ಕಳೆದ ವರ್ಷದ ಜನಪ್ರಿಯ ಹಾಡುಗಳಲ್ಲೊಂದು ಬಸಣ್ಣಿ ಬಾ..' ಹಾಡು! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ
ಯಜಮಾನ’ ಚಿತ್ರದ ಈ ಗೀತೆಯದೇ ರಾಗ ಬಳಸಿಕೊಂಡು ಕೊರೋನ ಗೋ..' ಎನ್ನುವ ಹಾಡು ತಯಾರಾಗಿದೆ. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ
ಬಸಣ್ಣಿ ಬಾ.. ಬಸಣ್ಣಿ ಬಾ’ ಗೀತೆಯನ್ನು ಜತೆಗೆ ಖುದ್ದು ಹರಿಕೃಷ್ಣ ಆಲಾಪಿಸಿದ್ದರು. ಇದೀಗ `ಕೊರೋನ ಗೋ’ ಗೀತೆಯನ್ನು ನವ ಪ್ರತಿಭೆಯಾದ ವಿಶ್ವ ದೇವಾಂಗ ಅವರು ಆಲಾಪಿಸಿದ್ದಾರೆ.
ವಿಶ್ವ ಅವರು ಖ್ಯಾತ ಗಾಯಕ ಮೋಹನ್ ಕೃಷ್ಣ ಅವರ ಆರ್ಕೆಸ್ಟ್ರಾ ತಂಡದ ಮೂಲಕ ಗುರುತಿಸಿಕೊಂಡವರು. ಇದುವರೆಗೆ ಸುಮಾರು ಹತ್ತು ಸಾವಿರದಷ್ಟು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿರುವ ಮೋಹನ್ ಕೃಷ್ಣ ಅವರು ಹಿನ್ನೆಲೆ ಗಾಯಕರಾಗಿಯೂ ಹೆಸರಾಗಿದ್ದಾರೆ. ಕೆ.ಜಿ.ಎಫ್ ಚಿತ್ರದದಲ್ಲಿ ಬಹುಗಾಯಕರ ಮೂಲಕ ಗುರುತಿಸಲ್ಪಟ್ಟ ಹಾಡುಗಳಿಗೆ ಕನ್ನಡ ಸೇರಿದಂತೆ ತಮಿಳು, ಮಲಯಾಳಂ, ತೆಲುಗು ಮತ್ತು ಹಿಂದಿಯಲ್ಲಿ ಕೂಡ ಧ್ವನಿಯಾಗಿದ್ದಲ್ಲದೆ, ಸಾಹಿತ್ಯದ ವಿಚಾರದಲ್ಲಿ ಗಾಯಕರೊಂದಿಗೆ ಕೋ ಆರ್ಡಿನೇಟ್ ಮಾಡಿರುವ ಕೀರ್ತಿ ಮೋಹನ್ ಕೃಷ್ಣರದ್ದು. ಹೀಗೆ ಬಹುಭಾಷೆಗಳನ್ನು ಅರಿತಿರುವ ಗಾಯಕರಾಗಿದ್ದು ಪಿಬಿ ಶ್ರೀನಿವಾಸ್, ಕುಮಾರ್ ಸಾನು, ಡಾ.ರಾಜ್ ಗೀತೆಗಳಿಗೆ ಮರುಜೀವ ನೀಡುವಂತೆ ಧ್ವನಿಯಾಗಬಲ್ಲ ಮೋಹನ್ ಕೃಷ್ಣ ಅವರು ಸದ್ಯಕ್ಕೆ ಎಲ್ಲರಂತೆ ಲಾಕ್‌ಡೌನ್ ಪರಿಸ್ಥಿತಿಯ ಭಾಗವಾಗಿ ಮನೆಯಲ್ಲೇ ಇದ್ದಾರೆ. ಈ ಸಂದರ್ಭದಲ್ಲಿ ಕೊರೊನಾ ಗೀತೆಯೊಂದಿಗೆ ತಮ್ಮನ್ನು ಸಮೀಪಿಸಿದ ಸ್ನೇಹಿತರೋರ್ವರ ಸಾಹಿತ್ಯಕ್ಕೆ ತಮ್ಮ ತಂಡದ ವಿಶ್ವ ದೇವಾಂಗರ ಮೂಲಕ ಜೀವ ನೀಡಿದ್ದಾರೆ. ವಿಶ್ವ ಅವರು ಹಂಸಲೇಖ ಅವರ ಇನ್ಸ್ಟಿಟ್ಯೂಶನ್‌ನಲ್ಲಿ ಕರ್ನಾಟಿಕ್ ಶಾಸ್ತ್ರೀಯ ಸಂಗೀತದ ವಿದ್ಯಾರ್ಥಿಯಾಗಿದ್ದು, ಕೀ ಬೋರ್ಡ್ ಕೂಡ ಕಲಿಯುತ್ತಿದ್ದಾರೆ. ಕಳೆದೊಂದು ದಶಕಕ್ಕೂ ಅಧಿಕ ಸಮಯದಿಂದ ವಾದ್ಯಗೋಷ್ಠಿ ಗಾಯಕರಾಗಿ ಹೆಸರು ಮಾಡಿದ್ದಾರೆ. `ಸುವರ್ಣ ಸ್ಟಾರ್ ಸಿಂಗರ್’ನ ಟಾಪ್ ಟೆನ್ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ವಿಶ್ವ ದೇವಾಂಗ ಅವರು, ಎಂಬಿಎ ಮಾಡಿದ ಬಳಿಕವೂ ಸಂಗೀತ ಕ್ಷೇತ್ರವನ್ನೇ ಆಯ್ದುಕೊಂಡಿರುವುದು ಅವರ ಸಂಗೀತಾಸಕ್ತಿಗೆ ಉದಾಹರಣೆ.
