ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರ ನಡುವೆ ಗುರುತಿಸಿಕೊಂಡಿರುವ ‘ಕಪಾಲಿ ಮೋಹನ್’ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬಸವೇಶ್ವರ ಬಸ್ ನಿಲ್ದಾಣ ಸಮೀಪದ ಸುಪ್ರೀಂ ಹೋಟೆಲ್ ನಲ್ಲಿ ಉದ್ಯಮಿ ಮೋಹನ್ ಅವರ ಮೃತದೇಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕನ್ನಡ ಚಿತ್ರರಂಗದ ಮೇರುನಟ ಡಾ. ರಾಜ್ ಕುಮಾರ್ ಕುಟುಂಬಕ್ಕೆ ಹತ್ತಿರದವರಾಗಿ ಗುರುತಿಸಲ್ಪಟ್ಟವರು ಉದ್ಯಮಿ ಕಪಾಲಿ ಮೋಹನ್. ಕುಟುಂಬದ ವ್ಯಾವಹಾರಿಕ ಪಾಲುದಾರ, ಫೈನಾನ್ಷಿಯರ್, ಹೋಟೆಲ್ ಉದ್ಯಮಿ ಮೊದಲಾದ ವಿಭಾಗಗಳಿಂದ ಗಮನ ಸೆಳೆದಿದ್ದರು. ಆತ್ಮಹತ್ಯೆ ನಡೆದಿದೆ ಎನ್ನಲಾದ ಸುಪ್ರೀಂ ಹೋಟೆಲ್ ಕೂಡ ಕಪಾಲಿ ಮೋಹನ್ ಯಾನೇ ವಿ.ಕೆ ಮೋಹನ್ ಅವರ ಒಡೆತನದಲ್ಲಿದೆ ಎನ್ನಲಾಗಿದೆ. ಇಂದು ಬೆಳಿಗ್ಗೆ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಗಂಗಮ್ಮನಗುಡಿ ಪೊಲೀಸರು ಭೇಟಿಯಿತ್ತು ತನಿಖೆ ನಡೆಸುತ್ತಿದ್ದಾರೆ.
ಕಪಾಲಿ ಮೋಹನ್ ಎರಡು ವರ್ಷಗಳ ಹಿಂದೆ, ಅಕ್ರಮ ಬಡ್ಡಿ ವ್ಯವಹಾರದ ಆರೋಪದಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತರಾಗಿದ್ದರು. ಕಳೆದ ವರ್ಷ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ತಾರೆಯರ ಮನೆಗಳಿಗೆ ಐಟಿ ದಾಳಿ ನಡೆದುದರ ಹಿನ್ನೆಲೆಯಲ್ಲಿ ಕೂಡ ಕಪಾಲಿ ಮೋಹನ್ ಹೆಸರು ಕೇಳಿ ಬಂದಿತ್ತು. ಕಾರಣವೇನೆಂದರೆ ತಾರೆಯರ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು ಎನ್ನಲಾಗುತ್ತಿದ್ದ ಕಪಾಲಿ ಮೋಹನ್ ಮನೆಗೆ ಈ ಐಟಿ ದಾಳಿಗೂ ಮೊದಲು ವಿಚಾರಣೆ ನಡೆಸಲಾಗಿತ್ತು. ಹಾಗಾಗಿ ಆತನಿಂದ ಸುಳಿವು ಪಡೆದೇ ಕಳೆದ ವರ್ಷದ ದಾಳಿ ನಡೆದಿರಬಹುದೆಂದು ಸಂದೇಹಿಸಲಾಗಿತ್ತು. ಈಗ ಮೋಹನ್ ಕಾರಣ ಹೇಳದೆ ಹೋಗಿದ್ದಾರೆ. ಆದರೆ ಯಾವುದೋ ಹಣದ ವ್ಯವಹಾರವೇ ಇಂಥದೊಂದು ಸಾವಿಗೆ ಕಾರಣ ಇರಬಹುದೆಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ. ನಿಜವಾದ ಕಾರಣ ಸದ್ಯದಲ್ಲೇ ಪೊಲೀಸ್ ತನಿಖೆಯಿಂದ ಹೊರಬಂದೀತೆಂದು ನಿರೀಕ್ಷಿಸಲಾಗಿದೆ.