ರಕ್ಷಿತ್ ಶೆಟ್ಟಿ ಕಂಡಂತೆ ಸ್ನೇಹ ಮತ್ತು ಕರ್ತವ್ಯ!

ಚಿತ್ರರಂಗಕ್ಕೆ ಅವಕಾಶ ಬಯಸಿ ಬರುವವರಲ್ಲಿ ಹಲವು ವಿಧ. ಕೆಲವರಿಗೆ ತೋರಿಸಲು ಒಂದು ಮದುವೆ ಆಲ್ಬಮ್ ಇರಬೇಕು ಎನ್ನುವಂತೆ ನಾಯಕನಾಗಿ ಒಂದು ಸಿನಿಮಾ ಮಾಡುವಲ್ಲಿಗೆ ತೃಪ್ತಿ ಸಿಗುತ್ತದೆ. ಆ ಚಿತ್ರದ ನಿರ್ಮಾಪಕ ಸ್ವತಃ ತಂದೆಯೇ ಆದರೂ ಖರ್ಚಾದ ಹಣ ಎಷ್ಟು ವಾಪಾಸಾಯಿತು ಎನ್ನುವ ಲೆಕ್ಕ ಅವರಿಗೆ ಬೇಕಾಗಿಲ್ಲ. ಇನ್ನು ಕೆಲವರಿಗೆ ಖಳನಟನಾಗಿಯೋ, ಪೋಷಕ ನಟನಾಗಿಯೂ ಅವಕಾಶ ಸಿಗುತ್ತಿದ್ದರೆ ಸಾಕು. ಆದರೆ ನಾಯಕನಾಗಿ ನಟಿಸಿದ ಚಿತ್ರ ಗೆದ್ದ ಮೇಲೆಯೂ ಪ್ರಯೋಗಾತ್ಮಕ ಚಿತ್ರಗಳತ್ತ ಮಾತ್ರ ಗಮನ ಹರಿಸುವವರು ಯಾರಾದರೂ ಇದ್ದರೆ ಅದು ರಕ್ಷಿತ್ ಶೆಟ್ಟಿ ಮಾತ್ರ. ಯಾರು ಏನೇ ಹೇಳಲಿ ಅವರು ತಮ್ಮ ಕಲ್ಪನೆಯ ಚಿತ್ರ ತೆರೆಗೆ ತರುವ ತನಕ ಯಾವುದಕ್ಕೂ ಚಿಂತೆ ಮಾಡುವುದಿಲ್ಲ. ಚಿತ್ರದ ಬಗ್ಗೆ ಏನೇ ನೆಗೆಟಿವ್ ಟಾಕ್ ಇದ್ದರೂ ಅವುಗಳನ್ನು ಮೀರಿ ಪ್ರೇಕ್ಷಕರನ್ನು ಥಿಯೇಟರ್ ಗೆ ಕರೆದು ತರುವ ತಾಕತ್ತು ಅವರ ಚಿತ್ರಗಳಿಗೆ ಇದೆ ಎನ್ನುವುದು ಪದೇಪದೆ ಸಾಬೀತಾಗುತ್ತಿದೆ. ಮಾತ್ರವಲ್ಲ ಇತ್ತೀಚೆಗೆ ತೆರೆಕಂಡ `ಅವನೇ ಶ್ರೀಮನ್ನಾರಾಯಣ’ ಸಿನಿಮಾ ಕನ್ನಡದಲ್ಲಿ ಉತ್ತಮ ಗೆಲುವನ್ನು ಕೂಡ ಗಳಿಸಿತ್ತು. ಚಿತ್ರದ ಹೊರಗಿನ ಅವರ ಸ್ನೇಹ ಸಂಬಂಧಗಳು ಚಿತ್ರದೊಳಗೆ ಎಷ್ಟು ಪರಿಣಾಮ ಬೀರುತ್ತವೆ ಎನ್ನುವ ಬಗ್ಗೆ ಸಿನಿಕನ್ನಡ.ಕಾಮ್ ಕೇಳಿದ ಪ್ರಶ್ನೆಗಳಿಗೆ ರಕ್ಷಿತ್ ಶೆಟ್ಟಿ ನೀಡಿರುವ ಉತ್ತರ ಇಲ್ಲಿದೆ.

ಈ ಚಿತ್ರದಲ್ಲಿನ ರಿಷಭ್ ಶೆಟ್ಟಿಯ ಪಾತ್ರ ನಿಮ್ಮಿಬ್ಬರ ಸ್ನೇಹಕ್ಕಾಗಿ ಸೃಷ್ಟಿಯಾಗಿದ್ದ?

ಕೆಲಸದ ವಿಚಾರಕ್ಕೆ ಬಂದರೆ ನಾನು ಇವನು ನನ್ನ ಸ್ನೇಹಿತ ಎನ್ನುವ ಕಾರಣಕ್ಕೆ ಯಾರಿಗೂ ಕೆಲಸ ನೀಡಿಲ್ಲ. ಪ್ರತಿಭೆ ಇದ್ದರೆ ಮಾತ್ರ ಕೆಲಸ. ನನ್ನ `ತುಘಲಕ್’ ಚಿತ್ರದ ಸಮುಯ ಖರ್ಚಿಗೂ ದುಡ್ಡಿಲ್ಲದ ಸಂದರ್ಭದಲ್ಲಿ ಕೂಡ ನನಗೆ ರಿಷಭ್ ಊಟ ಹಾಕಿದ್ದ. ಆತ ಆಗಲೇ ಕನ್ಸ್ಟ್ರಕ್ಷನ್ ಇಂಡಸ್ಟ್ರಿಯಲ್ಲಿದ್ದ ಕಾರಣ, ಕೈಯಲ್ಲಿ ದುಡ್ಡಿತ್ತು. ನನಗೇನೂ ಆದಾಯ ಇರದ ಆ ಸಂದರ್ಭದಲ್ಲಿ ರಿಷಭ್ ಮಾತ್ರವಲ್ಲ, ಉಳಿದ ಒಂದಷ್ಟು ಸ್ನೇಹಿತರು ನೀಡಿದ ಸಹಕಾರ ಮರೆಯಲಾಗದಂಥದ್ದು. ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ರಿಷಭ್ ಮಾಡುವ ಪಾತ್ರದ ಬಗ್ಗೆ ಯೋಚಿಸಿದಾಗಲೆಲ್ಲ ನನ್ನ ಮುಖದಲ್ಲಿ ನಗು ಮೂಡುತ್ತಿತ್ತು. ಹಾಗಾಗಿ ಅದು ಪ್ರೇಕ್ಷಕರಿಗೂ ನಗು ತರಿಸಬಹುದೆನ್ನುವ ನನ್ನ ನಂಬಿಕೆ ಬಳಿಕ ನಿಜವೂ ಆಗಿತ್ತು!

ಪರದೆಯ ಮೇಲೆ ಯಾವ ನಟಿಯೊಂದಿಗೂ ಕಿಸ್ಸಿಂಗ್ ದೃಶ್ಯ ಬೇಡವೆನ್ನುವ ನಿರ್ಧಾರವೇಕೆ?

ನನ್ನ ಸಿನಿಮಾ ಪುಟ್ಟ ಮಕ್ಕಳ ಸಮೇತ ಎಲ್ಲರೂ ನೋಡಬೇಕು. ಸಾಮಾನ್ಯವಾಗಿ ಎಲ್ಲ ಮಕ್ಕಳಿಗೆ ಅಡ್ವೆಂಚರ್ ಇಷ್ಟವಾಗುತ್ತೆ. ಆದರೆ ಅದೇ ಸಮಯದಲ್ಲಿ ಹಿಂಸೆ ಇಷ್ಟವಾಗುವುದಿಲ್ಲ. ಹಾಗಾಗಿ ನಾನು ಹಿಂಸೆಯನ್ನು ವೈಭವೀಕರಿಸುವುದಿಲ್ಲ. ಅದೇ ರೀತಿ ನಾನು ವೈಯಕ್ತಿಕವಾಗಿ ಬಾಲ್ಯದಲ್ಲಿ ಕಂಡ ಸಿನಿಮಾಗಳಿಂದ ಪ್ರಭಾವಿತಗೊಂಡವನು. ಸಿನಿಮಾಗಳನ್ನು ನೋಡಿಯೇ ಒಳಿತು ಕೆಡುಕುಗಳನ್ನು ಅರಿತವನು. ನಮ್ಮ ಮನೆಯಲ್ಲಿ ನಾನು ಚಿಕ್ಕವನಾಗಿದ್ದಾಗ ನನ್ನ ಮುಂದೆ ಯಾವತ್ತೂ ಕಿಸ್ಸಿಂಗ್ ದೃಶ್ಯಗಳಿರುವ ಚಿತ್ರಗಳನ್ನು ಹಾಕುತ್ತಿರಲಿಲ್ಲ. ಈ ವಯಸ್ಸಲ್ಲಿ ಅದನ್ನು ನೋಡಬಾರದು ಎನ್ನುವುದು ಅವರ ಅನಿಸಿಕೆಯಾಗಿತ್ತು. ಮುಂದಿನ ಜನರೇಶನ್ ಗೆ ನಾನು ಕೂಡ ಚಿತ್ರದ ಮೂಲಕ ಅದನ್ನೇ ನೀಡಬೇಕಿದೆ.

Recommended For You

Leave a Reply

error: Content is protected !!
%d bloggers like this: