ಬೆಂಗಳೂರಿಗೆ ಕೆಲಸಕ್ಕಾಗಿ ವಲಸೆ ಬಂದವರೆಲ್ಲ ಕೊರೊನ ಭೀತಿಯಿಂದ ಪಲಾಯನ ಶುರು ಮಾಡಿದ್ದಾರೆ. ಪೊಲೀಸ್ ಕಣ್ಣು ತಪ್ಪಿಸಿಕೊಂಡು ಒಳದಾರಿಯ ಮೂಲಕ ತಮ್ಮ ಹಳ್ಳಿ ಸೇರಿಕೊಳ್ಳಲು ಜನ ನಕ್ಷೆ ಹುಡುಕುತ್ತಿದ್ದರೆ ದಿಯಾ ಸಿನಿಮಾ ಖ್ಯಾತಿಯ ನಟಿ ಖುಷಿ ತಮಗೆ ಹೊಸ ನಕ್ಷೆ ಸಿಕ್ಕ ಖುಷಿಯಲ್ಲಿದ್ದಾರೆ. ಅದು ಬೇರೇನೂ ಅಲ್ಲ. ನಕ್ಷೆ ಎನ್ನುವ ಚಿತ್ರದಲ್ಲಿ ನಟಿಸಲಿದ್ದಾರೆ.
ದಿಯಾ ಸಿನಿಮಾ ನೋಡಿದವರೆಲ್ಲ, ದಿಯಾ ಪಾತ್ರಧಾರಿ ಇನ್ನು ಮುಂದೆ ಯಾರ ಜತೆಗೆ ನಾಯಕಿಯಾಗುತ್ತಾರೆ ಎನ್ನುವ ವಿಚಾರದಲ್ಲಿ ತೀವ್ರ ಆಸಕ್ತಿ ಹೊಂದಿದ್ದರು. ಆದರೆ ಖುಷಿಗೆ ಈ ಬಾರಿಯೂ ನವ ನಾಯಕನೇ ದೊರಕಿದ್ದಾರೆ. ಅವರ ಹೆಸರು ಚಿರಾಗ್. ನಕ್ಷೆ ಸಿನಿಮಾ ಈಗಾಗಲೇ 40%ದಷ್ಟು ಚಿತ್ರೀಕರಣವಾಗಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರು. ಒಬ್ಬರು ಕೆ.ಜಿ.ಎಫ್’ ನ ಜನಪ್ರಿಯ ತಾಯಿ ಪಾತ್ರಧಾರಿ ನಟಿ ಅರ್ಚನಾ ಜೋಯಿಸ್. ಆದರೆ ಮತ್ತೋರ್ವ ನಾಯಕಿ ಸಿಕ್ಕಿರದ ಕಾರಣ ಆ ಪೋರ್ಶನ್ ಹಾಗೆಯೇ ಉಳಿಸಿಕೊಂಡಿದ್ದರಂತೆ. ಆದರೆ
‘ದಿಯಾ’ ನೋಡಿದ ಬಳಿಕ ತಾವು ಹುಡುಕುತ್ತಿದ್ದ ನಾಯಕಿ ಇವರೇ ಎಂದು ನಿರ್ದೇಶಕರು ಖುಷಿಗೆ ಪಾತ್ರ ನೀಡಿದ್ದಾರೆ.
ಇಂದು ಇನ್ಸ್ಟ್ರಾಗ್ರಾಂನಲ್ಲಿ ಲೈವ್
ಇಂದು ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ. ಆದರೆ ದೇಶಕ್ಕೆ ದೇಶವೇ ಲಾಕ್ಡೌನ್ ಆಗಿರುವ ಕಾರಣ ಎಲ್ಲರೂ ಮನೆಯೊಳಗಷ್ಟೇ ಇರಬೇಕಾದ ಸಂದರ್ಭ ಬಂದಿದೆ. ಆದರೆ ಮನೆ ಒಳಗಿರುವ ಸಿನಿರಸಿಕರಿಗೆ ಸಿಹಿ ಸುದ್ದಿ ನೀಡಲಿದ್ದಾರೆ ಖುಷಿ. ತಮ್ಮ ಇನ್ಸ್ಟಾಗ್ರಾಂ ಖಾತೆಯಾದ kushee-ravi ಮೂಲಕ ಬೆಳಿಗ್ಗೆ ಹತ್ತು ಗಂಟೆಯ ವೇಳೆಗೆ ಲೈವ್ ಬಂದು ನಕ್ಷೆ ಚಿತ್ರದ ಬಗ್ಗೆ ವಿಶೇಷ ಮಾಹಿತಿ ನೀಡಲಿದ್ದಾರೆ. ಚಿತ್ರದಲ್ಲಿ ಸುಮನ್ ನಗರ್ಕರ್ ಮತ್ತು ಪ್ರಮೋದ್ ಶೆಟ್ಟಿಯವರು ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ ಎನ್ನಲಾಗಿದೆ. ನವ ನಿರ್ದೇಶಕ ಮಧು ನಿರ್ದೇಶನದ ಈ ಚಿತ್ರಕ್ಕೆ ಶಿವಪ್ರಕಾಶ್ ನಿರ್ಮಾಪಕರು. ಅಂದಹಾಗೆ ಖುಷಿ ಬೆಂಗಳೂರಲ್ಲೇ ಇದ್ದಾರೆ. ಮೂಲತಃ ಅವರು ಬೆಂಗಳೂರಿಗರೇ ಆಗಿರುವ ಕಾರಣ ನಿಜ ಬದುಕಿನಲ್ಲಿ ನಕ್ಷೆ ಹುಡುಕುವ ಸಂದರ್ಭ ಬಂದಿಲ್ಲ!
ಪೊಲೀಸ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ
“ಇದು ಮಹಿಳಾ ದೌರ್ಜನ್ಯ ವಿರುದ್ಧದ ಕತೆ. ನಾನು ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ” ಎಂದಿದ್ದಾರೆ ನಟ ಪ್ರಮೋದ್ ಶೆಟ್ಟಿ. ಇತ್ತೀಚೆಗೆ ಪೊಲೀಸ್ ಪಾತ್ರಗಳನ್ನು ಒಪ್ಪುತ್ತಿರಲಿಲ್ಲ. ಆದರೆ ಇದರಲ್ಲಿ ಪೊಲೀಸ್ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಅರ್ಚನಾ ಜೋಯಿಸ್ ಪ್ರೆಸ್ ರಿಪೋರ್ಟರ್ ಪಾತ್ರದಲ್ಲಿದ್ದು ಅವರೊಂದಿಗೆ ಕಾಂಬಿನೇಶನ್ ದೃಶ್ಯಗಳು ತಮಗೆ ಇರುವುದಾಗಿ ಪ್ರಮೋದ್ ಶೆಟ್ಟಿ ಹೇಳಿದ್ದಾರೆ.