ಅಮ್ಮಂದಿರಿಗೆ ಜನ್ಮದಿನದ ಶುಭ ಕೋರಿದ ಶರಣ್

ಕನ್ನಡ ಚಿತ್ರರಂಗದ ಜನಪ್ರಿಯ ತಾರೆಯರ ಪಟ್ಟಿ ಮಾಡಿದರೆ ಅದರಿಂದ ಶ್ರುತಿ ಮತ್ತು ಶರಣ್ ಅವರನ್ನು ಹೊರಗಿಡಲಾಗದು. ಅಷ್ಟೊಂದು ಪ್ರಮುಖ ಸಿನಿಮಾಗಳಲ್ಲಿ ನಾಯಕಿಯಾಗಿ ನಾಯಕರಾಗಿ ತಾರೆಯಾಗಿ ಮರೆದಿದ್ದಾರೆ. ಹಾಸ್ಯದಿಂದ ನಾಯಕನ ಸ್ಥಾನಕ್ಕೆ ಧುಮುಕಿರುವ ಶರಣ್ ಪ್ರಸ್ತುತ ಕನ್ನಡದ ಯುವತಾರೆಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಅವರು ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಅದರಲ್ಲಿ ಕೂಡ ಫೇಸ್‌ಬುಕ್ ಅಕೌಂಟನ್ನು ಕೂಡ ಖುದ್ದಾಗಿ ನಿರ್ವಹಿಸುವುದು ವಿಶೇಷ. ಆದರೆ ಲಾಕ್ಡೌನ್‌ ಬಳಿಕ ಪೋಸ್ಟ್‌ ಮಾಡುವುದನ್ನು ಕಡಿಮೆ ಮಾಡಿದ್ದ ಶರಣ್ ಇದೀಗ ತಮ್ಮ ಇಬ್ಬರು ತಾಯಂದಿರ ಫೊಟೋ ಹಂಚಿಕೊಳ್ಳುವ ಮೂಲಕ ಅವರಿಗೆ ಜನ್ಮದಿನದ ಶುಭ ಕೋರಿದ್ದಾರೆ.

ಶರಣ್ ಅವರದು ರಂಗಭೂಮಿ ಹಿನ್ನೆಲೆಯ ಕುಟುಂಬ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅವರ ತಂದೆ ಕೃಷ್ಣ ಕೂಡ ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿದವರು. ಅವರಿಗೆ ಇಬ್ಬರು ಪತ್ನಿಯರು. ಅವಳಿಜವಳಿಗಳಾದ ಅವರಿಗೆ ರಾಧಾ ಮತ್ತು ರುಕ್ಮಿಣಿ ಎನ್ನುವುದು ಹೆಸರು. ಇಬ್ಬರನ್ನು ಕೂಡ ಸ್ವಂತ ಅಮ್ಮಂದಿರಂತೆ ಪ್ರೀತಿಸುವ ಶರಣ್ ಯಾವತ್ತೂ ಇವರೇ ನನ್ನ ಸ್ವಂತ ಅಮ್ಮ ಎಂದು ಹೇಳಲು ಇಷ್ಟಪಡದವರು. ಇಂದು ಅವರ ಜನ್ಮದಿನದ ಪ್ರಯುಕ್ತ ಹಾಕಿರುವಂಥ ಸ್ಟೇಟಸ್‌ನಲ್ಲಿಯೂ ನನ್ನ ತಾಯಂದಿರ ಜನ್ಮದಿನ ಎಂದೇ ಪದಬಳಸಿದ್ದಾರೆ! ಫೊಟೋ ತುಂಬ ಹಳೆಯದಾಗಿದ್ದು, ಅಪರೂಪದ ಚಿತ್ರವನ್ನೇ ಹಂಚಿಕೊಂಡಿದ್ದಾರೆ ಎನ್ನಬಹುದು.

ಶರಣ್ ಅವರು ಪ್ರಸ್ತುತ ಸುನಿ ನಿರ್ದೇಶನದ `ಅವತಾರ ಪುರುಷ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೊರೊನಾ ವೈರಸ್ ವಿಚಾರಕ್ಕೆ ಸಂಬಂಧಿಸಿದಂತೆ ಎಚ್ಚರಿಕೆ ಮೂಡಿಸುವ ಸಲುವಾಗಿ ಯುಗಾದಿಯ ಸಂದರ್ಭದಲ್ಲಿ ಒಂದು ವಿಶೇಷ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿತ್ತು. ಲಾಕ್ಡೌನ್ ಬಳಿಕದ ದಿನಗಳು ಶರಣ್ ಅವರಿಗೆ ಕೂಡ ಶುಭಸೂಚಕವಾಗಿರಲಿ ಎಂದು ಹಾರೈಸೋಣ.

Recommended For You

Leave a Reply

error: Content is protected !!
%d bloggers like this: