ಸೆಕ್ಸೀ ನಗುವಿನ ನಾಯಕಿ ಸಾಕ್ಷಿ ಮೇಘನಾ

ಸಾಮಾನ್ಯವಾಗಿ ಬಾಲ್ಯದಲ್ಲೇ ಚಿತ್ರರಂಗ ಪ್ರವೇಶಿಸಿದವರು ಬಾಲಕಲಾವಿದರಾಗಿ ಮಾತ್ರ ಗುರುತಿಸುತ್ತಾರೆ; ಮುಂದೆ ನಾಯಕ ಅಥವಾ ನಾಯಕಿಯಾಗಿ ಗುರುತಿಸಲ್ಪಡುವುದಿಲ್ಲ ಎನ್ನುವ ಮಾತಿದೆ. ಆದರೆ ಅದಕ್ಕೆ ಆಪಾದನೆಯಾಗಿ ಕಾಣಿಸುವ ನವನಾಯಕಿ ಸಾಕ್ಷಿ ಮೇಘನಾ. ಇವರು `ಜೋಗಯ್ಯ’ ಚಿತ್ರದ ಮೂಲಕ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದವರು. ಪ್ರಸ್ತುತ ನಾಲ್ಕೈದು ಚಿತ್ರಗಳಲ್ಲಿ ನಾಯಕಿಯಾಗಿದ್ದು ಲಾಕ್ಡೌನ್ ಕಾಲಾವಧಿ ಮುಗಿದೊಡನೆ ತೆರೆಕಾಣಲಿರುವ ಚಿತ್ರಗಳಲ್ಲಿ ಸಾಕ್ಷಿ ಮೇಘನಾ ಚಿತ್ರಗಳು ಸರತಿಯಲ್ಲಿವೆ.

ಜೋಗಯ್ಯ ಚಿತ್ರದಲ್ಲಿ ನಟಿಸಬೇಕಾದರೆ ಏಳನೇ ತರಗತಿಯ ಹುಡುಗಿಯಾಗಿದ್ದ ಸಾಕ್ಷಿ ಮೇಘನಾ ಇಂದು ಯುವತಿಯಾಗಿದ್ದೇನೆಂದು ನಾಯಕಿಯಾಗಿರುವ ಚಿತ್ರಗಳ ಮೂಲಕ ಸಾಕ್ಷಿ ನೀಡಿದ್ದಾರೆ! ಬಿಡುಗಡೆಗೆ ಕಾದಿರುವ ಪ್ರಮುಖ ಚಿತ್ರವಾಗಿ ಪದ್ಮಾವತಿ ಗುರುತಿಸಿಕೊಂಡಿದೆ. ಇದೊಂದು ನಾಯಕಿ ಪ್ರಧಾನ ಚಿತ್ರವಾಗಿದ್ದು ಅದನ್ನು ನಿಭಾಯಿಸುವ ಅವಕಾಶ ದೊರಕಿರುವುದಕ್ಕೆ ಖುಷಿಯಲ್ಲಿದ್ದಾರೆ ಸಾಕ್ಷಿ ಮೇಘನಾ. ಮಿಥುನ್ ಚಂದ್ರಶೇಖರ್ ನಿರ್ದೇಶನದ ಪದ್ಮಾವತಿ' ಚಿತ್ರದಲ್ಲಿ ವಿಕ್ರಮ್ ಆರ್ಯನ್ ನಾಯಕ. ಅವರು ಈ ಹಿಂದೆತಲೆ ಬಾಚ್ಕೊಳ್ಳಿ ಪೌಡರ್ ಹಾಕೊಳ್ಳಿ’ ಚಿತ್ರದಲ್ಲಿ ನಾಯಕರಾಗಿ ಗಮನ ಸೆಳೆದಿದ್ದರು. ಚಿತ್ರದ ಹಾಡುಗಳು ಎಲ್ಲರ ಗಮನ ಸೆಳೆದಿದ್ದು, ಗೀತರಚನೆಕಾರ ಪ್ರೇಮ್ ಸಾಯಿ ಬಗ್ಗೆ ಜೋಗಿ ಪ್ರೇಮ್ ಕೂಡ ಪ್ರಶಂಶಿಸಿ, ತಮ್ಮ ಏಕ್ ಲವ್ಯ' ಚಿತ್ರದಲ್ಲಿ ಹಾಡು ಬರೆಯುವ ಅವಕಾಶ ನೀಡಿದ್ದಾರಂತೆ. ದಿನೇಶ್ ಕುಮಾರ್ ಸಂಗೀತದ ಹಾಡುಗಳ ಮಾಧುರ್ಯದ ಬಗ್ಗೆ ಸಾಕ್ಷಿ ಮೇಘನಾ ಕೂಡ ಖುಷಿಯಲ್ಲಿದ್ದಾರೆ. ಅವರು ಈ ಹಿಂದೆ ನಟಿಸಿದ್ದ ಮೋಹನ್ ನಿರ್ದೇಶನದಲೋಫರ್ಸ್’ ಚಿತ್ರಕ್ಕೂ ದಿನೇಶ್ ಕುಮಾರ್ ಹಾಡುಗಳಿದ್ದವು.

ಮೂಲತಃ ಸಕಲೇಶಪುರದವರಾದ ಸಾಕ್ಷಿ ಮೇಘನಾ ಕಳೆದ 12 ವರ್ಷಗಳಿಂದ ಬೆಂಗಳೂರಲ್ಲೇ ವಾಸವಾಗಿದ್ದಾರೆ. ತಮ್ಮ ಮನೋಜ್ ಪ್ರಸ್ತುತ ಪಿಯು ವಿದ್ಯಾರ್ಥಿ. ತಂದೆ ಕಾಂತರಾಜ್ ಕೆ ಆರ್ ಅವರಿಗೆ ಸಕಲೇಶಪುರದಲ್ಲಿ ಕಾಫಿ ಎಸ್ಟೇಟ್ ಇದೆ. ತಾಯಿ ಬಿ ಎಸ್ ವಾಣಿ ಮಗಳ ಡಾನ್ಸ್ ಕ್ಲಾಸ್ ನೋಡಿಕೊಳ್ಳುತ್ತಿದ್ದಾರೆ. ಅಂದಹಾಗೆ ತಮ್ಮ ಡಾನ್ಸ್ ರಾಂಪ್ ಡಾನ್ಸ್ ಸ್ಕೂಲ್ ಮೂಲಕ ಸಮಯ ಸಿಕ್ಕಾಗೆಲ್ಲ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ಡಾನ್ಸ್ ಹೇಳಿಕೊಡುವ ಮೂಲಕ ಗುರುತಿಸಿಕೊಂಡಿದ್ದಾರೆ ಸಾಕ್ಷಿ ಮೇಘನಾ. ತಾಯಿಯೇ ಮಗಳನ್ನು ನಾಯಕಿಯಾಗಿಸಿ ಚಿತ್ರವೊಂದನ್ನು ನಿರ್ಮಿಸಿದ್ದಾರೆ. ಚಿತ್ರದ ಹೆಸರು ಅಲ್ಪ ವಿರಾಮ.' ಅದರಲ್ಲಿ ಸಾಕ್ಷಿ ಮೇಘನಾಗೆ ನಾಯಕರಾಗಿ ಕಿಶೋರ್ ನಟಿಸಿದ್ದಾರೆ. ಚಿತ್ರದ ಹಾಡೊಂದರ ಚಿತ್ರೀಕರಣ ಉಳಿದಿದ್ದು ಅದು ಪೂರ್ತಿಯಾದೊಡನೆ ಅಲ್ಪ ವಿರಾಮದಲ್ಲಿ ಸಿನಿಮಾ ತೆರೆಗೆ ಬರಲಿದೆ. ಕನ್ನಡ ಸಿನಿಮಾ ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್ ಅವರಬೆಸ್ಟ್ ಫ್ರೆಂಡ್ಸ್‌’ ಎನ್ನುವ ಲೆಸ್ಬಿಯನ್ಸ್ ಕತೆಯುಳ್ಳ ಚಿತ್ರದಲ್ಲಿ ನಾಯಕಿಯಾಗಿದ್ದ ಸಾಕ್ಷಿ ಮೇಘನಾ ಅವರ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿಯಲ್ಲಿ ಆ ಒಂದು ನೋಟು' ಎನ್ನುವ ಚಿತ್ರವೂ ಇದೆ. ಆದರೆ ಅದರಲ್ಲಿ ಅತಿಥಿ ಪಾತ್ರದಲ್ಲಿ ಬಂದು ಒಂದು ಹಾಡಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರಂತೆ. ಐವರು ನಾಯಕಿಯರಿರುವಲೀಸಾ’ ಎನ್ನುವ ಸಿನಿಮಾದಲ್ಲಿ ಶ್ರಾವ್ಯ ಗಣಪತಿ, ರೂಪಾ ನಟರಾಜ್ ಮೊದಲಾದವರೊಂದಿಗೆ ನಟಿಸಿದ್ದಾರೆ. ಅಂದಹಾಗೆ `ಪಿಕ್ಚರ್’ ಎನ್ನುವ ಸಿನಿಮಾ ಶೂಟ್ ನಡೆಯುತ್ತಿಬೇಕಾದರೆ ಈ ಅನಿರೀಕ್ಷಿತ ಲಾಕ್ಡೌನ್ ಸಂಭವಿಸಿತ್ತು.

ಪ್ರಸ್ತುತ ಕ್ವಾರಂಟೈನ್ ದಿನಗಳಲ್ಲಿ ತಾವು ಇದುವರೆಗೆ ಮಾಡಿರದ ಸಾಹಸಗಳಿಗೆ ಕೈ ಹಾಕಿರುವುದಾಗಿ ಹೇಳುವ ಸಾಕ್ಷಿ ಮೇಘನಾ, ಅಡುಗೆ ಮನೆ ಸೇರಿಕೊಂಡು ಹೊಸರುಚಿ ಮಾಡಲು ಶುರು ಮಾಡಿದ್ದಾರೆ. ಅಡುಗೆ ಮಾಡುವುದೇ ಗೊತ್ತಿಲ್ಲ ಎನ್ನುತ್ತಿದ್ದ ಈ ಸುಂದರಿ ಇದೀಗ ಕೇಕ್ ಕಾಫಿ',ಡೊನಲಾ ಕಾಫಿ’, `ಹಲ್ವಾ’ ಎಂದು ಹೊಸ ರುಚಿ ಮಾಡಿ ಮನೆಮಂದಿಗೆ ಹಂಚುತ್ತಿದ್ದಾರಂತೆ. ಇದರೊಂದಿಗೆ ನಿರಂತರ ವರ್ಕೌಟ್ಸ್‌, ಯೋಗವೂ ನಡೆದಿದೆ. ಸ್ಕಿಪ್ಪಿಂಗ್, ಜಂಪಿಂಗ್ ಮೂಲಕ ಬೇಗ ವೆಯ್ಟ್ ಲಾಸ್ ಬೇಗ ಮಾಡಿಕೊಳ್ಳಬಹುದು ಎಂದು ಟಿಪ್ಸ್ ನೀಡುವ ಸಾಕ್ಷಿ ಮೇಘನಾ ಸೋಶಿಯಲ್ ಮೀಡಿಯಾದಲ್ಲಿ ಕೂಡ ಹೆಚ್ಚು ಆಕ್ಟಿವ್ ಆಗಿದ್ದೀನಿ ಎನ್ನುತ್ತಾರೆ. ಇವೆಲ್ಲದರ ಜತೆಗೆ ಸೋನಿ ಸಂಸ್ಥೆಯ ಆಲ್ಬಮ್ ಸಾಂಗ್ ಒಂದರಲ್ಲಿ ಲೀಡ್ ಆಗಿದ್ದಾರೆ. ಅದು ಕೂಡ ಸೋನಿ ಸಂಸ್ಥೆಯ ಎಮ್.ಡಿಯವರ ಪುತ್ರನೊಂದಿಗೆ ಕಾಣಿಸಿಕೊಳ್ಳಲಿದ್ದು ರೋಹಿತ್ ಮಾಂಜ್ರೇಕರ್ ನಿರ್ದೇಶಿಸಿರುವ ಹಾಡಿನ ಬಿಡುಗಡೆಗಾಗಿ ಕುತೂಹಲದಿಂದ ಕಾದಿದ್ದಾರೆ ಸಾಕ್ಷಿ ಮೇಘನಾ.

Recommended For You

Leave a Reply

error: Content is protected !!
%d bloggers like this: