ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಕೋಟಿಗೊಬ್ಬ 3’. ಸಿನಿಮಾದ ಟೀಸರ್ ಬಿಡುಗಡೆಯ ಬಳಿಕ ಬಂದಂಥ ಪ್ರತಿಕ್ರಿಯೆ ಕೂಡ ಅಷ್ಟೇ ಅದ್ಭುತವಾಗಿತ್ತು. ಆದರೆ ಇದರ ಮಧ್ಯೆ ಟೀಸರ್ ಯೂಟ್ಯೂಬ್ ನಿಂದ ಡಿಲಿಟ್ ಮಾಡಲಾದ ಘಟನೆ ನಡೆದಿದ್ದು ಅಭಿಮಾನಿಗಳಿಗೆ ದಿಗಿಲಾಯಿತು. ಆದರೆ ಟೀಸರ್ ಡಿಲಿಟ್ ಆಗಿರುವ ಟೀಸರ್ ಸದ್ಯದಲ್ಲೇ ವಾಪಾಸು ಬರಲಿದೆ ಎನ್ನುವ ಭರವಸೆಯನ್ನು ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ.
ಡಿಲಿಟ್ ಆಗಿದ್ದು ಹೇಗೆ?
ಕೋಟಿಗೊಬ್ಬ 3 ಚಿತ್ರದ ಚಿತ್ರೀಕರಣಕ್ಕೆ ಹೋಗಿದ್ದಾಗ ಅಲ್ಲಿನ ಶೂಟಿಂಗ್ ಸಹಕಾರಕ್ಕಾಗಿ ಸಂಜಯ್ ಪಾಲ್ ಎನ್ನುವ ವ್ಯಕ್ತಿ ಇದ್ದರು. ಅವರು ನಮ್ಮ ಬೇಡಿಕೆಗಳನ್ನು ಸರಿಯಾಗಿ ಪೂರೈಸಿಲ್ಲ. ಹಾಗಾಗಿ ನಾವು ಅವರಿಗೆ ಆರಂಭದಲ್ಲಿ ನಿಗದಿ ಮಾಡಿದ ಪೇಮೆಂಟ್ ಮಾತ್ರ ನೀಡಿದ್ದೆವು. ಅವರ ಹೆಚ್ಚುವರಿ ಬೇಡಿಕೆಗೆ ಒಪ್ಪಿರದ ಕಾರಣ, ಅವರು ನಮ್ಮ ತಂಡದ ಜತೆಗೆ ಜಿದ್ದಿಗೆ ಬಿದ್ದಿದ್ದಾರೆ. ಟೀಸರ್ ಮೇಲೆ ರಿಪೋರ್ಟ್ ಮಾಡಿದ್ದಾರೆ. ಹಾಗಾಗಿ ಡಿಲಿಟ್ ಮಾಡಲಾಗಿದೆ. ನಾವು ಸದ್ಯದಲ್ಲೇ ನಮ್ಮ ಸಿನಿಮಾ ಟೀಸರ್ ಮೇಲೆ ಅವರಿಗೆ ಯಾವುದೇ ಹಕ್ಕುಗಳಿಲ್ಲ ಎನ್ನುವುದನ್ನು ಸಾಬೀತು ಪಡಿಸಲಿದ್ದೇವೆ ಎಂದು ಸೂರಪ್ಪ ಬಾಬು ಮಾಧ್ಯಮದ ಮುಂದೆ ಹೇಳಿದರು.
ಸುದೀಪ್ ಸಹಕಾರ ಸ್ಮರಣಾರ್ಹ
ಸುದೀಪ್ ಅವರು ಇಂಥ ಸಮಸ್ಯೆಗಳ ನಡುವೆಯೂ ಅಭೂತಪೂರ್ವವಾಗಿ ಸಹಕಾರ ನೀಡಿದ್ದಾರೆ. ಹಾಗಾಗಿ ಚಿತ್ರ ಕೂಡ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಪೂರ್ತಿ ಚಿತ್ರತಂಡದೊಂದಿಗೆ ಮಾಧ್ಯಮದ ಮುಂದೆ ಹಾಜರಾಗಲಿರುವುದಾಗಿ ಸೂರಪ್ಪ ಬಾಬು ಹೇಳಿದರು.
ಈ ಬಗ್ಗೆ ಆನಂದ್ ಆಡಿಯೋದ ಪ್ರತಿಕ್ರಿಯೆ ಬಯಸಿದ ಸಿನಿಕನ್ನಡ.ಕಾಮ್ ಜತೆಗೆ ಶ್ಯಾಮ್ ಮಾತನಾಡಿ “ನಿರ್ಮಾಪಕರು ದೂರುದಾತರ ಜತೆಗೆ ಕಾಂಪ್ರಮೈಸ್ ಆಗುವ ತನಕ ಟೀಸರ್ ಅಪ್ಲೋಡ್ ಆಗುವುದು ಕಷ್ಟದ ಮಾತು” ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ಸೂರಪ್ಪ ಬಾಬು ಅವರ ಪೂರ್ತಿ ಮಾತುಗಳಿಗಾಗಿ ಇಲ್ಲಿರುವ ಯೂ ಟ್ಯೂಬ್ ಲಿಂಕ್ ಕ್ಲಿಕ್ ಮಾಡಿ.