ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಈಗ ಎಲ್ಲರ ಪ್ರಥಮ ಆದ್ಯತೆಯಾಗಿದೆ. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರಿಂದ ಹಿಡಿದು, ಅದೆಂಥ ಸೆಲೆಬ್ರಿಟಿಗಳನ್ನು ಕೂಡ ಸಲೀಸಾಗಿ ಸಮೀಪಿಸಿ ಸಲುಗೆಯಿಂದ ಎನ್ನುವಂತೆ ಸೆಲ್ಫೀ ಗಿಟ್ಟಿಸಿಕೊಳ್ಳುವಲ್ಲಿ ಪ್ರಥಮ್ ನನ್ನು ಮೀರಿಸಿದವರಿಲ್ಲ. ಮಾತ್ರವಲ್ಲ ತಮ್ಮ ಬಳಿಗೆ ಬಂದು ಸೆಲ್ಫೀ ಕೇಳುವವರಿಗೆ ಕೂಡ ಅಷ್ಟೇ ಆತ್ಮೀಯತೆಯಿಂದ ಹೆಗಲಿಗೆ ಕೈಹಾಕಿ ಕೊಟ್ಟು ಕಳಿಸುವ ಮನೋಭಾವ ಪ್ರಥಮ್‌ದು. ಆದರೆ ಅವೆಲ್ಲಕ್ಕೂ ಬ್ರೇಕ್ ಹಾಕುವ ಸಂದರ್ಭವನ್ನು ಈ ಕೊರೊನಾ ವೈರಸ್ ತಂದುಕೊಟ್ಟಿದೆ.
ನಟ ಭಯಂಕರ ಚತ್ರದ ನಾಯಕರಾಗಿರುವ ಪ್ರಥಮ್, ತಮ್ಮ ಚಿತ್ರದ ನಿರ್ಮಾಪಕ ನೀಲೇಶ್ ಅವರ ಜತೆಗೂಡಿ ತುಮಕೂರಿನಲ್ಲಿ ತರಕಾರಿ ವಿತರಿಸುತ್ತಿದ್ದಾರೆ. ತುಮಕೂರಲ್ಲಿ ಜಿಲ್ಲಾಡಳಿತದಿಂದ ಪರವಾನಗಿ ಪಡೆದುಕೊಂಡು ಅಗತ್ಯ `ಸೇವೆಗಳಲ್ಲಿ ನಿರತರು’ ಎಂದು ಪಟ್ಟಿಹಚ್ಚಿಕೊಂಡ ವಾಹನಗಲ್ಲಿ ಖುದ್ದು ಪ್ರಥಮ್ ತರಕಾರಿ ಮಾರಾಟ ನಡೆಸಿದ್ದಾರೆ. ಇದೇನಪ್ಪ ಕಳೆದ ವಾರವಷ್ಟೇ ಕೊಳ್ಳೇಗಾಲದಲ್ಲಿ ಕುರಿ ಮೇಯಿಸುತ್ತಿದ್ದ ಪ್ರಥಮ್ ತುಮಕೂರಲ್ಲೇಕೆ ಬಂದರು ಎನ್ನುವ ಚಿಂತೆ ಬೇಡ. ಕೊರೊನ ವೈರಸ್ ಭೀತಿಯಿಂದ ಲಾಕ್ಡೌನ್ ಆಗಿದ್ದು, ಈ ಸಂದರ್ಭದಲ್ಲಿ ಆಹಾರವಿಲ್ಲದೆ ಯಾರೂ ಪರದಾಡಬಾರದು ಎನ್ನುವುದೇ ನಮ್ಮ ಉದ್ದೇಶ. ಹಾಗಾಗಿ ಹತ್ತರಿಂದ ಹನ್ನೆರಡರಷ್ಟು ವಾಹನಗಳ ಮೂಲಕ ತುಮಕೂರಿನ ಅಗತ್ಯ ಜಾಗಗಳಲ್ಲಿ ಸರಬರಾಜು ನಡೆಸಲಾಗಿದೆ. ನಿರ್ಮಾಪಕರೇ ಇದರ ಖರ್ಚನ್ನು ವಹಿಸಿಕೊಂಡಿದ್ದಾರೆ. ನಾವೇ ಸ್ವತಃ ಮನೆಮನೆಗೂ ತಲುಪಿಸುತ್ತಿದ್ದೇವೆ. ನಾನು ಇದರಲ್ಲಿ ಸ್ವಯಂಸೇವಕನಾಗಿ ಪಾಲ್ಗೊಂಡಿದ್ದೇನೆ. ಬಹಳ ಮಂದಿ ಉಚಿತವಾಗಿ ಪಡೆದುಕೊಳ್ಳಲು ಬಯಸದ ಕಾರಣ, ನಾವು ಬೆಲೆ ಇರಿಸಿದ್ದೇವೆ. ಆದರೆ ಮಾರುಕಟ್ಟೆಗಿಂತಲೂ ಕಡಿಮೆ ಬೆಲೆಗೆ ತರಕಾರಿ ಪೂರೈಸುತ್ತಿದ್ದೇವೆ ಎಂದು ಸಿನಿಕನ್ನಡದ ಜತೆ ಮಾತನಾಡಿದ ಪ್ರಥಮ್ ತಿಳಿಸಿದರು.
ಇಂಥದೊಂದು ಸಮಾಜ ಸೇವೆಯಲ್ಲಿ ಭಾಗಿಯಾಗುವ ಸಂದರ್ಭದಲ್ಲಿ ಪ್ರಥಮ್ ಕಾನೂನಿನ ಪಾಲನೆಯ ಬಗ್ಗೆ ಕೂಡ ತುಂಬ ಕಾಳಜಿ ವಹಿಸಿದ್ದಾರೆ. ಖರೀದಿದಾರರು ಮನೆಯ ಗೇಟ್ ತನಕ ಬಂದರೆ ಸಾಕು. ಅಲ್ಲಿಯ ತನಕ ನಾವೇ ತಲುಪಿಸುತ್ತೇವೆ. ಅವರಲ್ಲಿ ಸೋಶಿಯಲ್ ಡಿಸ್ಟೆನ್ಸ್ ಕಾಯ್ದುಕೊಳ್ಳಲು ಹೇಳುವುದರ ಜತೆಗೆ ನಾವು ಕೂಡ ಅಂತರ ಕಯ್ದುಕೊಂಡಿರುತ್ತೇವೆ. ಎರಡೂ ಕೈಗಳಿಗೆ ಗ್ಲೌಸು, ಮುಖಕ್ಕೆ ಮಾಸ್ಕು ಮತ್ತು ತಲೆಗೆ ಟೋಪಿಯನ್ನು ಸಹ ಧರಿಸುತ್ತೇವೆ. ಅಲ್ಲದೆ ನನ್ನ ಪರಿಚಯ ಮಾಡಿಕೊಂಡು ಸೆಲ್ಫೀ ಕೇಳಿದವರಿಗೆ ಕೂಡ ನಾನು ಮಾಸ್ಕ್ ಬಿಚ್ಚದೆ, ಹತ್ತಿರ ಹೋಗದೆ ಸೆಲ್ಪೀ ನೀಡಿದ್ದೇನೆ. ತಂಡಕ್ಕೆ ಪ್ರೋತ್ಸಾಹ ತುಂಬಲಿಕ್ಕಾಗಿ ನಾನು ಜತೆಗೆ ನಿಂತು ಕೆಲಸ ಮಾಡಿದ್ದೇನೆ. ನಾಳೆ ಬುಧವಾರ ನಾನು ವಾಪಾಸು ಕೊಳ್ಳೇಗಾಲಕ್ಕೆ ಹೋಗಲಿದ್ದೇನೆ ಎಂದು ಪ್ರಥಮ್ ಹೇಳಿದ್ದಾರೆ. ಪ್ರಥಮ್ ಮತ್ತು `ನಟ ಭಯಂಕರ’ ಚಿತ್ರ ತಂಡದ ಕಾರ್ಯಕ್ಕೆ ಸಿನಿಕನ್ನಡದ ಅಭಿನಂದನೆಗಳು.