ಚಿತ್ರ: ‘ಇದು ಆಕಾಶವಾಣಿ ಬೆಂಗಳೂರು ನಿಲಯ’
ನಿರ್ದೇಶನ: ಎಂ ಹರಿಕೃಷ್ಣ
ನಿರ್ಮಾಣ: ಶಿವಾನಂದಪ್ಪ ಬಳ್ಳಾರಿ
ತಾರಾಗಣ: ರಣವೀರ್ ಪಾಟೀಲ್, ನಿಕಿತಾ ಸ್ವಾಮಿ
ಚಿತ್ರದ ಟ್ರೇಲರ್ ಮೂಲಕವೇ ದೆವ್ವದ ಕುರಿತಾದ ಚಿತ್ರ ಎನ್ನುವ ಸೂಚನೆ ನೀಡಲಾಗಿತ್ತು. ಹಾಗಾಗಿ ಟ್ರೇಲರ್ ನೋಡಿದ ಪ್ರೇಕ್ಷಕರು ಅಂಥದೊಂದು ನಿರೀಕ್ಷೆಯಲ್ಲೇ ಚಿತ್ರಮಂದಿರಕ್ಕೆ ಕಾಲಿಟ್ಟಿರುತ್ತಾರೆ. ಒಂದು ವೇಳೆ ಏನೂ ತಿಳಿಯದೆ ಹೋಗಿದ್ದಲ್ಲಿ ದೆವ್ವದಾಟ ಕಂಡು ಆತಂಕಗೊಂಡರೆ ಅಚ್ಚರಿ ಇಲ್ಲ.
ಆಕಾಶವಾಣಿ ಎನ್ನುವುದರಲ್ಲೇ ಎರಡು ಹೆಸರಿದೆ. ಆಕಾಶ್ ಎನ್ನುವ ಹೆಸರು ಮೊದಲಿಗೆ ಬಂದರೂ ಆ ಪಾತ್ರ ತಡವಾಗಿ ಎಂಟ್ರಿ ನೀಡುತ್ತದೆ. ಹಾಗಾಗಿ ಆರಂಭದ ಬಹುಪಾಲು ಕತೆ ವಾಣಿಯ ಜೊತೆಯಲ್ಲೇ ಸುತ್ತುತ್ತದೆ. ವಾಣಿ ಹಳ್ಳಿಯ ಹುಡುಗಿ. ಪಂಕ್ಚರ್ ಅಂಗಡಿ ಇರಿಸಿಕೊಂಡ ತಂದೆಯ ಮುದ್ದಿನ ಮಗಳು. ತಾಯಿಯನ್ನು ಕಳೆದುಕೊಂಡ ವಾಣಿಯೆಂದರೆ ಅಪ್ಪನಿಗೆ ಬಲುಮುದ್ದು. ಆದರೆ ಆ ಅಪ್ಪನನ್ನೂ ಕಳೆದುಕೊಂಡ ಮೇಲೆ ವಾಣಿ ಅನಾಥೆ. ಆನಂತರ ಆಕೆಯ ಬಾಳಲ್ಲಿ ನಡೆದಿದ್ದೇನು ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್. ಆದರೆ ಅದನ್ನು ಮತ್ತೊಂದು ಫ್ಲ್ಯಾಶ್ ಬ್ಯಾಕ್ ಮೂಲಕ ಹೇಳುವ ನಿರ್ದೇಶಕರು ಪ್ರಸ್ತುತ ವಾಣಿ ಬೆಂಗಳೂರು ನಗರದಲ್ಲಿ ಭವ್ಯವಾದ ಮನೆಯೊಂದರ ಒಡತಿಯಾಗಿರುವುದಾಗಿ ತೋರಿಸುತ್ತಾರೆ. ಅನಾಥೆಯಾಗಿದ್ದ ವಾಣಿ ದಿಢೀರನೆ ಅಷ್ಟೊಂದು ಐಶ್ಚರ್ಯವಂತೆಯಾಗಿದ್ದು ಹೇಗೆ ಎಂದು ತಿಳಿಯಲು ಕುತೂಹಲ ಇದ್ದವರು ಚಿತ್ರ ನೋಡಬಹುದು.