ಮೂಲತಃ ದೊಡ್ಡಬಳ್ಳಾಪುರದವರಾಗಿರುವ ವಿಶ್ವ ಅವರು ಹಾಡಿರುವ ಭಕ್ತಿಗೀತೆಗಳು ಸಿ.ಡಿಗಳಾಗಿವೆ. ಇದುವರೆಗೆ ಏಳುನೂರಕ್ಕೂ ಅಧಿಕ ವೇದಿಕೆಗಳಲ್ಲಿ ಗಾಯನ ಕಾರ್ಯಕ್ರಮ ನೀಡಿರುವ ಇವರಿಗೆ ಡಾ.ರಾಜ್ ಕುಮಾರ್ ಅವರ ಹಾಡುಗಳು, ಹಂಸಲೇಖ ಮತ್ತು ಇಳಯರಾಜಾ ಅವರ ಸ್ವರಸಂಯೋಜನೆ ಎಂದರೆ ತುಂಬ ಇಷ್ಟವಂತೆ. ಅಂದ ಹಾಗೆ ಲಾಕ್ಡೌನ್ ಆಗಿರುವ ಕಾರಣ, ಹಾಡನ್ನು ಉತ್ತಮ ಗುಣಮಟ್ಟದೊಂದಿಗೆ ತರಲು ಸಾಧ್ಯವಾಗಿಲ್ಲ ಎನ್ನುವ ಅಸಮಾಧಾನ ಇವರಲ್ಲಿದೆ. ತಮ್ಮ ಮನೆಯಲ್ಲಿ ಲಭ್ಯವಿದ್ದ ಮಿಕ್ಸರ್ ಮತ್ತು ಲ್ಯಾಪ್‌ಟಾಪ್ ಮಾತ್ರ ಬಳಸಿಕೊಂಡು ಹಾಡನ್ನು ಹೊರತಂದಿದ್ದೇನೆ. ಅವಕಾಶ ಇದ್ದರೆ ಪರದೆಯ ಮೇಲೆ ಇನ್ನಷ್ಟು ಚೆನ್ನಾಗಿ ಮೂಡಿಸಬಹುದಿತ್ತು ಎನ್ನುವುದು ಅವರ ಅನಿಸಿಕೆ.
‘ಬಸಣ್ಣಿ' ಗೀತೆಯನ್ನು ಯೋಗರಾಜ್ ಭಟ್ಟರು ರಚಿಸಿದ್ದರು. ಇದೀಗ
ಕೊರೊನ ಗೀತೆ’ಗೆ ಸಿನಿ ಪತ್ರಕರ್ತ ಶಶಿಕರ ಪಾತೂರು ಲೇಖನಿ ಹಿಡಿದಿದ್ದಾರೆ. ಕೊರೊನ ವೈರಸ್ ಹಾವಳಿ ಶುರುವಾದ ಮೇಲೆ ಅದರ ವಿರುದ್ಧ ಒಂದಷ್ಟು ಮಂದಿ `ಗೋ ಕರೊನ’ ಎಂದು ಘೋಷಣೆ ಕೂಗಿ ಎಚ್ಚರಿಕೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಆ ಘೋಷಣೆಯನ್ನೇ ಅನುಪಲ್ಲವಿಯಲ್ಲಿ ಬಳಸುವ ಮೂಲಕ ಈ ಕೊರೊನ ಜಾಗೃತಿ ಗೀತೆ ಗಮನ ಸೆಳೆಯುತ್ತಿದೆ. ಜತೆಗೆ ಕನ್ನಡದ ದೊಡ್ಡ ಸ್ಟಾರ್ ಗೀತೆಯ ಟ್ಯೂನ್‌ನಲ್ಲೇ ಹಾಡು ಇರುವುದರಿಂದ ದರ್ಶನ್ ಅಭಿಮಾನಿಗಳು ಹಾಡಿಗೆ ಬೆಂಬಲ ನೀಡುವ ಭರವಸೆ ತಂಡಕ್ಕಿದೆ. ಒಟ್ಟಿನಲ್ಲಿ ಕೊರೊನ ಕಾಟ ಶುರುವಾದ ಬಳಿಕ ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಎಚ್ಚರಿಸುವ ಹಾಡುಗಳು ಬಂದಿದ್ದು, ಅವುಗಳ ನಡುವೆ ಇದು ಕೂಡ ಒಂದು ವಿಭಿನ್ನ ಸ್ಥಾನ ಪಡೆಯುವ ನಿರೀಕ್ಷೆ ಮೂಡಿದೆ.