
ಎಲ್ಲೆಲ್ಲೂ ಕೊರೊನಾದೇ ಸುದ್ದಿ. ಆದರೆ ಕೊರೊನಾದ ಗೋರಿ ಮೇಲೆ ಹತ್ತಿ ಬರೋಣ ಅಂತ ಕಾಯುತ್ತಿದ್ದಾರೆ ನಮ್ ಕಿರಣ. ಹೌದು, ಕಿರಣ್ ಕೊನೆಗೂ ನಾಯಕರಾಗಿದ್ದಾರೆ. ಅವರೇ ಹೇಳುವಂತೆ ಸಿನಿಮಾ ಎನ್ನುವುದು ದಶಕಗಳ ಹಿಂದಿನ ಕನಸು. ಉತ್ತರ ಕನ್ನಡದಲ್ಲಿ ಮಾಧ್ಯಮ ಲೋಕದ ಮೂಲಕ ವೃತ್ತಿ ಬದುಕು ಆರಂಭಿಸಿದ ಅವರು ಬೆಂಗಳೂರು ಸೇರುವುದಕ್ಕೂಅದೇ ಕಾರಣವಾಗಿತ್ತು. ರಾಜ್ ಟಿ.ವಿಯಲ್ಲಿ ಸಿನಿಮಾ ವರದಿಗಾರನಾಗಿ ವೃತ್ತಿ ಬದುಕು ಆರಂಭಿಸಿದ ಅವರು ಇಂದು ಗೋರಿ ಎನ್ನುವ ಚಿತ್ರದ ನಾಯಕನಾಗುವ ತನಕ ಏರಿದ, ಜಾರಿದ ಮೆಟ್ಟಿಲುಗಳು ಹಲವು. ಆದರೆ ಇನ್ನೇನು ತಿಂಗಳೊಳಗೆ ಬೆಳ್ಳಿ ತೆರೆಯ ಮೂಲಕ ತಮ್ಮ ಕನಸಿನ ಬಾಗಿಲು ತೆರೆದು ಕೈ ಬೀಸಲಿದ್ದಾರೆ.
`ಗೋರಿ’ ಎನ್ನುವ ಕನಸಿನ ಬೆನ್ನೇರಿ…!
`ಗೋರಿ’ ಎನ್ನುವ ಹೆಸರು ಕೇಳಿದವರು ಇದೇನಪ್ಪ ಮೊದಲ ಚಿತ್ರಕ್ಕೇನೆ ಇಂಥ ನೆಗೆಟಿವ್ ಟೈಟಲ್ ಇಟ್ಟಿದ್ದಾರಲ್ಲ? ಎಂದು ಸಂದೇಹಿಸುವುದು ಸಹಜ. ಆದರೆ ಇದು ಕಿರಣ್ ಮತ್ತು ಸ್ನೇಹಿತರ ಕನಸಿನ ಆರಂಭ. ಉತ್ತರ ಕರ್ನಾಟಕದ ಜನತೆಗೆ ಸಿನಿಮಾದ ಮೇಲೆ ಒಲವು ಹೆಚ್ಚು ಎಂದು ಮೊದಲಿನಿಂದಲೂ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಅಲ್ಲಿನ ಕಲಾವಿದರಿಗೆ ಬೆರಳೆಣಿಕೆಯ ಅವಕಾಶಗಳಷ್ಟೇ ಕನ್ನಡ ಚಿತ್ರರಂಗದಲ್ಲಿ ದೊರಕಿವೆ. ಕಿರಣ್ ಅವರಿಗೆ ತಾವು ಕಲಾವಿದನಾಗುವುದಷ್ಟೇ ಅಲ್ಲ; ತಮ್ಮ ಸ್ನೇಹ ಬಳಗದೊಂದಿಗೆ ಒಂದು ಚಿತ್ರ ಮಾಡಬೇಕೆನ್ನುವ ಕನಸು ದಶಕದ ಹಿಂದೆಯೇ ಇತ್ತು. ಅದು ಇಂದು ಬೆಳೆದು ನಿಂತಿದೆ. ಕಿರಣ್ ಸ್ನೇಹಿತರಾದ ರಾಘವೇಂದ್ರರವರು ಚಿತ್ರವನ್ನು ನಿರ್ದೇಶಿಸಿದ್ದಾರೆ. ಉತ್ತರ ಕರ್ನಾಟಕದ್ದೇ ಒಳ್ಳೆಯ ಲೊಕೇಶನ್ ಬಳಸಿ ಚಿತ್ರೀಕರಣವನ್ನು ಮಾಡಿದ್ದಾರೆ. ಒಂದಷ್ಟು ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಕೂಡ ಬಳಸಿಕೊಂಡಿದ್ದಾರೆ. ಆದರೆ ಪೂರ್ತಿ ಕರ್ನಾಟಕ ಮೆಚ್ಚುವಂಥ ಸಬ್ಜೆಕ್ಟ್ ತೆಗೆದುಕೊಂಡು ಚಿತ್ರ ಮಾಡಿರುವ ತೃಪ್ತಿ ತಂಡಕ್ಕಿದೆ. ಹಾಗಾಗಿಯೇ ಸಿನಿಮಾವನ್ನು ರಾಜ್ಯಾದ್ಯಂತ ನೂರು ಚಿತ್ರಮಂದಿರಗಳಲ್ಲಿ ತೆರೆಕಾಣಿಸುವ ಯೋಜನೆ ಹಾಕಿಕೊಂಡಿದ್ದಾರೆ.
ಹಾಡುಗಳ ಹಬ್ಬ

ಸಾಮಾನ್ಯವಾಗಿ ಸಿನಿಮಾದ ಹಾಡುಗಳನ್ನೇ ಮೊದಲ ಪ್ರದರ್ಶನಕ್ಕೆ ಕರೆಯೋಲೆ ಎನ್ನಲಾಗುತ್ತದೆ. ಯಾಕೆಂದರೆ ಹಾಡು ಇಷ್ಟವಾದರೆ ಅದನ್ನು ಹೇಗೆ ಚಿತ್ರೀಕರಿಸಲಾಗಿರುತ್ತದೆ ಎನ್ನುವುದನ್ನು ನೋಡಲಿಕ್ಕೆಂದೇ ಥಿಯೇಟರ್ ಗೆ ಲಗ್ಗೆ ಇಡುವವರಿಗೆ ಕೊರತೆ ಇಲ್ಲ. ಗೋರಿ ಚಿತ್ರಕ್ಕೆ ವಿನು ಮನಸು ಸಂಗೀತ ನೀಡಿದ್ದಾರೆ. `ಚುಟು ಚುಟು’ ಖ್ಯಾತಿಯ ಶಿವು ಭೇರ್ಗಿ ರಚನೆಯ ಹಾಡು ಈಗಾಗಲೇ ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾ ವರದಿಗಾರರಾಗಿರುವ ಮಾಲತೇಶ್ ಜಗ್ಗಿನ್ ಅವರು ಒಂದು ಪ್ರೇಮಗೀತೆ ಸೇರಿದಂತೆ ಎರಡು ಹಾಡುಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಒಂದು ಮೆಲೊಡಿ ಗೀತೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೂಲಕ ಬಿಡುಗಡೆಗೊಳಿಸುವ ಪ್ರಯತ್ನ ನಡೆಸಲಾಗಿದೆ.
ಹಾಡುಗಳ ಚಿತ್ರೀಕರಣದ ವಿಚಾರದಲ್ಲಿಯೂ ಸಾಕಷ್ಟು ಗುಣಮಟ್ಟ ಕಾಯ್ದುಕೊಳ್ಳುವ ಪ್ರಯತ್ನ ನಡೆಸಲಾಗಿದೆ. ಉತ್ತರ ಕರ್ನಾಟಕದಲ್ಲಿ ಗಣೇಶನ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಅದಕ್ಕೆ ತಕ್ಕಂತೆ ಗಣೇಶೋತ್ಸವದ ಟಪ್ಪಾಂಗುಚ್ಚಿ ಹಾಡನ್ನು ಅದ್ದೂರಿಯಾಗಿ ತೆಗೆಯಲಾಗಿದೆ ಎಂದು ಕಿರಣ್ ಹೇಳುತ್ತಾರೆ. ಮಾತ್ರವಲ್ಲ,ಬ್ಯಾರೇನೇ ಐತಿ’ ಹಾಡಿನ ಲಿರಿಕಲ್ ವಿಡಿಯೋಗೆ ದೊರಕಿದ ಅದ್ಭುತ ಪ್ರತಿಕ್ರಿಯೆ ಕಂಡು, ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಇನ್ನಷ್ಟು ಚೆನ್ನಾಗಿ ಮಾಡಿಕೊಡೋಣ ಎಂದು ಮಾಡೋಣ ರಿಶೂಟ್ ಮಾಡಿರುವುದನ್ನು ಕೂಡ ಕಿರಣ್ ಸ್ಮರಿಸುತ್ತಾರೆ. ಹಾಡುಗಳಿಗೆಂದೇ ಕುಂದಾಪುರ, ಉಡುಪಿಯಂಥ ಗ್ರೀನರಿ ಪ್ರದೇಶಗಳಿಗೂ ಹೋಗಿ ಚಿತ್ರೀಕರಿಸಿದ್ದೇವೆ. ಕನ್ನಡದ
ಫ್ಯಾನ್’ ಸಿನಿಮಾ ಖ್ಯಾತಿಯ ನೃತ್ಯ ನಿರ್ದೇಶಕ ಬಾಲ ಅವರು ತಮ್ಮ 35ನೆಯ ಚಿತ್ರವಾಗಿ ಗೋರಿಯ ಒಂದು ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಉಳಿದ ಮೂರು ಗೀತೆಗಳಿಗೆ ಸ್ನೇಹಾ ನೃತ್ಯ ನಿರ್ದೇಶಕರು. ಕೆ.ಕಲ್ಯಾಣ್ ಅವರು ಬರೆದಿರುವ ಫೀಲಿಂಗ್ ಗೀತೆಗೆ `ಸರಿಗಮಪ’ ರಿಯಾಲಿಟಿ ಶೋ ವಿಜೇತ ಮೆಹಬೂಬ್ ಅವರು ಕಂಠ ನೀಡಿದ್ದಾರೆ. ಅದನ್ನು ಯುಗಾದಿಗೆ ಬಿಡುಗಡೆ ಮಾಡಲು ಯೋಜನೆ ಹಾಕಿದ್ದೇವೆ ಎಂದು ಕಿರಣ್ ತಿಳಿಸಿದ್ದು,. ಅದರ ಬಳಿಕ ಆಕ್ಷನ್ ಟೀಸರ್ ಬಿಡುಗಡೆಗೊಳಿಸಲಿದ್ದಾರಂತೆ. ಈಗಾಗಲೇ ಬಿಡುಗಡೆಯಾಗಿರುವ ಲಿರಿಕಲ್ ಹಾಡುಗಳು ಎರಡು ಲಕ್ಷದಷ್ಟು ವ್ಯೂವ್ ಪಡೆದುಕೊಂಡಿರುವುದಕ್ಕೆ ಕಿರಣ್ ಖುಷಿಯಾಗಿದ್ದಾರೆ.
ಸ್ನೇಹಿತರ ಚಿತ್ರ

ಚಿತ್ರ ಮಾಡುವ ಆಸೆ ಆರಂಭದಿಂದಲೂ ಇತ್ತು. ಆದರೆ ನಮ್ಮನ್ನು ನಂಬಿ ಬಂಡವಾಳ ಹೂಡುವವರು ಯಾರೂ ಇರಲಿಲ್ಲ. ಈಗಲೂ ಅಷ್ಟೇ, ನಾವು ನಾವೇ ಸ್ನೇಹಿತರು ಜತೆ ಸೇರಿಕೊಂಡು ಹಣ ಹಾಕಿದ್ದೇವೆ. ಚಿತ್ರ ಕೊನೆಯ ಹಂತ ತಲುಪುವಾಗ ನಮ್ಮ ಕೈ ಬರಿದಾಗುತ್ತಾ ಬಂದಿತ್ತು. ಆಗ ಪರಮೇಶಪ್ಪ ಪೂಜಾರ್, ಸೋಮಣ್ಣ ಮೊದಲಾದ ಊರವರೇ ಸಹಾಯ ಮಾಡಿದರು. ನಾವು ಹೊಸದಾಗಿ ಚಿತ್ರ ಮಾಡಿದ್ದರೂ ಚಿಕ್ಕದಾಗಿ ಚೊಕ್ಕದಾಗಿ ಮುಗಿಸಿದ್ದೇವೆ. ಎರಡು ಗಂಟೆಯೊಳಗೆ ಚಿತ್ರ ಮುಗಿಯಬಹುದು. ಪ್ರಸ್ತುತ ಸೆನ್ಸಾರ್ ಹಂತದಲ್ಲಿದೆ. ಸೆನ್ಸಾರ್ ಆದ ಬಳಿಕ ಡೇಟ್ ಅನೌನ್ಸ್ ಮಾಡಲಿದ್ದೇವೆ. ಯಾವುದಕ್ಕೂ ದರ್ಶನ್ ಅವರ `ರಾಬರ್ಟ್’ ಬರುವುದನ್ನು ಕಾಯುತ್ತಿದ್ದೇವೆ. ಅದರ ಅಬ್ಬರ ಮುಗಿದ ಬಳಿಕವೇ ನಮ್ಮ ಪ್ರವೇಶ. ಮಾಧ್ಯಮದವರು ಎಂದಿನಂತೆ ಹೊಸಬರ ಉತ್ಸಾಹಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಅದರಲ್ಲಿಯೂ ನಾನು ಕೂಡ ಮಾಧ್ಯಮ ಕ್ಷೇತ್ರದವನೇ ಆಗಿರುವ ಕಾರಣ ಹೆಚ್ಚಿನ ಸಹಕಾರವನ್ನು ನಾನು ನಿರೀಕ್ಷಿಸುತ್ತೇನೆ ಎಂದು ಕಿರಣ್ ಹೇಳುತ್ತಾರೆ.
ನಿರ್ದೇಶಕ ಆರ್.ಚಂದ್ರು ಅವರ ನಿರ್ದೇಶನದ `ಲಕ್ಷ್ಮಣ’ ಚಿತ್ರದಲ್ಲಿ ಚಿಕ್ಕಣ್ಣನ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಿರಣ್ ಅವರು, ಕಾದಲ್, ಸಿದ್ದಾಪುರ, ಸ್ವಾರ್ಥರತ್ನ ಸೇರಿದಂತೆ ಇದುವರೆಗೆ ಒಂಬತ್ತರಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ನಾಯಕರಾಗಿ ಇದು ಅವರಿಗೆ ಪ್ರಥಮ ಚಿತ್ರವಾಗಿದ್ದು, ಸಿನಿಕನ್ನಡ.ಕಾಮ್ ಅವರಿಗೆ ಶುಭ ಕೋರುತ್ತದೆ.