ಹಳ್ಳಿಯಲ್ಲಿನ ವಾಣಿ ಪಾತ್ರವನ್ನು ಬಾಲನಟಿ ಮಾಡಿದ್ದರೆ ನಗರದಲ್ಲಿ ನಾಯಕಿಯಾಗಿ ನಿಕಿತಾ ಸ್ವಾಮಿ ನಟಿಸಿದ್ದಾರೆ. ಒಮ್ಮೆ ಮುಗ್ದ ಹೆಣ್ಣು ಮತ್ತೊಮ್ಮೆ ಚಾಲಾಕಿ, ಇನ್ನೊಮ್ಮೆ ದೆವ್ವ ಮೈಗೆ ಬಂದಂತೆ ಹಾಗೂ ಹಳ್ಳಿ ಹೆಣ್ಣಿನ ರೂಪದಲ್ಲಿ ಕೂಡ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ ನಿಕಿತಾ. ಆದರೆ ಸಾಕಷ್ಟು ಪಾತ್ರಗಳ ಮೂಲಕ ಆಲಿಸಿರುವ ಡಬ್ಬಿಂಗ್ ಕಂಠ ಪಾತ್ರದ ಭಾವಕ್ಕೆ ಏಕತಾನತೆ ತುಂಬಿದೆ. ಚಿತ್ರದಲ್ಲಿ
ಆಕಾಶ್ ಪಾತ್ರಕ್ಕೂ ಮೂರು ಶೇಡ್ ಗಳಿವೆ. ವಾಣಿಯ ತಂದೆಯಾಗಿ ನಾಗೇಂದ್ರ ಶಾ ನಟಿಸಿದ್ದು ಪಾತ್ರಕ್ಕೆ ನೈಜತೆ ತುಂಬಲು ಶ್ರಮಿಸಿದ್ದಾರೆ. ಮನೆಗೆಲಸದಾಕೆಯಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಾ ಅಭಿನಯಿಸಿದ್ದಾರೆ. ವಾಣಿಗೆ ರಕ್ಷಣೆ ನೀಡುವ ಪೊಲೀಸ್ ಅಧಿಕಾರಿಯಾಗಿ ನಾರಾಯಣ ಸ್ವಾಮಿ ಎಂದಿನಂತೆ ತಮ್ಮ ಪಾತ್ರ ಜೀವ ತುಂಬಿದ್ದಾರೆ. ಟೆನ್ನಿಸ್ ಕೃಷ್ಣ ಅವರು ಮಾಡಿರುವ ಪಾತ್ರ ಕತ್ತಲೆಯಲ್ಲಿ ಬರುವ ಕಾರಣ ಕಂಠ ಕೇಳಿಸ್ಕೊಂಡೇ ಅದು ಅವರು ಎಂದು ನಂಬಬೇಕಾಗಿದೆ! ಚಿತ್ರಕ್ಕೊಂದು ತಾರ್ಕಿಕ ಅಂತ್ಯ ನೀಡಲು ಪ್ರತ್ಯಕ್ಷವಾಗುವ ಸುಚೇಂದ್ರ ಪ್ರಸಾದ್ ಪಾತ್ರ ಕಥಾಗತಿಯನ್ನು ಹಾರರ್ ನಿಂದ ಒಮ್ಮೆಲೆ ಆಧ್ಯಾತ್ಮಿಕದ ಕಡೆಗೆ ಒಯ್ಯುತ್ತದೆ.
ಒಟ್ಟು ಸಿನಿಮಾದಲ್ಲಿ ನಿರ್ದೇಶಕರು ಕರ್ಮಕ್ಕೆ ತಕ್ಕಂತೆ ಫಲ ಇರುತ್ತದೆ; ಪಾಪ ಮಾಡಿದರೆ ಪ್ರಾಯಶ್ಚಿತ್ತ ಪಡಬೇಕು ಎಂದು ಸಂದೇಶ ನೀಡಿದ್ದಾರೆ. ಆದರೆ ಸಸ್ಪೆನ್ಸ್ ಚಿತ್ರವಾದರೂ ಕುತೂಹಲ ಮೂಡಿಸುವುದಿಲ್ಲ ಎನ್ನುವುದು ಸತ್ಯ. ರಾತ್ರಿ ಕತೆ ಹೇಳುವಂತೆ ಪೀಡಿಸುವ ಮಗಳಿಗೆ ಹೇಳಿದಂತೆ ತೋರಿಸಿದ ಕತೆ ಒಬ್ಬ ತಂದೆ ಮಗಳಿಗೆ ಹೇಳುವ ಕತೆಯೇ ಎನ್ನುವಂತಿದೆ! ಛಾಯಾಗ್ರಾಹಕರು ನಾಯಕಿಯನ್ನು ಗ್ಲಾಮರಸ್ ಆಗಿ ತೋರಿಸಲು ಪ್ರಯತ್ನಿಸಿರುವುದು ಗೊತ್ತಾಗುತ್ತದೆ. ಉಳಿದಂತೆ ವಿಶೇಷವಾಗಿ ಉಲ್ಲೇಖಿಸಬಹುದಾದ ವಿಚಾರಗಳಿಲ್ಲ.
