‘ಚಪ್ಪಾಳೆಯಿಂದ ವೈರಸ್ ನಾಶವಾಗಲಿದೆ’ ಎಂದ ನಟ ಮೋಹನ್ ಲಾಲ್!

ನಮ್ಮ ದೇಶದ ಜನಪ್ರಿಯ ಕಲಾವಿದರಲ್ಲಿ ಮಲಯಾಳಂ ನಟ ಮೋಹನ್ ಲಾಲ್ ಒಬ್ಬರು. ಅವರ ನೈಜ‌ ನಟನೆಯನ್ನು ಕೊಂಡಾಡದವರಿಲ್ಲ. ಆದರೆ ನಟನೆಯಾಚೆಗಿನ‌ ವಿಚಾರಕ್ಕೆ ಬಂದರೆ ತಮ್ಮ ಹೇಳಿಕೆಗಳ ಮೂಲಕ ತಾನೋರ್ವ ಅಜ್ಞಾನಿ ಅಥವಾ ಮೋದಿ ಭಕ್ತ ಎನ್ನುವುದನ್ನು ಪದೇ ಪದೇ ಸಾಬೀತು ಮಾಡುತ್ತಿದ್ದಾರೆ.

ಇದು ಕೊರೊನ ಎನ್ನುವ ವೈರಸ್ ಬಗ್ಗೆ ಮನುಜ ಕುಲವೆಲ್ಲ ತಲೆಕೆಡಿಸಿಕೊಂಡಿರುವ ಸಮಯ. ಸಾಂಕ್ರಾಮಿಕ ರೋಗ, ಸಾವಿನ ಭೀತಿಯಿಂದ ಜನ ಮನೆಯಿಂದ ಕಾಲು ಹೊರಗಿಡಲಾಗದ ಪರಿಸ್ಥಿತಿ ಉಂಟಾಗಿದೆ. ಅದರಲ್ಲಿ ಕೂಡ ಇಂದಿನ ದಿನ ಅಂದರೆ ಮಾರ್ಚ್ 22ರ ಭಾನುವಾರವನ್ನು ‘ಜನತಾ ಕರ್ಫ್ಯೂ’ ಎನ್ನುವ ಆಶಯದ ಮೂಲಕ ಜನರು ಸ್ವಯಂಪ್ರೇರಿತವಾಗಿ ಮನೆಯಲ್ಲೇ ಕಳೆಯುವ ಮೂಲಕ ಆಚರಿಸಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದ್ದರು. ಜತೆಗೆ ಸ್ಪೇನ್ ಪ್ರಧಾನಿ ನೀಡಿದ ಕರೆಯ ಮಾದರಿಯಲ್ಲೇ ಮನೆಯ ಬಾಲ್ಕನಿ ಮೇಲೆ ನಿಂತು ಚಪ್ಪಾಳೆ ಹೊಡೆಯುವಂತೆ ವಿನಂತಿಸಿದ್ದರು. ಆ ಚಪ್ಪಾಳೆಗಳು ಕೊರೊನ ವಿರುದ್ಧದ ಹೋರಾಟದಲ್ಲಿ ನಿರಂತರ ಭಾಗಿಯಾಗಿರುವ ವೈದ್ಯರು, ಪೌರಕಾರ್ಮಿಕರು ಮೊದಲಾದವರ ಸೇವೆಗೆ ಸಲ್ಲಿಸುವ ಧನ್ಯವಾದ ಎಂದು ಹೇಳಲಾಗಿತ್ತು. ಆದರೆ ಆ ಚಪ್ಪಾಳೆ ಜತೆಗೆ ಗಂಟೆ ಬಾರಿಸುವಂತೆ ಸೂಚಿಸಿರುವುದು, ನಮ್ಮ ಬಡದೇಶದ ಜನರೊಂದಿಗೆ ಮಾತನಾಡುತ್ತಾ ಮನೆಯ ಬಾಲ್ಕನಿಯ ಮೇಲೆ ನಿಂತು ಕರಘೋಷ ಮಾಡಲು ಹೇಳಿರುವುದು ಮೊದಲಾದ ವಿಚಾರಗಳಿಗಾಗಿ ಆ ಹೇಳಿಕೆ ವಿಮರ್ಶೆಗೂ ಒಳಗಾಗಿತ್ತು. ಮಾತ್ರವಲ್ಲ, ಸ್ಪೇನ್ ಕೊಡಮಾಡಿರುವಂತೆ ಕೊರೊನ ವಿರುದ್ಧದ ಹೋರಾಟಕ್ಕೆ ಹಣ ಬಿಡುಗಡೆ ಮಾಡುವುದನ್ನು ಬಿಟ್ಟು ಕೇವಲ ಚಪ್ಪಾಳೆಯ ಮಾದರಿಯನ್ನಷ್ಟೇ ಹೇಳಿಕೊಂಡಿದ್ದು ಮೋದಿಯ ಪ್ರಚಾರದ ಗಿಮಿಕ್ ಎಂದೇ ಗುರುತಿಸಲ್ಪಟ್ಟಿತ್ತು. ಆದರೆ ಇದಕ್ಕೆ ವಿರುದ್ಧವಾಗಿ ಎಂದಿನಂತೆ ಸಾಮಾಜಿಕ ‌ಜಾಲತಾಣದಲ್ಲಿ ಮೋದಿ ಪರ ಬ್ಯಾಟಿಂಗ್ ಭರ್ಜರಿಯಾಗಿಯೇ ನಡೆದಿತ್ತು. ಬಹುಶಃ ಮೋದಿಗೇ ಗೊತ್ತಿರದಷ್ಟು ಚಪ್ಪಾಳೆಯ ಮಹತ್ವವನ್ನು ಅವರೆಲ್ಲ ಹರಡುತ್ತಿದ್ದರು.

ಒಟ್ಟು ಇಂದಿನ ‘ಜನತಾ ಕರ್ಫ್ಯು’ ಕುರಿತಾದ ಜಾಗೃತಿಯ ಬಗ್ಗೆ ಹೇಳಿಕೆ ಪಡೆಯಲು ಕೇರಳದ ಜನಪ್ರಿಯ ಖಾಸಗಿ ವಾಹಿನಿಯೊಂದು ಅಲ್ಲಿಮ ಜನಪ್ರಿಯ ತಾರೆ ಮೋಹನ್ ಲಾಲ್ ಅವರನ್ನು ಸಂಪರ್ಕಿಸಿತ್ತು. ಆದರೆ ಮಾತಿನ ನಡುವೆ ಮೋಹನ್ ಲಾಲ್, ಸಂಜೆ ಐದು ಗಂಟೆಗೆ ಚಪ್ಪಾಳೆ ಹೊಡೆಯುವ ಕ್ರಮದ ಬಗ್ಗೆಯೂ ಒಂದು ವಿಶೇಷ ವ್ಯಾಖ್ಯಾನ ನೀಡಿದರು. “ಚಪ್ಪಾಳೆ ಶಬ್ದವೆನ್ನುವುದು ಒಂದು ಮಹಾ ಮಂತ್ರದಂತೆ. ಅದರಿಂದ ಬಹಳಷ್ಟು ವೈರಸ್ ಮತ್ತು ಬ್ಯಾಕ್ಟೀರಿಯಾಗಳು ನಾಶವಾಗುವ ಸಾಧ್ಯತೆ ಇದೆ. ಹಾಗೆ ನಾಶವಾಗಲಿ” ಎಂದಿದ್ದಾರೆ. ಸಂಪೂರ್ಣ ಸಾಕ್ಷರತೆ ಹೊಂದಿರುವ ಮತ್ತು ಬುದ್ಧಿವಂತ ಪ್ರಜೆಗಳ ರಾಜ್ಯ ಎಂದು ಗುರುತಿಸಿಕೊಂಡಿರುವ ಕೇರಳೀಯರು ಈ ಹೇಳಿಕೆ ಕೇಳಿದ ಬಳಿಕ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಯಾಕೆಂದರೆ ಆ ರಾಜ್ಯದಲ್ಲಿ ಬಿಜೆಪಿ ಪರ ಇರುವವರು, ದೇವರ ಬಗ್ಗೆ ಅಪಾರ ನಂಬಿಕೆಯುಳ್ಳವರು ಇದ್ದರೂ ಸಹ, ಚಪ್ಪಾಳೆಯಿಂದ ವೈರಸ್ ನಾಶವಾಗಬಹುದು ಎಂದು ನಂಬಿದವರಿಲ್ಲ. ಆದರೆ ಮೋದಿ ಭಕ್ತರಾಗಿ ಅಂಧವಾಗಿರುವವರು ಇಂಥದನ್ನು ನಂಬಿ ಸ್ವತಃ ಪ್ರಚಾರ ಮಾಡುತ್ತಾರೆ. ಮೋಹನ್ ‌ಲಾಲ್ ಅವರಿಗೂ ಮೋದಿ ಮಯ ಹಿಂದುತ್ವದ ಮೇಲೆ ಆರಂಭದಿಂದಲೂ ಒಂದು ಮೃದು ಧೋರಣೆ ಇದೆ. ಹಾಗಾಗಿಯೇ ನೋಟ್ ಬ್ಯಾನ್ ಸಮಯದಲ್ಲಿ ಕೂಡ, ತಮಗೆಷ್ಟೇ ಕಷ್ಟವಾದರೂ ಮೋದಿಯನ್ನು ಬೆಂಬಲಿಸುವುದಾಗಿ ಹೇಳಿ ಬಳಿಕ ಆರ್ಥಿಕತೆ ಇನ್ನಷ್ಟು ತಾಳ ತಪ್ಪಿದಾಗ ನಗೆಪಾಟಲಿಗೀಡಾಗಿದ್ದರು. ಈಗ ಮತ್ತೆ ಅದೇ ರೀತಿಯಲ್ಲಿ ಬೆಂಬಲಿಸುವ ಮೂಲಕ ತಮಾಷೆಗೆ ಒಳಗಾಗಿದ್ದಾರೆ.

