಎನ್ನುವ ಪ್ರಶ್ನೆಗೆ ಇತ್ತೀಚಿನ ವರ್ಷಗಳಲ್ಲಿ ಸಿಗುವ ಏಕೈಕ ಉತ್ತರ ದರ್ಶನ್ ಮಾತ್ರ. ಅದನ್ನು 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಮತ್ತೊಮ್ಮೆ ಸಾಬೀತು ಮಾಡಿದೆ.
ಕಳೆದ ವರ್ಷದ ಹತ್ತು ಜನಪ್ರಿಯ ಚಿತ್ರಗಳ ನಡುವೆ ಸ್ಪರ್ಧೆ ನಡೆದಾಗ ಸಹಜವಾಗಿ ಅದರಲ್ಲಿ ದರ್ಶನ್ ಪ್ರಧಾನ ಭೂಮಿಕೆಯಲ್ಲಿದ್ದ ‘ಮುನಿರತ್ನ ಕುರುಕ್ಷೇತ್ರ’ ಮತ್ತು ‘ಯಜಮಾನ’ ಸಿನಿಮಾಗಳು ಸೇರಿದ್ದವು. ವಿಶೇಷ ಏನೆಂದರೆ ಸ್ಪರ್ಧೆಯಲ್ಲಿ ಮೂರು ವಿಜೇತ ಚಿತ್ರಗಳ ಹೆಸರು ಘೋಷಿಸುವಾಗಲೂ ಈ ಸಿನಿಮಾಗಳು ಎರಡು ಸ್ಥಾನವನ್ನು ಪಡೆದುಕೊಂಡವು. ಮೊದಲ ಜನಪ್ರಿಯ ಚಿತ್ರದ ಸ್ಥಾನ ‘ಕುರುಕ್ಷೇತ್ರ’ ಸಿನಿಮಾದ ಪಾಲಾದರೆ, ಮೂರನೆಯ ಸ್ಥಾನವನ್ನು ‘ಯಜಮಾನ’ ಮುಡಿಗೇರಿಸಿಕೊಂಡಿದೆ.
ಅಂದಹಾಗೆ ಎರಡನೇ ಸ್ಥಾನವು ಕಳೆದ ವರ್ಷ ಸುದ್ದಿ ಮಾಡಿದಂಥ ಬೆಲ್ ಬಾಟಂ ಪಾಲಾಗಿದೆ. ಹಾಗಾಗಿ ಜನಪ್ರಿಯ ಚಿತ್ರಗಳ ಆಯ್ಕೆಯ ಬಗ್ಗೆ ಎಲ್ಲರಿಂದ ಸರ್ವಾನುಮತದ ಸಂಭ್ರಮವಿತ್ತು.
ಕುರುಕ್ಷೇತ್ರ ಚಿತ್ರಕ್ಕೆ ಸಂದಾಯವಾದ ಪ್ರಶಸ್ತಿಯನ್ನು ನಿರ್ದೇಶಕ ನಾಗಣ್ಣ ಮತ್ತು ರಾಕ್ಲೈನ್ ಅವರ ಪುತ್ರ ಯತೀಶ್ ಅವರು ಸ್ವೀಕರಿಸಿದರು. ‘ಯಜಮಾನ’ ಚಿತ್ರಕ್ಕೆ ನೀಡಲಾದ ಮೂರನೇ ಜನಪ್ರಿಯ ಸಿನಿಮಾ ಪ್ರಶಸ್ತಿಯನ್ನು ನಿರ್ಮಾಪಕರಾದ ಶೈಲಜಾ ನಾಗ್, ಅವರ ಪತಿ ಖ್ಯಾತ ನಟ, ನಿರ್ದೇಶಕ ಬಿ ಸುರೇಶ್ ತಮ್ಮ ಪುತ್ರಿಯ ಜತೆಗೆ ವೇದಿಕೆಯೇರಿ ಸ್ವೀಕರಿಸಿದರು.
ಕುರುಕ್ಷೇತ್ರ ಮತ್ತು ಯಜಮಾನ ಎನ್ನುವ ಎರಡು ಚಿತ್ರಗಳಿಗೆ ನಾಯಕ ದರ್ಶನ್ ಆದರೂ ಎರಡು ಚಿತ್ರಗಳ ನಡುವೆ ಸಾಕಷ್ಟು ವೈವಿಧ್ಯತೆ ಇರುವುದು ವಿಶೇಷ. ಕುರುಕ್ಷೇತ್ರ ಪೌರಾಣಿಕ ವಿಷಯವಾಗಿದ್ದು ಚಿತ್ರದಲ್ಲಿ ದರ್ಶನ್ ಹೊರತಾಗಿಯೂ ಕನ್ನಡದ ಸ್ಟಾರ್ ನಟರಾದ ಅಂಬರೀಷ್, ರವಿಚಂದ್ರನ್, ಅರ್ಜುನ್ ಸರ್ಜ ಮೊದಲಾದ ಘಟಾನುಘಟಿಗಳ ಸಮಾಗಮ ಇತ್ತು. ಚಿತ್ರದ ಅದ್ದೂರಿತನ ಎಲ್ಲವೂ ಸೇರಿ ಚಿತ್ರಕ್ಕೆ ಅಪರೂಪದ ಜನಪ್ರಿಯತೆ ತರುವಲ್ಲಿ ಯಶಸ್ವಿಯಾಗಿತ್ತು. ಆದರೆ ‘ಯಜಮಾನ’ ದ ವಿಚಾರ ಹಾಗಲ್ಲ. ದರ್ಶನ್ ಅವರಂಥ ಯಶಸ್ವಿ ನಟನನ್ನು ಇರಿಸಿಕೊಂಡು ಒಂದೊಳ್ಳೆಯ ಸಾಮಾಜಿಕ ಸಂದೇಶ ನೀಡುವ ಪ್ರಯತ್ನ ಮಾಡಲಾಗಿತ್ತು. ಸದ್ಯದ ಆರ್ಥಿಕ ಪರಿಸ್ಥಿತಿ, ಹಳ್ಳಿಗಳಲ್ಲಿನ ವ್ಯಾಪಾರ, ರೈತರ ಕುರಿತಾದ ಕಾಳಜಿ ಇವೆಲ್ಲವನ್ನು ಒಬ್ಬ ಸ್ಟಾರ್ ನಾಯಕನನ್ನು ಇರಿಸಿಕೊಂಡು, ಅಭಿಮಾನಿಗಳಿಗೂ ಬೇಸರವಾಗದ ಹಾಗೆ ಚಿತ್ರ ಮಾಡಿದಂಥ ಅವಳಿ ನಿರ್ದೇಶಕರಾದ ಪಿ ಕುಮಾರ್ ಮತ್ತು ಹರಿಕೃಷ್ಣ ಅವರು ಅಭಿನಂದನಾರ್ಹರು. ಅಂಥದೊಂದು ಚಿತ್ರಕ್ಕೆ ಧೈರ್ಯ ಮಾಡಿ ದುಡ್ಡು ಹಾಕಿ ಪ್ರಸ್ತುತ ಯಶಸ್ಸು ಮತ್ತು ಪುರಸ್ಕಾರಕ್ಕೆ ಪಾತ್ರರಾಗಿರುವ ಶೈಲಜಾ ನಾಗ್ ಬಿ ಸುರೇಶ್ ದಂಪತಿ ಅಭಿನಂದನಾರ್ಹರು.
ಅಂದಹಾಗೆ ಪ್ರಶಸ್ತಿ ವಿತರಣೆಯ ಸಂದರ್ಭದಲ್ಲಿ ಚಿತ್ರಗಳ ನಾಯಕ ದರ್ಶನ್ ಆರೋಗ್ಯದಲ್ಲಿ ಗೋಚರಿಸಿದ ಅಸ್ವಸ್ಥತೆಯಿಂದ ಮೈಸೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಹರಡಿತ್ತು. ಆದರೆ ಅದು ಸಣ್ಣದೊಂದು ಗ್ಯಾಸ್ಟ್ರಿಕ್ ಸಮಸ್ಯೆ ಎನ್ನುವುದರ ಅರಿವಾದೊಡನೆ ಅಭಿಮಾನಿಗಳ ಆತಂಕ ಗ್ಯಾಸ್ ನಂತೆ ಹಾರಿ ಹೋಯಿತು. ಈಗ ಡಿ ಬಾಸ್ ಅಭಿಮಾನಿಗಳ ಖುಷಿ ಕೂಡ ದುಪ್ಪಟ್ಟಾಗಿದೆ.