ಸಂಗೀತದಲ್ಲೇ ಸಂಕಟ ತೋಡಿಕೊಂಡ ವಹಾಬ್ ಸಲೀಮ್

ವಹಾಬ್ ಸಲೀಮ್ ಸಿನಿಮಾ ಸಂಗೀತ ನಿರ್ದೇಶಕ. ಎರಡು ಕನ್ನಡ ಹಾಗೂ ಒಂದು ತುಳು ಚಿತ್ರದ ಗೀತೆಗಳಿಗೆ ರಾಗ ಸಂಯೋಜಿಸಿದ್ದಾರೆ. ಆದರೆ ಅವರು ಈಗ ಸುದ್ದಿಯಾಗಿರುವುದು `ಬಾಹುಬಲಿ’ ಚಿತ್ರದಲ್ಲಿ ಕೈಲಾಶ್ ಖೇರ್ ಹಾಡಿರುವ ಗೀತೆಯ ಮೂಲಕ! ಅಂದರೆ ಆ ಹಾಡನ್ನು ಸಾಂದರ್ಭಿಕವಾಗಿ ಕನ್ನಡಗೊಳಿಸಿದ್ದಾರೆ. ಸ್ವತಃ ಸಾಹಿತ್ಯವನ್ನು ಕೂಡ ರಚಿಸುವ ಸಾಮರ್ಥ್ಯ ಹೊಂದಿರುವ ಸಲೀಮ್ ಇದರ ಒಂದೊಂದು ಪದಗಳನ್ನು ಕೂಡ ಮನದಾಳದಿಂದ ಬರೆದಿರುವುದು ಸುಳ್ಳಲ್ಲ. ಅದಕ್ಕೆ ಕಾರಣ ಇಂದು ವೈರಸ್ ಗಿಂತ ವೇಗವಾಗಿ ಹರಡುತ್ತಿರುವ ಕೋಮು ವೈಷಮ್ಯ. ಇದು ಒಂದು ಭಾರತೀಯ ಸಮಾಜದಲ್ಲಿ ಉಂಟು ಮಾಡಿರುವ ನೋವನ್ನು ಓರ್ವ ಸಂಗೀತ ನಿರ್ದೇಶಕನಾಗಿ ಅವರು ಹಾಡಿನ ಮೂಲಕ ಹೊರಗೆಡಹಿದ್ದಾರೆ. ಮಧ್ಯರಾತ್ರಿ ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ ಹಾಡು ರಾತ್ರಿ ಬೆಳಗಾಗುವುರೊಳಗ ನೂರಾರು ಶೇರ್ ಆಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ಅವರೊಂದಿಗೆ ನೇರವಾಗಿ ನಡೆಸಿದ ವಿಶೇಷ ಮಾತುಕತೆ ಇದು.

ಇಂಥದೊಂದು ಹಾಡನ್ನು ಬರೆಯಬೇಕು ಅನಿಸಿದ್ದೇಕೆ?

ಸಂಗೀತ ನಿರ್ದೇಶನದ ಜತೆಯಲ್ಲೇ ಹಾಡನ್ನು ಕೂಡ ರಚಿಸುವುದು ನನ್ನ ಹವ್ಯಾಸ. ಅದನ್ನು ಸ್ವೀಕರಿಸುವುದು ಬಿಡುವುದು ನಿರ್ದೇಶಕರ ಆಯ್ಕೆ. ಹಾಗಾಗಿ ನಾನು ಯಾವುದೇ ವಿಚಾರದ ಬಗ್ಗೆ ಆಳವಾಗಿ ಯೋಚಿಸಿದಾಗಲೆಲ್ಲ ಅದು ಹಾಡಾಗುವುದು ಹೆಚ್ಚು. ಈ ಹಿಂದೆ ಕೊರೊನ ಸಮಸ್ಯೆ ಬಂದಾಗಲೇ ಒಂದು ಹಾಡು ಮಾಡಿದ್ದೆ. ಅದು ಬ್ಯಾರಿ ಭಾಷೆಯಲ್ಲಿತ್ತು. ಕೈಲಾಷ್ ಖೇರ್ ಧ್ವನಿಯಲ್ಲಿದ್ದೆ ಹಿಂದಿ ಚಿತ್ರ ಗೀತೆ `ಅಲ್ಲಾ ಕೆ ಬಂಧೆ..’ ಎನ್ನುವ ಹಾಡಿನ ರಾಗಕ್ಕೆ ಅನುಸಾರವಾಗಿ ಬರೆದು ನಾನೇ ಅಲಾಪಿಸಿದ್ದೆ. ನನ್ನ ಮಗಳು ಲೈಬಾ ಸಲೀಮ್ ಗಿಟಾರ್ ಸಾಥ್ ನೀಡಿದ್ದಳು. ಅದರಲ್ಲಿ ಮನುಜ ದೇವರನ್ನು ಮರೆತು ವರ್ತಿಸಿದಾಗ ಇಂಥ ವೈರಸ್ ಸೃಷ್ಟಿಯಾಗದಿರುವುದೇ ಎನ್ನುವ ವಿಚಾರವನ್ನು ಅದರಲ್ಲಿ ಹೇಳಿದ್ದೆ. ಆ ಹಾಡು ಕೂಡ ಸಾಕಷ್ಟು ಪ್ರಚಾರ ಪಡೆದಿತ್ತು. ಖ್ಯಾತ ಪತ್ರಕರ್ತ ರವಿಬೆಳಗೆರೆವರು ಕೂಡ ಅದನ್ನು ತಮ್ಮ ಫೇಸ್ಬುಕ್‌ನಲ್ಲಿ ಹಂಚಿಕೊಂಡಿದ್ದರು. ಇದೀಗ ಕೊರೋನಾಗಿಂತ ಕ್ರೂರವಾದ ಕೋಮು ವೈರಾಣುಗಳನ್ನು ನಮ್ಮ ವಾರ್ತಾ ವಾಹಿನಿಗಳು ಜನರ ಮನದೊಳಗೆ ನಾಟುತ್ತಿರುವುದು ಗೋಚರಿಸಿತು. ಟಿ.ವಿಗಳಲ್ಲಿ ಕೊರೊನಾ ಕುರಿತಾದ ಎಚ್ಚರಿಕೆಗಿಂತ, ರೋಗಕ್ಕೆ ಒಂದು ಸಮುದಾಯವನ್ನು ನೇರವಾಗಿ ಹೊಣೆ ಮಾಡಲಾಗುತ್ತಿದೆ. ಇದರಲ್ಲಿ ಪ್ರಮುಖ ಪಾಲು ದೇಶದ ಖಾಸಗಿ ವಾಹಿನಿಗಳದ್ದಾಗಿದೆ. ಹಾಗಾಗಿ ನಾಗರಿಕರನ್ನು ಎಚ್ಚರಿಸಲು ಈ ಗೀತೆ ಮಾಡಿದೆ.

ನಿಜಾಮುದ್ದೀನ್ ಘಟನೆ ನಿಜ ತಾನೇ?

ನಿಜಾಮುದ್ದೀನ್ ಘಟನೆ ನಿಜ. ಆದರೆ ಅವರು ಲಾಕ್ಡೌನ್‌ಗಿಂತ ಮೊದಲೇ ಅಲ್ಲಿ ಮಸೀದಿಯೊಳಗೆ ಸೇರಿಕೊಂಡಿದ್ದರು. ಲಾಕ್‌ಡೌನ್ ಆದ ಕಾರಣ ಹೊರಬರಲಾಗದೆ ಉಳಿದರು. ಅವರು ಮಾಡಿದ ಒಂದೇ ತಪ್ಪು ಏನೆಂದರೆ ಚಿಕಿತ್ಸೆಗೆ ಸಹಕಾರ ನೀಡದೇ ಇದ್ದಿದ್ದು. ಅದಕ್ಕೂ ಕಾರಣ ಇದೆ. ಮೊದಲು ಸಭೆ ಸೇರಿದ್ದೇ ತಪ್ಪು ಎನ್ನುವಂತೆ ಬಿಂಬಿಸಲಾಯಿತು. 2018ರಲ್ಲಿ ತಟ್ಟೆ , ಚಮಚಗಳನ್ನು ನೆಕ್ಕಿದ ವಿಡಿಯೋಗಳನ್ನು ಹರಡಿ ಕೊರೊನ ವೈರಸ್ ಹರಡುತ್ತಿರುವುದಾಗಿ ಹೇಳಿದರು. ಆದರೆ ಇದು‌ ಆಹಾರ ವೇಸ್ಟ್ ಮಾಡದಿರುವಂಥ ಒಂದು ಸ್ಪರ್ಧಾತ್ಮಕ ನಡೆಯಾಗಿದ್ದು, ಅವರ ಈ ಕೃತ್ಯವು ‘ಗೋಲ್ಡನ್ ಬುಕ್ ಆಫ್ ರೆಕಾರ್ಡ್’ ನಲ್ಲಿ ‘ಲಾರ್ಜೆಸ್ಟ್ ಝೀರೋ ವೇಸ್ಟ್’ ಎಂದು ದಾಖಲಾಗಿರುವಂಥದ್ದು! ಇನ್ನೊಂದು ಕಡೆ ಮನೆಯ ಆಹಾರವನ್ನು ಸ್ವೀಕರಿಸಲು ಬಿಡದೆ ಹೊಡೆದ ಪೊಲೀಸ್ ವಿರುದ್ಧ ಉಗುಳಿದ ದೃಶ್ಯವನ್ನೇ ಕತ್ತರಿಸಿ.. ಕೊರೋನ ರೋಗ ಹರಡಲು ಉಗುಳಿದ್ದಾನೆಂದು ಹೈಲೈಟ್ ಮಾಡಲಾಯಿತು. ಒಟ್ಟಿನಲ್ಲಿ ಎಲ್ಲೆಲ್ಲಿನದೋ, ಯಾವತ್ತಿನದೋ ವಿಡಿಯೋಗಳನ್ನೆಲ್ಲ ಒಟ್ಟು ಸೇರಿಸಿ ಒಂದು ಧರ್ಮವನ್ನು ಸಂಪೂರ್ಣವಾಗಿ ಕೆಟ್ಟದಾಗಿ ತೋರಿಸುವ ಪ್ರಯತ್ನ ಕಂಡಾಗ, ಟಿ.ವಿಗಳಲ್ಲಿ ಕೂಡ ಅದನ್ನೇ ಮುಖ್ಯ ಸುದ್ದಿಯಾಗಿ ಹರಡಿದಾಗ ಜನರೆಲ್ಲ ಅದನ್ನೇ ನಂಬತೊಡಗಿದರು! ಇಲ್ಲಿ ಸತ್ಯ ಅರಿಯುವ ಮನಸ್ಸು ಯಾರಿಗೂ ಇಲ್ಲವೆನಿಸಿದ್ದು ನಿಜ.

ನಿಮ್ಮ ಸಂಗೀತ ಬದುಕಿನ ಬಗ್ಗೆ ಹೇಳಿ

ಕೀಬೋರ್ಡ್ ಸೇರಿದಂತೆ ನನ್ನ ಸಂಗೀತದ ಕಲಿಕೆಯು ಕೇರಳದ ಜನಪ್ರಿಯ ಸಂಗೀತ ನಿರ್ದೇಶಕ ಕಣ್ಣೂರ್ ರಾಜನ್ ಅವರ ಮಕ್ಕಳ ಮೂಲ ಆಯಿತು. ಅಂದು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ವಾಸವಾಗಿದ್ದ ಅವರು ಇಂದು ಬೆಂಗಳೂರಿನಲ್ಲಿದ್ದಾರೆ. ಸಂಗೀತ್, ಸಾರಂಗ್, ಸಿತಾರ್ ಎನ್ನುವ ಸಂಗೀತೋಪಕರಣಗಳ ಹೆಸರನ್ನೇ ಅವರಿಗೆ ಇರಿಸಲಾಗಿದೆ. ಅವರೆಲ್ಲ ನನಗೆ ಫ್ಯಾಮಿಲಿ ಫ್ರೆಂಡ್ಸ್ ಆಗಿದ್ದ ಕಾರಣ ಮನೆಗೆ ಹೋಗುವುದು ಬರುವುದು ಮಾಡುತ್ತಾ ಸಂಗೀತ ಕಲಿತೆ. ಆದರೆ ಪ್ರೋಗ್ರಾಮಿಂಗ್ ಎಲ್ಲ ಚೆನ್ನೈನಲ್ಲಿ ಮಾಡಿಸುತ್ತೇನೆ. ನನ್ನ ಮೊದಲ ಚಿತ್ರ ದಶಕದ ಹಿಂದೆ ತೆರೆಕಂಡಒಂದೇ ಒಂದು ಸಾರಿ.' ಅದರಲ್ಲಿಮೊಗ್ಗಿನ ಮನಸು’ ಚಿತ್ರದಲ್ಲಿ ನಟಿಸಿದ್ದ ಆಕಾಶ್ ನಾಯಕ. ಬಳಿಕ ಮಾ.ಚಿರಂಜೀವಿ ನಟನೆಯ ಏಕಮೇವ' ಎನ್ನುವ ಚಿತ್ರಕ್ಕೆ ಸಂಗೀತ ನೀಡಿದೆ. ಅದರಲ್ಲಿ ಕೈಲಾಷ್ ಖೇರ್ ಎಲ್ಲ ಹಾಡಿದ್ದರು. ಅವರು ನನ್ನ ಫೇವರಿಟ್ ಗಾಯಕರು ಕೂಡ ಹೌದು. ಇದೀಗ ನಾನು ಆಲಾಪಿಸಿರುವ ಎರಡು ಗೀತೆಗಳು ಕೂಡ ಕೈಲಾಷ್ ಖೇರ್ ಅವರದ್ದೇ. ಸಚಿನ್ ತೆಂಡುಲ್ಕರ್ ನೂರನೇ ಸೆಂಚುರಿ ಮಾಡಿದ ಸಂದರ್ಭದಲ್ಲಿ ಅದರ ಬಗ್ಗೆ ನಾನೇ ಒಂದು ಹಾಡು ಬರೆದು ಸಂಗೀತ ನೀಡಿದ್ದೆ. ಆ ಗೀತೆಯನ್ನು ನನ್ನ ಜತೆಗೆ ಶಂಕರ್ ಮಹಾದೇವನ್ ಅವರು ಆಲಾಪಿಸಿದ್ದರು. ಅದೇ ರೀತಿ ಯುವರಾಜ್ ಸಿಂಗ್‌ ಗೆ ಕ್ಯಾನ್ಸರ್ ಆಗಿದ್ದ ಸಮಯದಲ್ಲಿ ಶೀಘ್ರ ಆರೋಗ್ಯ ಕಾಣಲೆಂದು ಒಂದು ಪ್ರಾರ್ಥನಾ ಗೀತೆ ಮಾಡಿದ್ದೆ. ಅದರ ಬಳಿಕ ಕಾರ್ತಿಕ್ ನಾಯಕರಾಗಿದ್ದರಿಕ್ಷಾ ಡ್ರೈವರ್’ ಎನ್ನುವ ತುಳು ಸಿನಿಮಾಗೆ ಸಂಗೀತ ನೀಡಿದೆ. ರಾಧಿಕಾ ಚೇತನ್ ನಟನೆಯ `ಅಸತೋಮ ಸದ್ಗಮಯ’ ಚಿತ್ರ ನಾನು ಕಡೆಯದಾಗಿ ಸಂಗೀತ ನೀಡಿದ ಚಿತ್ರ. ಆನಂತರ ಕೂಡ ಅವಕಾಶಗಳು ಬಂದಿದ್ದವು. ಆದರೆ ನಾನು ರಿಯಲ್ ಎಸ್ಟೇಟ್ ವೃತ್ತಿಗೆ ಸಂಬಂಧಿಸಿದಂತೆ ಬಹ್ರೈನ್, ಸೌದಿ ಅರೇಬಿಯಾ ಎಂದು ಸುತ್ತಾಡುತ್ತಿದ್ದ ಕಾರಣ ಸರಿಯಾಗಿ ಸಂಪರ್ಕ ಮಾಡಲು ಸಾಧ್ಯವಾಗಲಿಲ್ಲ.

ವಹಾಬ್ ಸಲೀಮ್ ಪುತ್ರಿ ಲೈಬಾ ಸಲೀಮ್

ವಹಾಬ್ ಸಲೀಮ್ ಬರೆದು ಸಂಗೀತ ನೀಡಿರುವ ಗೀತೆ.

ನಾಗರಿಕರೆ ಹೇಳಿ ಯಾಕೀ ದೇಶದಲಿ..
ಧರ್ಮದ ಹೆಸರಿನಲಿ ಕಚ್ಚಾಡುವ ಚಾಳಿ..
ವಿಶ್ವದ ಮೇಲೇನೆ ರೋಗದ ಈ ದಾಳಿ.. ಆದರೆ,
ನಮ್ ಈ ದೇಶದಲಿ ಧರ್ಮಗಳ ಬೇಲಿ..

ರಕ್ಕಸ ಚ್ಯಾನೆಲ್ಗಳೂ ಬೊಕ್ಕಸ ತುಂಬಿಸಲೂ..
ಕುರುಡರ ಸಂತೆಯಲಿ ಕನ್ನಡಿ ಮಾರುತಿದೆ..
ಕಾಣದ ಕೈಗಳು ಬಾಯಾರಿದ ಮುಗ್ಧರಿಗೆ..
ಹಾಲಿನ ಹೆಸರಿನಲಿ ವಿಷವನು ಉಣಿಸುತಿದೆ..

ಜೀವವೇ ಮಿಗಿಲು… ಹಿಂದೂ ಆಗಲಿ,
ಮುಸ್ಲಿಮ್ ಆಗಲಿ, ಕ್ರಿಶ್ಚಿಯನ್ ಆಗಲಿ, ಆರೋಗ್ಯ ತಾನೇ ಮಿಗಿಲು…
ಎಲ್ಲಾ ಮರೆತು ಒಂದಾಗೋಣಾ..
ಭಾರತದಿಂದ ತೊಲಗಲಿ ಕೊರೋನ….

Recommended For You

Leave a Reply

error: Content is protected !!