ಮೋಹನ್ ಲಾಲ್ ಒಬ್ಬ ಮೋದಿ ಬೆಂಬಲಿಗ ಎನ್ನುವ ಕಾರಣಕ್ಕಾಗಿ ಕರ್ನಾಟಕದ ಮೋದಿ ಭಕ್ತರು ಖುಷಿ ಪಡಬೇಕಾಗಿಲ್ಲ. ಯಾಕೆಂದರೆ ಮೋಹನ್ ಲಾಲ್ ಅವರ ಫೇವರಿಟ್ ಆಹಾರದಲ್ಲಿ ಪರೋಟದ ಜತೆಗೆ ಬೀಫ್ ಕರಿ ಕೂಡ ಇರಲೇಬೇಕು! ಅದೇ ರೀತಿ ಕೇರಳದ ಬುದ್ಧಿವಂತ ಪ್ರಜೆಗಳು ಕೂಡ ಮೋಹನ್ ಲಾಲ್ ಮೇಲೆ ಎಷ್ಟೇ ಅಭಿಮಾನ ಇದ್ದರೂ ಚಪ್ಪಾಳೆಯಿಂದ ವೈರಸ್ ನಾಶವಾಗುತ್ತದೆ ಎನ್ನುವ ಅವರ ಹೇಳಿಕೆ ಕೇಳಿ ಮುಸಿ ಮುಸಿ ನಗುವಂತಾಗಿದೆ. ಪದ್ಮಶ್ರೀ, ಪದ್ಮಭೂಷಣದಂಥ ಬಿರುದಿಗೆ ಅರ್ಹವಾಗಿರುವ ಒಬ್ಬ ಜವಾಬ್ದಾರಿಯುತ ನಟ ನೀಡಬಹುದಾದ ಹೇಳಿಕೆ ಇದು ಆಗಿರಲಿಲ್ಲ. ನಟನಾಗಿ ಪಡೆದಿರುವ ಗೌರವವನ್ನು ಇನ್ಯಾವುದೋ ಕಾರಣಕ್ಕೆ ಕಳೆದುಕೊಳ್ಳುತ್ತಿರುವ ಮೋಹನ್ ಲಾಲ್ ಅವರ ಪರಿಸ್ಥಿತಿಯ ಬಗ್ಗೆ ಮರುಕ ಪಡುವಂತಾಗಿದೆ.

Recommended For You

Leave a Reply

error: Content is protected !!
%d bloggers like this: