ಸದ್ಯದಲ್ಲೇ ಶಿವಾಜಿಯ ಚಿತ್ರೀಕರಣ

ವರ್ಷದ ಹಿಂದೆ ತೆರೆಕಂಡ ‘ಶಿವಾಜಿ ಸುರತ್ಕಲ್’ ಚಿತ್ರವನ್ನು ನೋಡಿದವರು ಮೆಚ್ಚಿದ್ದರು. ಅದೇ ಕಾರಣದಿಂದಲೇ ಚಿತ್ರ ತಂಡ ಮತ್ತೊಮ್ಮೆ ಒಂದಾಗಿದ್ದು ಸೆಪ್ಟಂಬರ್ 10ರಂದು ರಮೇಶ್ ಅರವಿಂದ್ ಅವರ ಜನ್ಮದಿನದ ಪ್ರಯುಕ್ತ ಚಿತ್ರದ ಪೋಸ್ಟರ್ ಲಾಂಚ್ ಮಾಡಿದೆ.

ರಮೇಶ್ ಅರವಿಂದ್ ಅಭಿನಯದಲ್ಲಿ, ನಿರ್ದೇಶಕರಾದ ಆಕಾಶ್ ಶ್ರೀವತ್ಸರ ಸಾರಥ್ಯದಲ್ಲಿ ಮತ್ತು ನಿರ್ಮಾಪಕರಾದ ರೇಖಾ ಕೆ. ಎನ್. ಹಾಗು ಅನೂಪ್ ರವರ ನೇತೃತ್ವದಲ್ಲಿ ಅದೇ ಶೀರ್ಷಿಕೆಯಲ್ಲಿ ಭಾಗ -2ರ ಚಿತ್ರೀಕರಣ ಸದ್ಯದಲ್ಲೇ ಶುರುವಾಗಲಿದೆ.

ಸಂಪೂರ್ಣವಾಗಿ ಕಥೆ, ಚಿತ್ರಕಥೆ ಮುಗಿಸಿಕೊಂಡಿರುವ ಚಿತ್ರತಂಡ ಅಕ್ಟೋಬರ್ ನಲ್ಲಿ ಶೂಟಿಂಗ್ ಶುರುಮಾಡುವ ಯೋಚನೆಯಲ್ಲಿದೆ.
ಶಿವಾಜಿಯಾಗಿ ರಮೇಶ್ ಅರವಿಂದ್ ರವರು ಬಣ್ಣ ಹಚ್ಚಲಿದ್ದು, ರಾಧಿಕಾ ನಾರಾಯಣ್, ರಘು ರಾಮನಕೊಪ್ಪ ಮತ್ತು ವಿದ್ಯಾಮೂರ್ತಿ ಭಾಗ-2 ರಲ್ಲೂ ಮುಂದುವರಿಯಲಿದ್ದಾರೆ. ಉಳಿದ ತಾರಾಗಣದಲ್ಲಿ ಹೊಸಮುಖಗಳು ಪರಿಚಯಗೊಳ್ಳಲಿದ್ದಾರೆ.

ಶಿವಾಜಿ ಸುರತ್ಕಲ್ ಎರಡು ಕಾಲಘಟ್ಟದಲ್ಲಿ ನಡೆಯುವ ಚಿತ್ರವಾಗಿತ್ತು, ಆದರೆ ಭಾಗ-2 ಬಹುಕೋನಗಳಿರುವ ಚಿತ್ರಕಥೆ ಹೊಂದಿದ್ದು, ಪತ್ತೇದಾರಿ ಕತೆಯಾಗಿರುವುದರಿಂದ ಕೊಲೆಗಾರನ ಹುಡುಕಾಟದ ಮಾರ್ಗದಲ್ಲಿ ಚಲಿಸುತ್ತಿರುತ್ತದೆ.

ಚಿತ್ರಮಂದಿರ ಭೇಟಿಯ ಸಂದರ್ಭ ಎದುರಾಗಿದ್ದ ಅನೇಕ ಪ್ರಶ್ನೆಗಳಿಗೆ, ವಿಶೇಷವಾಗಿ ಶಿವಾಜಿ ಸುರತ್ಕಲ್ ಎಂಬ ಶೀರ್ಷಿಕೆಗೆ ಚಿತ್ರದಲ್ಲಿ ನಿರ್ದೇಶಕರು ಉತ್ತರವಿಟ್ಟಿದ್ದಾರೆ. ಗುರುಪ್ರಸಾದ್ M. G. ಛಾಯಾಗ್ರಾಹಕರಾಗಿ ಮುಂದುವರಿಯಲಿದ್ದು, ಉಳಿದಂತೆ ತಾಂತ್ರಿಕ ತಂಡವನ್ನು ಸದ್ಯದಲ್ಲೇ ಬಹಿರಂಗಗೊಳಿಸಲಿದೆ ಚಿತ್ರತಂಡ. ಭಾಗ-1 ರ ಯಶಸ್ಸು ಮತ್ತು ತಮಿಳು, ಮಲಯಾಳಂ, ತೆಲುಗಿಗೆ ರೀಮೇಕ್ ರೈಟ್ಸ್ ಮಾರಾಟವಾಗಿದ್ದರಿಂದ ಚಿತ್ರತಂಡ ಮತ್ತಷ್ಟು ಹುರುಪಿನಿಂದ ಅದ್ದೂರಿಯಾಗಿ ಚಿತ್ರ ನಿರ್ಮಿಸುವ ತಯಾರಿಯಲ್ಲಿದೆ.

Recommended For You

Leave a Reply

error: Content is protected !!
%d bloggers like this: