‘ಬುಲೆಟ್’ ಎಂದು ಹೆಸರಿಟ್ಟಿದ್ದೇ ರವಿಚಂದ್ರನ್..!

ಜನಪ್ರಿಯ ನಟ ಬುಲೆಟ್ ಪ್ರಕಾಶ್ ಅವರು ಹಾಸ್ಯ ನಟನಾಗಿ ಮಾತ್ರ ಎಲ್ಲರಿಗೂ ಗೊತ್ತು. ಆದರೆ ಅವರನ್ನು ಬಾಲನಟನಾಗಿ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ರವಿಚಂದ್ರನ್ ಅವರಿಗೆ ಸಲ್ಲುತ್ತದೆ. ಆ ಚಿತ್ರವೇ `ಶಾಂತಿ ಕ್ರಾಂತಿ’. ಆ ಚಿತ್ರ ನಿರೀಕ್ಷಿತ ಗೆಲುವು ಪಡೆಯದೇ ಇರಬಹುದು. ಆದರೆ ಅದು ಮಾಡಿದಂಥ ದಾಖಲೆ ಇದುವರೆಗೆ ಯಾವ ಕನ್ನಡ ಚಿತ್ರವೂ ಮಾಡಿಲ್ಲ ಎನ್ನುವುದು ಸತ್ಯ.

ಕನ್ನಡದಲ್ಲಿ ಮೊದಲ ಬಾರಿ ಒಂದು ಪ್ಯಾನ್ ಇಂಡಿಯಾ ಚಿತ್ರ ತಯಾರಾಗಿದ್ದರೆ ಅದು ಶಾಂತಿ ಕ್ರಾಂತಿಯೇ ಹೊರತು ಬೇರೆ ಯಾವುದೂ ಅಲ್ಲ. ಕನ್ನಡದ ಜತೆಯಲ್ಲೇ ಏಕಕಾಲದಲ್ಲಿ ತಮಿಳು, ತೆಲುಗು, ಹಿಂದಿ ಹೀಗೆ ಚತುರ್ಭಾಷೆಯಲ್ಲಿ ಚಿತ್ರೀಕರಣಗೊಂಡ ಆ ಚಿತ್ರದ ಮೂಲಕ ಕನ್ನಡದ ಹಲವಾರು ಪುಟಾಣಿ ಪ್ರತಿಭೆಗಳು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದವು. ಅವರಲ್ಲಿ ಒಬ್ಬರು ಬುಲೆಟ್ ಪ್ರಕಾಶ್!

ಆಗ ಬುಲೆಟ್ ಪ್ರಕಾಶ್ ಮಾಸ್ಟರ್ ಪ್ರಕಾಶ್ ಆಗಿದ್ದರು. ಚಿತ್ರದ ನಿರ್ದೇಶಕ ಮತ್ತು ನಾಯಕರಾದ ರವಿಚಂದ್ರನ್ ಇತ್ತೀಚೆಗಷ್ಟೇ ನೆನಪಿಸಿಕೊಂಡಂತೆ ಶೂಟಿಂಗ್ ಮುಗಿದ್ರೂ “ನಾನು ಮನೆಗೆ ಹೋಗಲ್ಲ, ನಿಮ್ ಜತೆಗೇನೇ ಇರ್ತೀನಿ’ ಎಂದು ಮೊಂಡನಂತೆ ತಲೆಯಾಡಿಸಿ ಹಠ ಮಾಡಿದ್ದರಂತೆ. ಆಗ ಈಗ ಹೋಗು, ಸ್ವಲ್ಪ ಸ್ಕೂಲು ಕಾಲೇಜು ಎಲ್ಲ ಕಲಿತು ಬಾ ಎಂದು ಒತ್ತಾಯ ಮಾಡಿ ಕಳಿಸಿದ್ದರಂತೆ ರವಿಚಂದ್ರನ್. ಹಾಗೆ ಹೋದ ಪ್ರಕಾಶ್ ಮತ್ತೆ ರೀ ಎಂಟ್ರಿ ಕೊಟ್ಟಿದ್ದು ರವಿಚಂದ್ರನ್ ಅವರದೇ ನಟನೆಯ `ಪ್ರೀತ್ಸು ತಪ್ಪೇನಿಲ್ಲ’ ಸಿನಿಮಾದ ಮೂಲಕ!

ರಾಯಲ್ ಎನ್ಫೀಲ್ಡ್ ನಲ್ಲಿ ಚಿತ್ರೀಕರಣಕ್ಕೆ ಬರುತ್ತಿದ್ದ ಪ್ರಕಾಶ್‌ಗೆ ಸೌಂಡಿಂಗ್ ಡಿಫರೆಂಟ್ ಆಗಿರುತ್ತೆ ಹಾಗಾಗಿ `ಬುಲೆಟ್ ಪ್ರಕಾಶ್’ ಎಂದೇ ಹೆಸರಿಟ್ಕೋ ಎಂದು ರವಿಚಂದ್ರನ್ ಅವರೇ ಸಲಹೆ ನೀಡಿದ್ದರಂತೆ. ಅಂದಹಾಗೆ ಈ ವಿಚಾರವನ್ನು ಸ್ವತಃ ಬುಲೆಟ್ ಪ್ರಕಾಶ್ ಅವರೇ ಸಂದರ್ಶನದ ವೇಳೆ ತಿಳಿಸಿದ್ದರು. ಆಮೇಲೆ ಅವರು ಬುಲೆಟ್ ಪ್ರಯಾಣ ತೊರೆದರೂ ಕೂಡ ಆ ಹೆಸರು ದೊಡ್ಡ ಬುಲೆಟ್ ಗಿಂತಲೂ ವೇಗವಾಗಿ ನಾಡಿನಾದ್ಯಂತ ಪಸರಿಸಿತು. ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬುಲೆಟ್ ಪ್ರಕಾಶ್ ಇಂದು ಸಂಜೆ ನಗರದ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.  ಅವರು ಕಿಡ್ನಿ ಸೇರಿದಂತೆ ಬಹುಅಂಗಾಗಗಳ ವೈಫಲ್ಯಕ್ಕೆ ಒಳಗಾಗಿದ್ದರು.

Recommended For You

Leave a Reply

error: Content is protected !!
%d bloggers like this: