ಬೆಂಗಳೂರು, ಗಾಂಧಿನಗರ ಎನ್ನುವುದು ಸಿನಿ ಪ್ರಿಯರ ಕನಸು. ಆದರೆ ತಾವು ಇದ್ದಲ್ಲಿಂದಲೇ ಸಿನಿಮಾದ ಕನಸನ್ನು ಕಟ್ಟುವುದು ಕಷ್ಟದ ಮಾತು. ಹಾಗಾಗಿ ಸಿನಿಗನಸಿನ ನನಸಿಗೆ ಎಲ್ಲರೂ ಬೆಂಗಳೂರಿಗೆ ದೌಡಾಯಿಸುವವರೇ. ಬಂದವರೆಲ್ಲ ಗೆಲ್ಲುತ್ತಾರೆ ಎಂದೇನಿಲ್ಲ. ಆದರೆ ಕರಾವಳಿಯಿಂದ ಬಂದವರು ಒಂದಷ್ಟು ಕಾಲ ನೆಲೆ ನಿಲ್ಲುತ್ತಾರೆ, ಮನಗೆಲ್ಲುತ್ತಾರೆ ಎನ್ನುವುದಕ್ಕೆ ಉದಾಹರಣೆಗಳು ಹಲವು. ಆದರೆ ಸಾಧನೆಯ ನಡುವೆಯೂ ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಎನ್ನುವ ಭಾವನೆ. ಇದು ಇಂದಿಗೂ ಹಲವರನ್ನು ಬೆಂಗಳೂರಲ್ಲಿ ಮನೆ ಮಾಡದಿರುವಂತೆ ಮಾಡುತ್ತದೆ. ಹಾಗೆ ಬೆಂಗಳೂರಲ್ಲಿ ಬದುಕಿ ಕರಾವಳಿಯಲ್ಲಿ ಮನೆ ಕಟ್ಟಿದವರ ಸಾಲಲ್ಲಿ ಹೊಸದಾಗಿ ಸೇರ್ಪಡೆಯಾದವರು ಕನ್ನಡ ಕಿರುತೆರೆಯ ಪ್ರತಿಭೆ ಯಶವಂತ್.
ಅಲ್ಲಿದೆ ನಮ್ಮನೆ…
ಕಾಸರಗೋಡು ಮಂಜೇಶ್ವರದ ಪಾತೂರು ನಿವಾಸಿಯಾಗಿರುವ ಯಶವಂತ್ ಬಾಲಪ್ರತಿಭೆಯಾಗಿ ಗುರುತಿಸಿಕೊಂಡವರು. ಸಂಗೀತ, ಹರಿಕತೆ, ನಾಟಕ, ಯಕ್ಷಗಾನ ಎಂದು ಬಹುಮುಖ ಪ್ರತಿಭೆಯಾಗಿ ಬೆಳೆದ ಯಶವಂತ ಧಾರಾವಾಹಿ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಟಿ.ಎನ್ ಸೀತಾರಾಮ್ ಅವರ ತಂಡದ ಮೂಲಕ. ‘ಮುಕ್ತ ಮುಕ್ತ’ ಧಾರಾವಾಹಿಗೆ ಸಹಾಯಕ ನಿರ್ದೇಶಕನಾಗಿ ಜತೆಯಾದ ಯಶವಂತ ‘ಮಹಾ ಪರ್ವ’ದ ಹೊತ್ತಿಗೆ ಎಪಿಸೋಡ್ ಡೈರೆಕ್ಷನ್ ಮಾಡುವಷ್ಟು ಬೆಳೆದು ನಿಂತಿದ್ದರು. ಇದರ ನಡುವೆ ಟಿ.ಎನ್.ಸೀಯವರ ದೂರದೃಷ್ಟಿ ಯಶವಂತನನ್ನು ಕಲಾವಿದನನ್ನಾಗಿಯೂ ಬೆಳೆಸಿತು. ಲಾಯರ್ ಸಿಎಸ್ ಪಿ ಸಹಾಯಕ ಪಾಂಡು ಪಾಟೀಲನಾಗಿ ಯಶವಂತ್ ನಟನೆ ಎಲ್ಲರ ನೆನಪಲ್ಲಿ ಉಳಿಯಿತು. ಬಹುಕಾಲ ಅವರು ಫೇಸ್ಬುಕ್ ನಲ್ಲಿಯೂ ಪಾಂಡು ಪಾಟೀಲನಾಗಿಯೇ ಗುರುತಿಸಿಕೊಂಡಿದ್ದರು. ನಿರ್ದೇಶನದಲ್ಲಿ ಸ್ವತಂತ್ರವಾಗಿ ಬೆಳೆಯುತ್ತಾ ಹೋದ ಯಶವಂತ ದೇವತೆ, ದೇವಯಾನಿ, ಗಂಗಾ, ಮಾಂಗಲ್ಯಂ ತಂತು ನಾನೇನ ಧಾರಾವಾಹಿಗಳ ಬಳಿಕ ಪ್ರಸ್ತುತ ಕನ್ನಡತಿಯ ಕ್ಯಾಪ್ಟನ್ ಹೆಸರಾಗಿದ್ದಾರೆ. ಇದರೊಂದಿಗೆ ‘ಅನಂತು ವರ್ಸಸ್ ನುಸ್ರತ್’ ಮತ್ತು ‘ಹಿಂಗ್ಯಾಕೆ’ ಸಿನಿಮಾಗಳಲ್ಲಿ ನಟನಾಗಿಯೂ ಕಾಣಿಸಿಕೊಂಡಿದ್ದಾರೆ. ಕನ್ನಡತಿಯಲ್ಲಿ ಕನ್ನಡದ ಕಾವ್ಯಗಳ ಸದ್ಬಳಕೆ ಮಾಡಿರುವುದಕ್ಕೆ ಗುರುಗಳಾದ ಸೀತಾರಾಮ್ ಅವರು ಫೇಸ್ಬುಕ್ ಮೂಲಕ ಪ್ರಶಂಸಿಸಿದನ್ನು ಕಂಡು ಯಶವಂತ್ ಕೃತಾರ್ಥರಾಗಿದ್ದಾರೆ. ಹೀಗೆ ಪರದೆ ಮೇಲಿನ ಕನಸು ನನಸಾಗುತ್ತಿರುವ ಹಾಗೆ ಪರದೆ ಹಿಂದಿನ ಬದುಕಿಗೂ ಬುನಾದಿ ಹಾಕಿಕೊಂಡಿದ್ದಾರೆ.
ಗೃಹ ಪ್ರವೇಶದಲ್ಲಿ ತಾರಾ ಸಮಾವೇಶ..!
ಪಾತೂರಲ್ಲಿ “ಶ್ರೀ ದೇವಿ ಕೃಪಾ ನಿಲಯ” ವನ್ನು ಕಟ್ಟಿಕೊಂಡಿದ್ದಾರೆ. ಅದಕ್ಕೆ ಬೆಂಗಳೂರಿನ ವೃತ್ತಿರಂಗದಿಂದಲೂ ಕಲಾವಿದರು ಬಂದು ಶುಭ ಕೋರಿದ್ದು ವಿಶೇಷವಾಗಿತ್ತು. ಕಿರುತೆರೆಯ ಜನಪ್ರಿಯ ಕಲಾವಿದರಾದ ಆರತಿ ಕುಲಕರ್ಣಿ, ಶ್ರೀನಾಥ್ ವಸಿಷ್ಠ, ಚಿತ್ಕಲಾ ಬೀರಾದಾರ್, ಲಕ್ಷ್ಮೀ ನಾಡಗೌಡ, ಮೇಘನಾ, ‘ದೇವಯಾನಿ’ ನಿರ್ಮಾಪಕ ಸುಂದರೇಶ್, ಸಹಾಯಕ ನಿರ್ದೇಶಕ ಹೇಮಂತ್ ಮೊದಲಾವರು ಆಗಮಿಸಿ ಶುಭ ಕೋರಿದ್ದಾರೆ. ಬೆಂಗಳೂರಿನಿಂದ ಸರಿ ಸುಮಾರು 400ಕಿ.ಮೀ ದೂರದಲ್ಲಿರುವ ಯಶವಂತನ ಮನೆಗೆ ಹಿಂದಿನ ದಿನವೇ ಬಂದು, ಬಂಧುಗಳಂತೆ ಗೃಹ ಪ್ರವೇಶದ ಆಚರಣೆಗಳಲ್ಲಿ ಭಾಗಿಯಾಗಿದ್ದಾರೆ ಎಂದರೆ ಅದರಲ್ಲಿ ಅವರು ಯಶವಂತನ ಮೇಲಿಟ್ಟಿರುವ ಅಕ್ಕರೆ, ಆದರದ ಪ್ರತಿಫಲನ ಎದ್ದು ಕಾಣಿಸುತಿತ್ತು. ಈ ಕಲಾವಿದರನ್ನು ಇದುವರೆಗೆ ಪರದೆಯ ಮೇಲೆ ಮಾತ್ರ ನೋಡಿದ್ದ ಯಶವಂತನ ಮನೆಮಂದಿ ಸೇರಿದಂತೆ ನೆರೆದವರು ಕೂಡ ತಾರೆಯರ ಸರಳತೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಶವಂತ ಅವರದ್ದು ಕೂಡು ಕುಟುಂಬ. ತಂದೆ ಗಣಪತಿ ಆಚಾರ್ಯ, ತಾಯಿ ಶಾರದಾ, ತಮ್ಮ ನಿತಿನ್ ಜತೆಗಿನ ಬದುಕಿಗೆ ಯೋಗ್ಯವಾದಂಥ ಮನೆಯೊಂದು ಪಾತೂರಿನಲ್ಲಿ ಸಾಕಾರರೂಪ ಪಡೆದಿದೆ. ಮನೆ ಕಟ್ಟಿಯಾಗಿದೆ. ಇನ್ನು ಮದುವೆ ಸಿಹಿಯನ್ನು ಕೂಡ ಸದ್ಯದಲ್ಲೇ ನೀಡುವಂತಾಗಲಿ ಎನ್ನುವುದು ಸಿನಿಕನ್ನಡ.ಕಾಮ್ ಹಾರೈಕೆ.