ಓಬಿರಾಯನ ಕತೆಯಲ್ಲಿ ವೇಣು ಹಸ್ರಾಳಿ

ಓಬಿರಾಯನ ಕತೆ ಎನ್ನುವುದು ಹೊಸ ಸಿನಿಮಾ. ಕತೆ ಓಬಿರಾಯನ ಕಾಲದ್ದಾದರೂ ಸಂಭಾಷಣೆ ಇಂದಿನ ನವ ಯುವಕನದ್ದು! ಅವರೇ ವೇಣು ಹಸ್ರಾಳಿ.

ಚಿತ್ರರಂಗ ಪ್ರವೇಶಕ್ಕಾಗಿ ಯಾರ್ಯಾರದೋ ಹೆಸರು ಹೇಳಿ ಬರುವವರ ನಡುವೆ ಸ್ವಂತ ಪ್ರತಿಭೆ ನಂಬಿಕೊಂಡು ಬಂದ ಅಪರೂಪದ ಯುವಕ ವೇಣು ಹಸ್ರಾಳಿ. ಹಾಗೆ ನೋಡಿದರೆ ಇದು ಅವರಿಗೆ ಎರಡನೇ ಚಿತ್ರ. ಆದರೆ ಹೊಸದಾಗಿ ಘೋಷಣೆಯಾಗಿರುವಂಥವು ಬರೋಬ್ಬರಿ ಐದು ಸಿನಿಮಾಗಳು!

ಕನ್ನಡ ಚಿತ್ರರಂಗದಲ್ಲಿ ಹೊಸ ಬರಹಗಾರರಿಗೆ ಅವಕಾಶವಿಲ್ಲ ಎನ್ನುವ ದೂರು ಇದೆ.‌ ಆದರೆ ಅದನ್ನು ಸುಳ್ಳು ಮಾಡುವಂತೆ ಬೆಳೆಯುತ್ತಿರುವವರೇ ವೇಣು. ‘ಕಪಟ ನಾಟಕ ಪಾತ್ರಧಾರಿ’ ಚಿತ್ರಕ್ಕೆ ನಿರ್ದೇಶಕರ ಜತೆಗೆ ಸಂಭಾಷಣೆಗೆ ಕೈ ಜೋಡಿಸಿ, ಖುದ್ದಾಗಿ ಒಂದು ಹಾಡನ್ನು ಕೂಡ ಬರೆದು‌ ರಂಗ ಪ್ರವೇಶಿಸಿದರು. ಹಾಡಿನ ಪಲ್ಲವಿ ‘ಯಾಕೆ ಅಂತ ಗೊತ್ತಿಲ್ಲ ಕಣ್ರೀ..’ ಎಂದು ಶುರುವಾಗಿತ್ತು. ಆದರೆ ಎಲ್ಲ ಗೊತ್ತಿದ್ದೇ ಬಂದವರಂತೆ ಬರಹದ ನೈಪುಣ್ಯತೆ ಅವರಲ್ಲಿತ್ತು. ಅದಕ್ಕೆ ಕಾರಣವಾಗಿ ಅವರು ನೆನಪಿಸಿಕೊಳ್ಳುವುದು ಶಿವಮೊಗ್ಗದ ತಮ್ಮ ಬಾಲ್ಯವನ್ನು.

ವೇಣು ಅವರ ತಂದೆ ಸೂರ್ಯ ನಾರಾಯಣ; ತಾಯಿ ಸುಮಾ. ಅವರು ಶಿವಮೊಗ್ಗದಲ್ಲಿ ಬೇಸಾಯಗಾರರು. ಅವರ ಇಬ್ಬರು ಮಕ್ಕಳಲ್ಲಿ ವೇಣು ಕಿರಿಯವರು. ಅಣ್ಣ ವೇದಾಂತ್ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿ. ವೇಣು ಕೂಡ ಮೈಸೂರಲ್ಲಿ ಇನ್ಫೋಸಿಸ್ ನಲ್ಲಿ ವೃತ್ತಿಯಲ್ಲಿದ್ದವರು. ಆದರೆ ಅದು ನನ್ನ ಕ್ಷೇತ್ರವಲ್ಲ ಎಂದು ಅವರ ಅಂತರಂಗ ಹೇಳುತ್ತಲೇ ಇತ್ತು. ಅದಕ್ಕೆ ಕಾರಣವಾಗಿದ್ದು ಬಾಲ್ಯದಿಂದಲೇ ಸೃಷ್ಟಿಯಾಗಿದ್ದಂಥ ಓದಿನ ಗೀಳು. ಚಿಕ್ಕ ಹುಡುಗನಾಗಿದ್ದಾಗ ತಂದೆಯಿಂದ ನಿತ್ಯ ಒಂದು ಕತೆ ಹೇಳಿಸಿಕೊಂಡ ಮೇಲೆಯೇ ರಾತ್ರಿ ನಿದ್ದೆಗೆ ಜಾರುತ್ತಿದ್ದಂಥ ಮನಸು. ಬಳಿಕ ಚಂಪಕ, ಬಾಲಮಂಗಳಿಗೆ ಓದುಗನಾಗಿ, ಬರಹಗಾರನಾಗಿ ಅಕ್ಷರದ ಅಕ್ಕರೆ ಆರಂಭ. ಹಾಗೆ ಮೈಸೂರಿನಿಂದ ಯಾಂತ್ರಿಕವೆನಿಸುವ ವೃತ್ತಿಗೆ ಗುಡ್ ಬೈ ಹೇಳಿ, ಜೀ‌ ಕನ್ನಡ ವಾಹಿನಿಯ ಮೂಲಕ‌ಹೊಸ ಜೀವನ ಶುರು. ಅಲ್ಲಿ ಒಂದು ವರ್ಷ ವೃತ್ತಿ ಮಾಡಿದ ಬಳಿಕ ‘ಕಪಟ ನಾಟಕ ಪಾತ್ರಧಾರಿ’ ಚಿತ್ರದ ಹಾಡು ಸಿನಿಮಾರಂಗದಲ್ಲೊಂದು‌ ಗೂಡು ಕಟ್ಟಬಹುದೆನ್ನುವ ಭರವಸೆ ತುಂಬಿತ್ತು. ಇದೀಗ ವಿನಯ್ ಶಾಸ್ತ್ರಿ ನಿರ್ದೇಶನದ ‘ಓಬಿರಾಯನ ಕಥೆ’ ಅದನ್ನು ನಿಜವಾಗಿಸಿದೆ.

ಧನಂಜಯ್, ದಿಗಂತ್ ಚಿತ್ರಕ್ಕೂ ಇವರದೇ ಮಾತು!

ಟಗರು ಚಿತ್ರದ ಮೂಲಕ ಡಾಲಿಯಾದವರು ಧನಂಜಯ್. ಈಗ ಅದೇ ‘ಡಾಲಿ’ ಶೀರ್ಷಿಕೆಯಲ್ಲಿ ಬರುತ್ತಿರುವ ಧನಂಜಯ್ ಸಿನಿಮಾದ ನಿರ್ದೇಶಕ ಪ್ರಭು ಶ್ರೀನಿವಾಸನ್ ತಮ್ಮ ತಂಡದೊಳಗೆ ಬರಹಗಾರನಾಗಿ ಆರಿಸಿಕೊಂಡಿರುವುದು ಇದೇ ವೇಣು ಅವರನ್ನು! ನವ ನಿರ್ದೇಶಕ ವಿನಯ್ ಕೋಡ್ಸರ ಅವರು ನಿರ್ದೇಶಿಸುತ್ತಿರುವ ದಿಗಂತ್ ಮತ್ತು ಐಂದ್ರಿತಾ ರೇ ನಟನೆಯ ಹೊಸ ಚಿತ್ರಕ್ಕೂ ವೇಣು ಅವರದೇ ಸಂಭಾಷಣೆ. ಕ್ರಿಸ್ಟಲ್ ಪಾರ್ಕ್ ಬ್ಯಾನರ್ ನಲ್ಲಿ ಇದೇ ಜೋಡಿಯನ್ನು ಇರಿಸಿಕೊಂಡು ಟಿ.ಆರ್ ಚಂದ್ರಶೇಖರ್ ನಿರ್ಮಿಸಿರುವ ‘ಹುಟ್ಟು ಹಬ್ಬದ ಶುಭಾಶಯ’ ಚಿತ್ರದಲ್ಲಿ ಕೂಡ ಡೈಲಾಗ್ ರೈಟರ್ ಜಾಗಕ್ಕೆ ವೇಣು ಹಸ್ರಾಳಿ ಅವರ ಹೆಸರಿದೆ. ಒಟ್ಟಿನಲ್ಲಿ ಒಂದರ ಹಿಂದೆ ಒಂದರಂತೆ ಐದು ಚಿತ್ರಗಳಿಗೆ ಕೆಲಸ ಮಾಡುವ ಅವಕಾಶ ದೊರಕಿದೆ ಎಂದು ಸಂಭ್ರಮ ವ್ಯಕ್ತಪಡಿಸುತ್ತಾರೆ ವೇಣು. ಅವರಿಗೆ cinikannada.com ನ ಶುಭಾಶಯಗಳು

Recommended For You

Leave a Reply

error: Content is protected !!
%d bloggers like this: